ಮಾನ್ಸೂನ್ ಟ್ರಿಪ್ ೨೦೧೮ - 7


ವಾಘಾ ಬಾರ್ಡರ್( ಅಠಾರಿ ಬಾರ್ಡರ್) 
    
    ನಾವು ಅಮೃತ್ ಸರ್‌ನಿಂದ ವಾಘಾ ಬಾರ್ಡರ್ ತನಕ ಆಟೋದಲ್ಲಿ ಇದೇ ರೋಡ್ ಮೂಲಕ ಸಾಗಿದೆವು. ನೇರವಾದ ರಸ್ತೆ, ತಿರುವುಗಳು ಸಿಗುವುದು ಬಹಳ ವಿರಳ. ರಸ್ತೆಯ ಎರಡೂ ಬದಿಗಳಲ್ಲಿ ವಿಶಾಲವಾದ ಹೊಲಗಳು, ಕಣ್ಣರಳಿಸಿದಷ್ಟು ದೂರವೂ ಹಸಿರೇ ಹಸಿರು.  ಹಳ್ಳಿಗಳನ್ನು ಸೇರಿಸುವ ಚಿಕ್ಕ ಪುಟ್ಟ ರಸ್ತೆಗಳು, ಅಲ್ಲಿನ ಹಳ್ಳಿಗರು, ಕುದುರೆ, ಸೈಕಲ್ ಗಾಡಿಗಳು, ಡಾಬಾಗಳು ಹೀಗೆ ಎಲ್ಲವನ್ನೂ ಒಳಗೊಂಡು ನಮ್ಮ ಹಳ್ಳಿಗಳಂತೆ ಅದೂ ಒಂದು ಹಳ್ಳಿ. ವಾಘಾ ಬಾರ್ಡರ್ ತಲುಪುವ ಮೊದಲೇ ಒಂದು ಹೋಟೆಲ್ (ರಿಫ಼್ರೆಶ್ ಮೆಂಟ್ ಸೆಂಟರ್) ಬಳಿ ಆಟೋ ನಿಲ್ಲಿಸಿದ. ಅಲ್ಲಿಂದ ಜ್ಯೂಸ್ ತೆಗೆದುಕೊಂಡೆವು. ಅಲ್ಲೊಬ್ಬ ರಸ್ತೆ ಬದಿ ಭಾರತದ ಬಾವುಟ, ಟೊಪ್ಪಿ, ಕೇಸರಿ ಬಿಳಿ ಹಸುರು ಬಣ್ಣದ ಕೈ ಗೆ ಹಾಕುವ ರಬ್ಬರ್ ಬ್ಯಾಂಡ್ ಮುಂತಾದವುಗಳನ್ನು ಮಾರುತ್ತಿದ್ದ. ಅಲ್ಲಿಂದ ಒಂದು ರಬ್ಬರ್ ಬ್ಯಾಂಡ್ ತೆಗೆದುಕೊಂಡೆವು. ಐದು ಹತ್ತು ನಿಮಿಷಗಳ ನಂತರ ಆಟೋ ಹೊರಟಿತು. ವಾಘಾ ಬಾರ್ಡರ್ ತಲುಪಲು ಸ್ವಲ್ಪ ದೂರ ವಿರುವಾಗಲೇ ಭಾರತ ಹಾಗೂ ಪಾಕಿಸ್ತಾನದ ದ್ವಜಗಳು ಅಸ್ಪಷ್ಟವಾಗಿ ಗೋಚರಚಾಗುತ್ತಿತ್ತು.  ೪.೩೦ ರ ಸುಮಾರಿಗೆ ವಾಘಾ ಬಾರ್ಡರ್ ನ ಅಟೋ ಸ್ಟ್ಯಾಂಡ್ ಅಲ್ಲಿ ರಿಕ್ಷಾ ನಿಂತಿತು. ರಿಕ್ಷಾದಿಂದ ಇಳಿಯುವ ಮೊದಲೇ ಒಂದಷ್ಟು ಜನ ನಮ್ಮಗೆ ಮುತ್ತಿಗೆ ಹಾಕಿದರು. ಟೊಪ್ಪಿ, ಬಾವುಟ ಇನ್ನಿತರ ವಸ್ತುಗಳನ್ನು ತೆಗೆದುಕೊಳ್ಳುವಂತೆ ದಂಬಾಲು ಬಿದ್ದರು. ಒಬ್ಬ ಹುಡುಗನಂತು ಕಯ್ಯಲ್ಲಿ ವಾಟರ್ ಕಲರ್ ಹಿಡಿದಿದ್ದ, ರಿಕ್ಷಾದಿಂದ ಇಳಿಯುತ್ತಿದ್ದಂತೆ ನನ್ನ ಕೈಗೆ ಕೇಸರಿ ಬಿಳಿ ಹಸುರಿನ ದಪ್ಪದ ಗೆರೆಗಳನ್ನು ಬರೆದು ಹಣಕೊಡುವಂತೆ ಹೇಳಿದ. ಇನ್ನೊಬ್ಬ ನಮ್ಮಿಬ್ಬರ ತಲೆಗೂ ಟೊಪ್ಪಿ ಇಟ್ಟು ಹಣ ಕೊಡಿ ಎಂದ. ಅವನ ಟೊಪ್ಪಿಯನ್ನು ಅವನಿಗೇ ಇಟ್ಟು ಹೇಗೋ ತಪ್ಪಿಸಿಕೊಂಡೆವು. ಅವರೆಲ್ಲಾ ಅದಾಗಲೇ  ಇನ್ನೊಂದು ರಿಕ್ಷಾದ ಕಡೆಗೆ ಓಡಿದ್ದರು.  ರಸ್ತೆ ಬದಿಯಲ್ಲಿ ಹೀಗೆ ಧ್ವಜ, ಬಲೂನ್, ಆಟಿಕೆಗಳು, ಬಟ್ಟೆ ಬರೆಗಳು, ತಿಂಡಿ ತಿನಿಸುಗಳು ಸೇರಿದಂತೆ ಅನೇಕ ವಸ್ತುಗಳನ್ನು ಮಾರುತ್ತಿದ್ದರು. ಪೆರೇಡ್ ನಡೆಯುವ ಸ್ಥಳಕ್ಕೆ ಇನ್ನು ಒಂದು ಕಿಲೋಮೀಟರ್ ಹೋಗ ಬೇಕಿತ್ತು. ಆದರೆ ಅಲ್ಲಿಗೆ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ. ಅರ್ಧ ಕಿಲೋಮೀಟರ್ ತನಕ ಸೈಕಲ್ ಗಾಡಿಗಳನ್ನು ಬಿಡುತ್ತಿದ್ದರು. ಮುಂದೆ ನಡೆದೇ ಹೋಗಬೇಕು.  ಅದು ಮಿಲಿಟರಿ ಏರಿಯಾ. ಬಿ.ಎಸ್.ಎಫ್ ನ ಹಿಡಿತದಲ್ಲಿರುವ ಪ್ರದೇಶ. ಸೈಕಲ್ ರಿಕ್ಷಾವೊಂದರಲ್ಲಿ  ಸ್ವಲ್ಪದೂರ ಹೋಗಿ ನಂತರ ಗ್ರ್ಯಾಂಡ್ ಟ್ರಂಕ್ ರೋಡ್‌ನಲ್ಲೇ ನಡೆಯುತ್ತಾ ಮುಂದೆ ಸಾಗಿದೆವು. ರಿಕ್ಷಾದಿಂದ ಇಳಿಯುತ್ತಿದ್ದಂತೆಯೇ ಭಾರತ ಹಾಗೂ ಪಾಕಿಸ್ತಾನದ ಬೃಹತ್ ಧ್ವಜಗಳು ಸ್ಪಷ್ಟವಾಗಿ ಕಂಡವು. ಈ ಎರಡೂ ಧ್ವಜಗಳ ಬಗ್ಗೆ ಹೇಳಲೇ ಬೇಕು. ಭಾರತವು  ೩೫೦ ಫ಼ೀಟ್ ಉದ್ದದ ಧ್ವಜ ಸ್ಥಂಬದ ಮೇಲೆ ೧೧೦ ಮೀ. ಅಗಲದ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಪಾಕಿಸ್ಥಾನವೂ ೪೦೦ಫೀಟ್ ಉದ್ದದ ಧ್ವಜ ಸ್ಥಂಬವನ್ನು ನಿರ್ಮಿಸಿ ಅದರಲ್ಲಿ ೧೨೨ ಮೀ ಅಗಲದ ತನ್ನ ಧ್ವಜವನ್ನು ೨೦೧೭ನೇ ಅಗಸ್ಟ್ ತಿಂಗಳಿನಲ್ಲಿ ಹಾರಿಸಿತು. ಪಾಕಿಸ್ಥಾನದ ಧ್ವಜ ಈಗ ಏಷ್ಯಾದಲ್ಲೇ ಅತ್ಯಂತ ದೊಡ್ಡ ಧ್ವಜ. 



