ಮಾನ್ಸೂನ್ ಟ್ರಿಪ್ ೨೦೧೮ - 9


೦೨/೦೮/೨೦೧೮
 ಬೆಳಗ್ಗೆ ಸುಮಾರು ೭ ಗಂಟೆಯ ಸಮಯಕ್ಕೆ ಎಚ್ಚರವಾಯಿತು. ನಂತರ ಸ್ನಾನ ಮಾಡಿ ಫ್ರೆಶ್ ಆಗಿ ತಿಂಡಿ ತಿನ್ನಲು ಹೋಟೆಲ್ ಹುಡುಕುತ್ತಾ ಹೊರಟೆವು. ಅಲ್ಲೆಲ್ಲಾ ಹೋಟೆಲ್ ಬಾಗಿಲು ತೆರೆಯುವುದು ೧೦ ಗಂಟೆಯ ಮೇಲಂತೆ. ಮಹಿ ಮೊದಲೆಲ್ಲಾ ತಿಂಡಿ ತಿನ್ನಲು ಹೋಗುತ್ತಿದ್ದ ಹೋಟೆಲ್ ಒಂದಿದೆ, ಅಲ್ಲಿ ಪೂರಿ ಹಾಗೂ ಚೋಲೆ ಫೇಮಸ್, ರುಚಿಯಾಗಿರುತ್ತದೆ ಅಲ್ಲೇ ಹೋಗೋಣ ಎಂದು ನಡೆಯುತ್ತಾ ಸಾಗಿದೆವು, ಅಲ್ಲೊಂದು ಎಲೆಕ್ಟ್ರಿಕ್ ರಿಕ್ಷಾ ಇತ್ತು, ಅದಕ್ಕೆ ಹತ್ತಿದೆವು. ಮಾತನಾಡುತ್ತಾ ಆಟೋ ಡ್ರೈವರ್ ಏರ್ ಫೋರ್ಸ್‌ನಲ್ಲಿ ಸಿವಿಲಿಯನ್ ಎಂಪ್ಲಾಯಿ ಆಗಿ ಸದ್ಯ ರಿಟೈರ್ಡ್ ಆದವರು, ಎಂದರು, ಮಹಿಯೂ ಏರ್‌ಫೋರ್ಸ್‌ನಲ್ಲಿರುವುದು ತಿಳಿದು ಅವರಿಗೂ ಖುಷಿ ಆಯಿತು. 'ಕಲ್ಕಾ ಸ್ವೀಟ್ ಶಾಪ್' ಎಂಬ ಹೋಟೆಲ್ ಬಳಿ ಗಾಡಿ ನಿಲ್ಲಿಸಿದರು. ನಂತರ ಆ ಹೋಟೆಲ್‌ನಲ್ಲಿ ಪೂರಿ ತಿಂದೆವು. ಇನ್ನೂ ಸಮಯವಿತ್ತು, ನಮಗೆ ಚಂಡೀಘಡ್‌ಕ್ಕೆ ಹೋಗಲು ಟ್ರೈನ್ ಇದ್ದುದು ೧೦.೩೦ಕ್ಕೆ, ಆದ್ದರಿಂದ ಏರ್ ಫೋರ್ಸ್ ಸ್ಟೇಷನ್‌ನ ಹೊರಗಿನ ಆವರಣ ನೋಡಿಕೊಂಡು ಹೋಗುವುದು ಎಂದು ನಿರ್ಧರಿಸಿದೆವು. ತಿಂಡಿ ತಿಂದು ಬಂದ ಬಳಿಕವೂ ಆ ರಿಕ್ಷಾ ಅಲ್ಲೇ ನಿಂತಿತ್ತು. ಮತ್ತೆ ಅವರ ಬಳಿ ಹೋಗಿ ಅದೇ ಆಟೋದಲ್ಲಿ ಏರ್ಫೋರ್‍ಸ್ ಸ್ಟೇಷನ್ ನೋಡಲು ಹೊರಟೆವು. ಸ್ಟೇಷನ್‌ ಬಳಿ ತಲುಪುತ್ತಿದ್ದಂತೆಯೇ ಅಲ್ಲೊಂದು ದೊಡ್ಡ ಚರ್ಚ್ ಕಾಣಿಸಿತು. ೧೯೬೫ ಭಾರತ ಪಾಕಿಸ್ತಾನದ ಯುದ್ಧ ಸಂದರ್ಭದಲ್ಲಿ ಏರ್ ಫೋರ್ಸ್ ಸ್ಟೇಷನ್ ನ ಬಿಲ್ಡಿಂಗ್ ಅಮ್ದು ಕೊಂಡು ಪಾಕಿಸ್ತಾನ ಈ ಚರ್ಚ್ ಮೇಲೆ ಬಾಂಬ್ ಹಾಕಿತು. ನಂತರ ಇದನ್ನು ಪುನರ್ ನಿರ್ಮಿಸಲಾಯಿತು. ಹಾಗೇ ಆ ಚರ್ಚ್‌ನ ಹೊರಾಂಗಣದ ರಸ್ತೆಯಲ್ಲಿ ಸುತ್ತು ಹೊಡೆದು, ಅಲ್ಲಲ್ಲಿ ಇಟ್ಟಿದ್ದ ಹಳೇ ಯುದ್ಧ ವಿಮಾನಗಳನ್ನು ನೋಡುತ್ತಾ ಸಾಗಿದೆವು. ಪುನಃ ನಮ್ಮ ರೂಮ್‌ಗೆ ಬಂದು ಲಗೇಜ್ ತೆಗೆದುಕೊಂಡು ಅದೇ ಆಟೋದಲ್ಲಿ ರೈಲ್ವೇ ಸ್ಟೇಶನ್‌ಗೆ ಬಿಡುವಂತೆ ಹೇಳಿದೆವು. ರೈಲ್ವೇ ಸ್ಟೇಷನ್‌ನಲ್ಲಿ ಇಳಿದು ರಿಕ್ಷಾ ಚಾರ್ಜ್ ಎಷ್ಟಾಯಿತು ಎಂದು ಕೇಳಿದರೆ ಅವರಂತೂ, "ನೀವೇ ಕೊಡಿ ನಾನೇನೂ ಹೇಳುವುದಿಲ್ಲ" ಎಂದರು. ಎಷ್ಟೇ ಒತ್ತಾಯ ಮಾಡಿದರೂ ಅವರು ಹೇಳಲೇ ಇಲ್ಲ. ಆ ಬೆಳಗ್ಗೆ ಒಟ್ಟಿಗೇ ಅಂಬಾಲ ಸುತ್ತಾಡಿ, ಮಾತನಾಡಿ ಅವರ ಹಾಗೂ ನಮ್ಮ ಮಧ್ಯೆ ಒಂದೊಳ್ಳೆ ಬಾಂಧವ್ಯ ಬೆಳೆದಿತ್ತು. ರೈಲ್ವೇ ಸ್ಟೇಷನ್‌‌ಗೆ ಪ್ರವೇಶಿಸುತ್ತಿದ್ದಂತೆಯೇ ಒಂದು ಹಳೇ ರೈಲ್ವೇ ಇಂಜಿನ್ (ಆದರೆ ಪೈಂಟ್ ಮಾಡಿ ಅಂದ ಗೊಳಿಸಿದ್ದರು) ನಮ್ಮನ್ನು ಸ್ವಾಗತಿಸುತ್ತಿತ್ತು. ಇದು ಉಗಿ ಬಂಡಿಯಂತೆ, ಈ ರೈಲ್ ಓಡ ಬೇಕಾದರೆ ಟ್ರ್ಯಾಕ್ ಈಗಿರುವ ರೈಲ್ಗಳ ಟ್ರ್ಯಾಕ್ ಅಲ್ಲ. ಈಗಿರುವ ಟ್ರ್ಯಾಕ್‌ಗಳಿಗಿಂತ ಚಿಕ್ಕದು, ಮೀಟರ್ ಗೇಜ್. ಆಗಲೇ ೧೦.೧೫ ಆಗಿತ್ತು. ೧೦.೩೦ಕ್ಕೆ ನಮ್ಮ ಟ್ರೈನ್ ಬಂತು. ಅದೊಂದು ಲೋಕಲ್ ಟ್ರೈನ್. ಒಳಗಡೆ ಸೀಟ್‌ಗಳು ಬಸ್‌ನಲ್ಲಿರುವಂತೆ ಇತ್ತು. ಅಂಬಾಲದಿಂದ ಚಂಡೀಘಡಕ್ಕೆ ಕೇವಲ ಅರ್ಧ ಗಂಟೆಗಳ ಪ್ರಯಾಣ. ಅಂಬಾಲದಿಂದ ಚಂಡೀಘಡಕ್ಕೆ ಹೋಗುವ ರೈಲ್ವೇ ಟ್ರ್ಯಾಕ್‌ನ ಎರಡೂ ಬದಿಯಲ್ಲಿ ಹೊಲ ಗದ್ದೆಗಳನ್ನು ಕಾಣಬಹುದು, ಭತ್ತ, ಗೋಧಿ, ಕ್ಯಾಬೇಜ್ ಮುಂತಾದವುಗಳನ್ನು ಬೆಳೆದಿದ್ದರು. ಚಂಡೀಘಡದ ಹತ್ತಿರ ತಲುಪುವಾಗ ಹೊಲ ಗದ್ದೆಗಳು ಕೊನೆಯಾಗಿ ಅನೇಕ ಕಾರ್ಖಾನೆಗಳು ಇನ್ನಿತರ ಕಟ್ಟಡಗಳು ಕಾಣ ಸಿಗುತ್ತವೆ.
