ಮಾನ್ಸೂನ್ ಟ್ರಿಪ್ ೨೦೧೮ - 10

೦೩/೦೮/೨೦೧೮
    ಬೆಳಗ್ಗೆ ೪.೩೦ಕ್ಕೆ ಎದ್ದು ರೆಡಿಯಾದೆವು. ೫.೩೦ಕ್ಕೆಲ್ಲಾ ರೂಮ್ ಬಿಟ್ಟೆವು. ಬಿಟ್ಟು ಬಿಟ್ಟು ಸಣ್ಣಗೆ ಮಳೆ ಬರುತ್ತಿತ್ತು. ರೂಮ್‌ನಿಂದ ಹತ್ತು ಹೆಜ್ಜೆ ನಡೆದ ಕೂಡಲೇ ಒಬ್ಬರು ಅಜ್ಜ ಸಣ್ಣದೊಂದು ಟೀ ಅಂಗಡಿಯಲ್ಲಿ ಟೀ ಮಾರುತ್ತಿದ್ದರು. ಅಲ್ಲೇ ಟೀ ಕುಡಿಯುತ್ತಿರಬೇಕಾದರೆ ಮತ್ತೆ ಮಳೆ ಪ್ರಾರಂಭವಾಯಿತು. ಐದು ನಿಮಿಷದಲ್ಲಿ ಮಳೆ ಬಿಟ್ಟಿತು, ರೈಲ್ವೇ ಸ್ಟೇಷನ್‌ನತ್ತ ಹೆಜ್ಜೆ ಹಾಕಿದೆವು. ರೈಲ್ವೇ ಸ್ಟೇಷನ್‌ನ ಒಳಗಿನ ಅಂಗಡಿಯೊಂದರಿಂದ ಬರ್ಗರ್ ಪಾರ್ಸೆಲ್ ತೆಗೆದುಕೊಂಡೆವು. ಅಲ್ಲಿ ಎರಡು ಮೂರು ಟಾಯ್ ಟ್ರೈನ್‌ಗಳಿದ್ದವು. ನಾವು ಹೋಗಾಬೇಕಾಗಿದ್ದ ಟ್ರೈನ್ ಯಾವುದೆಂದು ನೋಡಿದೆವು. ಟ್ರ್ಯಾಕ್‌ನಲ್ಲಿ ಹೋಗುವುದು ಎಂಬುದೊಂದನ್ನು ಬಿಟ್ಟರೆ ಒಳಗಡೆ ವಿನ್ಯಾಸವೆಲ್ಲಾ ಬಸ್ಸಿನಂತೆ ಇತ್ತು. ಇದರ ಅಗಲ ಬಸ್‌ಗಿಂತಲೂ ಕಡಿಮೆ. ನಮ್ಮ ಸೀಟ್ ಹುಡುಕಲು ಸ್ವಲ್ಪ ಕಷ್ಟವಾದರೂ ಸೀಟ್ ಸಿಕ್ಕಿತು. ಅತಿ ಕಡಿಮೆ ಭೋಗಿಗಳಿದ್ದವು, ಸಿಟುಗಳೂ ಅಷ್ಟೆ ತುಂಬಾ ಕಡಿಮೆ ಅಂದಾಜು ೩೦ ಸೀಟ್‌ಗಳು.  ಭಾರತದಲ್ಲಿ ೫ ಕಡೆ ಇತಂಹ ಟಾಯ್ ಟ್ರೈನ್‌ಗಳನ್ನು ಕಾಣಬಹುದು. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (ಪಶ್ಚಿಮ ಬಂಗಾಳ), ಕಲ್ಕಾ-ಶಿಮ್ಲಾ ರೈಲ್ವೇ (ಹಿಮಾಚಲ ಪ್ರದೇಶ), ನೀಲಗಿರಿ ಮೌಂಟೈನ್ ರೈಲ್ವೇ (ತಮಿಳು ನಾಡು), ಮತೆರಾನ್ ಹಿಲ್ ರೈಲ್ವೇ (ಮಹಾರಾಷ್ಟ್ರ) , ಕಾಂಗ್ರಾ ವ್ಯಾಲಿ ರೈಲ್ವೇ (ಹಿಮಾಚಲ್ ಪ್ರದೇಶ). ಇವುಗಳೆಲ್ಲವೂ ಬ್ರಿಟಿಷರ ಕಾಲದಲ್ಲೇ ನಿರ್ಮಾಣಗೊಂಡಂತವುಗಳು. ಎಲ್ಲವೂ ಪರ್ವತ ಪ್ರದೇಶಗಳಲ್ಲಿಯೇ ಇವೆ. ದಟ್ಟವಾದ ಕಾಡು, ಪರ್ವತಗಳು ಇವುಗಳ ಸೌಂದರ್ಯವನ್ನು ಸವಿಯಲು ಹೇಳಿ ಮಾಡಿಸಿದಂತಿವೆ. ಈ ಕಲ್ಕಾ ಶಿಮ್ಲಾ ರೈಲ್ವೇಯನ್ನು ೧೯೦೩ರಲ್ಲಿ ನಿರ್ಮಿಸಲಾಯಿತು. ಆಗ ಬ್ರಿಟಿಷರ ಸಮ್ಮರ್ ಕ್ಯಾಪಿಟಲ್‌ ಶಿಮ್ಲಾ ಆಗಿತ್ತು. ೯೬ಕಿ.ಮೀ ಇರುವ ಈ ಹಾದಿ ೧೦೩ ಸುರಂಗಗಳನ್ನು ಹಾಗೂ ೮೦೦ ಸೇತುವೆಗಳನ್ನು ಒಳಗೊಂಡಿದೆ. ಈಗ ಈ ಪ್ರದೇಶವನ್ನು 'ಯುನೆಸ್ಕೋ' 'ವರ್ಲ್ಡ್ ಹೆರಿಟೇಜ್ ಸೈಟ್' ಗೆ ಸೇರಿಸಲಾಗಿದೆ.  ೬ ಗಂಟೆಗೆ ಕಲ್ಕಾದಿಂದ ಟ್ರೈನ್ ಹೊರಟಿತು. ನಮಗೆ ಎಡ ಬದಿಯಲ್ಲಿ ಸೀಟ್ ಸಿಕ್ಕಿತ್ತು. ವಾತಾವರಣ ತುಂಬಾ ತಂಪಾಗಿತ್ತು. ಹಾಗೆ ಸಾಗುತ್ತಾ ಹಳ್ಳಿ ದಾಟಿ ಕಾಡು ತಲುಪಿತು. ಸುತ್ತಲೂ ಮರಗಿಡಗಳು. ಕರಿಬೇವಿನ ಗಿಡಗಳಿಗಂತೂ ಲೆಕ್ಕವೇ ಇಲ್ಲ, ನಮ್ಮಲ್ಲಿ ಪಾರ್ಥೇನಿಯಂ ಬೆಳೆವ ರೀತಿ ಎಲ್ಲೆಂದರಲ್ಲಿ ಬೆಳೆದಿತ್ತು.ಟ್ರೈನ್ ಈಗ ಪರ್ವತಗಳನ್ನು ಸುತ್ತು ಹಾಕುತ್ತಾ ಹತ್ತುತ್ತಾ ಹೋಗುತ್ತಿತ್ತು. ನೋಡು ನೋಡುತ್ತಿದ್ದಂತೆಯೇ ಬಲ ಬದಿಯಲ್ಲಿ ಆಳವಾದ ಪ್ರಪಾತಗಳು ಕಾಣ ತೊಡಗಿದವು. ಇನ್ನೊಂದಷ್ಟು ದೂರ ಸಾಗಿದಂತೆ ಕೆಳಗಡೆ ಚಿಕ್ಕದಾಗಿ ತಿರುವುಗಳಿಂದ ಕೂಡಿದ ರಸ್ತೆಗಳು ಹಾಗೂ ಚಿಕ್ಕ ಚಿಕ್ಕದಾಗಿ ಕಾಣಿಸುತ್ತಿದ್ದ ವಾಹನಗಳು. ಹೆಚ್ಚು ಸೀನರಿಗಳು ಬಲಬದಿಯೇ ಕಾಣುತ್ತಿತ್ತು. ನಾವು ರೈಲಿನ ಬಾಗಿಲ ಬಳಿ ಬಂದು ನಿಂತುಕೊಂಡೆವು. ನಾವು ಕೂತ ಸೈಡಿನಲ್ಲಿ ಕೇವಲ ಪರ್ವತಗಳ ಗೋಡೆಗಳಷ್ಟೇ ಕಾಣುತ್ತಿತ್ತು, ಆಚೆ ಬದಿ ಅದ್ಭುತವಾದ ನಯನ ಮನೋಹರವಾದ ಪ್ರಕೃತಿಯ ಸುಂದರ ಚಿತ್ರಣ. ಈ ಹಾದಿಯಲ್ಲಿ ಸುಮಾರು ೯೦೦ ರಷ್ಟು ತಿರುವುಗಳಿವೆಯಂತೆ. ಒಂದೊಂದು ತಿರುವಿನಲ್ಲೂ ವ್ಹಾ... ಅನಿಸುವ ಪ್ರಕೃತಿ ಸೌಂದರ್ಯ. ಇನ್ನೂ ಮುಂದಕ್ಕೆ ಹೋದಂತೆ ಪೈನ್ ಹಾಗೂ ಓಕ್‌ನ ಮರಗಳ ಕಾಡು. ಈ ಮರಗಳ ರಚನೆಯೇ ಅದ್ಭುತ. ಕೊಂಬೆಗಳು ಮೇಲೆ ಚಿಕ್ಕದಾಗಿದ್ದು, ಕೆಳ ಬರುತ್ತಾ ಅಗಲವಾಗುತ್ತವೆ, ಕ್ರಿಸ್ಮಸ್ ಟ್ರೀ ಯ ರೀತಿಯ ರಚನೆ, ಕೋನ್ ಆಕಾರದ ಎಷ್ಟೋ ಶತಕಗಳಿಂದ ಅಲ್ಲೇ ಬೇರು ಬಿಟ್ಟು ನಿಂತ  ಹೆಮ್ಮರಗಳು. ಹಿಮ ಪಾತವಾಗುವ ಸಂದರ್ಭಗಳಲ್ಲಿ ಹಿಮ ಮರದಲ್ಲೇ ಉಳಿಯದೇ ಜಾರಿ ನೆಲಕ್ಕೆ ಬೀಳುವಂತಹ ರಚನೆ. ಎಲೆಗಳೂ ಅಷ್ಟೇ ಸೂಜಿಯಂತೆ ಮೊನಚಾಗಿರುತ್ತದೆ.  