ಪಾಕಿಸ್ತಾನ ಹಾಗೂ ಭಾರತದ ಬೃಹತ್ ಧ್ವಜಗಳು
  ಕವಾಯತು(ಪೆರೇಡ್) ನಡೆಯುವ ಸ್ಥಳದಿಂದ ಒಂದು ಪರ್ಲಾಂಗು ಮೊದಲು ತಪಾಸಣೆ ಮಾಡುತ್ತಾರೆ. ನಂತರ ಪ್ರವೇಶ ದ್ವಾರದಲ್ಲಿ ಸ್ವರ್ಣ ಜಯಂತಿ ಮಂದಿರ ದ ಬಳಿ ಮತ್ತೊಮ್ಮೆ ತಪಾಸಣೆ ನಡೆಸಿ ಒಳಗಡೆ ಬಿಡುತ್ತಾರೆ. ಎರಡೂ ದೇಶಗಳ ಕವಾಯತು ಜಿಟಿಸಿ ರೋಡ್‌ನಲ್ಲೇ ನಡೆಯುತ್ತದೆ. ವಿ ಐ ಪಿ ಪಾಸ್ ಹೊಂದಿರುವವರಿಗೆ ಎದುರುಗಡೆ ಸೀಟ್ ನೀಡುತ್ತಾರೆ.  ಅಂದರೆ ಪಾಕಿಸ್ಥಾನಕ್ಕೆ ಹತ್ತಿರ, ಭಾರತ ಹಾಗೂ ಪಾಕಿಸ್ಥಾನಗಳ ಪೆರೇಡ್ ಎರಡನ್ನೂ ಹತ್ತಿರದಿಂದ ನೋಡಲು ಸಾಧ್ಯವಾಗುವಂತೆ. ಮಹಿ ಡಿಫೆನ್ಸ್‌ನಲ್ಲಿರುವ ಕಾರಣ ನಮಗೂ ವಿ ಐ ಪಿ ಸೀಟ್ ದೊರಕಿತು. ನಿನ್ನೆ ರೈಲಲ್ಲಿ ಸಿಕ್ಕಿದ್ದ ಆರ್ಮಿ ಮ್ಯಾನ್ ಹಾಗೂ ಅವರ ಪತ್ನಿ ಮಕ್ಕಳು ಅಲ್ಲಿ ಮತ್ತೆ ಸಿಕ್ಕಿದರು. ಅವರು ನಮ್ಮ ಎದುರಿನ ಸೀಟ್‌ನಲ್ಲೇ ಕುಳಿತರು. ನಾವೀಗ ಪಾಕಿಸ್ಥಾನಕ್ಕೆ ಬಹಳ ಹತ್ತಿರದಲ್ಲಿದ್ದೆವು. ಒಂದು ಹತ್ತದಿನೈದು ಹೆಜ್ಜೆ ನಡೆದರೆ ಪಾಕಿಸ್ಥಾನ ಸಿಗುತ್ತಿತ್ತು. ಪಾಕಿಸ್ಥಾನದ ಸೈನಿಕರು, ಅಲ್ಲಿನ ಜನ, ಗಿಡ ಮರಗಳು ಎಲ್ಲವೂ ಕಾಣುತ್ತಿತ್ತು. ವಾಘಾ ಇರುವುದು, ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿ. ವಾಘಾಕ್ಕೆ ಹತ್ತಿರವಿರುವ ಭಾರತದ ಗ್ರಾಮ ಅಟ್ಟಾರಿ(ಇದು ಗ್ರಾಂಡ್ ಟ್ರಂಕ್ ರೋಡ್ ಹಾದು ಹೋಗುವ ಭಾರತದ ಕೊನೆಯ ಗ್ರಾಮ). ಇಲ್ಲಿ ಭಾರತ ಹಾಗೂ ಪಾಕಿಸ್ಥಾನದ ಗೇಟ್‌ಗಳಿದ್ದವು. ಕವಾಯತಿನ ಸಂದರ್ಭದಲ್ಲಿ ಎರಡೂ ದೇಶದ ಸೈನಿಕರು ಅದನ್ನು ಜೋರಾಗಿ ಹಾಕಿ ತೆಗೆದು ಮಾಡುತ್ತಿದ್ದರು, ಈಗ ಅಲ್ಲಿ ಕಾಮಗಾರಿ ನಡೆಯುತ್ತಿದ್ದುದರಿಂದ ಗೇಟ್‌ಗಳು ಇರಲಿಲ್ಲ. ಸೂರ್ಯಾಸ್ತದ ಸಮಯ ಇಲ್ಲಿ ಧ್ವಜ ಅವರೋಹಣ ಹಾಗೂ ಬಿ.ಎಸ್.ಎಫ್ ನ ಯೋಧರು ಕವಾಯತು ನಡೆಸುತ್ತಾರೆ. ಪಾಕಿಸ್ಥಾನದಲ್ಲಿ ಕವಾಯತು ನಡೆಸುವವರು, ಪಾಕಿಸ್ಥಾನ ರೇಂಜರ್ಸ್. ಈ ಪದ್ದತಿ ೧೯೫೯ ರಲ್ಲಿ ಪ್ರಾರಂಭವಾಯಿತು. ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಲು ಹಾಗೂ ಭ್ರಾತೃತ್ವದ ಸಂಕೇತವಾಗಿ ಪ್ರಾರಂಭಿಸಲಾಯಿತು.  ದೇಶ ವಿದೇಶಗಳಿಂದ ಪ್ರವಾಸಿಗರು ಭಾರತ ಹಾಗೂ ಪಾಕಿಸ್ಥಾನ ಎರಡು ದೇಶಗಳ ಮೂಲಕವೂ ಇಲ್ಲಿಗೆ ಆಗಮಿಸುತ್ತಾರೆ. ನಾನಂದುಕೊಂಡಿದ್ದೆ ಎರಡೂ ದೇಶಗಳ ಮಧ್ಯೆ ಈ ರೀತಿಯ ಕವಾಯತು ಅಟ್ಟಾರಿ ಬಾರ್ಡರ್‌ನಲ್ಲಿ ಮಾತ್ರ ಜರಗುವುದು ಎಂದು. ಆದರೆ ನಂತರ ತಿಳಿಯಿತು ಭಾರತ ಪಾಕಿಸ್ಥಾನಗಳ ಗಡಿ ಭಾಗಗಳಾದ ವಾಘಾದಿಂದ ಸ್ವಲ್ಪ ದಕ್ಷಿಣಕ್ಕೆ ಇರುವ ಫ಼ಾಜಿಲ್ಕಾದ ಮಹಾವೀರ್ / ಸಿದ್ದಿಕ್ ಬಾರ್ಡರ್ ನಲ್ಲಿ ಹಾಗೂ ಫ಼ಿರೋಜ್ ಪುರದ ಹುಸ್ಸೈನ್ ವಾಲಾ/ ಗಂಡಾ ಸಿಂಗ್ ವಾಲಾ(೧೯೭೦ ರಲ್ಲಿ ಪ್ರಾರಂಭಗೊಂಡಿತು) ಬಾರ್ಡರ್‌ನಲ್ಲೂ ನಡೆಯುತ್ತದೆ. ಆದರೆ ಅಟ್ಟಾರಿ ಬಾರ್ಡರ್‌ನಲ್ಲಿ ಜರಗುವ ಕಾರ್ಯಕ್ರಮದಷ್ಟು ಪ್ರಸಿದ್ಧವಾಗಿಲ್ಲ. ಅಲ್ಲದೇ ಭಾರತ-ಬಾಂಗ್ಲಾದೇಶದ ಗಡಿಯಲ್ಲೂ ರಿಟ್ರಿಯೇಟ್ ಸೆರೆಮನಿ ನಡೆಯುತ್ತದೆ. ಇದು ಇತ್ತೀಚಿಗೆ ಅಂದರೆ 6th November, 2013ರಲ್ಲಿ ಭಾರತದ ಗಡಿ ಪ್ರದೇಶವಾದ ಪೆಟ್ರಪೋಲ್ ಹಾಗೂ ಬಾಂಗ್ಲಾದ ಪ್ರದೇಶವಾದ ಬೆನಾಪೋಲ್ ಎಂಬಲ್ಲಿ ನಡೆಯುತ್ತದೆ. ತ್ರಿಪುರಾದ ಅಖೌರ ಬಾರ್ಡರ್ ಹಾಗೂ ಬಾಂಗ್ಲಾದೇಶದ ಉತ್ತರದಲ್ಲಿರುವ ಫೂಲ್ ಬರ್ರಿ ಬಾರ್ಡರ್ ನಲ್ಲೂ ನಡೆಯುತ್ತದೆ. 