  ಹನ್ನೊಂದರ ಹೊತ್ತಿಗೆ ರೈಲು ಚಂಡೀಘಡ ರೈಲ್ವೇ ಸ್ಟೇಷನ್‌ನಲ್ಲಿ ನಿಂತಿತು. ನಾನು ಇದುವರೆಗೆ ನೋಡಿದ ರೈಲ್ವೇ ಸ್ಟೇಷನ್‌ಗಳಲ್ಲೇ ಅತ್ಯಂತ ಸ್ವಚ್ಛವಾದ ಹಾಗೂ ನೀಟ್ ಆಗಿದ್ದ ರೈಲ್ವೇ ಸ್ಟೇಷನ್ ಇದು. ಕೇವಲ ರೈಲ್ವೇ ಸ್ಟೇಷನ್ ಅಷ್ಟೇ ಅಲ್ಲ ಚಂಡೀ ಘಡ್ ಸಿಟಿಯೇ ತುಂಬಾ ಕ್ಲೀನ್ ಹಾಗೂ ನೀಟ್.
   ಇದು ಸ್ವಾತಂತ್ರ್ಯ ಪೂರ್ವದಲ್ಲೇ ಪ್ಲ್ಯಾನ್ ಮಾಡಿ ಕಟ್ಟಿದಂತಹ ಸಿಟಿ. ಈ ಸಿಟಿಯನ್ನು ಫ್ರಾನ್ಸ್‌ನ ವಾಸ್ತು ಶಿಲ್ಪ ತಜ್ಞರು ವಿನ್ಯಾಸಗೊಳಿಸಿದ್ದಾರೆ. ಸಿಟಿಯನ್ನು ಸೆಕ್ಟರ್‌ಗಳಾಗಿ ವಿಭಾಗಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಇದು ಹರಿಯಾಣ ಹಾಗೂ ಪಂಜಾಬ್‌‌ ಎರಡೂ ರಾಜ್ಯಗಳ ರಾಜಧಾನಿ. ಭಾರತ ವಿಭಜನೆಯಾದಂತಹ ಸಂದರ್ಭದಲ್ಲಿ ಪಂಜಾಬ್ ಕೂಡಾ ಎರಡು ಹೋಳಾಯಿತು, ಆಗ ಪಂಜಾಬ್‌ನ ರಾಜಧಾನಿ ಲಾಹೋರ್‌ ಇದ್ದಂತಹ ಭಾಗ ಪಾಕಿಸ್ತಾನದ ಪಾಲಾಯಿತು. ಹಾಗಾಗಿ ಪಂಜಾಬ್‌ಗೆ ಹೊಸ ರಾಜಧಾನಿ ನಿರ್ಮಿಸಲಾಯಿತು, ೧೯೪೯ ರಲ್ಲಿ ರಾಜಧಾನಿಯ ನಿರ್ಮಾಣ ಕಾರ್ಯ ಪ್ರಾರಂಭವಾಗಿ ೧೯೬೦ರಲ್ಲಿ ಪೂರ್ಣ ಗೊಂಡಿತು. ೧೯೬೬ರಲ್ಲಿ ಹರ್ಯಾಣವೂ ಪಂಜಾಬ್‌ನ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಯಿತು. ಹಾಗಾಗಿ ಚಂಡೀಘರ್‌ನ್ನು ಎರಡೂ ರಾಜ್ಯಗಳಿಗೆ ರಾಜಧಾನಿಯಾಗಿ ಮಾಡಲಾಯಿತು.  ಚಂಡೀ ಅಂದ್ರೆ ನಮ್ಗೆಲ್ಲಾ ಗೊತ್ತಿರುವ ಹಾಗೇ ದೇವಿಯ ಸ್ವರೂಪ, ಘರ್ ಅಂದ್ರೆ ಕೋಟೆ. ನಗರದ ಹತ್ತಿರದಲ್ಲಿ ಒಂದು ಚಂಡೀ ಮಂದಿರವಿದೆ. ಆದ್ದರಿಂದ ಇಲ್ಲಿಗೆ ಚಂಡೀ ಘರ್ ಎಂಬ ಹೆಸರು ಬಂತು ಎನ್ನುತ್ತಾರೆ.  ೧೮೯೦ , ೧೯೯೦ ರ ಸಮಯದಲ್ಲಿ ಉತ್ತರ ಅಮೇರಿಕಾದಲ್ಲಿ  City Beautiful movement ಅನ್ನುವಂತಹ ಒಂದು ಕಾಂನ್ಸೆಪ್ಟ್ ಬಂತು. ಚಂಡೀಘರ್‌ನ ಮೊದಲ ಹಂತದ ನಿರ್ಮಾಣದ ವಾಸ್ತು ಶಿಲ್ಪಿಯಾದ 'ಆಲ್ಬರ್ಟ್ ಮೇಯರ್' ಎಂಬಾತನಿಗೆ ಇದರ ಗಾಳಿ ಬೀಸಿತು, ಅವನೂ ಇದೇ ರೀತಿ ಸುಂದರವಾದ ನಗರ ನಿರ್ಮಿಸುವ ಕನಸು ಕಂಡ. ಬಹುಷಃ ಆ ಕನಸು ಸತ್ಯವಾಗಿದೆ. ನಗರವನ್ನು ಹೇಗೆಯೇ ನಿರ್ಮಿಸಿರಲಿ ಆದರೆ ಅದರ ಉಳಿವು ನಗರ ವಾಸಿಗಳ ಮೇಲೆ ಅವಲಂಬಿಸಿರುತ್ತದೆ. ಉಳಿದ ಕಡೆ ನಾನು ಗಮನಿಸಿದಂತೆ ಒಬ್ಬ ಕ್ಲೀನ್ ಮಾಡುತ್ತಾ ಹೋದಂತೆ ಜನ ಅಲ್ಲಿ ಉಗುಳೋದೋ ಕಸ ಹಾಕೋದೋ ಏನಾದ್ರು ಒಂದು ಮಾಡಿ ಅಲ್ಲಿನ ನೈರ್ಮಲ್ಯವನ್ನು ಹಾಳು ಮಾದುತ್ತಾರೆ. ಆದರೆ ಇಲ್ಲಿನ ಜನರ ಶಿಸ್ತನ್ನು ಕೂಡಾ ಗಮನಿಸಬೆಕು, ಯಾರೂ ಕೂಡ ಈ ಶುಚಿತ್ವವನ್ನು ಹಾಳು ಮಾಡೋದಕ್ಕೆ ಹೋಗುವುದಿಲ್ಲ. ಆದ್ದರಿಂದಲೇ ಆ ನಗರ ಭಾರತದ ಕ್ಲೀನೆಸ್ಟ್ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು. 'ಯುನೆಸ್ಕೋ' ಇಲ್ಲಿನ ಕ್ಯಾಪಿಟಲ್ ಕಾಂಪ್ಲೆಕ್ಸ್‌ನ್ನು 'ವರ್ಲ್ಡ್ ಹೆರಿಟೇಜ್' ಎಂದು ಘೋಷಣೆ ಮಾಡಿದೆ. ಈ ಕ್ಯಾಪಿಟಲ್ ಕಾಂಪ್ಲೆಕ್ಸ್ ನಲ್ಲೇ ಹರ್ಯಾಣ ಹಾಗೂ ಪಂಜಾಬ್‌ಗಳ ಹೈಕೋರ್ಟ್‌ಗಳಿರುವುದು. ಜೊತೆಗೆ ಎರಡೂ ರಾಜ್ಯಗಳ ಸಚಿವಾಲಯ ಹಾಗೂ ಇನ್ನಿತರ ಆಡಳಿತ ಸೌಧಗಳಿವೆ. ಈ ಸಿಟಿಯ ಪರಿಚಯ ಹೇಳ್ಬೇಕಾದ್ರೆ, ಅಭಿನವ್ ಬಿಂದ್ರಾ ನ ಊರು, ಯುವರಾಜ್ ಸಿಂಗ್‌ನ ಊರು.
