ದನಿಯಿರದ ಬಾಳಿನಲ್ಲಿ -(೨)-

                                                              -೨-



''ನನ್ನೊಳಗಿನ ನಾಳೆಗಳು ಬಂದಾವೆ? ನಾಲೆಗಳ ಸೆರಗಿನಲ್ಲಿ ಕೊಸರಿಕೊಂಡು ಹೋದರೆ? ಅದರ ಹಿಂದೆ ಓಡಿ ಹೋಗಿ ತಡೆಯುವ ಪ್ರಯತ್ನ ಮಾಡಲೇನು?  ನನ್ನಲ್ಲಿ ಇಲ್ಲ ಅಷ್ಟೊಂದು ಚೈತನ್ಯ ಶಕ್ತಿ, ಪ್ರಾಣಶಕ್ತಿ. ಅತ್ತು ಗೋಳಾಡಿ ಕನಿಕರದಿಂದ ಪಡೆಯಲೇ? ಅಥವಾ ಹಠ ಸಾಧಿಸಿ ಹೋರಾಡಿ ಗೆದ್ದು ಛಲದಿಂದ ದಕ್ಕಿಸಿಕೊಳ್ಳಲೇ? ಯಾವುದಕ್ಕೂ ಉತ್ಸಾಹವಿಲ್ಲ. ಅಕಸ್ಮಾತ್ ಪಡೆದರೂ ಆ ಖುಷಿಯನ್ನು ಸಂಭ್ರಮಿಸಲಾರೆ. ''ಓ...., ಸಿಕ್ಕಿ ಬಿಟ್ಟಿತೇ'' ಅಂತಂದು ತೆಪ್ಪಗಿದ್ದು ಬಿಟ್ಟರೆ? ನನ್ನ ಅಧಿಕಾರಕ್ಕೊಳಪಟ್ಟದ್ದಕ್ಕಾಗಿ ಖಂಡಿತಾ ದುಃಖಿಸಿಕೊಳ್ಳುವುದು. ಒಂದು ಕೃತಜ್ಞತೆಯೂ ಇಲ್ಲವಾಯಿತೇ ಎಂದು? ಕಷ್ಟ ಪಟ್ಟು ಪಡೆದರೆ ದಕ್ಕಿದ್ದಕ್ಕೆ ಖುಷಿಯಾಗಬಹುದು. ಆದರೆ ಈ ಜಡತ್ವದಿಂದ ಹೇಗೆ ಹೊರ ಬರಲಿ? ಛೆ!!! ''
 ಸೂರ್ಯನೂ ತನ್ನ ಸಿಸ್ಟಮ್ ಆಫ್ ಮಾಡಿ ಸಕಲ ಜೀವರಾಶಿಗಳಿಗೂ ಬೈ ಹೇಳಿ ಡ್ಯೂಟಿ ಮುಗಿಸಿಕೊಂಡು ಹೊರಟ. ''ಎಷ್ಟು ಚೈತನ್ಯ ಪೂರ್ಣನಾತ, ಬೆಳಗ್ಗೆ ಫ್ರೆಶ್ ಆಗಿ ಬರ್ತಾನೆ, ಹೊತ್ತು ಹೋದಂತೆ ಉರಿಯುತ್ತಾನೆ, ಪಾಪ ಅವನಿಗೂ ಕೆಲಸದ ಒತ್ತಡ. ಮತ್ತೆ ಮಧ್ಯಾಹ್ನ ತುಂಬಾ ಬಿಸಿಯಾಗಿರುತ್ತಾನೆ. ಸಂಜೆಯ ಹೊತ್ತಿಗೆ ಬಳಲಿ ಬೆಂಡಾಗಿ  ಹೋಗಿರುತ್ತಾನೆ. ಈ ಮುಸ್ಸಂಜೆಯ ಬೆಳಕೇ ಹೇಳುತ್ತದೆ ಅವನ ಬಳಲಿಕೆ ಎಷ್ಟೆಂದು. ಆದರೂ ಮರುದಿನ ಮತ್ತದೇ ಉತ್ಸಾಹದಿಂದ ಬರುತ್ತಾನೆ. ಯಾರೇ ಆದರೂ ಕೆಲಸ ಇದ್ದರೇ ಚಟುವಟಿಕೆಯಿಂದಿರಲು ಸಾಧ್ಯ. ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡರೇ ಉತ್ಸಾಹದಿಂದಿರಲು ಸಾಧ್ಯ. ನನ್ನಂತೆ ೨೪ ಗಂಟೆಯೂ ಮನೆಯಲ್ಲಿ ಇದ್ದರೆ ಏನು ಬಂತು? ಹೊಸತೇನೂ ಇಲ್ಲ. ಅದೇ ಬೆಳ್ಳಗ್ಗೆ, ಅದೇ ರಾತ್ರೆಗಳು. ಟಿವಿ ತನ್ನಷ್ಟಕ್ಕೇ ಅರಚಿಕೊಳ್ಳುತ್ತದೆ. ಜೀವವಿಲ್ಲದಿದ್ದರೂ ಇದ್ದಂತಿರುವ, ಇಲ್ಲದಂತೆಯೂ ಇರುವ ಮಾತನಾಡುವ ಡಬ್ಬ ಅದು. ತಾನೊಂದೇ ಮಾತನಾಡುತ್ತದೆ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುವ ಸಹೃದಯತೆ ಇಲ್ಲ. ಅದಕ್ಕೆ ಅದು ನಿರ್ಜೀವ. ಈ ಮೊಬೈಲ್, ಮಾಟಗಾರ. ಮಂಕು ಹಿಡಿಸಿ ಬಿಟ್ಟಿತು. ಕಪಾಟಿನಲ್ಲಿರುವ ಒಂದಷ್ಟು ಪುಸ್ತಕಗಳು. ಇಷ್ಟು ಅಲೋಚನೆಗಳಿಗಾದರೂ ಜನ್ಮವಿತ್ತಿತು.''  