ಆ ಪ್ರದೇಶಕ್ಕೆ ಅಲ್ಲಿನ ವಾತವರಣಕ್ಕೆ ಹೊಂದಿಕೆಯಾಗುವಂತಹ ವಿನ್ಯಾಸ. ಈ ಸೂಚಿಪರ್ಣ ಕಾಡುಗಳು ಚಳಿಗಾಲದಲ್ಲಂತೂ ಬಿಳಿ ಬಿಳಿಯಾಗಿರಬಹುದು. ಇನ್ನೂ ಮುಂದಕ್ಕೆ ಹೋಗುತ್ತಾ ಅಲ್ಲಲ್ಲಿ ಝರಿಗಳು, ಬೃಹದಾಕಾರದ ಬಂಡೆಕಲ್ಲುಗಳು ಮತ್ತೆ ಸ್ವಲ್ಪ ದೂರದಲ್ಲಿ ಪುಟ್ಟದಾಗಿ ಕಾಣುವ ರಸ್ತೆ ವಾಹನಗಳು, ಮೈ ನವಿರೇಳಿಸುವಂತಹ ಪ್ರಪಾತಗಳು, ಉಫ್ ಎಂದು ನಿಟ್ಟುಸಿರು ಬಿಡುವಾಗಲೇ ರೈಲು ಸುರಂಗದೊಳಕ್ಕೆ ಹೊಕ್ಕಾಗಿರುತ್ತದೆ. ಅಬ್ಭಾ ಈ ಪ್ರಯಾಣವಂತೂ ಒಂಥರಾ ತ್ರಿಲ್ ಆಗಿತ್ತು. ಪ್ರಯಾಣವೇ ಈ ರೀತಿಯಾದರೆ, ಇಲ್ಲಿ ಟ್ರ್ಯಾಕ್ ನಿರ್ಮಿಸಿದ ಕಾರ್ಮಿಕರ ಪರಿಸ್ಥಿತಿ ಅವರ ಧೈರ್ಯ ಇನ್ನೆಂತಹುದೋ? ಈ ಹಾದಿಯಲ್ಲಿ ಸಿಗುವ ೩೩ನೇ ಸುರಂಗ ಭಯಾನಕವಾದ ಸುರಂಗ ಎಂದು ಟ್ರಿಪ್ ಮುಗಿಸಿ ಬಂದ ನಂತರ ತಿಳಿಯಿತು. ಇದನ್ನು 'ಹಾಂಟೆಡ್ ಟನೆಲ್' ಅಂತಲೇ ಕರೆಯುವರಂತೆ. ಒಬ್ಬ ಬ್ರಿಟಿಷ್ ಅಧಿಕಾರಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡು ಅವನ ಪ್ರೇತಾತ್ಮ ಇನ್ನೂ ಅಲ್ಲೇ ಸುತ್ತುತ್ತಿದೆ, ಕೆಲವೊಮ್ಮೆ ಅಲ್ಲಿ ಏನೇನೋ ವಿಚಿತ್ರ ಸದ್ದು ಕೇಳಿಸುತ್ತದೆ ಅಂತ ಹೇಳ್ತಾರೆ. ಹೋಗುವಾಗ ಅಥವಾ ಬರುವಾಗ ನಮಗೆ ಯಾವುದೇ ಶಬ್ದ ಕೇಳಲಿಲ್ಲ. ಈ ೩೩ನೇ ಟನೆಲ್ ಯಾವುದೆಂದೇ ತಿಳಿಯಲಿಲ್ಲ. ನಾವು ಉಳಿದುಕೊಂಡಿದ್ದ ಹೋಟೆಲ್ ಪಕ್ಕ ಹಳೇ ಬಂಗಲೆಯೊಂದಿತ್ತು. ಪಾಳು ಬಿದ್ದಿದ್ದ ಈ ಬಂಗಲೆಯಲ್ಲೂ ಪ್ರೇತಾತ್ಮಗಳು ಇವೆ ಎಂಬ ಕಥೆ ಆಮೇಲೆ ತಿಳಿಯಿತು. ಒಳ್ಳೆದೇ ಆಯಿತು, ಮೊದಲೇ ತಿಳಿದಿದ್ದರೆ ಭಯವಾಗುತ್ತಿತ್ತೇನೋ. ಸಮುದ್ರ ಮಟ್ಟದಿಂದ ಅದೆಷ್ಟೋ ಮೀಟರ್ ಎತ್ತರದಲ್ಲಿದ್ದೇವೆ. ಸ್ವರ್ಗಕ್ಕೆ ಹೋಗುತ್ತಿರುವೆನೋ ಅನ್ನುವಂತಹ ಭಾವ. ಎಸ್.ಎಲ್. ಭೈರಪ್ಪರು 'ಪರ್ವ' ಕಾದಂಬರಿಯಲ್ಲಿ ಬರೆದಿರುವ ದೇವಲೋಕ ಬಹುಷಃ ಇದೇ ಇರಬೇಕು. ಪರ್ವತಗಳಾಚೆಗಿನ ಪ್ರದೇಶ, ಅತ್ಯಂತ ಶೀತ ಪ್ರದೇಶ, ಅಲ್ಲಿನ ದೇವ ಜನರು ಅವರು ಪರ್ವತ ಇಳಿದು ಬರುವುದು  ಎಂದೆಲ್ಲಾ ಬಹುಷಃ ಇದೇ ಪ್ರದೇಶದ ವಿವರಣೆ ಹೇಳಿದ್ದಿರಬೇಕು. ಮುಂದೆ ಹೋದಾಗ ಕರಿ ಬೇವಿನ ಗಿಡಗಳ ಜೊತೆಗೆ ದಾಳಿಂಬೆ ಗಿಡಗಳೂ ಹೇರಳವಾಗಿ ಕಾಡಿನ ತುಂಬೆಲ್ಲಾ ಕಂಡು ಬಂದವು. ಇವು ಚಿಕ್ಕ ಜಾತಿ ದಾಳಿಂಬೆ, ನೋಡಿದರೆ ಅವು ಬೆಳೆಸಿದಂತಿಲ್ಲ. ತಮ್ಮಷ್ಟಕ್ಕೇ ಎಲ್ಲೆಂದರಲ್ಲಿ ಬೆಳೆದ ಕಳೆ ಗಿಡಗಳಂತೆ. ಜೊತೆಗೆ ಬೃಹತ್ತಾದ ಕಳ್ಳಿ ಗಿಡಗಳು. ಅಲ್ಲೋ ಇಲ್ಲೋ ಕಣ್ಣಾಮುಚ್ಚಾಲೆ ಆಡುವ ಚಂದ ಚಂದದ ಹಕ್ಕಿಗಳು, ಆರ್ಕಿಡ್ ಹೂವುಗಳು.  ಉಳಿದಂತೆ ನಮ್ಮ ಕಡೆ ಕಂಡು ಬರುವ ಗಿಡಗಳ ಬೇರೆ ಬೇರೆ ಸ್ಪೀಸೀಸ್‌ಗಳು ಕಾಣಸಿಕ್ಕವು.  ಒಂದೆರಡು ಮೂರು ಕಡೆ ಬಿಟ್ಟರೆ ರೈಲೂ ಎಲ್ಲೂ ನಿಲ್ಲಲ್ಲಿಲ್ಲ. ದೂರದಲ್ಲಿ ಕಾಣುತ್ತಿದ್ದ ಪಟ್ಟಣಗಳು ಪರ್ವತವನ್ನೇ ಕಡಿದು ನಿರ್ಮಿಸಿದ್ದಾಗಿತ್ತು. ಹೀಗೆ ಸುಮಾರು ೫ ರಿಂದ ೬ ಗಂಟೆಗಳ ಪ್ರಯಾಣ ಕಲ್ಕಾದಿಂದ ಶಿಮ್ಲಾಕ್ಕೆ. ೧೨ಗಂಟೆಯ ಸುಮಾರಿಗೆ ಶಿಮ್ಲಾ ರೈಲ್ವೇ ಸ್ಟೇಷನ್ ತಲುಪಿದೆವು. ಅಲ್ಲಿ ಕೇವಲ ಟಾಯ್ ಟ್ರೈನ್‌ಗಳು ಮಾತ್ರ ಬರುವುದರಿಂದ ನ್ಯಾರೋ ಟ್ರಾಕ್‌ಗಳು ಮಾತ್ರ ಇದ್ದವು. ರೈಲ್ವೇ ಸ್ಟೇಶನ್ ಕೂಡಾ ಚಿಕ್ಕದು. ಟ್ರ್ಯಾಕ್‌ನ ಒಂದು ಬದಿ ಸ್ಟೇಷನ್ ಇದ್ದರೆ, ಇನ್ನೊಂದು ಬದಿ ಪ್ರಪಾತ. ಶಿಮ್ಲಾ ಕೂಡ ಪರ್ವತಗಳನ್ನು ಅಲ್ಲಲ್ಲಿ ಕಡಿದು ಸಮತಟ್ಟುಗೊಳಿಸಿ ನಿರ್ಮಿಸಿದಂತಹ ಪಟ್ಟಣ. ಸ್ಟೇಶನ್‌ನಿಂದ ಹತ್ತುತ್ತಾ ಮೇಲೆ ಟ್ಯಾಕ್ಸಿ‌ಗಳು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದೆವು. ಇಲ್ಲಿ ರಸ್ತೆ ಎಂದರೆ  ಹತ್ತುವುದು, ಇಳಿಯುವುದು ಹಾಗೂ ತಿರುಗುವುದು. ಸಮತಟ್ಟಾದ ನೇರವಾದ ರಸ್ತೆ ಕಾಣಲು ಸಾಧ್ಯವಿಲ್ಲ. ನಾವು 'ಹಾಲಿಡೆ ಹೋಮ್‌' ನಲ್ಲಿ ರೂಮ್ ಬುಕ್ ಮಾಡಿದ್ದೆವು. ಅಲ್ಲಿಗೆ ಹೋಗಲು ಟ್ಯಾಕ್ಸಿ ಒಂದರಲ್ಲಿ ಕುಳಿತೆವು. ನಮ್ಮ ಟ್ಯಾಕ್ಸಿ ಡ್ರೈವರ್ ರಘು. ನಾವು ಹಾಲಿಡೆ ಹೋಮ್‌ಗೆ ಹೋಗುವಾಗ ಆತನೇ ೧೬೦೦ ರೂ ಕೊಟ್ಟರೆ  ಶಿಮ್ಲಾದಲ್ಲಿ ಇಂತಿಂತಾ ಸ್ಥಳಗಳನ್ನು ತೋರಿಸುತ್ತೇನೆ, ಎಂದ. ಅದೇ ಟ್ಯಾಕ್ಸಿಯಲ್ಲಿ ನಾವು ಎರಡು ದಿನ ಶಿಮ್ಲಾ ಸುತ್ತಿದೆವು.