ಪ್ರವೇಶ ದ್ವಾರ , ಸ್ವರ್ಣ ಜಯಂತಿ ಮಂದಿರ

ಪಾಕಿಸ್ತಾನದ ಪ್ರವೇಶ ದ್ವಾರ

ಇವುಗಳು ಬೃಹತ್ ದ್ವಜಗಳಲ್ಲ



ತಂತಿ ಬೇಲಿಯ ಆಚೆ ಪಾಕಿಸ್ತಾನ

ಗ್ಯಾಲರಿ, ಮಧ್ಯದಲ್ಲಿ ಕಾಣಿಸುತ್ತಿರುವುದು ಗ್ರಾಂಡ್ ಟ್ರಂಕ್ ರೋಡ್, ಪೆರೇಡ್ ಇಲ್ಲೇ ನಡೆಯುತ್ತದೆ

ಪಾಕ್ ಗ್ಯಾಲರಿ
  ೪.೪೦ಕ್ಕೆಲ್ಲಾ ನಾವು ಸ್ಟೇಡಿಯಂನಲ್ಲಿ ಕುಳಿತಿರಬಹುದು. ಬಿಸಿಲಿನ ಶಾಖಕ್ಕೆ ಮೈಯೆಲ್ಲಾ ಉರಿಯುತ್ತಿತ್ತು, ಜನರೆಲ್ಲಾ ಇನ್ನೂ ಬರುತ್ತಲೇ ಇದ್ದರು. ಪಾಕಿಸ್ಥಾನದ ಸ್ಟೇಡಿಯಂ‌ನಲ್ಲಿ ಜನರೇ ಇರಲಿಲ್ಲ. ಎಲ್ಲೋ ಅಲ್ಲಿ ಇಲ್ಲಿ ನಾಲ್ಕೈದು ಜನ ಕುಳಿತ್ತಿದ್ದರು. ನಾವು ಫೋಟೋ ಕ್ಲಿಕ್ಕಿಸಿಕೊಂಡೆವು. ಜೊತೆಗೆ ಕುಳಿತಲ್ಲಿಗೆ ತಂಪು ಪಾನೀಯ, ಬೀಸಣಿಗೆಗಳನ್ನು ತಂದು ಮಾರುತ್ತಿದ್ದರು. ಮುಸುಂಬಿ ಜ್ಯೂಸ್ ತೆಗೆದುಕೊಂಡೆವು. ಎರಡು ದೇಶಗಳ ಗೇಟ್‌ನ್ನು ತೆರವು ಗೊಳಿಸಿದ್ದರು, ಅಲ್ಲಿ ಕಾಮಗಾರಿ ನಡೆಯುತ್ತಿತ್ತು. ಎರಡೂ ದೇಶದ ಕೆಲ ಗಡಿ ಭದ್ರತಾ ಸಿಬ್ಬಂದಿಗಳು ಅಲ್ಲಿದ್ದರು. ಪಾಕಿಸ್ಥಾನದ ಬದಿಯಿಂದ ನಾಯಿಯೊಂದು ಭಾರತದ ಕಡೆಗೆ ಬರಲು ಹವಣಿಸುತ್ತಿತ್ತು. ಅದನ್ನು ಓಡಿಸುತ್ತಿದ್ದರು, ಕೊನೆಗೂ ಅಲ್ಲಿನ ಯೋಧರ ಕಣ್ತಪ್ಪಿಸಿ ಬೇಲಿಯೊಳಗೆ ನುಗ್ಗಿಕೊಂಡು ಇತ್ತ ಕಡೆ ಬಂದೇ ಬಿಟ್ಟಿತು. ಅದೆಷ್ಟೋ ಹಕ್ಕಿಗಳು, ಕೀಟಗಳು ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತ ಇದ್ದವು. ಗಡಿ ರೇಖೆ ಏನೇ ಇದ್ದರೂ ಅದು ಮನುಷ್ಯರಿಗೆ ಮಾತ್ರ, ಈ ಪ್ರಾಣಿ ಪಕ್ಷಿಗಳಂತೂ ಯಾವುದರ ಪರಿವೆಯೂ ಇಲ್ಲದೇ ಮನಸೋ ಇಚ್ಛೆ ಭಾರತಕ್ಕೂ ಪಾಕಿಸ್ಥಾನಕ್ಕೂ ಹೋಗಿ ಬಂದು ಮಾಡುತ್ತಿದ್ದವು.  ಭಾರತದ ಪ್ರದೇಶದಲ್ಲಿದ್ದ ಮರಗಳೂ ಪಾಕಿಸ್ಥಾನದ ಪ್ರದೇಶದಲ್ಲಿದ್ದ ಮರಗಳೂ ಯಾವುದೇ ಬೇಧವಿಲ್ಲದೇ ಎಲ್ಲರಿಗೂ ಗಾಳಿಯನ್ನು ಬೀಸುತ್ತಿತ್ತು. ದೇಶ ವಿಭಜನೆಗೂ ಮುನ್ನ ಸಾವಿರಾರು ವರ್ಷಗಳಿಂದಲೂ ಇವರೆಡೂ ಒಂದೇ ದೇಶವಾಗಿತ್ತು. ಆ ಪ್ರದೇಶದ ಜನರ ಜೀವನ ಎರಡು ಕಡೆಗಳಲ್ಲೂ ಬೆಸೆದುಕೊಂಡಿದ್ದಿರಬಹುದು. ವಾಘಾ-ಅಟ್ಟಾರಿಯಿಂದ ಲಾಹೋರ್‌ಗಿರುವುದು ೨೦ ಕಿ.ಮೀ ಅದೇ ಅಮೃತ ಸರಕ್ಕೆ ೩೫ ಕಿ.ಮೀ ಇದೆ. ಅಟ್ಟ್ರಾರಿಯ ಜನರು ವ್ಯಾಪಾರಕ್ಕೆ ಅಥವಾ ದಿನ ನಿತ್ಯದ ವ್ಯವಹಾರಗಳನ್ನು ಹತ್ತಿರದ ಪಟ್ಟಣವಾದ ಲಾಹೋರನಲ್ಲಿ ನಡೆಸಿದ್ದಿರಬಹುದು. ಹಾಗೇ ಪಾಕಿಸ್ಥಾನಕ್ಕೆ ಸೇರಿದ ಗ್ರಾಮಗಳ ಜನಕ್ಕೆ ಅಮೃತ ಸರವೂ ಅಗತ್ಯವಿದ್ದಿರಬಹುದು. ದೊಡ್ಡದಾದ ಪಂಜಾಬ್ ಪ್ರಾಂತ್ಯ ದೇಶ ವಿಭಜನೆಯ ಸಂದರ್ಭ ಎರಡು ಹೋಳಾಗಿ ಎರಡೂ ರಾಷ್ಟ್ರಗಳಲ್ಲಿ ಹಂಚಿ ಹೋಯಿತು. ವಾಘಾವೂ ಪಂಜಾಬ್‌ಗೆ ಸೇರಿದೆ, ಅಟ್ಟಾರಿಯೂ ಪಂಜಾಬ್‌ಗೆ ಸೇರಿದೆ ಆದರೆ ರಾಷ್ಟ್ರ ಮಾತ್ರ ಬೇರೆ ಬೇರೆ. ಐದು- ಹತ್ತು ನಿಮಿಷಗಳ ಕಾಲ್ನಡಿಗೆಯ ದಾರಿಯಲ್ಲಿ ತಲುಪಬಹುದಾದ ಪ್ರದೇಶಗಳಿಗೆ ಹೋಗಲು ಅನುಮತಿ ಬೇಕು, ವಿಸಾ ಪಾಸ್ ಪೋರ್ಟ್ ಬೇಕು. ಈ ಹೊಲದಲ್ಲಿ ಕೆಲಸ ಮಾಡುತ್ತಿರುವವನಿಗೆ ಒಮ್ಮೆ ಕೊಟ್ಟೋ, ಪಿಕ್ಕಾಸೋ ಬೇಕಾದಲ್ಲಿ ಪಕ್ಕದ ಹೊಲದಲ್ಲಿ ಕೆಲಸ ಮಾಡುವವನಿಂದ ಪಡೆಯಲು ಸಾಧ್ಯವಿಲ್ಲ. ಅವರಿಬ್ಬರ ತಾತ ಮುತ್ತಾತಂದಿರು ಅಕ್ಕ ಪಕ್ಕದ ಮನೆಯವರಾಗಿದ್ದಿರಬಹುದು, ಇವನ ಮುತ್ತಜ್ಜಿ ಅವನ ಅಜ್ಜಿಗೆ ಎದೆಹಾಲುಣಿಸಿ ಬದುಕಿಸಿರಲೂ ಬಹುದು, ಯಾರಿಗೆ ಗೊತ್ತು? ಈಗ ದೇಶವೇ ಬೇರೆ ಬೇರೆ. ಇಲ್ಲಿನ ಎಷ್ಟೋ ಅಜ್ಜಿ ಯಂದಿರ ತವರು ಅಲ್ಲಿರಬಹುದು, ಅಲ್ಲಿನ ಎಷ್ಟೋ ಜನರ ಸಂಬಂಧಿಗಳು ಇಲ್ಲಿರಬಹುದು. ಅದೆಷ್ಟು ಕುಟುಂಬಗಳು  ತಮ್ಮ ಆಸ್ತಿ ಪಾಸ್ತಿಗಳನ್ನು ಸಿಕ್ಕಿದ ರೇಟಿಗೆ ಮಾರಿ ಬಂದಿರಬಹುದು, ಕೆಲವರಂತೂ ಮಾರದೇ ಹಾಗೇ ಬಿಟ್ಟು ಬಂದಿರಲೂಬಹುದು. ಇಲ್ಲಿಂದಲೂ ಅನೇಕರು ಬರಿಗೈಯಲ್ಲಿಯೂ ಅಲ್ಲಿಗೆ ಹೋಗಿರಬಹುದು. ಈ ದೇಶ ವಿಭಜನೆಯಿಂದ ಎಷ್ಟು ಜನ ಬೀದಿ ಪಾಲಾಗಿದ್ದಾರೋ, ಅತ್ತು ಗೋಳಾಡಿದ್ದಾರೋ? ದೇವನೇ ಬಲ್ಲ. ಅಲ್ಲಿ ಹೋಗಿ ಕೂತಾಗ ಪಾಕಿಸ್ಥಾನ ಬೇರೆ ದೇಶ ಎಂದು ಮನಸ್ಸು ಒಪ್ಪುವುದೇ ಇಲ್ಲ. ಬೇರೆ ಎಂದು ಬೇರ್ಪಡಿಸಲು ಅಲ್ಲಿನ  ಭೌಗೋಳಿಕ ಸನ್ನಿವೇಶ ಜನರ ಬಣ್ಣ ಆಕಾರ ಭಾಷೆ ಕೃಷಿ ಯಾವುದೂ ಭಾರತಕ್ಕಿಂತ ಭಿನ್ನವಾಗಿಲ್ಲ. ಆದರೂ ವೈಷಮ್ಯ, ದ್ವೇಷ, ಕ್ರೌರ್ಯ ಯಾಕ್ ಹೀಗೆ? 

