ಖುಷಿಗಾಗಿ ಬದುಕುವುದು ತಪ್ಪಲ್ಲ.....

    
     ''ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. ''
   ಬಸವಣ್ಣನವರ ಈ ವಚನವನ್ನು ನಾನು ಆಗಾಗ ಜ್ಞಾಪಿಸಿಕೊಳ್ಳೋದಿದೆ. ಕೆಲವೊಂದ್ಸಲ ಅನ್ನಿಸುವುದು, ಛೆ, ನಾನು ಹಾಗ್ ಮಾಡಿದ್ದು ತಪ್ಪಾ, ನಾನು ಹೀಗ್ ಮಾಡ್ಬೇಕಿತ್ತಾ? ನಾನ್ ಹಾಗ್ ಹೇಳೋ ಬದಲು ಸುಮ್ನಿದ್ರೆ ಒಳ್ಳೇದಿತ್ತಾ? ಹೀಗೆ ಇನ್ನೊಂದಷ್ಟು. ನೀವೂ ಜೀವನದಲ್ಲಿ ಇಂತಹ ಸಿಚುವೇಷನ್‍ಗೆ ಅಗಾಗ ತುತ್ತಾಗ್ತಾ ಇರಬಹುದು. ನಾನ್ ಮಾಡಿದ್ದು ತಪ್ಪೇನೋ, ತಪ್ಪೇನೋ ಅನ್ನೋ ಪ್ರಶ್ನೆ ಕಾಡ್ತಾನೇ ಇರಬಹುದು. ಹಲವು ಸಲ ಹೇಗೆ ಬದುಕುವುದು ಸರಿ? ಹೇಗೆ ಇದ್ರೆ ಒಳ್ಳೆಯದು? ಒಳ್ಳೆವನಾಗ್ಲಿಕ್ಕೆ ಏನು ಮಾಡ್ಬೇಕು? ಹೀಗೆ ಗೊಂದಲದಲ್ಲಿಯೇ ಮುಳುಗಿರ್ತೇವೆ. ಛೇ ಅವ ನನ್ನ ಬೆಸ್ಟ್ ಫ್ರೆಂಡ್ ನನ್ನ ಮಾತಾಡಿಸ್ತಾನೇ ಇಲ್ಲ. ನನ್ನ ಮಾತಿಗೂ ರಿಪ್ಲೇ ಮಾಡ್ತಾ ಇಲ್ಲ. ನಾನೇನ್ ತಪ್ಪು ಮಾಡಿದೆ? ಆ ಆಂಟಿ ಒಬ್ರು ನಾನ್ ಹೀಗ್ ಮಾಡಿದ್ ಸರಿ ಇಲ್ಲ ಅಂತಂದ್ರು. ನಾನೇನ್ ತಪ್ಪು ಮಾಡಿದೆ? ನಮ್ಗೆ ಗೊತ್ತೇ ಆಗೋದಿಲ್ಲ. ಕೊನೆಗೆ ನಾನ್ ಸರಿ ಇಲ್ಲ. ಎಲ್ಲರಿಗೂ ಬೇಜಾರ್ ಮಾಡ್ತಾ ಬದುಕುವುದೇ ಪಾಡಾಯ್ತು ಅಂತ ತೀರಾ ಯೋಚನೆ ಮಾಡ್ತಾ ಚಿಂತೆಗೆ ಒಳಗಾಗ್ತೇವೆ. 