ಕಲ್ಕಾ ರೈಲ್ವೇ ಸ್ಟೇಷನ್, ಟಾಯ್ ಟ್ರೈನ್

ಸುರಂಗವೊಂದನ್ನು ಪ್ರವೇಶಿಸುತ್ತಿರುವ ಪುಟಾಣಿ ಟಾಯ್ ಟ್ರೈನ್

ಶಿಮ್ಲಾ ರೈಲ್ವೇ ಸ್ಟೇಷನ್


upper view of shimla railway station


ಹಾಲಿಡೇ ಹೋಮ್ ಬಳಿ ಪಾಳು ಬಿದ್ದಿರುವ ಬ್ರಿಟಿಷರ ಬಂಗಲೆ (ಭೂತ ಬಂಗಲೆ)

ಹಾಲಿಡೇ ಹೋಮ್

ಶಿಮ್ಲಾದ ಒಂದು ನೋಟ

ಹಾಲಿಡೇ ಹೋಮ್ ಗೆ ಕಾಣಿಸುವ ಜಾಖೂ ಟೆಂಪಲ್‌ನ ಹನುಮಾನ್ ಮೂರ್ತಿ   ಶಿಮ್ಲಾ(ಹಿಮಾಚಲ ಪ್ರದೇಶ) ಭಾರತದ ಉಳಿದೆಲ್ಲಾ ಪ್ರದೇಶಗಳಿಗಿಂತ ಭಿನ್ನ. ಭಾರತದ ಸ್ಕಾಟ್‌ಲ್ಯಾಂಡ್ ಎಂದು ಕರೆಯುತ್ತಾರಂತೆ. ಇಲ್ಲಿನ ತಂಪಾದ ಹವಾಮಾನ, ಕ್ಲೀನ್ ಹಾಗೂ ನೀಟ್ ಆಗಿರುವ ಪಟ್ಟಣ, ಪ್ರಬುದ್ಧ ನಾಗರಿಕರು, ಅಲ್ಲಿನ ಕಟ್ಟಡಗಳ ಶೈಲಿಯೂ ವಿದೇಶಗಳಲ್ಲಿನ ಕಟ್ಟಡಗಳಂತೆ. ವಿಶಿಷ್ಟವಾದ ಈ ಶೈಲಿ  Tudorbethan ಮತ್ತು neo-Gothic architectures. ಬ್ರಿಟಿಷರು ಕಟ್ಟಿದ್ದ ಕಟ್ಟಡಗಳ ಶೈಲಿಯನ್ನು ಹಾಗೇ ಕಾಪಾಡಿಕೊಂಡಿದ್ದಾರೆ ಹಾಗೂ ಅಲ್ಲಿ ಆ ಶೈಲಿ ಅನಿವಾರ್ಯ. ನೆಲಕ್ಕೆ ಸಿಮೆಂಟ್ ಅಥವಾ ಟೈಲ್ಸ್, ಗ್ರಾನೈಟ್‌ಗಳ ಬದಲು ಮರವನ್ನೇ ಉಪಯೋಗಿಸುತ್ತಾರೆ, ಕಾರಣ ಇಲ್ಲಿನ ಚಳಿ. ಚಳಿಗಾಲದಲ್ಲಂತೂ ಮೈನಸ್ ತನಕ ಇಳಿದು ಬಿಡುವ ಉಷ್ಣಾಂಶ. ಹಾಲಿಡೇ ಹೋಮ್‌ ಮಾಲ್ ರೋಡ್‌ನಲ್ಲಿದ್ದುದರಿಂದ ಅಲ್ಲಿಗೆ ವಾಹನ ಸಂಚಾರ ಇಲ್ಲ. ಆ ರೋಡ್‌ನಲ್ಲಿ ವಾಹನ ಪ್ರವೇಶ ನಿಷೇಧ. ನಡೆಯುತ್ತಾ ಸಾಗಿದೆವು. ಬೇರೆಯ ಲೋಕಕ್ಕೆ ಬಂದದಂತಹ ಸಂತೋಷ, ರಸ್ತೆ ಬದಿ ಎಲ್ಲಿ ನೋಡಿದರೂ ಬಣ್ಣ ಬಣ್ಣದ ಹೂವುಗಳು, ಕತ್ತೆತ್ತಿದರೆ ಸಾಲು ಸಾಲು ಪರ್ವತಗಳು, ಅದೂ ಪೈನ್ ಮರಗಳದ್ದು, ಗಾರ್ಡನ್‌ಗಳಲ್ಲಿ ಚಂದಕ್ಕಾಗಿ ನಡುವ ಮರಗಳದ್ದೇ ಕಾಡು, ಹೇಗಿರಬಹುದು? ಊಹಿಸಿ. ಪದಗಳಲ್ಲಿ ಆ ಸುಂದರ ಭೂರಮೆಯನ್ನು ತೋರಿಸಲು ಸಾಧ್ಯವಿಲ್ಲ. ಹತ್ತುತ್ತಾ ಸಾಗಿದೆವು, ಸುಸ್ತಾದರೂ ಬೆವರಲಿಲ್ಲ. ಹಾಲಿಡೇ ಹೋಮ್ ತಲುಪಿದೆವು. ಅಲ್ಲಿ ಚೆಕ್ ಇನ್ ಮಾಡಿಕೊಂಡು ಮೂರನೇ ಅಂತಸ್ಥಿನಲ್ಲಿದ್ದ ನಮ್ಮ ರೂಮ್ ತಲುಪಿದೆವು. ಈ ಸುಂದರ ನಾಡಿನಲ್ಲಿ ಮತ್ತೆ ಆ ಹಾಲಿಡೇ ಹೋಮ್‌ನ ಸೌಂದರ್ಯ ವರ್ಣಿಸಬೇಕಾಗಿಲ್ಲ. ಬಹು ಅಂತಸ್ತಿನ ಸುಂದರವಾದ ವಿಶಿಷ್ಟ ರೀತಿಯ ಕಟ್ಟಡ, ಮೆಟ್ಟಿಲುಗಳು, ಫ್ಲೋರ್ ಎಲ್ಲವೂ ಮರದಿಂದಲೇ ತಯಾರಾಗಿವೆ. ಇದು ಬ್ರಿಟಿಷರ ಕಾಲದ ಕಟ್ಟಡವಾದರೂ ನವೀಕರಣ ಮಾಡಲಾಗಿದೆ. ಹೊರಗೆ ಸಿಟೌಟ್, ಅಲ್ಲಿ ಕುಳಿತು ನೋಡಿದರೆ ಕಾಣುವ ರಮಣೀಯವಾದ ಹಿಮಾಲಯದ ಪರ್ವತಗಳ ಸಾಲು, ಒಳಗಡೆ ವಿಶಾಲವಾದ ರೂಮ್.  ಸ್ವಲ್ಪ ಹೊತ್ತು ವಿರಮಿಸಿ ಊಟಕ್ಕೆ ಅಲ್ಲೇ ಇದ್ದ ಹೋಟೆಲ್‌ಗೆ ತೆರಳಿದೆವು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಷ್ಟೂ ಸಾಲುತ್ತಿರಲಿಲ್ಲ. ಇಲ್ಲೇ ಇದ್ದು ಬಿಡೋಣ ಅನಿಸುತ್ತಿತ್ತು. ಊಟ ಮಾಡಿ ರಘುವಿಗೆ ಕಾಲ್ ಮಾಡಿದೆವು. ಅವನೊಂದಿಗೆ ಟ್ಯಾಕ್ಸಿಯಲ್ಲಿ ಶಿಮ್ಲಾ ಸುತ್ತಲು ಹೊರಟೆವು. ಇಲ್ಲಿ ಡ್ರೈವ್ ಮಾಡಬೇಕಾದರೆ, ಅಲ್ಲಿನವರೇ ಆದ ಅನುಭವವುಳ್ಳ ಡ್ರೈವರ್‌ಗಳಿಂದ ಮಾತ್ರ ಸಾಧ್ಯ ಅನಿಸುತ್ತದೆ. ಎಲ್ಲಿ ನೋಡಿದರೂ ಹತ್ತುವುದು, ಇಳಿಯುವುದು ಹಾಗೂ ತಿರುವು. ಸ್ವಲ್ಪ ಮಿಸ್ ಆದರೂ ಗಾಡಿ ಪ್ರಪಾತದಲ್ಲಿ ಇದ್ದೀತು.