ಬೀಸಣಿಗೆ, ಕೊಡೆ, ಟೊಪ್ಪಿಗಳನ್ನು ಮಾರುತ್ತಿರುವುದು

ಭಾರತದ ಕಡೆಗೆ ಬರಲು ಹವಣಿಸುತ್ತಿರುವ ನಾಯಿ
   ೫-೫.೧೫ ರ ಹೊತ್ತಿಗೆ ಗ್ಯಾಲರಿಯಲ್ಲಿ ಸಾವಿರಾರು ಜನ ಸೇರಿದರು, ಪಾಕಿಸ್ಥಾನಿಗಳು ಅಲ್ಲಿ ಬಂದು ಸೇರಿದ್ದರು. ಅಲ್ಲೂ ಅನೇಕ ವಿದೇಶೀಯರು ಬಂದಿದ್ದರು. ದೇಶ ಭಕ್ತಿ ಗೀತೆಗಳನ್ನು ದೊಡ್ಡದಾಗಿ ಹಾಕಿದರು. ಅವರಲ್ಲೂ ಏನೇನೋ ಹಾಡುಗಳನ್ನು ಹಾಕಿದ್ದರು. ಅಲ್ಲಿ ಒಬ್ಬ ಹುಡುಗ ಹಾಗೂ ಒಬ್ಬ ಒಂಟಿ ಕಾಲಿನ ವ್ಯಕ್ತಿ ಆವೇಶದಿಂದ ಆ ಹಾಡುಗಳಿಗೆ ಕುಣಿಯುತ್ತಿದ್ದರು. 


ಪಾಕಿಸ್ತಾನದ ಮನೋರಂಜನಾ ಕಾರ್ಯಕ್ರಮ

  ಭಾರತೀಯ ಕಮಾಂಡೋ ಗಳು ಶ್ವಾನಗಳನ್ನು ಕರೆತಂದು ಅಲ್ಲೆಲ್ಲಾ ಪರಿಶೀಲನೆ ನಡೆಸಿದರು. ನಮ್ಮಲ್ಲಿ ಇನ್ನೂ ಯಾವುದೇ ಕಾರ್ಯಕ್ರಮ ಪ್ರಾರಂಭವಾಗಿರಲಿಲ್ಲ. ಅಲ್ಲಂತೂ ಪಾಕಿಸ್ಥಾನದ ಪರವಾದ ಘೋಷಣೆಗಳು ಕೆಲವು ಚಿಕ್ಕ ಚಿಕ್ಕ ಮಕ್ಕಳು ನೃತ್ಯ ಮಾಡುತ್ತಿದ್ದರು. ಛೆ, ನಾವು ಅವರ ಮುಂದೆ ಚಿಕ್ಕವರಾಗುತ್ತಿದ್ದೇವೆ ಅನ್ನಿಸುತ್ತಿತ್ತು. ಅವರಂತೂ ಹಾಕಿದ ಹಾಡನ್ನೇ ಮತ್ತೆ ಮತ್ತೆ ಹಾಕಿ ಅದಕ್ಕೆ ಮತ್ತದೇ ಹೆಜ್ಜೆ ಹಾಕುತ್ತಾ ಅವರೇ ಇಬ್ಬರು ಕುಣಿಯುತ್ತಿದ್ದರು. ನಮಗೆ ಅವರ ನೃತ್ಯ ಬೋರ್ ಹೊಡೆಸಿತು. ಆಗಲೇ ನಮ್ಮಲ್ಲಿ ಭಾರತದ ಧ್ವಜ ಹಿಡಿದು ಹೆಂಗಸರು ಫುಲ್ ಜೋಶ್‌ನಿಂದ ಟ್ರ್ಯಾಕ್‌ನಲ್ಲಿ ಓಡುತ್ತಿದ್ದರು. ಪುಟ್ಟ ಪುಟ್ಟ ಹುಡುಗಿಯರು, ಯುವತಿಯರು, ಸೀರೆ ಉಟ್ಟ ಆಂಟಿಯಂದಿರು ಯಾರೂ ಬೇಕಾದರೂ ಮುಕ್ತವಾಗಿ ಪಾಲ್ಗೊಳ್ಳಬಹುದು. ನೂರಾರು ಮಂದಿ ಇದರಲ್ಲಿ ಭಾಗವಹಿಸಿದರು. ನೆರೆದಿದ್ದವರ ಬೊಬ್ಬೆ, ಚಪ್ಪಾಳೆ, ಜೈ ಕಾರಗಳು ಪಾಕಿಗಳನ್ನು ಇತ್ತ ತಿರುಗುವಂತೆ ಮಾಡಿತು. ಖಂಡಿತಾ ಅಲ್ಲಿನ ಹೆಣ್ಣು ಮಕ್ಕಳು ಭಾರತದಲ್ಲಿ ಮಹಿಳೆಯರಿಗಿರುವ ಅವಕಾಶಗಳನ್ನು ಕಂಡು ಕೊರಗದೆ ಇರಲಾರರೇನೋ? ನಂತರ 'ಜೈ ಹೋ' ಸೇರಿದಂತೆ ದೇಶಕ್ಕೆ, ದೇಶ ಭಕ್ತಿಗೆ ಸಂಬಂಧ ಪಟ್ಟ ಹಾಡುಗಳಿಗೆ ನಮ್ಮ ಹೆಣ್ಣು ಮಕ್ಕಳು ಕುಣಿದರು. ಆ ಶಕ್ತಿ, ಖುಷಿ ಎಲ್ಲಿಂದ ಬಂತೋ ಇವರಿಗೆ, ಅಲ್ಲಿದ್ದವರನ್ನೆಲ್ಲಾ ಹುಚ್ಚೆಬ್ಬಿಸುವಂತೆ ಮಾಡಿದರು. ಕಿವಿಗಡಚಿಕ್ಕುವ ಘೋಷಣೆಗಳು, ಕರತಾಡನ ಎರಡೂ ಕಡೆಯಿಂದ ಕೇಳಿ ಬಂತು. 