 ನನ್ನ ಪ್ರಕಾರ ಯಾವುದೂ ತಪ್ಪಲ್ಲ. ಈ ಜೀವನವನ್ನು ಅನುಭವಿಸಿ,  ಖುಷಿಯಾಗಿರಿ, ಅದಕ್ಕಾಗಿ ಏನೂ ಮಾಡಿದ್ರೂ ತಪ್ಪಲ್ಲ, ಬಸವಣ್ಣನವರ ಮೇಲಿನ ಸಾಲನ್ನು ಬಿಟ್ಟು. ನಿಮ್ಮ ಖುಷಿಗಾಗಿ ಕಳ್ಳತನ ಮಾಡ್ಬೇಡಿ, ಕಳ್ಳತನ ಅಂತಂದ್ರೆ ಕೇವಲ ಬೇರೆಯವರ ಸಂಪತ್ತು ಮಾತ್ರ ಅಲ್ಲ. ಅವರ ಖುಷಿ, ನೆಮ್ಮದಿ, ಆರೋಗ್ಯ, ಪ್ರೀತಿ. ಬೇರೆಯವರ ಸುಪರ್ತಿಗೆ ಒಳಪಟ್ಟ ಏನನ್ನೂ ಕದಿಯ ಬೇಡಿ. ಕೊಲ್ಲಬೇಡಿ, ಅಂತಂದ್ರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾರನ್ನು ಕೊಲ್ಬೇಡಿ. ಹಾಗೇ ಸುಳ್ಳು ಹೇಳ್ಬೇಡಿ. ಹಾಗಂತ ಸುಳ್ಳು ಹೇಳದೇ ಇರಲೂ ಬೇಡಿ. ಸುಳ್ಳಿರಲಿ, ಸತ್ಯ ಇರಲಿ ನಾವು ಆಡುವ ಮಾತು ಯಾವ ರೀತಿ ಪರಿಣಾಮ ಉಂಟು ಮಾಡ್ತದೆ, ಅನ್ನೋದ್ರ ಮೇಲೆ ಎಲ್ಲವೂ ಡಿಪೆಂಡ್. ಸತ್ಯದಿಂದ ಏನೋ ತೊಂದರೆ ಉಂಟಾಗ್ತದೆ ಅಂತಿದ್ರೆ ಸುಳ್ಳು ಹೇಳೋದ್ ತಪ್ಪಲ್ಲ. ಸುಳ್ಳಿನಿಂದ ಯಾವುದೇ ತೊಂದ್ರೆ ಆಗದೇ ಅದು ಒಂದಷ್ಟು ಜನರ ಖುಷಿಗೆ ಕಾರಣ ಆಗ್ತದೆ ಅಂತಾದ್ರೆ ಸತ್ಯ ಹೇಳ್ಬೇಕಾಗೇ ಇಲ್ಲ. ಇದಿರ ಹಳಿಯಲು ಬೇಡ. ಇನ್ನೊಬ್ರನ್ನು ಆಡ್ಕೊಂಡು ನಗ್ಬೇಡಿ. ಇಲ್ಲಾ, ಅವ್ರೂ ವಿಷ್ಯವನ್ನು ತಮಾಷೆಗೇ ತೆಗೆದುಕೊಳ್ಳುತ್ತಿದ್ರೆ ಅವ್ರೂ ನಿಮ್ಮೊಟ್ಟಿಗೆ ಸೇರಿ ನಗ್ತಾರೆ ಅಂತಾದ್ರೆ, ಸರಿ ನಗಿ, ತಪ್ಪಲ್ಲ. ಬೇರೆಯವ್ರನ್ನು ಕಂಡು ಹೊಟ್ಟೆ ಕಿಚ್ಚು ಪಡುವುದು, ಅಥವಾ ಇನ್ನೊಬ್ಬರ ವಿಷ್ಯದಲ್ಲಿ  ಮೂಗು ತೂರಿಸುತ್ತಾ ನೋಡು ನೀನ್ ಹೀಗ್ ಮಾಡುವುದು ಸರಿ ಇಲ್ಲ, ಅಂತೆಲ್ಲಾ ಹೇಳ್ತಾ ಇರುವುದು ತಪ್ಪು. ಇಷ್ಟನ್ನು ನೀವು ಮಾಡ್ಲಿಲ್ಲ್ವಾ, ಸರಿ, ನೀವು ಯಾವುದೇ ತಪ್ಪು ಮಾಡ್ಲಿಲ್ಲ ಬಿಡಿ. ಯಾರು ಏನೇ ಹೇಳ್ತಾ ಇರ್ಲಿ.