'ಹೆರಿಟೇಜ್ ಮ್ಯೂಸಿಯಂ'
ರಘು ನಮ್ಮನ್ನು ಮಿಲಿಟರಿ ಮ್ಯೂಸಿಯಂ‌ಗೆ ಕರೆದೊಯ್ದ. ಇದನ್ನು 'ಹೆರಿಟೇಜ್ ಮ್ಯೂಸಿಯಂ' ಎನ್ನುತ್ತಾರೆ. ಮಹಿ ಹೋದ ಸಲ ಶಿಮ್ಲಾಗೆ ಬಂದಿದ್ದಾಗ ಇದನ್ನು ನೋಡಿರಲಿಲ್ಲವಂತೆ. ಆ ಜಾಗಕ್ಕೆ 'ಅನ್ನಂನ್‌ದೇಲ್' ಎಂದು ಹೆಸರು. ಶಿಮ್ಲಾಕ್ಕೆ ಹೋದವರು ಇಲ್ಲಿಗೆ ಭೇಟಿ ನೀಡಲು ಮರೀಬೇಡಿ. ಬಹಳ ಉತ್ತಮವಾದ, ನೋಡಲೇ ಬೇಕಾದಂತಹ ಮ್ಯೂಸಿಯಂ. ಕಾರಿನಿಂದ ಇಳಿಯುತ್ತಿದ್ದಂತೆಯೇ ಪ್ರಕೃತಿಯ ಒಡಲಲ್ಲಿ ಅಚ್ಚುಕಟ್ಟಾಗಿ, ತುಂಬಾ ಚಂದಕೆ ಕಟ್ಟಿದ ಬಿಲ್ಡಿಂಗ್‌ಗಳು. ಮೂರು ದೊಡ್ಡ ದೊಡ್ಡ ಗೋಳಾಕಾರದ ಕಲ್ಲು ಗುಂಡುಗಳು, ಫಿರಂಗಿಗಳು, ಹಳೇ ಆರ್ಟಿಲೆರಿ ಗನ್‌ಗಳು,  ನಮ್ಮನ್ನು ಸ್ವಾಗತಿಸುತ್ತವೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಮೂರ್ತಿ. ಪ್ರಕೃತಿಯಿಂದ ಸ್ವಯಂ ನಿರ್ಮಿಸಲ್ಪಟ್ಟ ಗಾರ್ಡನ್‌ಗೆ ಸ್ಪರ್ಧೆ ಒಡ್ಡುತ್ತಿದ್ದ ಅಲ್ಲಿನ ಹೂವಿನ ಗಾರ್ಡನ್. ಅಲ್ಲಿ ಮೂರು ನಾಲ್ಕು ಬಿಲ್ಡಿಂಗ್‌ಗಳಿದ್ದವು. ಇವುಗಳೆಲ್ಲವೂ ಮ್ಯೂಸಿಯಂಗಳೇ. ಒಂದು ಮ್ಯೂಸಿಯಂ‌ನಲ್ಲಿ ವೈಟ್ ವಾಶ್ ಮಾಡುತ್ತಿದ್ದುದರಿಂದ ಹೋಗಲು ಅವಕಾಶವಾಗಲಿಲ್ಲ. ಇನ್ನೊಂದು ಮ್ಯೂಸಿಯಂ‌ನ ಒಳಗಡೆ ಭಾರತೀಯ ಸೇನೆಯ ಬೇರೆ ಬೇರೆ ಧ್ವಜಗಳು, ಕಾರ್ಗಿಲ್ ಯುದ್ಧ ಸೇರಿದಂತೆ ಬೇರೆ ಬೇರೆ ಯುದ್ಧಗಳ ಸಂದರ್ಭಗಳಲ್ಲಿ ತೆಗೆದ ಫೋಟೋಗಳು, ಮಾಹಿತಿಗಳು, ಸೇನೆಯ ಪ್ರಮುಖರ ಬಗ್ಗೆ ಒಂದಷ್ಟು ಮಾಹಿತಿಗಳು, ಸೇನೆಯ ಮೀಟಿಂಗ್‌ಗಳು ನಡೆಯುವ ಮಾದರಿಗಳು, ನಕ್ಷೆಗಳು, ಸೇನೆಯಲ್ಲಿ ಉಪಯೋಗಿಸಿದ್ದ ಕೆಲವು ವಸ್ತುಗಳು, ಕೆಲವು ಸ್ಟ್ಯಾಚೂ ಗಳು, ಹೀಗೆ ಅನೇಕ ವಸ್ತುಗಳ ಸಂಗ್ರಹವೇ ಅಲ್ಲಿತ್ತು. ಆ ಮ್ಯೂಸಿಯಂ‌ಗೆ 'ಶೌರ್ಗಾ ಹಾಲ್' ಎಂದು ಹೆಸರು (shaurga hall). ಇನ್ನೊಂದು ಮ್ಯೂಸಿಯಂ‌ನಲ್ಲೂ ಇದೇ ರೀತಿ ಅನೇಕ ವಸ್ತುಗಳ ಸಂಗ್ರಹವೇ ಇತ್ತು. ನೀವು ನೋಡಿರಬಹುದು ಕಾರ್ಗಿಲ್ ವಿಜಯೋತ್ಸವದ ದಿವಸ ಹೆಚ್ಚಿನವರ ಡಿಪಿ ಹಾಗೂ ಸ್ಟೇಟಸ್‌ಗಳಲ್ಲಿನ ಗನ್ ಹಾಗೂ ಅದರ ತುದಿಯಲ್ಲಿ ಸೈನಿಕನ ಹ್ಯಾಟ್ ಇದ್ದ ಚಿತ್ರ. ಆ ಚಿತ್ರದ ಒರಿಜಿನಲ್ ಸ್ಟ್ಯಾಚ್ಯೂ ಅಲ್ಲಿತ್ತು. ಅಲ್ಲೇ ಹೊರಗಡೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ನ ಚಿಕ್ಕದೊಂದು ಮಾಡೆಲ್ ಇತ್ತು. ಕೆಳಗಡೆ ಒಂದು ಗ್ರೌಂಡ್‌ನಲ್ಲಿ ದೊಡ್ಡ ಹೆಲಿಕಾಪ್ಟರೇ ನಿಂತಿತ್ತು. ಕೊನೆಯದಾಗಿ ಗ್ಲಾಸ್ ಹೌಸ್ ನೋಡಿದೆವು. ಇಲ್ಲಿ ನಾನಾ ಬಗೆಯ ಕಳ್ಳಿ ಗಿಡಗಳು ಇದ್ದವು. ಒಂದಕ್ಕಿಂತ ಒಂದು ಭಿನ್ನ ಹಾಗೂ ವಿಚಿತ್ರ ರೀತಿಯ ರಚನೆಗಳು.  ಗ್ಲಾಸ್ ಹೌಸ್‌ನ ಒಳಗಿನ ಉಷ್ಣಾಂಷ ಹೊರಗಿನ ಉಷ್ಣಾಂಶಕ್ಕಿಂತ ತುಸು ಜಾಸ್ತಿ ಇದ್ದು, ಬೆಚ್ಚನೆ ಅನಿಸಿತು.INDIAN INSTITUTE OF ADVANCED STUDY, ಬ್ರಿಟಿಷ್ ಸಮ್ಮರ್ ಕ್ಯಾಪಿಟಲ್‌
  ನಂತರ ಅಲ್ಲಿಂದ ಬ್ರಿಟಿಷರ ಸಮ್ಮರ್ ಕ್ಯಾಪಿಟಲ್‌ಗೆ ಹೋದೆವು. ಇದೊಂದು ಅದ್ಭುತವಾದ ಜಾಗ. ಆರ್ಟ್ ಗ್ಯಾಲರಿ, ಮ್ಯೂಸಿಯಂ ಹಾಗೂ ದೊಡ್ಡದಾದ ಹೂವಿನ ಗಾರ್ಡನ್ ಇಲ್ಲೂ ಇದೆ. ಇಲ್ಲಿ ಪ್ರತ್ಯೇಕವಾದ ರೋಸ್ ಗಾರ್ಡನ್ ಕೂಡಾ ಇದೆ. ಎಲ್ಲಿ ನೋಡಿದರೂ ಹೂವು, ಇಲ್ಲಿನ ಈ ತಂಪಿನ ವಾತಾವರಣ ಹಲವು ಬಗೆಯ ವಿಶಿಷ್ಟ ರೀತಿಯ ಹೂವಿನ ಗಿಡಗಳ ಬೆಳವಣಿಗೆಗೆ ಪೂರಕವಾಗಿದೆ. ಇದು ಬ್ರಿಟಿಷರ ಕಾಲದ ರಾಷ್ಟ್ರಪತಿ ನಿವಾಸ. ಹಾಗೇ indian institute of advanced study' ಯ ರಿಸರ್ಚ್ ಸೆಂಟರ್ ಕೂಡಾ ಹೌದು. ಅಲ್ಲೆಲ್ಲಾ ಫೋಟೋ ಗಳನ್ನು ಕ್ಲಿಕ್ಕಿಸುತ್ತಿದ್ದೆವು. ನನ್ನ ಫೋಟೋ ಮಹಿ ಹಾಗೂ ಮಹಿ ಫೋಟೋ ನಾನು ತೆಗೆಯುತ್ತಿದ್ದೆವು, ಆದರೆ 'ಮೊಬೈಲ್‌ನಲ್ಲಿ ಸೆಲ್ಫೀ' ಬಿಟ್ಟರೆ ಇಬ್ಬರು ಒಟ್ಟಿಗೆ ನಿಂತ ಫೋಟೋ ಇರಲಿಲ್ಲ. ಅಲ್ಲೊಬ್ಬಾಕೆ ವಿದೇಶೀ ಹುಡುಗಿ ನಾವಿದ್ದ ಕಡೆಗೆ ಬಂದಳು, ಅವಳ ಬಳಿ ಫೋಟೋ ತೆಗೆಯುವಂತೆ ನಮ್ಮ ಕ್ಯಾಮಾರ ಕೊಟ್ಟು ಕೇಳಿಕೊಂಡೆವು. ನಗುಮುಗದಿಂದಲೇ ಮಾತನಾಡುತ್ತಿದ್ದ ಆಕೆ ನಮ್ಮನ್ನು ನಗಲು ಹೇಳಿ ಆಕೆಯೂ ನಗುನಗುತ್ತಲೇ ಫೋಟೋ ತೆಗೆದಳು. ಆಕೆ ಸ್ಪೈನ್ ದೇಶದವಳು. ಆಹ್ಲಾದಕರವಾದ ಅಲ್ಲಿನ ಸೌಂದರ್ಯವನ್ನು ಸವಿದು ಒಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟೆವು.
fruit of diyodar tree    ನಂತರ ಅಲ್ಲೊಂದು ಪಕ್ಷಿಧಾಮವಿದೆ ಹೋಗೋಣ ಎಂದ ರಘು. ನನ್ನ ನಿರೀಕ್ಷೆಯಂತೂ ದೊಡ್ಡದಾಗೇ ಇತ್ತು. ಆದರೆ ಆ ಪಕ್ಷಿ ಧಾಮ ಬಹಳ ಚಿಕ್ಕದಾಗಿದ್ದು ೮-೧೦ ಪಕ್ಷಿಗಳನ್ನು ಗೂಡಲ್ಲಿ ಹಾಕಿ ಸಾಕಿದಂತಿತ್ತು. ಚಿಟಿ ಚಿಟಿ ಮಳೆ ಹನಿಯುತ್ತಿತ್ತು. ಅಲ್ಲೇ ಕೆಳಗೆ ರಸ್ತೆ ಬದಿ ಒಬ್ಬ ಸೂಪ್ ಮಾರುತ್ತಿದ್ದ. ಅಲ್ಲಿ ಅವನ ಸೂಪ್ ಅಂಗಡಿ ಬಿಟ್ಟು ಬೇರಾವ ಅಂಗಡಿಯೂ ಇರಲಿಲ್ಲ. ಆ ಅಂಗಡಿಯಲ್ಲಿ ಸೂಪ್ ಮತ್ತು ಮೊಮೊಸ್ ಬಿಟ್ಟು ಬೇರೇನೂ ಸಿಗುತ್ತಿರಲಿಲ್ಲ. ಆಗತಾನೇ ತಯಾರಿಸಿದ ಫ್ರೆಶ್ ಸೂಪ್. ರುಚಿಕರವಾದ ಆ ವೆಜೆಟೇಬಲ್ ಸೂಪ್ ಹೀರಿ, 'ಮೊಮೊಸ್' ತಿಂದು ಅಲ್ಲಿಂದ ಹೊರಟೆವು. ನಂತರ ಒಂದು ಹನುಮಾನ್ ದೇವಾಲಯಕ್ಕೆ ಹೋದೆವು. ಟ್ಯಾಕ್ಸಿಯಿಂದ ಇಳಿಯುತ್ತಿದ್ದಂತೆಯೇ ಹನುಮಂತಗಳು ನಮ್ಮ ಕಡೆಗೆ ಧಾವಿಸಿದವು. ನಮ್ಮಲ್ಲಿ ಅವುಗಳಿಗೆ ಬೇಕಾದದ್ದು ಏನೂ ಇಲ್ಲವೆಂದು ಖಚಿತ ವಾದ ನಂತರ ಬೇರೆ ಬಕ್ರಾಗಳು ಬರುತ್ತವೆಯೇ ಎಂದು ನೋಡತೊಡಗಿದವು. ನಮ್ಮೂರಿನ ಚಿಕ್ಕ ಪುಟ್ಟ ದೇವಾಲಯಗಳಂತೆಯೇ ಇಲ್ಲಿನ ದೇವಾಲಯಗಳು. ಶಿಮ್ಲಾದಲ್ಲಿ ನಾವು ಭೇಟಿ ನೀಡಿದ ಎಲ್ಲಾ ದೇವಾಲಯಗಳೂ ಕೂಡಾ ಉತ್ತರ ಭಾರತದ ಉಳಿದ ರಾಜ್ಯಗಳ ಮುಖ್ಯವಾಗಿ ಉತ್ತರ ಪ್ರದೇಶದ ದೇವಾಲಯಗಳಿಗಿಂತ ಭಿನ್ನ.  ಪ್ರಶಾಂತ ವಾತಾವರಣ, ಸುತ್ತಲೂ ಕಾಡು, ನಿರ್ಮಲವಾದ ಗಾಳಿ ಹಾಗೂ ಹಣಮಾಡುವುದೇ ಧ್ಯೇಯವಲ್ಲ ಎಂಬುದನ್ನು ಸಾರುವ ಪುರೋಹಿತ ವರ್ಗ. ಇಲ್ಲಿ ಮುಖ್ಯವಾಗಿ ಶಿಸ್ತು ಸೌಂದರ್ಯ ಹಾಗೂ ನೈರ್ಮಲ್ಯವನ್ನು ಕಾಣಬಹುದು. ಸುತ್ತಲೂ ಹೂವಿನ ಗಿಡಗಳು. ಅಲ್ಲಿ ಹಾಗೇ ಪ್ರದಕ್ಷಿಣೆ ಬರುವಾಗ 'ಘಂ' ಎಂದು ಗಾಳಿಯಲ್ಲಿ ಸುಳಿದು ಬಂದ ಜಾಜಿಯ ಸುವಾಸನೆ ನಮ್ಮೂರನ್ನು ನೆನಪಿಸಿತು ಹಾಗೂ ಆ ಜಾಗ ಮತ್ತಷ್ಟು ಆಪ್ತವಾಯಿತು. ಒಂದಷ್ಟುಹೊತ್ತು ಆ ಜಾಜಿಯ ಬುಡದಲ್ಲಿ ಕೂತು ಹೂವಿನ ಪರಿಮಳ ಆಘ್ರಾಣಿಸಿ ದೇವಾಲಯದಲ್ಲಿ ಕೊಟ್ಟ ಪ್ರಸಾದ(ಸಕ್ಕರೆ ಮಿಠಾಯಿ) ಸ್ವೀಕರಿಸಿ ಅಲ್ಲಿನ ಪುರೋಹಿತರಲ್ಲಿ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು. ನಾವು ಕರ್ನಾಟಕದಿಂದ ಬಂದವರೆಂದು ತಿಳಿದು ಅವರು "ಹೋ! ದಕ್ಷಿಣದವರೇ" ಅನ್ನುತ್ತಾ ಒಂದಷ್ಟು ಹೊತ್ತು ದಕ್ಷಿಣ ಭಾರತದ ಬಗ್ಗೆ ಹರಟಿದರು. ಅವರ ಮನೆ 'ಕಸೌಲಿ' ಎಂಬ ಊರಿನ ಪಕ್ಕದಲ್ಲಂತೆ. ಒಂದು ಪುಟ್ಟ ಗ್ರಾಮವಂತೆ. ಸದ್ಯ ದೇವಾಲಯದಲ್ಲಿ ಪೂಜೆ ಮಾಡುತ್ತಾ ಇಲ್ಲೇ ಇದ್ದಾರೆ.