ಭಾರತದ ಧ್ವಜ ಹಿಡಿದು ಹೆಂಗಸರು ಫುಲ್ ಜೋಶ್‌ನಿಂದ ಟ್ರ್ಯಾಕ್‌ನಲ್ಲಿ ಓಡುತ್ತಿರುವುದು



ಭಾರತದಲ್ಲಿನ ಮನೋರಂಜನಾ ಕಾರ್ಯಕ್ರಮ
  ನಂತರ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಹಾಗೂ ಪಾಕಿಸ್ಥಾನ ರೇಂಜರ್ಸ್‌ಗಳ ಕವಾಯತು. ಮೊದಲಿಗೆ ಭಾರತದ ಯೋಧರು ಸ್ವರ್ಣ ಜಯಂತಿ ಮಂದಿರದ ಮೇಲಿನ ಭಾಗದಿಂದ ಮಾರ್ಚ್ ಫಾಸ್ಟ್ ಮಾಡುತ್ತಾ ಇಳಿದರು. ಭಾಯೇ ಮೂಡ್... ಎಂದು ದೀರ್ಘವಾಗಿ ಕಮಾಂಡ್. ಜೊತೆಗೆ ಕೋಚ್ ಒಬ್ಬರು ವೀಕ್ಷಕರನ್ನು ಜೋರಾಗಿ ಘೋಷಣೆ ಕೂಗುವಂತೆ, ಪ್ರೋತ್ಸಾಹಿಸುವಂತೆ ಹುರಿದುಂಬಿಸುತ್ತಿದ್ದರು. ಪಾಕಿಸ್ಥಾನದಲ್ಲೂ ಇಂತಹ ಒಬ್ಬರು ಕೋಚ್ ಇದ್ದರು. ಅಂದಿನ ಡ್ರಿಲ್ ರಾಜಸ್ಥಾನ್ ರೆಜಿಮೆಂಟಿನ ಯೋಧರದ್ದಾಗಿತ್ತು. ಮೊದಲಿಗೆ ಎರಡು ಜನ ಮಹಿಳೆಯರು ಮಾರ್ಚ್ ಫಾಸ್ಟ್ ಮಾಡುತ್ತಾ ಪಾಕಿಸ್ಥಾನದ ಕಡೆಗೆ ಸಾಗಿ ನಮ್ಮ ಧ್ವಜ ಸ್ಥಂಬದಿಂದ ಸ್ವಲ್ಪ ಹಿಂಬದಿ ನಿಂತರು. ನಂತರ ಉಳಿದ ೧೦ ಮಂದಿ ಯೋಧರು ಮಾರ್ಚ್ ಫಾಸ್ಟ್‌ನ್ನು ವೀರಾವೇಶದಿಂದಲೇ ಮಾಡಿದರು. ಅವರು ಕಾಲು ಮುಂದಕ್ಕೆ ಚಾಚಿ ಎತ್ತಿ ಜೋರಾಗಿ ನೆಲಕ್ಕೆ ಬಡಿಯುವ ಪರಿ ಅದ್ಭುತವಾಗಿರುತ್ತದೆ. ನಂತರ ಪಾಕಿಸ್ಥಾನ ರೇಂಜರ್ಸ್‌ನ ಯೋಧರೂ ಮಾರ್ಚ್ ಫಾಸ್ಟ್ ಪ್ರದರ್ಶಿಸಿದರು. ಎರಡು ದೇಶಗಳ ಯೋಧರೂ ಹತ್ತಿರ ಹತ್ತಿರ ಬಂದು ಸಿಟ್ಟಿನಿಂದ ಕಾಲನ್ನು ಬಡಿಯುವುದು, ಎಕ್ಸ್ ಪ್ರೆಷನ್ ನೀಡುವುದು ನಂತರ ತಮ್ಮ ಕಮಾಂಡರ್ ಬಳಿ ಒಪ್ಪಿಸಿ ನಿಲ್ಲುತ್ತಿದ್ದರು. 