''ಛೇ........!!! ಯಾಕಿಷ್ಟು ಸ್ವಗತ?''
ಸಿಟೌಟ್‍ನಲ್ಲಿದ್ದ ಉಯ್ಯಾಲೆ ಖಾಲಿಯಾಗಿ ತೂಗಿಕೊಳ್ಳುತ್ತಿತ್ತು. ಅಷ್ಟೊತ್ತು ಅದರಲ್ಲಿ ಕುಳಿತಿದ್ದಳು ನಿತ್ಯಾ. ಎದುರಿದ್ದ ಗುಡ್ಡೆಯನ್ನು ದಿಟ್ಟಿಸುತ್ತಾ, ಏನೇನನ್ನೋ ಆಲೋಚಿಸುತ್ತಾ ಕುಳಿತಿದ್ದಳು. ಬಾನೆತ್ತರಕ್ಕೆ ಬೆಳೆದ ಮರಗಳು. ಪಶ್ಚಿಮಘಟದ ಮರಗಳ ರಚನೆಯೇ ಹಾಗೆ. ಅವುಗಳು ಸದಾ ಹಸಿರು. ಯಾರನ್ನೂ ಕೇರೇ ಮಾಡದಂತೆ ಗತ್ತಿನಿಂದ ತಲೆಯೆತ್ತಿ ಎದೆಯುಬ್ಬಿಸಿ ನಿಲ್ಲುವವು. ದೂರದಿಂದ ಆ ಮರಗಳ ಸಾಲನ್ನು, ಬೆಟ್ಟದ ತುದಿಯನ್ನೂ ನೋಡುವುದೇ ಸೊಗಸು. ಚಿಕ್ಕದರಲ್ಲಿಉಳಿದ ಮಕ್ಕಳೊಂದಿಗೆ ಸೇರಿ ಆ ಗುಡ್ಡೆಯ ತುದಿಯಲ್ಲಿ ಕಾಣುವ ವಿವಿಧ ಆಕಾರಗಳನ್ನು ನೋಡಿ ಖುಷಿ ಪಡುತ್ತಿದ್ದರು. ಇಂದಿಗೂ ಆ ಗುಡ್ಡದ ತುದಿಯ ನವಿಲು, ಗದೆ ಹಿಡಿದು ನಿಂತ ಭೀಮ, ಮುಖವನ್ನು ಮಾತ್ರ ತೋರಿಸುವ ಸಿಂಹ, ರಾಜಕುಮಾರಿಯ ಕಿರೀಟ ಎಲ್ಲವೂ ಹಾಗೇ ಕಾಣುತ್ತದೆ. ಅಂದು ಮಧ್ಯಾಹ್ನ ಚಿಕ್ಕದಾಗಿ ನಿದ್ದೆ ಹೊಡೆದು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ ಉಯ್ಯಾಲೆಯಲ್ಲಿ ಕುಳಿತವಳು ಆಗಷ್ಟೇ ಎದ್ದು ಹೋಗಿದ್ದಳು. ''ಹಗಲು ಮತ್ತು ರಾತ್ರಿ ಸಂಧಿಸುವ ಕಾಲ, ಮುಸ್ಸಂಜೆ ಹೊತ್ತು ದೇವರ ದೀಪ ಹಚ್ಚಬೇಕು'' ಅಜ್ಜಯ್ಯ ಸಾಯುವ ಮೊದಲಿನ ದಿನದವರೆಗೂ ಹೇಳುತ್ತಿದ್ದ ಮಾತದು. ಎಷ್ಟೇ ಕೆಲಸವಿದ್ದರೂ, ಬೋರಾದರೂ, ಸಿಟ್ಟಿದ್ದರೂ ಏನೇ ಆದರೂ ಆ ಸಮಯದಲ್ಲಿ ಅವಳು ಮನೆಯಲಿದ್ದರೆ ಇದೊಂದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಳು. ದೇವರಿಗೆ ನಮಸ್ಕಾರ ಮಾಡಿ ಬಂದರೂ ಮಧ್ಯಾಹ್ನ ನಾಪತ್ತೆಯಾಗಿದ್ದ ಕರೆಂಟ್ ಇನ್ನೂ ಬಂದಿರಲಿಲ್ಲ. ಯಾಕಿರಬಹುದೆಂದು