hanuman mandir, shimla

hanuman mandir, shimla

local monkey, shimla

    ಅಲ್ಲಿಂದ ಹೊರಟ ನಂತರ ಆ ದೇವಾಲಯದ ಅನತಿ ದೂರದಲ್ಲಿ ರಘು ಕಾರು ನಿಲ್ಲಿಸಿದ. ಅದೊಂದು ಬೆಟ್ಟದ ಬುಡ. ಮುಖ್ಯ ರಸ್ತೆ ಆ ಬೆಟ್ಟಕ್ಕೆ ಸುತ್ತು ಹಾಕಿ ಹಾದು ಹೋಗುವುದಾದರೂ ಆತ ಅಲ್ಲಿ ಕಾರು ನಿಲ್ಲಿಸಿ, ಆ ಬೆಟ್ಟದ ಮಧ್ಯ ಭಾಗಕ್ಕೆ ಹೋಗುವ ಕಾಲು ದಾರಿಯನ್ನು ತೋರಿಸಿ ಅಲ್ಲಿದ್ದ ದೇವಾಲಯಕ್ಕೆ ಹೋಗುವಂತೆ ಹೇಳಿದ. ತುಂಬಾ ಹತ್ತಬೇಕಾಗಿಲ್ಲ. ನಾಲ್ಕೈದು ನಿಮಿಷ. ದೇವಾಲಯದ ಪ್ರವೇಶ ದ್ವಾರ ಸಿಕ್ಕಿತು. ಅದು 'ವೈಷ್ಣೋ ದೇವಿ' ದೇವಸ್ಥಾನ. ಬೆಟ್ಟವನ್ನು ಕೊರೆದು ಮಾಡಿದ ಗುಹಾ ದೇವಾಲಯದೊಳಗೆ ದೇವಿ ಇರುವಳು. ನಮ್ಮನ್ನು ಕಂಡೊಡನೆ ಪಂಡಿತ್ ಜೀ ಅಲ್ಲೇ ಪಕ್ಕದಲ್ಲಿದ್ದ ಅವರ ವಾಸಸ್ಥಳದಿಂದ ದೇವಾಲಯಕ್ಕೆ ಬಂದರು. ಗುಹೆಯ ಹೊರಗಿನಿಂದ ಒಳಗಡೆ ದೇವಿಯ ಮೂರ್ತಿ ಇರುವಲ್ಲಿಯವರೆಗೆ ಕಲ್ಲು ಹಾಸಿನ ದಾರಿ. ಶಾಂತವಾದ ಜಾಗ. ನಮ್ಮಿಬ್ಬರನ್ನು ಹಾಗೂ ಪುರೋಹಿತರನ್ನು ಬಿಟ್ಟು ಬೇರಾವ ಭಕ್ತರೂ ಇರಲಿಲ್ಲ. ಅಲ್ಲಿ ಒಂದಷ್ಟು ಹೊತ್ತು ಕುಳಿತು ಪ್ರಸಾದ ಪಡೆದು ಹೊರಡುವಾಗ ಮಳೆ ಪ್ರಾರಂಭವಾಗಿತ್ತು. ನಂತರ ಬೆಟ್ಟ ಇಳಿಯುತ್ತಾ ಬಂದು ಟ್ಯಾಕ್ಸಿಯಲ್ಲಿ ಕುಳಿತೆವು. ರಘುವಿನೊಂದಿಗೆ ಮಾತನಾಡುತ್ತಾ ಶಿಮ್ಲಾದ ಬಗ್ಗೆ ಕೇಳುತ್ತಿದ್ದೆವು. ಅಲ್ಲಿನ ಮುಖ್ಯ ನದಿ ಯಾವುದು ಎಂದು ಕೇಳಿದಾಗ ಆತ 'ಸತ್ಲೋಜ್'( ಸಟ್ಲೇಜ್) ಅಂದ.
   ಮತ್ತೆ ರೂಮ್ ಪಕ್ಕ ಬಂದು 'ಮಾಲ್ ರೋಡ್‌' ಸುತ್ತಿದೆವು. ಇದು ಶಿಮ್ಲಾದ ಬಹು ಮುಖ್ಯ ಮಾರ್ಕೆಟ್ ರಸ್ತೆ. ಈ ರಸ್ತೆ ಹಾಲಿಡೇ ಹೋಮ್‌ಗೆ ಹತ್ತಿರವೇ ಇದೆ. ಆಂಬುಲೆನ್ಸ್ ಮುಂತಾದ ಅಗತ್ಯ ವಾಹನಗಳನ್ನು ಹೊರತು ಪಡಿಸಿ ಉಳಿದಂತೆ ವಾಹನಗಳಿಗೆ ಪ್ರವೇಶವಿಲ್ಲ. ಶಿಮ್ಲಾಕ್ಕೆ ಬಂದವರೆಲ್ಲಾ ಮಾಲ್ ರೋಡ್‌ನಲ್ಲಿ ಸುತ್ತದೇ, ಶಾಪಿಂಗ್ ಮಾಡದೇ ಮರಳುವುದಿಲ್ಲ. ಇಲ್ಲಿ ಸಂಜೆಹೊತ್ತಲ್ಲಿ ಸುತ್ತುವುದೇ ಮಜಾ. ಬಹಳ ಅಗಲಾವದ ರಸ್ತೆ ಅಲ್ಲ(ಶಿಮ್ಲಾದಲ್ಲಿ ಅಗಲವಾದ ರಸ್ತೆಗಳನ್ನು ನಿರ್ಮಿಸಲು ಬಹಳ ಕಷ್ಟ). ಮರದ ವಸ್ತುಗಳು, ಕರಕುಶಲ ವಸ್ತುಗಳು, ಬಟ್ಟೆ ಅಂಗಡಿಗಳು, ಸ್ವೀಟ್ ಅಂಗಡಿಗಳು, ಕಾಫಿ ಡೇಗಳು, ಜ್ಯುವೆಲ್ಲರಿ ಐಟಂ‌ಗಳು,ಹೋಟೆಲ್‌ಗಳು ಹೀಗೆ ಸಾಲು ಸಾಲು ಅಂಗಡಿಗಳು. ಸಂಜೆ ಹೊತ್ತಲ್ಲಿ ಹಿಮ ಹೊಗೆಯ ರೀತಿ ಆವರಿಸಿರುತ್ತದೆ. ಮಾಲ್ ರೋಡ್‌ನ ಮುಖ್ಯ ಆಕರ್ಷಣೆಗಳೆಂದರೆ ಸ್ಕ್ಯಾಂಡಲ್ ಪಾಯಿಂಟ್, ಗಾಯ್ಟಿ ಥೀಯೇಟರ್, ಕಾಲಿ ಬಾರಿ ದೇವಸ್ಥಾನ, ಟೌನ್ ಹಾಲ್. ಕೇವಲ ಇವುಗಳಷ್ಟೇ ಅಲ್ಲ,  ಇಲ್ಲಿನ ಎಲ್ಲಾ ಕಟ್ಟಡಗಳೂ ಆಕರ್ಷಣೀಯವಾಗಿಯೇ ಇವೆ.  ಈ ರೋಡ್‌ನಲ್ಲಿಯೇ ಮುಂದೆ ಹೋದಾಗ 'ಕ್ರಿಸ್ಟ್ ಚರ್ಚ್' ಸಿಗುತ್ತದೆ. ಇದೂ ತುಂಬಾ ಹಳೆಯ ಚರ್ಚ್. ಇದನ್ನು ಕೂಡಾ 'ನಿಯೋ ಗೋತಿಕ್' ಶೈಲಿಯಲ್ಲಿಯೇ ಕಟ್ಟಲಾಗಿದೆ. ೧೮೫೭ರಲ್ಲಿ ಈ ಚರ್ಚ್ ಅನ್ನು ನಿರ್ಮಿಸಲಾಗಿದೆ. ಇಲ್ಲಿ ನಮ್ಮ ಟ್ಯಾಕ್ಸಿ ಡ್ರೈವರ್ ರಘುವಿನ ತಮ್ಮ ಮೊದಲೇ ತಿಳಿಸಿದ್ದ ಸ್ಥಳದಲ್ಲಿ ಸಿಕ್ಕಿದ. ನಮಗಿಬ್ಬರಿಗೂ ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಉಡುಗೆ ಹಾಗೂ ಆಭರಣಗಳನ್ನು ಕೊಟ್ಟ, ಅದನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡೆವು. ಇಲ್ಲಿನ ರಸ್ತೆ ಬದಿಗಳಲ್ಲಿ ಇಂತಹ ದೃಶ್ಯ ಸರ್ವೇ ಸಾಮಾನ್ಯ. ಹಲವು ಜನ ಫೋಟೋ ಗ್ರಾಫರ್‌ಗಳು ಇಂತಹ ಡ್ರೆಸ್‌ಗಳನ್ನು ಹಾಕಿಕೊಳ್ಳಲು ಕೊಡುತ್ತಾರೆ, ಹಾಗೂ ಫೋಟೋ ತೆಗೆಯುತ್ತಾರೆ.  ನಂತರ ಅಲ್ಲಿನ ಉಡನ್ ಮಾರ್ಕೆಟ್‌ಗೆ ಹೋದೆವು. ಅಲ್ಲೆಲ್ಲಾ ಸ್ವಲ್ಪ ಸುತ್ತಾಡಿ, ಸ್ವಲ್ಪ ಶಾಪಿಂಗ್ ಮಾಡಿ 'ಕಾಲಿ ಬಾರಿ' ಮಂದಿರಕ್ಕೆ ತೆರಳಿದೆವು. ಈ ದೇವಾಲಯವನ್ನು ೧೮೪೫ರಲ್ಲಿ ನಿರ್ಮಿಸಿದರಂತೆ. ಇಲ್ಲಿ 'ಶ್ಯಾಮಲಾ' ದೇವಿಯನ್ನು ಆರಾಧಿಸಲಾಗುತ್ತದೆ. ಶ್ಯಾಮಲ ದೇವಿಯಿಂದ ಈ ನಗರಕ್ಕೆ 'ಶಿಮ್ಲಾ' ಎಂಬ ಹೆಸರು ಬಂತು ಎಂದು ಹೇಳುತ್ತಾರೆ.


mall road, shimla

mall road, shimlaಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಉಡುಗೆಯಲ್ಲಿ

'ಕ್ರಿಸ್ಟ್ ಚರ್ಚ್', shimla


wooden market

kaali baari mandir, shimla
೦೪/೦೮/೨೦೧೮
  ೮ ಗಂಟೆಗೆ ರಘು ಬಂದ. ಗ್ರೀನ್ ವ್ಯಾಲಿ ಹಾಗೂ ಕುಫ್ರಿ ಇವತ್ತು ನಾವು ನೋಡಲಿರುವ ಪ್ರಮುಖ ಸ್ಥಳಗಳು. ಮತ್ತೆ ಅದೇ ಹಾವಿನ ಹರಿವಿನಂತ ರಸ್ತೆಯಲ್ಲಿ ತಿರು ತಿರುಗಿ ಕಾರನ್ನು ಡ್ರೈವ್ ಮಾಡುತ್ತಿದ್ದ. ಈ ಜನಕ್ಕೆ ಪರಿಸರದ ಬಗ್ಗೆ ಬಹಳ ಕಾಳಜಿ ಅನಿಸುತ್ತದೆ. ಒಂದು ಕಡೆ ರಸ್ತೆಯ ಮಧ್ಯದಲ್ಲಿ ಒಂದು ಮರ. ನಮ್ಮಲ್ಲಾಗಿದ್ದರೆ ರಸ್ತೆಗೆ ಅಡ್ಡ ಇದ್ಯಾಕ್ ಬೇಕು? ಅಂತ ಕಡಿದು ಬಿಡುತ್ತಿದ್ದರು. ಗ್ರೀನ್ ವ್ಯಾಲಿ ನೋಡಲಂತೂ ಕಣ್ಣಿಗೆ ಹಬ್ಬ. ದಟ್ಟವಾದ ಸೂಚಿಪರ್ಣ ಮರಗಳ ಕಾಡು. ಪೈನ್ ಹಾಗೂ ದಿಯೋದಾರ್ ಮರಗಳು.  ಈ ಕಾಡಿನೊಳಗೆ ಸಿಂಹ ಇದೆ ಎಂದ ರಘು. ಕೆಲವರು ಹುಚ್ಚು ಸಾಹಸ ಕೈಗೊಂಡು ಇಲ್ಲಿ ಟ್ರಕ್ಕಿಂಗ್‌ಗೂ ಹೋಗುತ್ತಾರೆ ಆದರೆ ಇದು ಬಹಳ ಅಪಾಯಕಾರಿ ಎಂದ. ಹಚ್ಚ ಹಸುರು, ಮುಸುಕಿದ ಮಂಜು, ಬೆಳಗ್ಗಿನ ಚಳಿ, ತಣ್ಣಗೆ ಬೀಸುವ ಗಾಳಿ, ಬೊಗಸೆಗಟ್ಟಲೆ ಪ್ರೀತಿ ಕೊಡುವ ಕಣ್ ರೆಪ್ಪೆಯಂತೆ ಕಾಪಾಡುವ ಜೀವದ ಗೆಳೆಯ, ಪ್ರಫುಲ್ಲವಾದ ಮನಸ್ಸು ಬದುಕಲ್ಲಿ ಇನ್ನೇನು ಬೇಕು. ಹೊರಗಿನ ಯಾವ ಕಿರಿಕಿರಿಯೂ ಬೇಡ, ಸುಮ್ನೇ ಇಲ್ಲೇ ಇದ್ದು ಬಿಡೋಣ ಅಂತನ್ನಿಸ್ತಿತ್ತು. ಫೋಟೋಗ್ರಫಿ ಹಾಗೂ ರೊಮ್ಯಾಂಟೀಕ್ ಹಾಡುಗಳ ಶೂಟಿಂಗ್‌ಗಳಿಗೆ ಹೇಳಿ ಮಾಡಿಸಿದ ಜಾಗ. ಆ ಸೌಂದರ್ಯವನ್ನು ಸಾಧ್ಯವಾದಷ್ಟು ಕಣ್ ತುಂಬಿಸಿಕೊಂಡು ಹೊರಟೆವು.

green valley


   ದಾರಿಯಲ್ಲಿ 'ಯಾಕ್' ಕಂಡಿತು. ಇನ್ನು ಕುಫ್ರಿಯಲ್ಲಿ ಬೇಕಾದಷ್ಟು ಕಾಣ ಸಿಗುತ್ತದೆ, ಅಲ್ಲಿ ಫೋಟೋ ತೆಗೆದುಕೊಳ್ಳಬಹುದೆಂದ ನಮ್ಮ ಟ್ಯಾಕ್ಸಿ ಡ್ರೈವರ್ ರಘು. ದಾರಿ ಮಧ್ಯೆ ಒಂದು ಕಡೆ ಏಪಲ್ ತೋಟ ಕಂಡಿತು. ನಾನಂತು ಜೀವನದಲ್ಲಿ ಪ್ರಥಮಬಾರಿಗೆ ಏಪಲ್ ಮರ ಹಾಗೂ ಏಪಲ್ ತೋಟವನ್ನು ನೋಡುತ್ತಿರುವುದು. ರಘು ಗಾಡಿ ಸೈಡ್‌ಗೆ ಹಾಕಿದ. ನೋಡಿ ಫೋಟೋ ತೆಗೆದುಕೊಳ್ಳಿ ಆದರೆ ಹಣ್ಣು ಕೊಯ್ಯ್ ಬೇಡಿ ಅಂದ. ಒಂದಾದರೂ ಹಣ್ಣು ಕಿತ್ತು ತಿನ್ನಬೇಕೆಂದು ನನ್ನ ಆಸೆ ಆಗಿತ್ತು, ಆದರೆ ರಘು ಹಾಗಂದ ಮೇಲೆ ಸರಿ ಆಗಲಿಲ್ಲ. ಯಾರದ್ದೋ ತೋಟ, ರಘು ಅದರ ಕಾಳಜಿ ವಹಿಸಬೇಕಾದ ಅಗತ್ಯವೇ ಇರಲಿಲ್ಲ, ಆದರೆ ಅವರ ಊರಿನಲ್ಲಿರುವ ವಸ್ತುಗಳ ಬಗ್ಗೆ ಅವರಿಗಿರುವ ಕಾಳಜಿ ಹಾಗೂ ಜವಾಬ್ದಾರಿಯನ್ನು ಕಂಡು ನಿಜಕ್ಕೂ ಖುಷಿಯಾಯಿತು.  ನಮ್ಮಲ್ಲಾಗಿದ್ದರೆ, ಒಂದು ಹಣ್ಣಲ್ಲ, ಯಾರದ್ದೋ ತೋಟ ಅಂತ ಅವ್ರೇ ಹೋಗಿ ಕುಯ್ದು ಕೊಡುತ್ತಿದ್ದರು ಅನಿಸಿತು.  ಮುಂದೆ ಕುಫ್ರಿಯಲ್ಲಿ ಏಪಲ್ ಕೊಂಡುಕೊಳ್ಳಬಹುದೆಂದು ಹೇಳಿದ.
apple tree


   ಅಲ್ಲಿಂದ ಹೊರಟು ಒಂದು ಅಡ್ವೆಂಚರ್ ಸ್ಪಾಟ್‌ಗೆ ಬಂದೆವು. ಒಬ್ಬೊಬ್ಬರಿಗೆ ೭೦೦ರೂ ಟಿಕೆಟ್. ಒಟ್ಟು ಐದು ಅಡ್ವೆಂಚರ್‌ಗಳು, ವ್ಯಾಲಿ ಕ್ರಾಸಿಂಗ್, ಬ್ರಿಡ್ಜ್ ಪಾಸಿಂಗ, ರಿವರ್ಸ್ ಭಂಗಿ ಜಂಪ್, ನೆಟ್ ಕ್ಲೈಂಬಿಂಗ್. ಈ ಅಡ್ವೆಂಚರ್‌ಗಳಂತೂ ನನಗೆ ಅದ್ಭುತವಾದ ಅನುಭವ ನೀಡಿತು. ಅದರಲ್ಲೂ ರಿವರ್ಸ್ ಭಂಗಿ ಜಂಪ್, ಒಮ್ಮೆ ಮೈ ಝುಮ್ಮೆಂದಿತು. ಮಹಿಗೆ ಇದೇನೂ ಹೊಸತಲ್ಲ, ಕಳೆದ ಬಾರಿ ಹೃಷಿಕೇಶ್‌ದಲ್ಲಿ ೧೦೦ ಮೀಟರ್ ಮೇಲಿನಿಂದ ಕೆಳಕ್ಕೆ ಹಾರಿ ಭಂಗಿ ಜಂಪ್‌ನ ಅನುಭವವಿತ್ತು. ಅದಕ್ಕೆ ಹೋಲಿಸಿದರೆ ಇಲ್ಲಿನ ರಿವರ್ಸ್ ಭಂಗಿ ಜಂಪ್ ತುಂಬಾ ಚಿಕ್ಕದು. ಸಾಮಾನ್ಯ ಒಂದು ಮೊಬೈಲ್ ಟವರ್‌ನ ತುದಿಯಷ್ಟು ಎತ್ತರಕ್ಕೆ ಹಾರಿ ಕೆಳಕ್ಕೆ ಮೇಲಕ್ಕೆ ಹೋಗುತ್ತಿತ್ತು. ಅಲ್ಲಿಂದ ಕುಫ್ರಿಗೆ ತೆರಳಿದೆವು.


adventure spot

bridge crossing
reverse bunghi jumpಕುಫ್ರಿ 
  ಕುಫ್ರಿ ಒಂದು ಹಿಲ್ ಸ್ಟೇಷನ್. ಇಲ್ಲಿ ಏಪಲ್ ತೋಟ ಹಾಗೂ ಇಂತಹುದೇ ಅಡ್ವೆಂಚರ್ ಸ್ಪಾಟ್‌ಗಳಿವೆ. ಶಿಮ್ಲಾದಿಂದ ೨೦ಕಿ.ಮೀ ದೂರದಲ್ಲಿರುವ ಕುಫ್ರಿ ಸಮುದ್ರ ಮಟ್ಟದಿಂದ ಸರಿ ಸುಮಾರು ೮೬೦೭ ಫೀಟ್ ಎತ್ತರದಲ್ಲಿದೆ.  ಹಿಂದೆ ಈ ಪ್ರದೇಶ ನೇಪಾಳಕ್ಕೆ ಸೇರಿತ್ತಂತೆ, ನಂತರ ಬ್ರಿಟಿಷರು ಯುದ್ಧ ಮಾಡಿ ಈ ಪ್ರದೇಶವನ್ನು ಗೆದ್ದರು ಎನ್ನುತ್ತಾರೆ. ಕುಫ್ರಿಯ ತುದಿ ತಲುಪಲು ವಾಹನಗಳ ಮೂಲಕ ಸಾಧ್ಯವಿಲ್ಲ. ಅಲ್ಲಿಗೆ ಕುದುರೆಯ ಮೂಲಕ ಹೋಗಬೇಕಾಗುತ್ತದೆ. ನಾವು ವಾಹನ ಹೋಗುವಷ್ಟು ಜಾಗ ಕಾರಲ್ಲೇ ಹೋಗಿ ನಂತರ ಕುದುರೆ ಸವಾರಿ ಮಾಡಿದೆವು. ಇಲ್ಲಿ ನೂರಾರು ಸಂಖ್ಯೆಯಲ್ಲಿ ಕುದುರೆಗಳಿದ್ದವು, ಜೊತೆಗೆ ನಮ್ಮಂತೆಯೇ ಬಹಳಷ್ಟು ಮಂದಿ ಪ್ರವಾಸಿಗರು. ತಲಾ ೫೦೦ ರೂ ವಿನಂತೆ ಇಬ್ಬರಿಗೆ ೧೦೦೦ ಕೊಟ್ಟು ಕುದುರೆ ಪ್ರಯಾಣಕ್ಕೆ ಟಿಕೆಟ್ ಪಡೆದುಕೊಂಡೆವು.  ನಂತರ ನಾನು ಒಂದು ಕುದುರೆಯಲ್ಲಿ ಮಹಿ ಒಂದು ಕುದುರೆಯಲ್ಲಿ ಕುಳಿತು ಹೊರಟೆವು.ಜೊತೆಗೆ ಕುದುರೆಯ ಮಾಲಿಕ ಅವುಗಳ ಬಳ್ಳಿ ಕೈಯಲ್ಲಿ ಹಿಡಿದು ನಮ್ಮ ಜೊತೆಯಲ್ಲಿ ನಡೆಯುತ್ತಾ ಸಾಗಿದ. ಇಲ್ಲಿನ ಹಾದಿ ಬಹಳ ದುರ್ಗಮವಾಗಿತ್ತು. ನಡೆದು ಹೋಗಲೂ ಕಷ್ಟ ಪಡಬೇಕಾದಂತಹ ಹಾದಿ. ಕುದುರೆಯನ್ನು ನಡೆಸುವವರು ಮೊಣಕಾಲಿನ ತನಕ ಮುಚ್ಚುವಂತಹ ರಬ್ಬರ್ ಬೂಟು ಧರಿಸಿ ಅಭ್ಯಾಸ ಬಲದಲ್ಲಿ ನಡೆಯುತ್ತಾರೆ. ಹಿಂದಿನ ದಿನ ಮಳೆಯೂ ಸುರಿದಿದ್ದುದರಿಂದ ಕೆಸರು ಮಯವಾಗಿತ್ತು, ಜೊತೆಗೆ ಎತ್ತರ ತಗ್ಗು, ಹಾಗೂ ಜಾರುವ ಕಲ್ಲುಗಳು. ಕುದುರೆ ಸಾಗುವುದನ್ನು ನೋಡಿ ಪಾಪ ಅನಿಸುತ್ತಿತ್ತು, ಜೊತೆಗೆ ಅದು ಅತ್ತಿತ್ತ ವಾಲುವಾಗ ಬಿದ್ದು ಬಿಟ್ಟರೆ ಎಂಬ ಭಯ. ಎಲ್ಲಿ ಬೀಳುತ್ತೇನೋ ಎಂಬ ಭಯದಲ್ಲಿ ಗಟ್ಟಿ ಕುಳಿತಿದ್ದೆ. ಬಿದ್ದರೆ ಸ್ವಲ್ಪ ತಪ್ಪಿದರೂ ಪ್ರಪಾತದ ಕೆಳಗೆ, ಅಥವಾ ಆ ಹಾದಿಯಲ್ಲಿ ಇದ್ದ ಕಲ್ಲುಗಳಿಗೆ ತಲೆ ಬಡಿಯುವ ಚಾನ್ಸ್ ಇದೆ. ಮೇಲೆ ಹತ್ತುವಾಗ ಮುಂದಕ್ಕೆ ಬಾಗಬೇಕು, ಇಳಿಯುವಾಗ ಹಿಂದಕ್ಕೆ ಬಾಗಬೇಕು ಎಂಬ ನಮ್ಮ ಕುದುರೆ ಮಾಲಿಕನ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೆ. ಹೋಗುವಾಗ ಹತ್ತುತ್ತಾ ಹೋಗಬೇಕಿತ್ತು. ನಮ್ಮಂತೆ ನೂರಾರು ಜನ ಕುದುರೆ ಸವಾರಿಯ ಮೂಲಕ ಕುಫ್ರಿಗೆ ಹೋಗುತ್ತಿದ್ದರು, ಹಾಗೇ ಮೇಲಿನಿಂದ ಇಳಿದೂ ಬರುತ್ತಿದ್ದರು. ಸ್ವಲ್ಪ ಭಯವಾದರೂ ಕುದುರೆ ಸವಾರಿ ಮಜವಾಗಿಯೇ ಇತ್ತು. ಇಳಿದು ಬರುತ್ತಿದ್ದ ಕೆಲವರಂತೂ ಕುದುರೆಯನ್ನು ಓಡಿಸಿಕೊಂಡು ಬರುತ್ತಿದ್ದರು. ಅವರಿಗೆಲ್ಲಾ ಇದು ಅಭ್ಯಾಸ ಮಾಮೂಲಿನ ಕೆಲಸವಂತೆ. ಕುಫ್ರಿ ನೋಡಿ ಬರುವ ತನಕ ತಾನಿಲ್ಲೇ ಕಾಯುತ್ತಿರುತ್ತೇನೆ ಎಂದ ನಮ್ಮ ಕುದುರೆಗಳ ಮಾಲಿಕ.