ಬಿ.ಎಸ್.ಎಫ್ ನ ಯೋಧ



ವೀಕ್ಷಕರನ್ನು ಹುರಿದುಂಬಿಸುತ್ತಿದ್ದ ಕೋಚ್

ರಾಜಸ್ತಾನ್ ರೆಜಿಮೆಂಟ್‌ನ ಕವಾಯತು

ಪಾಕಿಸ್ತಾನ್ ರೇಂಜರ್ಸ್


  ಮಾರ್ಚ್ ಫಾಸ್ಟ್ ಆದ ನಂತರ ಸೂರ್ಯಾಸ್ತವಾಗುತ್ತಿದ್ದಂತೆಯೇ ಎರಡೂ ದೇಶಗಳ ಧ್ವಜವನ್ನು ಇಳಿಸಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲೂ ಅಷ್ಟೇ ಯಾರು ಮೊದಲು ಇಳಿಸುವುದು ಮಡಚುವುದು ಎಂದು ಸ್ಪರ್ಧೆ. ಡ್ರಿಲ್‌ನ ಸಮಯದಲ್ಲಿ ನಮ್ಮ ಕೋಚ್ ನಮ್ಮನ್ನು ಹುರಿದುಂಬಿಸುತ್ತಿದ್ದರು, ಅವರ ಕೋಚ್ ಅವರನ್ನು. ಇಷ್ಟೂ ಹೊತ್ತು ಎರಡೂ ದೇಶದವರಿಂದ ಘೋಷಣೆಗಳು, ಚಪ್ಪಾಳೆ, ಬೊಬ್ಬೆ ಒಂದೇ ಸಮನೆ ಕೇಳಿ ಬರುತ್ತಿತ್ತು.  ಸ್ಟೇಡಿಯಂ‌ಲ್ಲಿ ಜನರ ಮೇಲೆ ದೃಷ್ಟಿ ಹಾಯಿಸಿದಾಗ ಭಾರತದಲ್ಲಿ ಜನರು ಕಲರ್ ಫುಲ್ ಆಗಿ ಕಾಣುತ್ತಿದ್ದರು, ಪಾಕಿಸ್ಥಾನದಲ್ಲಿ ಹಸುರು, ನೀಲಿ, ಬಿಳಿ ಮುಂತಾದ ಕೆಲವೇ ಕೆಲವು ಬಣ್ಣಗಳು ಕಂಡವು. ಅವರು ಆ ಕೆಲವು ಬಣ್ಣದ ಬಟ್ಟೆಗಳನ್ನು ಬಿಟ್ಟು ಬೇರೆ ಬಣ್ಣದ ಬಟ್ಟೆ ತೊಟ್ಟದ್ದು ಬಹಳ ಕಡಿಮೆ. ಭಾರತೀಯರು ಹಾಗಲ್ಲ, ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ವರ್ಣಮಯವಾಗಿ ಕಾಣುತ್ತಿದ್ದರು. 

ಎರಡೂ ದೇಶಗಳ ಧ್ವಜ ಅವರೋಹಣ
ಪಾಕಿಸ್ತಾನೀಯರು

ಭಾರತೀಯರು
   ಧ್ವಜಾರೋಹಣದ ನಂತರ ಎಲ್ಲರೂ ಅಲ್ಲಿಂದ ಹೊರಡುವಾಗ ಪಾಕಿಸ್ಥಾನಿಯರಿಗೆ ಹಾಗೂ ಅವರು ಭಾರತೀಯರಿಗೆ ಬಾಯ್ ಹೇಳುತ್ತಾ ಖುಷಿಯಿಂದ ಹೊರಟೆವು. ಅಲ್ಲಿಂದ ನಡೆಯುತ್ತಾ ಬಂದು ಅಟೋ ಸ್ಟ್ಯಾಂಡ್ ಬಳಿ ಬಂದೆವು. ಆದರೆ ನಮ್ಮ ಆಟೋ ಅಲ್ಲಿರಲಿಲ್ಲ. ಆತನಿಗೆ ಕಾಲ್ ಮಾಡಿದರೆ ಸಿಗುತ್ತಿರಲಿಲ್ಲ. ನಂತರ ಹುಡುಕುತ್ತಾ ಹುಡುಕುತ್ತಾ ಹಿಂದಿನ ಸೀಟಿನಲ್ಲಿ ನಮ್ಮ ಪಕ್ಕ ಕುಳಿತ ಹುಡುಗ ಕಂಡ. ಅಲ್ಲೇ ಅನತಿ ದೂರದಲ್ಲಿ ನಮ್ಮ ಆಟೋ ಕೂಡಾ ಇತ್ತು. ಏಳು ಗಂಟೆಯ ಸುಮಾರಿಗೆ ಅಲ್ಲಿಂದ ಹೊರಟೆವು. ಬೃಹತ್ ಧ್ವಜಗಳು ಮತ್ತೆ ನಮ್ಮಿಂದ ದೂರವಾಗುತ್ತಾ ರಿಕ್ಷ ಮುಂದೆ ಸಾಗಿದಂತೆ ಚಿಕ್ಕದಾಗುತ್ತಾ ಕೊನೆಗೆ ಕಾಣದಾಯಿತು. ೮ ಗಂಟೆಗೆ ಅಮೃತ್ ಸರ್ ತಲುಪಿದೆವು. ಅಲ್ಲಿಂದ ಸೈನಿಕ್ ಆರಾಮ್ ಘರ್ ಗೆ ತೆರಳಿ ಸ್ನಾನ ಮಾಡಿ ಫ಼್ರೆಶ್ ಆದೆವು. ಊಟಕ್ಕೆ ಹೋಗುವ ಮೊದಲು ನಾಳೆ ಹರಿದ್ವಾರಕ್ಕೆ ಹೋಗಲಿರುವ ನಾವು ಟಿಕೆಟ್ ಬುಕ್ ಮಾಡಿದ್ದ ರೈಲಿನ ಬಗ್ಗೆ ಮಹಿ ನೆಟ್‌ನಲ್ಲಿ ನೋಡಿದಾಗ ಅದೂ ಕ್ಯಾನ್ಸಲ್ ಆಗಿರುವ ವಿಷಯ ತಿಳಿಯಿತು. ಇನ್ನೇನು ಮಾಡುವುದು ಎಂದು ಯೋಚಿಸುತ್ತಾ ಈಗ ರಾತ್ರಿ ಅಮೃತ್ ಸರ್‌ದಿಂದ ಹರಿದ್ವಾರಕ್ಕೆ ಯಾವುದಾದರೂ ಟ್ರೈನ್ ಹೋಗುವುದಿದೆಯೇ ಎಂದು ನೋಡಿದೆವು. 'ಡೆಹರಾಡೂನ್' ಎಕ್ಸ್ಪ್ರೆಸ್ ಇತ್ತು. ಹತ್ತು ಗಂಟೆಗೆ ಟ್ರೈನ್ ಅಮೃತ್ ಸರದಿಂದ ಹೊರಡುವುದು, ಆಗಲೇ ೮.೩೦ ಆಗಿತ್ತು, ಲಗೇಜ್ ಪ್ಯಾಕ್ ಮಾಡಿ ರೂಮ್‌ ಕೀ ಯನ್ನು ಹಿಂದಿರುಗಿಸಿ ರೈಲ್ವೇ ಸ್ಟೇಶನ್‌ಗೆ ಹೋಗುವ ಗಾಡಿಯನ್ನು ಹಿಡಿದು, ಪುನಃ ಹರಿದ್ವಾರಕ್ಕೆ ಟಿಕೆಟ್ ಬುಕ್‌ಮಾಡಿ ಫ್ಲಾಟ್ ಪಾರಂ ಹುಡುಕಿ ರೈಲು ಹತ್ತಬೇಕಿತ್ತು. ಟಿಕೆಟ್ ಕೌಂಟರ್‌ನಲ್ಲಿ ರಶ್ ಇಲ್ಲದ ಕಾರಣ ಹೆಚ್ಚು ಸಮಯ ವ್ಯರ್ಥವಾಗಲಿಲ್ಲ. ಡೆಹರಡೂನ್ ಎಕ್ಸ್ಪ್ರೆಸ್ ಟ್ರೈನ್ ಅದಾಗಲೇ ಫ್ಲ್ಯಾಟ್ ಫಾರ್ಮ್‌ನಲ್ಲಿ ರೆಡಿಯಾಗಿತ್ತು. ಆದರೆ ಊಟ ಮಾಡಲು ಸಮಯ ಸಿಗಲೇ ಇಲ್ಲ. ಜ್ಯೂಸ್ ಹಾಗೂ ಬಿಸ್ಕೆಟ್ ತಿಂದೆವು.  ೧೦.೧೫ಕ್ಕೆ ಟ್ರೈನ್ ಅಮೃತ್ ಸರದಿಂದ ಹೊರಟಿತು. 
೩೧/೦೭/೨೦೧೮
   ಬೆಳಗ್ಗೆ ೫.