ಅಮ್ಮನಲ್ಲಿ ಕೇಳಿದಳು. ''ಶಾಂತರಾಮರಲ್ಲಿಗೆ ಹೋಗಿ ಕೇಳಿ ಬಾ, ಅಲ್ಲಿ ಇದ್ದರೆ ನಮಗೂ ಇರಲೇ ಬೇಕು, ಒಂದೇ ಲೈನ್ ನಮ್ಮದು. ಇಲ್ಲವಾದರೆ ನಮ್ಮ ಟ್ರಾನ್ಸ್ಫಾರಂ ನಲ್ಲಿ ಏನೋ ಸಮಸ್ಯೆ ಇದೆ.'' ಎಂದರು. ''ಅಯ್ಯೋ ಹೋಗ್ಬೇಕಲ್ಲಾಪಾ'' ಅಂತ ತಲೆ ಬಿಸಿಯಾಯಿತು. ದಕ್ಷಿಣ ಕನ್ನಡದಲ್ಲಿ ಮನೆಗಳು ಹತ್ತಿರ ಹತ್ತಿರ ಇರುವುದು ಅಪರೂಪ. ಒಂಟಿ ಮನೆಗಳು, ಆ ಮನೆಯವರ ತೋಟ, ಗುಡ್ಡ, ನೀರಿನ ಮೂಲಗಳು. ಅದಾದ ನಂತರ ಒಂದು ಐದೋ- ಹತ್ತೋ ನಿಮಿಷ ನಡೆದರೆ ಇನ್ನೊಂದು ಮನೆ. ತೀರಾ ಇತ್ತೀಚಿನವರೆಗೂ ಮನೆಯ ಅಂಗಳದ ತನಕ ಮಾರ್ಗವಿಲ್ಲದ ಅದೆಷ್ಟೋ ಮನೆಗಳಿದ್ದವು. ಮೊದಲೆಲ್ಲಾ ಅಷ್ಟು ದೂರ ನಡೆಯುವುದು ಆಕೆಗೆ ದೊಡ್ಡ ವಿಷ್ಯವಾಗಿರಲಿಲ್ಲ. ಶಾಲೆಗೆ ರಜೆ ಇದ್ದರೆ ಆ ಮನೆಯ ಮಕ್ಕಳು, ನಿತ್ಯಾ, ಅವಳ ದೊಡ್ಡಪ್ಪನ ಮಕ್ಕಳು, ಕೆಲಸಕ್ಕೆ ಬರುತ್ತಿದ್ದ ಚೋಮು ಹಾಗೂ ಐತುವಿನ ಮಕ್ಕಳು ಎಲ್ಲರೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ದಿನದಲ್ಲಿ ಹತ್ತು ಸಲ ಓಡಾಡುತ್ತಿದ್ದರು. ಗುಡ್ಡ, ತೋಟ, ಕಾಡು ಎಲ್ಲ ಇವರ ಕಾಲ್ತುಳಿತಕ್ಕೆ ಸಿಕ್ಕಿ ನಜ್ಜು-ಗುಜ್ಜಾಯಿತೇನೋ ಅನ್ನುವಷ್ಟರ ಮಟ್ಟಿಗೆ ಲಾಗ ಹೊಡೆಯುತ್ತಿದ್ದರು. ಅಲ್ಲದೇ ನಿತ್ಯಾ ಪ್ರೈಮರಿ ಹೈಸ್ಕೂಲ್‍ನಲ್ಲಿ ಇರುವಾಗ ವಾರಕ್ಕೆರಡು ದಿನ ಅವರ ಮನೆಗೆ ಸಂಗೀತ ಕಲಿಯಲು ಹೋಗುತ್ತಿದ್ದಳು.
                                                                                                    -ಮುಂದುವರೆಯುವುದು..........                             

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....