  ರೈಲ್ವೇ ಸ್ಟೇಷನ್‌ನ ಕ್ಲಾಕ್ ರೂಮ್‌ನಲ್ಲಿ ನಮ್ಮ ಲಗೇಜ್‌ ಇಟ್ಟು ಹೊರ ಬಂದೆವು. ಅಲ್ಲಿ ಸುಂದರವಾದ ಕಲ್ಲಿನ ಶಿಲ್ಪಗಳಿದ್ದವು, ರೈತ, ಕಾರ್ಮಿಕ ಹೀಗೆ ಕೆಲವೊಂದು ಕಲ್ಲಿನ ಮೂರ್ತಿಗಳು. ಇನ್ನೊಂದು ಬದಿ ಅಂಬಾಲದಲ್ಲಿ ಇದ್ದಂತೆಯೇ ಹಳೇ ರೈಲ್ ಇಂಜಿನ್‌ ಒಂದನ್ನು ಇಟ್ಟಿದ್ದರು. ಅಲ್ಲಿಂದ ೧೭ ಕಿ.ಮೀ ದೂರದಲ್ಲಿರುವ 'ಚಟ್ ಭೀರ್ ಝೂ' ನೋಡಲು ಓಲಾದಲ್ಲಿ ಹೊರಟೆವು. ಆ ಡ್ರೈವರ್ ದಾರಿಯುದ್ದಕ್ಕೂ ರಾಜಕೀಯದ ಬಗ್ಗೆಯೇ ಮಾತನಾಡುತ್ತಿದ್ದ, ಕೆಲವೊಮ್ಮೆ ಕೆಲವೊಂದು ಸ್ಥಳಗಳ ಬಗ್ಗೆ ಏನಾದರೂ ಅಲ್ಪ ಸ್ವಲ್ಪ ಹೇಳುತ್ತಿದ್ದ.

ರೈಲ್ವೇ ಸ್ಟೇಷನ್ ಬಳಿ ಇದ್ದ ವಿಶಿಷ್ಟವಾದ ಕಲ್ಲಿನ ಮೂರ್ತಿಗಳು
'ಚಟ್ ಭೀರ್ ಝೂ
  ಜ಼ೂ ನ ಪ್ರವೇಶದ್ವಾರದಲ್ಲಿ ಟಿಕೆಟ್ ಪಡೆಯ ಬೇಕಿತ್ತು. ಜ಼ೂ ಒಳಗೆ ಪ್ರವೇಶಿಸುವುದಕ್ಕೂ ಮುನ್ನ ನಾವು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ಒಯ್ಯುತ್ತಿದ್ದರೆ ಒಂದು ಬಾಟಲ್‌ಗೆ ೩೦ ರೂಪಾಯಿಯಂತೆ ಹಣ ಪಾವತಿಸ ಬೇಕಿತ್ತು. ನಾವು ಮರಳಿ ಬರುವಾಗ ಬಾಟಲ್‌ ನಮ್ಮಲ್ಲೇ ಇದ್ದರೆ ಆ ಹಣವನ್ನು ವಾಪಾಸ್ ನೀಡುತ್ತಾರೆ.  ಹಣ ಪಾವತಿಸಿಕೊಂಡರೆ ಪ್ರವಾಸಿಗರು ಬಾಟಲ್‌ಗಳನ್ನು ಅಲ್ಲಲ್ಲಿ ಎಸೆಯುವುದನ್ನು ತಪ್ಪಿಸಬಹುದು. ಈ ನಿಯಮ ನಿಜಕ್ಕೂ ಒಳ್ಳೆಯ ವಿಚಾರ. 'ಮಹೇಂದ್ರ ಚೌಧರಿ ಜ಼ೂಲಾಜಿಕಲ್' ಪಾರ್ಕ್(ಛಟ್ ಭಿರ್ ಜ಼ೂ) ೧೯೭೭ ರಲ್ಲಿ ಉದ್ಘಾಟನೆಗೊಂಡಿತು. ಚಿಕ್ಕದಾಗಿ ಪ್ರಾರಂಭವಾದ ಈ ಜ಼ೂ ವಿಗೆ ಮೊದಲು ಅಸ್ಸಾಂ ನ ಗುವಾಹಟಿ ಜ಼ೂ ನಿಂದ ಪ್ರಾಣಿಗಳನ್ನು ತರಲಾಯಿತು. ಬೆಂಗಾಲಿ ಹುಲಿ, ಬಿಳಿ ಹುಲಿ, ಚಿರತೆಗಲು, ಕರಡಿಗಳು, ಹಿಪೋಪೊಟಾಮಸ್ , ಸೇರಿದಂತೆ ಹಲವು ಪ್ರಾನಿಗಳು ವಿಧ ವಿಧವಾದ ಪಕ್ಶಿಗಳು, ಸರೀಸೃಪಗಳು ಹಾಗೂ ಅನೇಕ ಪ್ರಾಣಿಗಳನ್ನು ಕಾಣಬಹುದು. ಝೂ ನ ಒಳಗಡೆ ನಡೆಯುತ್ತಾ ಸಾಗಿದೆವು. ನಡೆಯಲು ಕಷ್ಟ ಆಗುವವರಿಗೆ ಇಲೆಕ್ಟ್ರಿಕ್ ಗಾಡಿಯ ವ್ಯವಸ್ಥೆಯೂ ಇದೆ. ಮೊದಲಿಗೆ ಹುಲಿ ಕಂಡಿತು. ಒಂಟಿ ಹುಲಿಯೊಂದು ತನ್ನ ಪಾಡಿಗೆ ಮಲಗಿತ್ತು, ಹುಲಿಯ ವಾಸಸ್ಥಳದ ಸುತ್ತಲೂ ಕಂದಕವನ್ನು ನಿರ್ಮಾಣ ಮಾಡಿ ಅದರ ಸುತ್ತ ತಂತು ಬೇಲಿ ಹಾಕಿ ಹುಲಿಗೆ ಅದನ್ನು ದಾಟಿ ಬರಲಾಗದಂತೆ  ಆ ಸ್ಥಳವನ್ನು ನಿರ್ಮಾಣ ಮಾಡಿದ್ದರು. ಹುಲಿಗೆ ಅಲ್ಲಿಂದ ತಪ್ಪಿಸಿಕೊಂಡು ಹೊರ ಬರಲು ಸಾಧ್ಯವೇ ಇಲ್ಲ. ಹೆಚ್ಚಿನ ಎಲ್ಲಾ ಕ್ರೂರ ಪ್ರಾಣಿಗಳನ್ನು ಇದೇ ರೀತಿ ಇಟ್ಟಿದ್ದಾರೆ. ಇದು ಗೂಡಲ್ಲ, ಅವುಗಳ ವಾಸಕ್ಕಾಗಿ ಒಂದಷ್ಟು ಸ್ಥಳ ಬಿಟ್ಟು ಸುತ್ತಲೂ ಭದ್ರತೆಗಾಗಿ ಈ ರೀತಿಯ ನಿರ್ಮಾಣ. ಅಲ್ಲಿಂದ ಮುಂದೆ ಹೋದಾಗ ಬಿಳಿ ಹುಲಿ ಕಂಡಿತು. ನಂತರ ಮೂರು ಬೇರೆ ಬೇರೆ ಜಾತಿಯ ಚಿರತೆಗಳು, ಕರಡಿಗಳು, ಹಿಗೆ ನೋಡುತ್ತಾ ಸುಂದರವಾದ ಪಕ್ಷಿಗಳು, ಹಾವುಗಳು, ಆಮೆಗಳು, ಮೊಸಳೆಗಳು, ಜಿಂಕೆ, ಕೃಷ್ಣ ಮೃಗ ಹೀಗೆ ಅನೇಕ ಪ್ರಾಣಿಗಳನ್ನು ನೋಡುತ್ತಾ ಫೋಟೋ ಕ್ಲಿಕ್ಕಿಸುತ್ತಾ ಸಾಗಿದೆವು. ಕೊನೆ ಕೊನೆಗೆ ನಡೆದು ನಡೆದು ಸುಸ್ತಾಗತೊಡಗಿತು.  ಹೇಗೋ ಜ಼ೂ ವಿನಿಂದ ಹೊರಬಂದು, ೩೦ ರೂ ವಾಪಾಸ್ ಪಡೆದು, ಅಲ್ಲಿದ್ದ ಸಣ್ಣ ಕ್ಯಾಂಟೀನ್ ಒಂದರಲ್ಲಿ ಜ್ಯೂಸ್ ಕುಡಿದಾಗ ಉಲ್ಲಾಸವಾಯಿತು. ಪ್ರಾಣಿ ಪಕ್ಷಿಗಳನ್ನು ನೋಡಿ ನೋಡಿ ಸುಸ್ತಾಯಿತು ಅನ್ನುವುದು ಬಿಟ್ಟರೆ ಇದು ಅದ್ಭುತವಾದಂತಹ ಜ಼ೂ ಅನ್ನುವುದನ್ನು ಒಪ್ಪಲೇ ಬೇಕು. ಎಲ್ಲೆಲ್ಲೋ ಎಂತೆಂಥಾ ಪ್ರದೇಶಗಳಲ್ಲೋ ಜೀವಿಸುವ ಜೀವಿಗಳನ್ನು ಇಲ್ಲಿ ತಂದು ಅದಕ್ಕೆ ಬೇಕಾದಂತಹ ವಾತಾವರಣ ಹಾಗೂ ವಾಸಸ್ಥಳ ನಿರ್ಮಾಣ ಮಾಡಿಕೊಟ್ಟು ಅವುಗಳ ಆಹಾರ, ಸಂತಾನೋತ್ಪತ್ತಿ, ಆರೋಗ್ಯ, ಜೀವನ ಶೈಲಿ ಯಾವುದಕ್ಕೂ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಸುಲಭದ ಮಾತಲ್ಲ. ಪ್ರಾಣಿಗಳಷ್ಟೇ ಅಲ್ಲ ವಿವಿಧ ರೀತಿಯ ಸಸ್ಯ ಸಂಕುಲಗಳನ್ನು ಅಲ್ಲಿ ಕಾಣಬಹುದು. ಜೀವ ವಿಜ್ಞಾನದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಎಲ್ಲರೂ ಭೇಟಿ ಮಾಡಲೇ ಬೇಕಾದಂತಹ ಸ್ಥಳ. ಅಲ್ಲಿಂದ ಮತ್ತೆ ಸಿಟಿಗೆ ಹೋಗಲು ಬಸ್‌ ಹತ್ತಿದೆವು. ಇಲ್ಲಿನ ಬಸ್‌ಗಳು ತುಂಬಾ ಚೆನ್ನಾಗಿತ್ತು. ಹಳ್ಳಿ ಪ್ರದೇಶಗಳಿಗೆ ಬರುವ ಸರಕಾರಿ ಬಸ್‌ಗಳಾಗಿದ್ದರೂ (ಪಂಜಾಬ್ ರೋಡ್ ಟ್ರಾನ್ಸ್ಪೋರ್ಟ್) ಅಟೋಮೆಟಿಕ್ ಡೋರ್, ಎಸಿ ಬಸ್‌ಗಳು. ರಸ್ತೆಗಳೂ ಅಷ್ಟೇ ಅಚ್ಚುಕಟ್ಟಾಗಿದ್ದವು. ರಸ್ತೆ ಬದಿಯಲ್ಲಿ ಹಾಗೂ ಎರಡೂ ರಸ್ತೆಗಳ ಮಧ್ಯದಲ್ಲಿ ಮರಗಳು ಹಾಗೂ ಗಾರ್ಡನ್. ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸುವ ಅಲ್ಲಿನ ಪ್ರಜ್ಞಾವಂತ ನಾಗರಿಕರು. ಸೆಕ್ಟರ್ ಸೆಕ್ಟರ್‌ಗಳಾಗಿ ವಿಭಾಗಿಸಲಾಗಿದ್ದ ಆ ನಗರ, ನಮಗಂತೂ ಚಂಡೀಘಡ ಬಹಳ ಇಷ್ಟವಾಯಿತು. ಆ ಬಸ್‌ನಿಂದ ಇಳಿದು ಇನ್ನೊಂದು ಬಸ್ ಹತ್ತಿದೆವು. ಇಲ್ಲಿ ಮಾತ್ರ ಯಾವ ಬಸ್ ಹತ್ತಬೇಕೆಂದು ತಿಳಿಯದೆ ಸ್ವಲ್ಪ ಗಲಿಬಿಲಿಗೊಂಡೆವು, ನಂತರ ಅಲ್ಲಿದ್ದ ಕೆಲವರಲ್ಲಿ ವಿಚಾರಿಸಿ ಹೇಗೋ ಒಂದನೆ ಸೆಕ್ಟರ್‌ನಲ್ಲಿರುವ ರಾಕ್ ಗಾರ್ಡನ್ ಬಳಿ ಹೋಗುವ ಒಂದು ಬಸ್ ಹತ್ತಿದೆವು.






