ಕುದುರೆ ಸವಾರಿ, ಕುಫ್ರಿ
  ಇಲ್ಲಿ ಎಂಟತ್ತು ಯಾಕ್‍ಗಳನ್ನು ನಿಲ್ಲಿಸಿದ್ದರು. ಅದರ ಓನರ್‌ಗಳು ಪ್ರವಾಸಿಗರಿಗೆ ಯಾಕ್‌ನೊಂದಿಗೆ ಫೋಟೋ ಕ್ಲಿಕ್ಕಿಸಿ ಕೊಡುತ್ತಿದ್ದರು. ಈ ಯಾಕ್ ಎಂಬುದು ಕಾಡುಕೋಣದಂತಹ ಒಂದು ಪ್ರಾಣಿ. ಮೈತುಂಬಾ ಉದ್ದುದ್ದ ರೋಮಗಳು. ಇಲ್ಲಿನ ಚಳಿಗೆ ಆ ರೋಮ ಅವಶ್ಯಕವೂ ಹೌದು. ನೋಡಲು ಸ್ವಲ್ಪ ಭಯಾನಕವಾಗಿ ಕಂಡರೂ ಸಾಧು ಪ್ರಾಣಿ, ಸಾಕು ಪ್ರಾಣಿ. ಹಿಮಾಲಯದ ತಪ್ಪಲಿನ ಭಾಗದಲ್ಲಿ ಹಾಲಿಗಾಗಿ, ಹಾಗೂ ರೋಮಕ್ಕಾಗಿ ಯಾಕ್‌ನ್ನು ಸಾಕುತ್ತಾರಂತೆ.  ನಾವೂ ಯಾಕ್ ಜೊತೆ ಫೋಟೋ ತೆಗೆದುಕೊಂಡು ಮುಂದುವರಿದೆವು. ಅಲ್ಲಿ ಸ್ವಲ್ಪ ಹೊತ್ತು ಸೈಟ್ ಸೀಯಿಂಗ್ ಮಾಡಿ ಏಪಲ್ ಗಾರ್ಡನ್ ನೋಡಲು ಹೋದೆವು. ಒಂದು ಪಿಕಪ್ ಮೂಲಕ ಏಪಲ್ ಗಾರ್ಡನ್‌ಗೆ ಕರೆದೊಯ್ದರು. ಇವುಗಳಿಗೆಲ್ಲಾ ೩೦೦- ೪೦೦ ರೂಪಾಯಿಯ ಟಿಕೆಟ್ ಪಡೆಯಬೇಕಿತ್ತು. ನಾವು ಟಿಕೆಟ್ ಮಾಡಿಸಿದ್ದೆವು. ಐದು ನಿಮಿಷದ ಹಾದಿ, ಆದರೆ ರಸ್ತೆ ಮಾತ್ರ ಬಹಳ ಭಯಾನಕವಾಗಿತ್ತು. ಅಭ್ಯಾಸ ಇರುವ ಅಲ್ಲಿನ ಜನಗಳಿಗೆ ಮಾತ್ರ ಆ ರಸ್ತೆಯಲ್ಲಿ ವಾಹನ ಕೊಂಡೊಯ್ಯಲು ಸಾಧ್ಯ, ಕುದುರೆ ಹೋಗುವ ಹಾದಿಯಂತೆಯೇ ಇತ್ತು ಈ ರಸ್ತೆ. ಏಪಲ್ ಗಾರ್ಡನ್‌ನ ಒಳಗಡೆ ಹೋದೆವು. ಸುಮಾರು ಎಕರೆ ಪ್ರದೇಶದಲ್ಲಿ ಏಪಲ್ ತೋಟ. ಎಲ್ಲಾ ಮರಗಳಲ್ಲಿ ಏಪಲ್ ಇರಲಿಲ್ಲ. ಜೊತೆಗೆ ಕಾಶ್ಮೀರಿ ಏಪಲ್ ತರ ಕೆಂಪಗೆ ಕಂಗೊಳಿಸುತ್ತಲೂ ಇರಲಿಲ್ಲ. ಹಸುರು ಏಪಲ್ ಹಾಗೂ ಚಿಕ್ಕ ಸೈಜ಼್ ನ ಏಪಲ್‌ಗಳಿದ್ದವು. ಎರಡೆರಡು ಮರಗಳಿಗೆ ಒಬ್ಬೊಬ್ಬ ಕಾವಲುಗಾರನ ಹಾಗೆ ನಿಂತು ಯಾರೂ ಏಪಲ್ ಕೊಯ್ಯದಂತೆ ಕಾಯುತ್ತಿದ್ದರು. ಫೋಟೋ ತೆಗೆದುಕೊಳ್ಳೋಣವೆಂದು  ಹತ್ತಿರ ನಿಂತಾಗಲಂತೂ ಏಪಲ್ ಕೊಯ್ಯಬೇಡಿ ಎಂದು ಎಚ್ಚರಿಸುತ್ತಿದ್ದರು. ಅಲ್ಲೇ ಏಪಲ್ ತೋಟದಲ್ಲಿ ಸುತ್ತು ಹಾಕಿ ಮತ್ತೆ ಪಿಕಪ್‌ನಲ್ಲಿ ಬಂದು, ಕುದುರೆಯ ಬಳಿ ಬಂದೆವು. ಅಲ್ಲಿ ಇನ್ನೂ ಕೆಲವು ಅಡ್ವೆಂಚರ್ ಮಾಡುವ ಸ್ಥಳಗಳು ಇದ್ದವು. ಆದರೆ ನಾವು ಇಂದೇ ಶಿಮ್ಲಾದಿಂದ ಹೊರಡಬೇಕಾಗಿತ್ತು. ನಮ್ಮ ಕುದುರೆಗಳು ಕಾಯುತ್ತಿದ್ದವು. ಮತ್ತೆ ಅದೇ ಹಾದಿಯಲ್ಲಿ ವಾಲಾಡಿಕೊಂಡು ನಮ್ಮ ಕಾರ್‌ನ ಬಳಿ ತಲುಪಿದೆವು.
@apple garden, kufri
   ಶಿಮ್ಲಾದಲ್ಲಿ ನಾವು ನೋಡಲಿದ್ದ ಕೊನೆಯ ಸ್ಥಳ ಹಾಗೂ ನಮ್ಮ ಈ  ಪ್ರವಾಸದ ಕೊನೆಯ ಸ್ಥಳ 'ಜಾಖೂ' ಟೆಂಪಲ್. ಇದು ಹನುಮಂತನ ದೇವಸ್ಥಾನ. ಸಮುದ್ರ ಮಟ್ಟದಿಂದ ೮,೦೦೦ ಫೀಟ್ ಎತ್ತರದ ಪರ್ವತದಲ್ಲಿದೆ ಈ ದೇವಾಲಯ. ಇಲ್ಲಿನ್ ಬೃಹತ್ ಹನುಮಾನ್ ಮೂರ್ತಿ ಶಿಮ್ಲಾದ ಯಾವ ಭಾಗದಿಂದ ನೋಡಿದರೂ ಕಾಣಿಸುತ್ತದೆ. ಇದು ೧೦೮ ಫೀಟ್ ಎತ್ತರವಿದ್ದು ೨೦೧೦ರಲ್ಲಿ ನಿರ್ಮಿಸಲಾಯಿತು. ಇದು ಜಗತ್ತಿನ ಅತ್ಯಂತ ಎತ್ತರದ ಹನುಮಾನ್ ಮೂರ್ತಿ. ಇದರ ನಿರ್ಮಾಣಕ್ಕೆ ತಗಲಿದ ವೆಚ್ಚ ಬರೋಬ್ಬರಿ ೧.೫ಕೋಟಿ ರೂಪಾಯಿಗಳು. ಇಲ್ಲಿಗೆ ರೋಪ್ ವೇ ಮೂಲಕವೂ ಹೋಗಬಹುದಂತೆ.  ಹನುಮಂತ 'ಸಂಜೀವಿನಿ' ಪರ್ವತವನ್ನು ಹೊತ್ತುಕೊಂಡು ಹೋಗಲು ಬಂದಾಗ ಇಲ್ಲಿ ತಂಗಿದ್ದ ಎಂಬ ನಂಬಿಕೆ ಇದೆ. ಕಾರ್ ಪಾರ್ಕ್ ಮಾಡಿದ ಸ್ಥಳದಿಂದ ಹಲವು ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ಸುಸ್ತಾಗುತ್ತಿತ್ತು, ಅಲ್ಲೆಲ್ಲಾ ಮಂಗಗಳು ಓಡಾಡುತ್ತಿದ್ದವು. ಕೈಯಲ್ಲಿದ್ದ ವಸ್ತುಗಳನ್ನು ಎಳೆದುಕೊಂಡು ಓಡುತ್ತವೆ, ಹುಷಾರಾಗಿರಿ ಎಂದಿದ್ದ ರಘು. ದೇವಾಲಯದಲ್ಲಿ ದರ್ಶನ ಪಡೆದು, ಬೃಹತ್ ಹನುಮಂತನ ವಿಗ್ರಹವನ್ನು ನೋಡಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಮತ್ತೆ ಕಾರಿನ ಬಳಿ ಮರಳಿದೆವು. ಬೆಳಗ್ಗೆ ರೂಮ್‌ನ ಕೀಯನ್ನು ಒಪ್ಪಿಸಿ ಲಗೇಜ್‌ನ್ನು ಕಾರ್‌ಗೆ ಹಾಕಿದ್ದೆವು. ಈಗ ಡೈರೆಕ್ಟ್ ರೈಲ್ವೇ ಸ್ಟೇಶನ್‌ಗೆ ನಮ್ಮ ಪಯಣ. ಆಗಲೇ ಸಂಜೆ ಸಮಯ ಸುಮಾರು ೪.೧೫ ಆಗಿತ್ತು. ೫ ಗಂಟೆಯ ಹೊತ್ತಿಗೆ ಮತ್ತೆ ಶಿಮ್ಲಾದಿಂದ ಕಲ್ಕಾಕ್ಕೆ ರೈಲು. ರಘುಗೆ ಬಾಯ್ ಹೇಳಿ, ಲಗೇಜ್ ತೆಗೆದುಕೊಂಡು ಸ್ಟೇಷನ್‌ಗೆ ಬಂದು, ಅಲ್ಲಿನ ಹೋಟೆಲ್ ಒಂದರಲ್ಲಿ ಊಟ ಮಾಡಿ ನಮ್ಮ ರೈಲು ಎಲ್ಲಿದೆ ಎಂದು ನೋಡಿದೆವು.