೩೦ ರ ಸುಮಾರಿಗೆ ಮಹಿ ಕರೆದಾಗ ಎಚ್ಚರವಾಯಿತು. ಟ್ರೈನ್ ಅಂಬಾಲದಲ್ಲಿ ನಿಂತಿತ್ತು. ಮಹಿಗೆ ಫಸ್ಟ್ ಪೋಸ್ಟಿಂಗ್ ಆಗಿದ್ದು ಅಂಬಾಲದಲ್ಲಿಯೇ. ಬೆಳಕು ಹರಿಯ ತೊಡಗಿತು. ಟ್ರೈನ್ 'ಉತ್ತರಾಖಂಡ್‌' ರಾಜ್ಯದ ಯಾವ್ ಯಾವುದೋ ಹಳ್ಳಿಗಳಲ್ಲಿ ಚಲಿಸುತ್ತಿತ್ತು. ಉತ್ತರಾಖಂಡ್ ಉತ್ತರ ಪ್ರದೇಶದಂತಲ್ಲ. ಇಲ್ಲಿನ ಭೌಗೋಳಿಕ ಸನ್ನಿವೇಶ, ಹವಾಮಾನ, ಜನರ ಜೀವನ ಕ್ರಮ ಎಲ್ಲವೂ ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಭಿನ್ನವೇ. ಬೇಸಿಗೆಯಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಚಳಿಗಾಲದಲ್ಲಿ ಹಿಮ ಬಿದ್ದು ಸ್ವರ್ಗದಂತೆ ಭಾಸವಾಗುವ ಹಲವಾರು ಎತ್ತರ ಎತ್ತರದ ಗಿರಿ ಶಿಖರಗಳನ್ನು ಹೊಂದಿರುವ ಸುಂದರವಾದ ನಾಡಿದು. ಮೊದಲು ಇವುಗಳೆರಡು ಒಂದೇ ರಾಜ್ಯವಾಗಿತ್ತು. ನವೆಂಬರ್ ೯, ೨೦೦೦ ದಲ್ಲಿ ಉತ್ತರಾಖಂಡ್ ಪ್ರತ್ಯೇಕ ರಾಜ್ಯವಾಯಿತು. ಇಲ್ಲಿ ಹಲವಾರು ಹಿಂದೂ ಪವಿತ್ರ ಕ್ಷೇತ್ರಗಳಿರುವುದರಿಂದ ಈ ರಾಜ್ಯವನ್ನು 'ದೇವ ಭೂಮಿ' ಎಂದೂ ಕರೆಯುವರು.  ೨೦೧೩ರಲ್ಲಿ ಇಲ್ಲಿ ನಡೆದ ಮೇಘ ಸ್ಪೋಟವನ್ನೂ ಅದರಿಂದ ಉಂಟಾದಂತಹ ಸಾವು ನೋವುಗಳನ್ನು ನಾವು ಮರೆಯುವಂತಿಲ್ಲ. ಸುಂದರವಾದ ಈ ರಾಜ್ಯ ಪರ್ವತಗಳ ನಾಡು. ಹಿಮಾಲಯದ ಅದೆಷ್ಟೋ ಪರ್ವತಗಳು ಇಲ್ಲಿಂದಲೇ ಪ್ರಾಂಭಗೊಳ್ಳುತ್ತವೆ.  ಪವಿತ್ರ ಗಂಗಾ ಹಾಗೂ ಯಮುನಾ ನದಿಗಳ ಉಗಮ ಸ್ಥಾನವಾದ ಗಂಗೋತ್ರಿ ಹಾಗೂ ಯಮುನೋತ್ರಿ ಇರುವುದೂ ಇದೇ ಉತ್ತರಾಂಚಲದಲ್ಲಿ. ಉತ್ತರದಲ್ಲಿ ಟಿಬೆಟ್ ಹಾಗೂ ಈಶಾನ್ಯ ಭಾಗದಲ್ಲಿ ನೇಪಾಳವಿದ್ದು, ಉಳಿದಂತೆ ಹರಿಯಾಣ, ಉತ್ತರಪ್ರದೇಶ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಿಂದ ಸುತ್ತುವರಿದಿದೆ. ವೇದಗಳ ಕಾಲದಲ್ಲೇ ಈ ಪ್ರದೇಶದಲ್ಲಿ ಮನುಷ್ಯರ ವಾಸವಿತ್ತು ಎಂಬುದಕ್ಕೆ  ಉಲ್ಲೇಖಗಳಿವೆ. ದ್ವಾಪರ ಯುಗದ ಕುರು ಹಾಗೂ ಪಾಂಚಾಲ ಸಾಮ್ರಾಜ್ಯಗಳು ಇಲ್ಲಿದ್ದವು ಎಂದು ಹೇಳಲಾಗುತ್ತದೆ. ಅಲ್ಲದೇ ವ್ಯಾಸ ಮಹರ್ಷಿಗಳು ಮಹಾಭಾರತವನ್ನು ಬರೆದಿರುವುದು ಇದೇ ರಾಜ್ಯದಲ್ಲಿ ಎನ್ನುವ ನಂಬಿಕೆ ಇದೆ. ೨೦೦೭ರಲ್ಲಿ Centre for the Study of Developing Societies, Uttarakhand ನಡೆಸಿದ ಸರ್ವೆ ಪ್ರಕಾರ ಅತೀ ಹೆಚ್ಚು ಬ್ರಾಹ್ಮಣರನ್ನು ಹೊಂದಿರುವ ರಾಜ್ಯ ಉತ್ತರಾಖಂಡ್. ಅದೆಷ್ಟೋ ಸಾಧು ಸಂತರನ್ನು ರಾಜ್ಯದಾದ್ಯಂತ ಕಾಣಬಹುದು. 'ಡೆಹರಾ ಡೂನ್' ಇದರ ರಾಜ್ಯಧಾನಿ.

                                                                                                                          -ಮುಂದುವರೆಯುವುದು

Comments

Popular posts from this blog

ಗರುಡ ಹಾರಿದ ಹಾದಿ :ಭಾಗ-1

ಗರುಡ ಹಾರಿದ ಹಾದಿ: ಭಾಗ - 2

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