ರಾಕ್ ಗಾರ್ಡನ್
   ೪೦ ಎಕ್ರೆಗಳಷ್ಟು ವಿಸ್ತಾರದಲ್ಲಿರುವ ಈ ರಾಕ್ ಗಾರ್ಡನ್‌ನ ನಿರ್ಮಾತೃ 'ನೆಕ್ ಚಂದ್' ಎಂಬವರು. ಕಾರ್ಖಾನೆಗಳಲ್ಲಿ, ಮನೆಗಳಲ್ಲಿ ಬೇಡ ಎಂದು ಎಸೆದ ವಸ್ತುಗಳನ್ನು ಸಂಗ್ರಹಿಸಿ ೧೯೫೭ರಲ್ಲಿ ಈ ಗಾರ್ಡನ್‌ನ್ನು ನಿರ್ಮಿಸಲಾಯಿತು. ನಯನ ಮನೋಹರವಾದ ಈ ಗಾರ್ಡನ್‌ನ್ನು ನಿರ್ಮಿಸಿದವರ ಸೃಜನ ಶೀಲತೆ, ಕಲ್ಪನೆ ಹಾಗೂ ಆಲೋಚನೆಗಳು ನಿಜಕ್ಕೂ ಅದ್ಭುತ. ಚಂಡೀಘಡಕ್ಕೆ ಬಂದರೆ ನೋಡಲೇ ಬೇಕಾದ ಜಾಗವಿದು. ಸಿರಾಮಿಕ್‌ಗಳು, ಗ್ರನೈಟ್ ತುಂಡುಗಳು, ಗಾಜಿನ ತುಂಡುಗಳು, ಬಳೆಗಳು, ಎಲೆಕ್ಟ್ರಿಕಲ್ ವೇಸ್ಟ್‌ಗಳು, ಬಾಟಲ್‌ಗಳು, ಮಣ್ಣಿನ ಪಾತ್ರೆಯ ಅವಶೇಷಗಳು, ತುಂಡಾದ ಪೈಪ್‌ಗಳು ಹೀಗೆ ಅನೇಕ ವೇಸ್ಟ್ ವಸ್ತುಗಳನ್ನು ಬಳಸಿಕೊಂಡು ಮೂರ್ತಿಗಳು, ಕಲಾಕೃತಿಗಳು ಕೃತಕ ಜಲಪಾತಗಳು, ಕಲ್ಲಿನ ಗೋಡೆಗಳು ಮುಂತಾದವುಗಳನ್ನು ನಿರ್ಮಿಸಲಾಗಿದೆ. ಇವುಗಳನ್ನೆಲ್ಲಾ ನೋಡುತ್ತಾ ಸಾಗಿದೆವು. ನಡೆದಷ್ಟೂ ಮುಗಿಯದು, ಎಲ್ಲಿ ನೋಡಿದರೂ ಕಲಾಕೃತಿಗಳೇ. ಮನೆ, ಗೊಂಬೆ, ಮನುಷ್ಯಾಕೃತಿ, ಮನುಷ್ಯನ ಮುಖವಾಡಗಳು, ಕೆಲವೊಂದು ಥೀಮ್‌ಗಳನ್ನಿಟ್ಟುಕೊಂಡು ರಚಿಸಿದ ಶಿಲ್ಪಗಳು, ಗುಹೆಯಾಕಾರದ ಹಾದಿಗಳು, ಥಟನೆ ಎದುರಾಗುತ್ತಿದ್ದ ಸುಂದರವಾದ ಕೃತಕ ಜಲಪಾತಗಳು, ಬೇರುಗಳು ಬಿಡಿಸಲಾರದಂತೆ ಸುತ್ತಿಕೊಂಡಿರುವ ಕಲ್ಲಿನ ಸಿಮೆಂಟ್‌ನ ಮರಗಳು. ಹೀಗೆ. ಇಲ್ಲೂ ಅಷ್ಟೇ ನನಗಂತೂ ನಡೆದು ಸುಸ್ತಾಯಿತು. ಮಧ್ಯಾಹ್ನ ಊಟವೂ ಮಾಡಿರಲಿಲ್ಲ, ಆಗಲೇ ಸಂಜೆ ೪ ಗಂಟೆ ದಾಟಿತ್ತು. ಕೊನೆಯದಾಗಿ ಅಲ್ಲೊಂದು ವೇಸ್ಟ್ ಬಟ್ಟೆಗಳಿಂದ ತಯಾರಿಸಿದ ಗೊಂಬೆಗಳ ಊರಿತ್ತು. ಅದರೊಳಗೆ ಹೋದೆವು. ೧೯೭೦ರ ದಶಕದಲ್ಲಿ ನೆಕ್ ಚಾಂದ್‌ರವರು ಟೈಲರ್‌ಗಳ ಅಂಗಡಿಗಳಿಂದ ಕತ್ತರಿಸಿ ಬಿಸಾಕಿದ ಬಟ್ಟೆಗಳನ್ನು ಸಂಗ್ರಹಿಸಿ ಗೊಂಬೆಗಳನ್ನು ತಯಾರಿಸಿದರು. ಅವುಗಳನ್ನು ಲೈಟಿಂಗ್‌ನೊಂದಿಗೆ ಅಚ್ಚುಕಟ್ಟಾಗಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಮತ್ತೆ ಒಳಗಡೆ ಹೋದ ದಾರಿಯಲ್ಲೇ ನಡೆಯುತ್ತಾ ಬಂದು ರಾಕ್ ಗಾರ್ಡನ್‌ನಿಂದ ಹೊರ ಬಂದೆವು. ಅಲ್ಲೇ ಹೊರಗಡೆ ಹುಡುಗರು ಎಳನೀರು ಮಾರಾಟ ಮಾಡ್ತಿದ್ರು. ಊಟಕ್ಕೆ ಸಮಯ ಇಲ್ಲದ ಕಾರಣ ಅಲ್ಲಿ ಎಳನೀರ್ ಕುಡಿದು, ಸುಖ್ನಾ ಲೇಖ್ ನೋಡಲು ಹೊರಟೆವು.




















ಸುಖ್ನಾ ಲೇಕ್
  ರಾಕ್ ಗಾರ್ಡನ್‌ನಿಂದ ಆಟೋ ಒಂದರಲ್ಲಿ ಸುಖ್ನಾ ಲೇಕ್‌ಗೆ ಹೋದೆವು. ಇಲ್ಲಿಗೆ ಬರುವವರು ಸರೋವರದ ಸೌಂದರ್ಯ ಸವಿಯಲು ಬರುವುದಿಲ್ಲ ಅನಿಸುತ್ತದೆ. ಮುಖ್ಯವಾಗಿ ಈ ಸರೋವರದಲ್ಲಿ ಬೋಟಿಂಗ್ ಅವಕಾಶ ನೀಡಲಾಗಿದೆ. ಹೆಚ್ಚಿನವರು ಮೋಜು ಮಸ್ತಿ ಮಾಡಲೆಂದೇ ಇಲ್ಲಿಗೆ ಬರುತ್ತಾರೆ. ಕಣ್ಣು ಚಾಚಿದಷ್ಟು ದೂರವೂ ನೀರೇ ನೀರು. ಹಸಿರಾಗಿ ಕಾಣುವ ನೀರಿನಲ್ಲಿ ತೇಲುತ್ತಿರುವ ಬೋಟ್‌ಗಳು. ನಾವೂ ಬೋಟಿಂಗ್ ಮಾಡಿದೆವು. ನಂತರ ಅಲ್ಲಿನ ಹೋಟೆಲ್ ಒಂದರಲ್ಲಿ ತಿಂಡಿ ತಿಂದು ರೋಸ್ ಗಾರ್ಡನ್ ನೋಡಲು ಹೊರಟೆವು. ಸುಖ್ನಾ ಲೇಕ್‌ನ ಪ್ರವೇಶ ದ್ವಾರದ ಬಳಿ ಗೋಲ್ ಗಪ್ಪಾ ತಿಂದು ಓಲಾ ಬುಕ್ ಮಾಡಿದೆವು. ಓಲಾದಲ್ಲಿ ರೋಸ್ ಗಾರ್ಡನ್‌ಗೆ ಹೋದೆವು. ಈ ಸಮಯದಲ್ಲಿ ರೋಸ್ ಗಾರ್ಡನ್ ಚೆನ್ನಾಗಿರುವುದಿಲ್ಲ ಎಂದು ಅಂಬಾಲದಲ್ಲಿ ಸಿಕ್ಕಿದ್ದ ಆಟೋ ಡ್ರೈವರ್ ಹೇಳಿದ್ದರು. ಈಗ ಓಲಾದ ಡ್ರೈವರ್ ಕೂಡಾ ಹಾಗೇ ಹೇಳಿದರು. ನಮ್ಮ ಬಗ್ಗೆ ವಿಚಾರಿಸಿದ ಓಲಾ ಡ್ರೈವರ್ ಶಿಮ್ಲಾಕ್ಕೆ ಹೋಗುತ್ತಿದ್ದೇವೆ ಎಂದಾಗ "ಹೋ, ಟಾಯ್ ಟ್ರೈನ್‌ನಲ್ಲಿ ಹೋಗುವುದೋ? ಅಲ್ಲೆಲ್ಲಾ ಆ ಚಿಕ್ಕ ಟ್ರೈನ್ ಮಾತ್ರ ಹೋಗುತ್ತದೆ, ನ್ಯಾರೋ ಗೇಜ್" ಎಂದ. ನಾವಿಂದು ಕಲ್ಕಾ ಎಂಬಲ್ಲಿಗೆ ಹೋಗಬೇಕಿತ್ತು. ನಾಳೆ ಶಿಮ್ಲಾ ಗೆ ಹೋಗುವ ಟ್ರೈನ್ ಬೆಳಗ್ಗೆ ೬ ಗಂಟೆಗೆ ಕಲ್ಕಾ ರೈಲ್ವೇ ಸ್ಟೇಷನ್‌ನಿಂದ ಹೊರಡುವುದು. ಚಂಡೀ ಘಡದಲ್ಲಿ ಉಳಿದುಕೊಂಡರೆ ನಾಳೆ ಬೆಳಗ್ಗೆ ಕಲ್ಕಾ ಗೆ ತಲುಪುವುದು ಕಷ್ಟ. ಆದ್ದರಿಂದ ಇಂದೇ ಹೋಗುವುದೆಂದು ಆಲೋಚಿಸಿ ಕಲ್ಕಾದಲ್ಲಿ ರೂಮ್ ಬುಕ್ ಮಾಡಿದ್ದೆವು. ಆದರೆ ಚಂಡೀ ಘಡದಿಂದ ಕಲ್ಕಾ ಗೆ ಟ್ರೈನ್ ಇರುವುದು ರಾತ್ರಿ ೧೦ ಗಂಟೆಗೆ. ನಮ್ಮ ಪ್ಲಾನ್ ಪ್ರಕಾರ ರೋಸ್ ಗಾರ್ಡನ್ ನೋಡಿದರೆ ಚಂಡೀಘಡದಲ್ಲಿ ನಾವು ಹೋಗಬೇಕಂದುಕೊಂಡಿದ್ದ ಸ್ಥಳಗಳು ಮುಗಿಯುತ್ತವೆ. ಆಗ ಸಮಯ ೬ ಗಂಟೆ ಆಗಿತ್ತಷ್ಟೇ. ರೋಸ್ ಗಾರ್ಡನ್ ಗೆ ಹೋದರೂ ೮ ಗಂಟೆಯ ಒಳಗೆ ನಾವು ರೈಲ್ವೇ ಸ್ಟೇಷನ್  ತಲುಪುತ್ತೇವೆ. ಮತ್ತೆ ೧೦ ಗಂಟೆಯ ತನಕ ಕುಳಿತುಕೊಳ್ಳಬೇಕಿತ್ತು. ೮ ಗಂಟೆಗೆ ಶತಾಬ್ದಿ ಟ್ರೈನ್ ಚಂಡೀ ಘಡದಿಂದ ಕಲ್ಕಾಕ್ಕೆ ಹೋಗುವುದಿತ್ತು. ಆದರೆ ನಾವು ಟಿಕೆಟ್ ಕಾಯ್ದಿರಿಸಿರಲಿಲ್ಲ. ೧೦ ಗಂಟೆಯ ಮೊದಲು ಬೇರೆ ರೈಲ್ ಇದೆಯೇ ಎಂದು ಓಲಾ ಡ್ರೈವರ್ ಬಳಿ ಕೇಳಿದಾಗ ಆತ ' ಶತಾಬ್ದಿ' ಎಕ್ಸ್‌ಪ್ರೆಸ್ ಒಂದೇ ಇರುವುದು ಎಂದ. ನಾವು ಟಿಕೆಟ್ ಬುಕ್ ಮಾಡಲಿಲ್ಲ ಎಂದಾಗ, " ಅರೆ ಸಾಬ್, ನೀವು ಜೆನೆರಲ್ ಟಿಕೆಟ್ ಮಾಡಿ, ಈ ಟ್ರೈನ್ ಬಂದಾಗ ಹತ್ತಿಕೊಳ್ಳಿ, ಚಂಡೀಘಡದಿಂದ ಕಲ್ಕಾ ತುಂಬಾ ದೂರ ಇಲ್ಲ, ಕಲ್ಕಾ ಲಾಸ್ಟ್ ಸ್ಟಾಪ್, ಹಾಗಾಗಿ ಟಿ.ಸಿ ಬರುವ ಚಾನ್ಸ್ ತುಂಬಾ ಕಡಿಮೆ, ಬಂದರೆ ರಿಕ್ವೆಸ್ಟ್ ಮಾಡಿ ಒಪ್ಪುತ್ತಾರೆ, ಎಂದು ಹೇಳಿದ" ಆಗಲೇ ರೋಸ್ ಗಾರ್ಡನ್ ತಲುಪಿದ್ದೆವು. ಸುಖ್ನಾ ಲೇಕ್‌ನಿಂದ ರೋಸ್ ಗಾರ್ಡನ್‌ಗೆ ಎರಡು ಮೂರು ನಿಮಿಷಗಳ ಹಾದಿ.


ಬೋಟಿಂಗ್ @ ಸುಖ್ನಾ ಲೇಕ್

ರೋಸ್ ಗಾರ್ಡನ್
  ಭಾರತದ ಮಾಜಿ ಅಧ್ಯಕ್ಷರಾದ 'ಜಾಕಿರ್ ಹುಸೈನ್‌'ರ ಹೆಸರನ್ನು ಈ ಗಾರ್ಡನ್‌ಗೆ ಇಡಲಾಗಿದೆ. 1967 ರಲ್ಲಿ ಚಂಡೀಗಢದ ಮೊದಲ ಮುಖ್ಯ ಕಮಿಷನರ್ ಡಾ. ಎಂ.ಎಸ್. ರಾಂಧವ ಎಂಬವರ ಮಾರ್ಗದರ್ಶನದಲ್ಲಿ ಈ ಗುಲಾಬಿ ತೋಟವನ್ನು ನಿರ್ಮಿಸಲಾಯಿತು. ಇದು ಏಷ್ಯಾದ ಅತಿ ದೊಡ್ಡ ರೋಸ್ ಗಾರ್ಡನ್. ಇಲ್ಲಿ ಗುಲಾಬಿ ಗಿಡಗಳು ಮಾತ್ರವಲ್ಲ, ಕೆಲವು ಬಗೆಯ ಮರಗಳು ಕೂಡ ಇವೆ. ವರ್ಷಕ್ಕೊಮ್ಮೆ ಇಲ್ಲಿ 'ಗುಲಾಬಿ ಉತ್ಸವ'ವನ್ನು (ರೋಸ್ ಫೆಸ್ಟಿವಾಲ್) ಆಯೋಜಿಸುತ್ತಾರೆ. ಇದು ಹೆಚ್ಚಾಗಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಇರುತ್ತದೆ.
 'ಝಾಕಿರ್ ಹುಸೇನ್ ರೋಸ್ ಗಾರ್ಡನ್'ನ ಪ್ರವೇಶ ದ್ವಾರದ ಬಲ ಬದಿಯಲ್ಲಿ ಬೇರೆ ಬೇರೆ ಗುಲಾಬಿ ಹೂವುಗಳ ಫೋಟೋ ಹಾಕಿ ಜನವರಿಯಿಂದ ಡಿಸೆಂಬರ್ ತನಕ ಯಾವ ಯಾವ ಹೂವು ಯಾವ ಯಾವ ಕಾಲದಲ್ಲಿ ಇರುತ್ತದೆ ಎಂಬ ಮಾಹಿತಿಯ ದೊಡ್ಡ ಫಲಕ ಹಾಕಿದ್ದರು. ಹೊರಗಡೆ ಕೆಲವು ಹೂವಿನ ಗಿಡಗಳಿದ್ದವು. ತುಂಬಾ ಜನ ಇಲ್ಲಿಗೆ ಸಾಯಂಕಾಲದ ಸಮಯ ವಾಕಿಂಗ್ ಗೆ ಹಾಗೇ ವ್ಯಾಯಾಮ ಮಾಡಲು ಬರುತ್ತಿರುತ್ತಾರೆ. ಸುಮಾರು ೩೦ ಎಕ್ರೆ ಪ್ರದೇಶದಲ್ಲಿ ನಾನಾ ವಿಧದ ಗುಲಾಬಿ ಗಿಡಗಳನ್ನು ಬೆಳೆಸಲಾಗಿತ್ತು. ಬೇರೆ ಬೇರೆ ಬಣ್ಣಗಳ, ಸುವಾಸನೆಯುಳ್ಳ ನಾನಾ ಜಾತಿಯ ಗುಲಾಬಿಗಳು ಅಲ್ಲಿದ್ದವು. ಇಲ್ಲಿ ೧,೬೦೦ ವಿಧದ (ಬೇರೆ ಬೇರೆ ಜಾತಿಯ)  ಸುಮಾರು ೫೦,೦೦೦ ಗಿಡಗಳು ಗುಲಾಬಿ ಗಿಡಗಳಿವೆಯಂತೆ.  ಆದರೆ ಹಲವು ಗಿಡಗಳಲ್ಲಿ ಹೂವುಗಳು ಒಣಗಿದ್ದವು, ಇನ್ನು ಹಲವು ಗಿಡಗಳಲ್ಲಿ ಹೂವು ಬಿಟ್ಟಿರಲಿಲ್ಲ. ಆಟೋ ಡ್ರೈವರ್ ಹೇಳಿದಂತೆ ಇದು ರೋಸ್ ಗಾರ್ಡನ್ ನೋಡಲು ಸೂಕ್ತ ಸಮಯವಲ್ಲ ಅನಿಸಿತು.  ಆಗಲೇ ಸುಸ್ತಾಗಿದ್ದರಿಂದ, ಹೆಚ್ಚು ಹೂವುಗಳು ಅಲ್ಲಿ ಇಲ್ಲವಾದ್ದರಿಂದ ಗಾರ್ಡನ್ ಫುಲ್ ನಾವು ಸುತ್ತು ಹಾಕಲಿಲ್ಲ. ಒಂಚೂರು ದೂರ ನಡೆದು ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತುಕೊಂಡೆವು. ಫೋಟೋ ಕ್ಲಿಕ್ಕಿಸಿದೆವು. ಎರಡು ಮೂರು ಸಣ್ಣ ಹುಡುಗರು ಬೇಲ್ ಪೂರಿ ಮಾರುತ್ತಾ ಬಂದರು. ಹೆಚ್ಚಿನವರು ವಾಕಿಂಗ್ ಎಕ್ಸೆರ್ ಸೈಜ಼್ ಮಾಡುತ್ತಾ ಬಿಸಿಯಾಗಿದ್ದರೆ, ಇನ್ನೂ ಕೆಲವರು ಹರಟುತ್ತಾ ಕುಳಿತಿದ್ದರು. ಮಳೆ ಬರುವ ಲಕ್ಷಣ ಇತ್ತು. ಸ್ವಲ್ಪ ಹೊತ್ತು ಅಲ್ಲಿನ ಹುಲ್ಲು ಹಾಸಿನ ಮೇಲೆ ಕುಳಿತು ನಂತರ ಅಲ್ಲೇ ಇನ್ನೊಂದು ಬದಿಯಲ್ಲಿದ್ದ ಕಮಾನಿನ ಬಳಿ ಬಂದೆವು. ಕಮಾನಿನ ಮೇಲೆ ಮಾಡು ಇದ್ದುದರಿಂದ ಮಳೆ ಬಂದರೆ ಒದ್ದೆಯಾಗುವ ಚಾನ್ಸ್ ಇರಲಿಲ್ಲ. ಆಗಲೇ ಕತ್ತಲಾಗುತ್ತಾ ಬಂತು. ಎಲ್ಲರೂ ಅಲ್ಲಿಂದ ತೆರಳುತ್ತಿದ್ದರು. ಬೇಲ್ ಪುರಿ ಮಾರುತ್ತಿದ್ದ ಹುಡುಗರು ಹಾಗೂ ನಾವು ಅಲ್ಲಿದ್ದ ಕಮಾನಿನ ಅಡಿಯಲ್ಲಿ ಕಲ್ಲಿನ ಬೆಂಚಿನಲ್ಲಿ ಕುಳಿತಿದ್ದೆವು. ಅವರು ತಮ್ಮಷ್ಟಕ್ಕೇ ಏನೇನೋ ಹರಟುತ್ತಿದ್ದರು, ನಗುತ್ತಿದ್ದರು. ಮಳೆ ಸಣ್ಣಗೆ ಬಂದು ಬಿಟ್ಟ ನಂತರ ಅಲ್ಲಿಂದ ಹೊರಟೆವು. ರಿಕ್ಷಾವೊಂದರಲ್ಲಿ ರೈಲ್ವೇ ಸ್ಟೇಷನ್ ತಲುಪಿದೆವು.





    ಕಲ್ಕಾ ಗೆ ಹೋಗಲು ಟಿಕೆಟ್‌ಗಾಗಿ ಕೌಂಟರ್ ಬಳಿ ಬಂದರೆ ಆಗಲೇ ಅಲ್ಲಿ ಸಾಲು ಹನುಮಂತನ ಬಾಲದಂತೆ ಬೆಳೆದಿತ್ತು. ಅಟೋಮೆಟಿಕ್ ಮೆಷಿನ್‌ಗಳು ಕೆಟ್ಟು ಹೋಗಿದ್ದವು. ಮಹಿಳೆಯರ ಸಾಲು ಚಿಕ್ಕದಿತ್ತು, ಮಹಿ ಕ್ಲಾಕ್ ರೂಮಿನಿಂದ ನಮ್ಮ ಲಗೇಜ್ ತರಲು ಹೋದರೆ ನಾನು ಟಿಕೆಟ್‌ಗಾಗಿ ಮಹಿಳೆಯರ ಸಾಲಿನಲ್ಲಿ ನಿಂತೆ. ಟಿಕೆಟ್ ತೆಗೆದುಕೊಂಡು೮ ಫ್ಲಾಟ್ ಫಾರ್ಮ್‌ಗೆ ಬಂದೆವು. ೧೦ ಗಂಟೆಯ ತನಕ ಕಾದು ಜೆನರಲ್ ಟ್ರೈನ್‌ನಲ್ಲಿ ಹೋಗುವುದೋ ಅಥವಾ ಈಗ ೧೦ ನಿಮಿಷದಲ್ಲಿ ಬರುವ 'ಶತಾಬ್ದಿ'ಗೆ ಹತ್ತಿಕೊಳ್ಳುವುದೋ ಎಂಬ ಗೊಂದಲವಾಯಿತು. ೧೦ ಗಂಟೆಯ ರೈಲಿನಲ್ಲಿ ಹೋದರೆ ಕಲ್ಕಾ ತಲುಪುವಾಗ  ಖಂಡಿತಾ ೧೧ ಗಂಟೆಯ ಮೇಲಾಗುತ್ತದೆ. ರೈಲು ನಿಧಾನವದರೆ ಮತ್ತೂ ತಡವಾಗಬಹುದು. ಆದರೆ ಶತಾಬ್ದಿಯಲ್ಲಿ ಹೋದರೆ ೯ ಗಂಟೆಗೆಲ್ಲಾ ಕಲ್ಕಾ ತಲುಪಬಹುದು. ಬೇಗ ನಿದ್ದೆ ಮಾಡಿ ನಾಳೆ ಬೆಳಗ್ಗೆ ಯೂ ಬೇಗ ಎದ್ದು ಹೊರಡಬೇಕಾದ್ದರಿಂದ ಆದದ್ದಾಗಲಿ ಶತಾಬ್ದಿಗೇ ಹತ್ತುವುದೆಂದು ನಿರ್ಧರಿಸಿದೆವು. ವಿಷಯ ಮೊದಲೇ ಗೊತ್ತಿದ್ದರೆ ಶತಾಬ್ದಿಗೆ ಟಿಕೆಟ್ ತೆಗೆಯಬಹುದಿತ್ತು, ಪರವಾಗಿಲ್ಲ ಫೈನ್ ಕಟ್ಟಿದರಾಯಿತು ಅಂದುಕೊಂಡೆವು. ಸಮಯಕ್ಕೆ ಸರಿಯಾಗಿ ಶತಾಬ್ದಿ ಬಂತು. ಶತಾಬ್ದಿಯಲ್ಲಿ ನನ್ನದು ಮೊದಲ ಪಯಣ. ಲಕ್ಸುರಿಯಾದ ಎ.