   ನನ್ನ್ ಫ಼್ರೆಂಡ್ ಒಬ್ಳಿದ್ಳು, ಹುಡುಗರ್ ಜೊತೆ ಜಾಸ್ತಿ ಮಾತಾಡ್ತಾಳೆ, ಅವ್ಳು ಇಡೀ ದಿನ ರಾತ್ರಿ ಓನ್ ಲೈನ್‍ಲಿ ಇರ್ತಾಳೆ. ಊರಿಗ್ ಹೋದ್ರೂ ಡೀಸೆಂನ್ಸಿ ಇಲ್ಲ. ಸದಾ ತ್ರೀ ಫೋರ್ತ್ ಹಾಕೊಂಡ್ ಓಡಾಡ್ತಾಳೆ. ಹಣೆಗೊಂದ್ ಬೊಟ್ಟು ಇಡೋದಿಲ್ಲ. ಕಯ್ಯಿಗ್ ಬಳೆ ಹಾಕೋದಿಲ್ಲ. ಸ್ವಲ್ಪಾನೂ ಸೀರಿಯಸ್ ನೆಸ್ ಇಲ್ಲ. ಚಲ್ಲು ಚಲ್ಲು ಹುಡುಗಿ. ಹೀಗೆ ಸಾಕಷ್ಟು ಮಾತು ಅವ್ಳ ಬಗ್ಗೆ ಹರಿದಾಡ್ತಾ ಇತ್ತು. ಇದು ಅವಳ ಕಿವಿಗೂ ಬಿತ್ತು. ಪಾಪದ್ ಹುಡುಗಿ, ತುಂಬಾ ಟೆನ್ಷನ್‍ಗೆ ಒಳಗಾದಳು. ಬರ್ತಾ ಬರ್ತಾ ಅವಳ ವರ್ತನೆ ಬದಲಾಯಿತು. ಮಂಕಾದ್ಳು. ದುಂಬಾ ದುಃಖ ಆಗ್ತಿತ್ತು ಅವ್ಳನ್ನು ನೋಡುವಾಗ. ಒಂದಿನ ಕೇಳಿದೆ, ''ಎಂತ ಆಯ್ತಾ? ಯಾಕೆ ಹೀಗಿದ್ದಿ? '' ಅಂತ. "ನಾನ್ ಸರಿ ಇಲ್ಲ ಮಾರಾಯ್ತಿ. ನನ್ನ ಬಗ್ಗೆ ಹೀಗೆಲ್ಲ ಹೇಳ್ತಿದ್ದಾರಂತೆ. ನಾನ್ ತಪ್ಪು ಮಾಡಿದೇನೆ." ಅಂದ್ಳು. ''ಅಲ್ಲವಾ? ಯಾರನ್ನಾದ್ರೂ ಕೊಂದಿದೀಯಾ? ಕಳ್ಳತನ ಮಾಡಿದೀಯ? ಬೇರೆಯವ್ರ ಬಗ್ಗೆ ಏನೆಲ್ಲಾ ಹೇಳಿಕೊಂಡು ತಿರ್ಗಾಡಿದೀಯಾ? ಇಲ್ಲಾಲ?'' "ಇಲ್ಲ" ಮತ್ತೆಂತ ತಪ್ಪು ಮಾಡಿದ್ದಿ. ತಪ್ಪು ಅಂದ್ರೆ ಇದಿಷ್ಟೇ. ನೀನ್ ಬಾಯ್ಸ್ ಜೊತೆ ಮಾತನಾಡುವುದರಿಂದ ಯಾರಿಗಾದ್ರೂ ಏನಾದ್ರೂ ತೊಂದ್ರೆ ಆಯ್ತಾ? ಯಾರದ್ದಾದ್ರೂ ಆಸ್ತಿ ಹೋಯ್ತ? ನೆಮ್ಮದಿ ಹೋಯ್ತಾ? ಯಾರಾದ್ರೂ ಸತ್ರ? ಯಾರಿಗಾದ್ರೂ ನೋವಾಯ್ತಾ? ನೀನ್ ಮಾಡುವ ಯಾವುದಾದ್ರೂ ಕೆಲಸಗಳಿಂದ ಎಲ್ಲಾದ್ರೂ ಹೆಣ ಬಿತ್ತಾ? ನೀನ್ ತ್ರೀ ಫೋರ್ತ್ ಹಾಕಿ ಓಡಾಡಿದ್ರಿಂದ ಆಡಿಕೊಳ್ಳುವವರಿಗೆ ಚಳಿ ಆಗ್ತದನಾ? ನೀನ್ ಬೊಟ್ಟು ಬಳೆ ಹಾಕದೇ ಹೋದ್ರೆ ಯಾರಿಗೂ ಬೇಸರ ಆಗುದಿಲ್ಲ. ಅವ್ರಿಗಾಗುದು