'ಜಾಖೂ' ಟೆಂಪಲ್


ಬೃಹತ್ ಹನುಮಾನ್ ಮೂರ್ತಿ


ರಘು ಜೊತೆ ಸೆಲ್ಫಿ
  ಯಾವ ರೈಲು ಬಂದಿರಲಿಲ್ಲ. ಒಂದು ಇಂಜಿನ್ ಮಾತ್ರ ಇತ್ತು. ಸಮಯವಾದರೂ ರೈಲು ಯಾಕಿಲ್ಲ ಎಂದು ತಡಕಾಡಿದಾಗ  ನಮಗೊಂದು ಸರ್ಪ್ರೈಸ್ ಕಾದಿತ್ತು. ಆ ಇಂಜಿನ್‌ನೇ ರೈಲು ಎಂದು ತಿಳಿಯಿತು. ಅದು ಕೇವಲ ಇಂಜಿನ್ ಆಗಿರಲಿಲ್ಲ. ಅದನ್ನು 'ರೈಲ್ ಮೋಟರ್ ಕಾರ್' ಎನ್ನುತ್ತಾರೆ. ಹಿಂದೆ ಬಂಡಿಗಳಿರುವುದಿಲ್ಲ. ಸಣ್ಣದೊಂದು ಬಸ್‌ನ ರೀತಿ ಇತ್ತು. ಬಸ್ ಟ್ರ್ಯಾಕ್ ಮೇಲೆ ಹೋದಂತೆ ಕಾಣುತ್ತದೆ. ಇದರಲ್ಲಿ ಕೇವಲ ೧೫ ಸೀಟ್‌ಗಳಿದ್ದವು. ಇಂತಹ ಒಂದು ರೈಲಿನ ಪರಿಕಲ್ಪನೆಯೇ ನಮಗಿರಲಿಲ್ಲ. ಅದೇ ರೈಲಿನಲ್ಲಿ ನಮ್ಮಂತೆಯೇ ಇಬ್ಬರು ಸಿಕ್ಕಿದರು. ಅವರೂ ಕನ್ನಡದವರೇ. ಗಂಡ ಹಾಗೂ ಹೆಂಡತಿ ಇಬ್ಬರೂ ಬೆಂಗಳೂರಿನಲ್ಲಿ ಇಂಜಿನಿಯರ್ಸ್. ಅವರಿಗೂ ಈ ಟ್ರೈನ್ ಸರ್ಪ್ರೈಸ್ ಅಂದರು.  ಅಲ್ಲಿದ್ದ ಹಿರಿಯರೊಬ್ಬರು ಹೇಳಿದರು, ಈ ರೈಲಿಗೆ ಒಂದು ತಿಂಗಳು ಮುಂಚಿತವಾಗಷ್ಟೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುವುದಂತೆ, ಸಿಗುವುದು ಕಷ್ಟ. ನೀವು ನಿಜಕ್ಕೂ ಲಕ್ಕಿ ಎಂದರು. ಮಹಿ ಈ ರೈಲು ಎಂದು ತಿಳಿದು ಟಿಕೆಟ್ ಬುಕ್ ಮಾಡಿರಲಿಲ್ಲ. ಟ್ರೈನ್‌ಗಳಿಗೆ ಬೇರೆ ಬೇರೆ ಹೆಸರಿರುವಂತೆ ಈ ಟ್ರೈನ್‌ನ ಹೆಸರು 'ರೈಲು ಮೋಟಾರ್ ಕಾರ್' ಅಂದುಕೊಂಡು ಬುಕ್ ಮಾಡಿದ್ದು. ಇದು ದುಬಾರಿ ಟ್ರೈನ್ ಏನಲ್ಲ. ಶಿಮ್ಲಾದಿಂದ ಕಲ್ಕಾಕ್ಕೆ ಒಬ್ಬರಿಗೆ ೨೪೭ ರೂಪಾಯಿಗಳು.

inside rail motor car

rail motor car, shimla to kalka ಶಿಮ್ಲಾದ ಪ್ರಯಾಣವನ್ನು ಆ ಸೊಗಸನ್ನು ಅನುಭವಿಸಬೇಕಾದರೆ ಈ ಟ್ರೈನ್‌ನಲ್ಲೊಮ್ಮೆ ಪ್ರಯಾಣಿಸಲೇ ಬೇಕು. ನಾವು ಹೋದ ಅಷ್ಟೂ ಜಾಗಗಳಲ್ಲಿ ಮನಸ್ಸಿಗೆ ಮುದ ನೀಡಿದ್ದು, ಬೇರೆಯೇ ಲೋಕಕ್ಕೆ ಪ್ರಯಾಣಿಸಿದ ಅನುಭವವಾದದ್ದು, ರಿಲಾಕ್ಸ್ ಅನಿಸಿದ್ದು ಶಿಮ್ಲಾದಲ್ಲಿ. ನಮ್ಮ ಪ್ರವಾಸದ ನೆನಪಿನ ಬುತ್ತಿಯಲ್ಲಿ ಒಂದು ಸಿಹಿ ತಿಂಡಿಯಂತೆ ಶಿಮ್ಲಾದ ಅನುಭವ. ಹಿಮಾಲಯವನ್ನು ಇಳಿಯುತ್ತಿದ್ದೇವೆ ಎಂದು ಸ್ವಲ್ಪ ಬೇಸರವಾಯಿತು. ರೈಲು ಮಾರ್ಗದಲ್ಲಿ ಸಿಗುವ ಹಲವು ಟನೆಲ್‌ಗಳಲ್ಲಿ ಕೆಲವು ಹಾಂಟೆಡ್ ಅಂತೆ. ಟನೆಲ್ ನಂಬರ್ ೩೩ರಲ್ಲಿ ಒಬ್ಬ ಬ್ರಿಟಿಷ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಇಂದಿಗೂ ಅದು ಭಯಾನಕ, ಅಲ್ಲಿ ಆ ಶಬ್ದ ಇದೆ, ಈ ಶಬ್ದ ಕೇಳಿಸ್ತದೆ ಅಂತೆಲ್ಲಾ ಬುರುಡೇ ಬಿಡುವವರು ಇದ್ದಾರೆ.  ಹತ್ತು ಗಂಟೆಯ ಸುಮಾರಿಗೆ ಕಲ್ಕಾ ತಲುಪಿ ಅಲ್ಲಿಂದ ಅವಸರವಸರವಾಗಿ ಅಂಬಾಲಕ್ಕೆ ಹೊರಟಿದ್ದ ರೈಲಿಗೆ ಹತ್ತಿಕೊಂಡೆವು. ರೈಲು ಪೂರ್ತಿ ಕಾಲಿ ಇತ್ತು. ಚಂಡೀಗಢದಿಂದ ಸ್ವಲ್ಪ ಜನ ಹತ್ತಿದರು. ರಾತ್ರಿ ೧೨ ಗಂಟೆಯ ಸುಮಾರಿಗೆ ಅಂಬಾಲ ತಲುಪಿ ಸೈನಿಕ್ ರೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡೆವು.
೦೫/೦೮/೨೦೧೮
ಈ ದಿನ ಸ್ವಲ್ಪ ನಿಧಾನವಾಗಿಯೇ ಎದ್ದು, ನಿಧಾನವಾಗಿಯೇ ಹೊರಟೆವು. ನಮ್ಮ ಪ್ರವಾಸದ ಕೊನೆಯ ದಿನ. ಸೈನಿಕ್ ರೆಸ್ಟ್ ಹೌಸ್‌ನಿಂದ ಚೆಕ್ ಔಟ್ ಮಾಡಿಸಿಕೊಂಡು, ಮಹಿಯ ಪರಿಚಯದ ಒಂದು ಮಲಯಾಳಿ ಹೋಟೆಲ್‌ಗೆ ಹೋದೆವು. ಅಲ್ಲಿ ಮಸಾಲ್ ದೋಸೆ ತಿಂದೆವು. ಇಲ್ಲೊಂದು ಆಗ ಬಾರದ ಘಟನೆ ಆಗಿಯೇ ಹೋಯಿತು. ದೋಸೆಯ ಕೊನೆಯ ಪೀಸ್ ಬಾಕಿ ಇತ್ತು. ನನಗೆ ಸಾಂಬಾರ್‌ನಲ್ಲಿ ಹುಳು ಸಿಕ್ಕಿತು, ವ್ಯಾಕ್... ಇಂದಿಗೂ ನೆನೆದಾಗ ವಾಕರಿಕೆ ಬರುತ್ತದೆ. ಓನರ್‌ನನ್ನು ಕರೆದು ತೋರಿಸಿದೆವು. ಅವನಾದರೂ ಏನು ಮಾಡಿಯಾನು? ಸಾರಿ ಎಂದ. ಅಲ್ಲಿಂದ ಹೊರಟು ಮತ್ತೆ ರೈಲ್ವೇ ಸ್ಟೇಷನ್‌ಗೆ ಬಂದು, ಆಗ್ರಾದ ರೈಲು ಹತ್ತಿ ಸಂಜೆ ಸುಮಾರು ೪.೩೦ರ ಹೊತ್ತಿಗೆ ಮನೆ ತಲುಪಿದೆವು. ಬದುಕಿನ ಹಾಳೆಯೊಳಗೆ ಬಣ್ಣ ಬಣ್ಣದ ಷಾಯಿಯಲ್ಲಿ ಬರೆದಿಡಬಹುದಾದಂತಹ ಸುಂದರ 'ಶಾಯಿರಿ' ಪ್ರವಾಸದ ಈ ದಿನಗಳು.

                                                 THE END

( special thanks to my dear hubby for giving me the fun, memorable trip, the Infinite love, support to write and for every thing... love u mahi, thank u)
                                                                               

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 7

ಮಾನ್ಸೂನ್ ಟ್ರಿಪ್ ೨೦೧೮ - 9

ಒಲವಿಗೂ...... ಈ ನಗುವಿಗೂ.....