ಬೇಸರ ಅಲ್ಲ. ಅದೊಂದು ವಿಚಿತ್ರ ರೀತಿಯ ಭಾವ. ಅಂತಹವರು ಅವ್ರ ಮನಸ್ಸಿನ ಸುತ್ತ ಒಂದು ಬೇಲಿ ಹಾಕಿಕೊಂಡಿದ್ದಾರೆ. ಅವ್ರು ಅದರ ಹೊರತಾಗಿ ಯೋಚನೆ ಮಾಡೋದೇ ಇಲ್ಲ. ಬದುಕು ಒಂದು ರೀತಿಯ ವೃತ ಅವರಿಗೆ. ಸುತ್ತಲಿನವರನ್ನು ಪ್ರೀತಿಸದಿದ್ದ್ರು, ಬೇಕಾದವ್ರನ್ನು ದೂರ ಮಾಡಿಕೊಂಡ್ರೂ ಅಡ್ಡಿ ಇಲ್ಲ. ಇಂತಹ ಟೊಳ್ಳು ಸಿದ್ದಾಂತಗಳನ್ನು ಪಾಲಿಸ್ಬೇಕು, ಉಳಿದವರು ಪಾಲಿಸದೇ ಹೋದರೆ ಅದು ಮಹಾ ಅಪರಾಧ ಅಂತನಿಸಿಕೊಳ್ತದೆ. ಆಡಿಕೊಳ್ಳಿಕ್ಕೆ ಏನೋ ಒಂದು ವಿಷ್ಯ ಬೇಕಾಗ್ತದೆ, ಅದಕ್ಕೆ ಇಂತಹದ್ದನ್ನು ಹಿಡ್ಕೊಳ್ತಾರೆ. ಅವ್ರು ಬ್ರೋಡ್ ಆಗಿ ಯೋಚನೆ ಮಾಡೋದೇ ಇಲ್ಲ. ಅಂತಹವ್ರನ್ನು ಬಿಡು. ನೀನ್ ಬದುಕುವ ರೀತಿಯಿಂದ ನೀನ್ ಖುಷಿಯಾಗಿರ್ತೀಯಾ? ಸರಿ. ನೀನು ತಪ್ಪು ಮಾಡ್ಲಿಲ್ಲ ಅಂತಾಯ್ತು." ಅಂತಂದೆ, ಸರಿ ಅಲ್ವಾ? 
   ಅವನೊಬ್ಬ ಬ್ರಾಹ್ಮಣ, ಸಿಟಿ ಯಲ್ಲಿ ಸಾಫ್ಟ್ವೇರ್‍ ಇಂಜಿನಿಯರ್, ಅವನು ಕುಡಿತಾನೆ, ಚಿಕನ್ ತಿಂತಾನೆ. ಸಿಗರೇಟ್ ಸೇದ್ತಾನೆ. ಹಾಳಾಗಿ ಹೋಗಿದ್ದಾನೆ. ಅಂತ ನಾವು ಆಡಿಕೊಂಡ್ರೆ ಅದು ನಮ್ಮ ತಪ್ಪು. ನಾವು ಇದಿರ ಹಳಿತಾ ಇದ್ದೇವೆ, ಅನ್ಯರಿಗೆ ಅಸಹ್ಯ ಪಡ್ತಾ ಇದ್ದೇವೆ. ಅವ್ನು ಇಂಜಿನಿಯರ್, ಹಣ ಸಂಪಾದಿಸ್ತಾನೆ. ಮೇಲಿನ ಎಲ್ಲಾ ವಿಷಯಗಳು ಅವನಿಗೆ ಖುಷಿ ಕೊಡ್ತದೆ. ಹಾಗಾಗಿ ಅವನು ದುಡಿದ ಹಣದಲ್ಲಿ ಖುಷಿ ಪಡ್ತಾ ಇದ್ದಾನೆ. ಅದೇ ಅಪ್ಪ ಅಮ್ಮನಿಗೆ ಮಗ ಹೀಗೆ ಮಾಡ್ತಿದನಾಲ ಅಂತ ಗೊತ್ತಾಗಿ ಅವರ ನೆಮ್ಮದಿಯನ್ನು ಇವ ಕೊಲ್ಲಿಕ್ಕೆ ಹೊರಟ್ರೆ ಅವ ಮಾಡ್ತಿರೋದು ತಪ್ಪು, ಅಥವಾ ನಾಳೆ ಅವ್ನು ಮದುವೆ ಆಗ್ಲಿಕ್ಕೆ ಹೊರಟ್ರೆ ಹುಡುಗಿಗೆ ಈ ವಿಷ್ಯಗಳನ್ನು ಹೇಳದೇ ಇದ್ರೆ ತಪ್ಪು, ಅವ ಸರಿ ಇಲ್ಲ. ಯಾಕಂದ್ರೆ ಅವಳಿಗೆ ಒಂದು ವೇಳೆ ಇವುಗಳೆಲ್ಲಾ ಇಷ್ಟ ಇಲ್ಲದೇ ಹೋದ್ರೆ ಮುಂದೆ ಅವಳ ನೆಮ್ಮದಿಯೂ ಇವನ ನೆಮ್ಮದಿಯೂ ಹಾಳಾಗ್ತದೆ. ಅಥವಾ ಅವನಿಗೆ ಮದುವೆ ಆಗಿದ್ರೆ ಪತ್ನಿಗೆ ಇದೆಲ್ಲಾ ಇಷ್ಟ ಇಲ್ಲ. ಮುಂದೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಅಂತಿದ್ರೆ ಅವ ಮಾಡುವುದು ತಪ್ಪು. ಅವ ತುಂಬಾ ಜನರ ನೆಮ್ಮದಿಯನ್ನು ಕದ್ದ ಹಾಗೆ, ಕೊಂದ ಹಾಗೆ ಆಗ್ತದ್ದೆ. ಅವಳಿಗೆ ಇದೆಲ್ಲಾ ಓಕೆ ಆದ್ರೆ ಓಕೆ. ಅಥವಾ ಅವ ಸರಿ ಇಲ್ಲ ಅಂತ ಅವ್ನ ಅಪ್ಪ ಅಮ್ಮನಿಗೆ ತಿಳಿಸ್ಲಿಕ್ಕೆ ನಾವು ಹೊರಟ್ರೆ ಅದು ನಮ್ಮ ತಪ್ಪು, ನಾವು ಅವ್ರೆಲ್ಲರ ಖುಷಿಯನ್ನು ಕದಿಯುತ್ತಿದ್ದೇವೆ, ಕೊಲ್ತಾ ಇದ್ದೇವೆ. ''ಹಾಗದ್ರೆ ಅವನ ಆರೋಗ್ಯ ಹಾಳಾದ್ರೆ ವಿಷಯ ಗೊತ್ತಿದ್ದೂ ಸುಮ್ಮನಿದ್ದ ನಾವು ತಪ್ಪು ಮಾಡಿದ ಹಾಗಲ್ವಾ?'' ಅಂತ ಕೇಳಿದ್ರೆ ಅಷ್ಟು ಅವನ ಬಗ್ಗೆ ನಮಗೆ ಕೇರ್ ಇದ್ದರೆ, ಅವನಿಗೇ ಹೇಳ್ಬೇಕು ನಿನ್ನ ಆರೋಗ್ಯ ನೋಡಿಕೋ ಅಂತ. 
   ಇದಿಷ್ಟು ಸದ್ಯಕ್ಕೆ ನನಗೆ ತೋಚಿದ ಅಂಶಗಳು. ನನ್ನೊಳಗಿನ ಜಿಜ್ಞಾಸೆ. ಉಳಿದವರ ನೆಮ್ಮದಿಯನ್ನು ಕಸಿಯದೇ ನಮ್ಮ ಖುಷಿಗಾಗಿ ಏನು ಮಾಡಿದ್ರೂ ಅದು ತಪ್ಪಲ್ಲ ಅಂತ ನನ್ನ ಭಾವ. ಬದಲಾವಣೆ ಜಗದ ನಿಯಮ. ಈ ಅಭಿಪ್ರಾಯ ಹಿಂದೆ ಬೇರೆ ರೀತಿ ಇದ್ದಿರಬಹುದು, ಮುಂದೆ ಬದಲಾಗಲೂ ಬಹುದು. ಆದರೆ ಬಸವಣ್ಣನವರ ವಚನ ''ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ. '' ಇದೊಂದೇ ಸಾಕು ನಮ್ಮೆಲ್ಲಾ ಗೊಂದಲಗಳನ್ನು ಪರಿಹರಿಸಲು.

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....