ಸಿ ರೈಲದು. ತುಂಬಾ ನೀಟ್ ಹಾಗೂ ಕ್ಲೀನ್. ದೂರದ ಪ್ರಯಾಣವಾದರೆ ರೈಲಿನ ಒಳಗಡೆ ಊಟ ತಿಂಡಿಗಳನ್ನು ನೀಡುತ್ತಾರೆ. ಹೋಟೆಲ್‌ನ ರೀತಿ ಟ್ರೀಟ್ ಮಾಡುತ್ತಾರೆ. ಡೆಲ್ಲಿಯಿಂದ ಬಂದ ಆ ರೈಲಿಗೆ ಕಲ್ಕಾದಲ್ಲಿ ಲಾಸ್ಟ್ ಸ್ಟಾಪ್. ಅದ್ದರಲ್ಲಿದ್ದ ೯೫% ಪ್ರಯಾಣಿಕರೂ  ಚಂಡೀಘಡದಲ್ಲೇ ಇಳಿದರು. ನಾವು ಹತ್ತಿದೆವು. ನಮ್ಮ ಕಂಪಾರ್ಟ್ ಮೆಂಟ್‌ನಲ್ಲಿ ಎದುರಲ್ಲಿದ್ದ ಒಬ್ಬನನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ಟಿಸಿ ಇಲ್ಲಿಗೆ ಬರದಿದ್ದರೆ ಸಾಕು ಅಂದುಕೊಂಡು ಕುಳಿತೆವು. ಟ್ರೈನ್ ಹೊರಟಿತು. ನಾವು ಯಾವುದು ಆಗಬಾರದು ಅಂದುಕೊಂಡೆವೋ ಅದೇ ಆಯಿತು. ಟಿಸಿ ಬಂದರು, ಟಿಕೆಟ್ ಕೇಳಿದರು. ಮಹಿ ಪರಿಸ್ಥಿತಿಯನ್ನು ಹೇಳಿದಾಗ ಸರಿ ಎಂದು ಹೇಳಿ ಫೈನ್ ಕಟ್ಟಿಸಿಕೊಂಡು ಬಿಟ್ಟರು. ೯ ಗಂಟೆಗೂ ಮೊದಲೇ ಕಲ್ಕಾಕ್ಕೆ ತಲುಪಿದೆವು. ರೈಲಿನಿಂದ ಇಳಿದ ಕೂಡಲೇ ಒಬ್ಬ ಭಿಕ್ಷುಕ ಬಂದು ಒಂದು ಟೀ ಕೊಡಿಸಿ ಎನ್ನುತ್ತಾ ಹಿಂದೆ ಬಂದ. ಸರಿ ಎಂದು ಮಹಿ ಅಲ್ಲೇ ಪಕ್ಕದಲ್ಲಿದ್ದ ಟೀ ಸ್ಟಾಲ್‌ನಲ್ಲಿ ಆತನಿಗೆ ಟಿ ಕೊಡಿಸಿದಾಗ ಅಂಗಡಿಯವ ಹೇಳಿದ, "ಅವನಿಗೆ ಯಾಕ್ ಸಾರ್ ಕೊಟ್ರಿ? ಅವ ಭಿಕ್ಷುಕ ಅಲ್ಲ, ಅವ ರೈಲ್ವೇ ಉದ್ಯೋಗಿ ಸ್ವಲ್ಪ ಮೆಂಟಲ್, ತಿಂಗಳಿಗೆ ೪೦ ಸಾವಿರ ಸಂಬಳ ಬರ್ತದೆ, ಕೆಲ್ಸ ಏನೋ ಮಾಡೋದಿಲ್ಲ, ಸುಮ್ನೆ ಹೀಗೆ ಸ್ಟೇಷನ್‌ನಲ್ಲಿ ಸುತ್ತಾಡ್ತಾ ಇರ್ತಾನೆ. ಬಂದ ಹಣ ಎಲ್ಲಾ ಅವನ ಹೆಂಡತಿ ತಗೊಳ್ತಾಳೆ" ಅಂದ. ಪ್ರಪಂಚದಲ್ಲಿ ಎಂತೆಂತವರೆಲ್ಲಾ ಇದ್ದಾರೆ ಅಂದುಕೊಂಡು ನಾವೂ ಅಲ್ಲೇ ಟೀ ಕುಡಿದೆವು. ಮಳೆ ಸಣ್ಣಗೆ ಬರುತ್ತಿತ್ತು. ಆ ಸ್ಟೇಷನ್‌ನಿಂದ ಹೊರಗಡೆ ಹೋಗಲು ದಾರಿ ತಿಳಿಯಲಿಲ್ಲ. ಅದೊಂದು ಚಿಕ್ಕ ರೈಲ್ವೇ ಸ್ಟೇಷನ್. ಸ್ವಲ್ಪ ಹಿಂದೆ ಹೋಗಿ ಟ್ರ್ಯಾಕ್‌ಗೆ ಇಳಿದು ನೋಡಿದೆವು, ಅಲ್ಲೆಲ್ಲೂ ಹೊರ ಹೋಗಲು ದಾರಿ ಇಲ್ಲ. ಅಲ್ಲೇ ಇದ್ದ ಕೆಲವರಲ್ಲಿ ವಿಚಾರಿಸಿದೆವು ಕೆಲವರಿಗೆ ತಿಳಿದಿಲ್ಲ, ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಮಳೆಗೆ ತಲೆ ಎಲ್ಲಾ ಒದ್ದೆಯಾಯಿತು. ಹೇಗೋ ಹುಡುಕುತ್ತಾ ಸ್ಟೇಷನ್‌ನಿಂದ ಹೊರಗಡೆ ಬರಲು ದಾರಿ ಸಿಕ್ಕಿತು. ಅಲ್ಲೊಂದು ಪುಟ್ಟ ರೈಲ್ವೇ ಟ್ರ್ಯಾಕ್ ಇತ್ತು. ಮಹಿ ಮೊದಲು ಶಿಮ್ಲಾಗೆ ಹೋಗಿದ್ದರೂ ಬಸ್‌ನಲ್ಲಿ ಹೋದಕಾರಣ ನಮಗಿಬ್ಬರಿಗೂ ಈ ಟಾಯ್ ಟ್ರೈನ್ ಪ್ರಯಾಣ ಮೊದಲ ಅನುಭವವಾಗಿತ್ತು. ನಾಳೆ ಟಾಯ್ ಟ್ರೈನ್‌ನಲ್ಲಿ ಹೋಗುವುದು ಎಂದು ಯೋಚಿಸಿದಾಗಲೆಲ್ಲಾ ಎನೋ ಒಂದು ಖುಷಿಯಾಗುತ್ತಿತ್ತು. ಜಾತ್ರೆಯಲ್ಲಿ ಮಕ್ಕಳ ಆಟದ ರೈಲಿರುತ್ತದಲ್ಲ ಅಂತದ್ದೇ ರೈಲಿದು ಎಂದು ಮಹಿ ಹೇಳುತ್ತಿದ್ದರೂ ನನಗೆ ಅದರ ಟ್ರಾಕ್ ನೋಡಿದಾಗಲಂತೂ ಅಯ್ಯೋ ಎಷ್ಟು ಚಿಕ್ಕದಿದೆ ಅನಿಸಿತ್ತು. ನಾವು ಬುಕ್ ಮಾಡಿದ್ದ ರೂಮ್ ರೈಲ್ವೇ ಸ್ಟೇಷನ್‌ಗೆ ಹತ್ತಿರದಲ್ಲೇ ಇತ್ತು. ನಡೆಯುತ್ತಾ ಸಾಗುತ್ತಿದ್ದೆವು, ಆಟೋ ಒಂದು ಬಂದು ಎಲ್ಲಿಗೆ ಬಿಡಬೇಕು, ಎನ್ನುತ್ತಾ ದಂಬಾಲು ಬಿದ್ದ, ಇಲ್ಲ ನಮ್ಮ ರೂಮ್ ಇಲ್ಲೇ ಹತ್ತಿರದಲ್ಲಿದೆ ಎಂದರೂ ಕೇಳಲಿಲ್ಲ, ಸಣ್ಣಗೆ ಮಳೆ ಬರುತ್ತಿದ್ದುದರಿಂದ  ಆಟೋ ಹತ್ತಿದೆವು. ೨೦೦ ಮೀಟರ್ ಅಷ್ಟೇ ಇದ್ದುದು, ಆತ ೪೦ರೂ ಕಿತ್ತುಕೊಂಡ. ಕಲ್ಕಾ ಕೂಡಾ ಹಿಮಾಲಯದ ಪಾದದಲ್ಲಿರುವ ಪುಟ್ಟ ಊರು. ಇದು ಹರ್ಯಾಣ ರಾಜ್ಯದ 'ಪಂಚ್‌ಕುಲಾ' ಜಿಲ್ಲೆಗೆ ಸೇರುತ್ತದೆ. ಹಿಮಾಚಲ ಪ್ರದೇಶಕ್ಕೆ ಪ್ರವೇಶದ್ವಾರದಂತಿದೆ ಈ ಊರು. ರೈಲ್ವೇ ಸ್ಟೇಷನ್‌ನಿಂದ ಹೊರಡುವ ರಸ್ತೆ ಹತ್ತುತ್ತಾ ಸಾಗುತ್ತದೆ, ಸಮತಟ್ಟಾದ ಪ್ರದೇಶ ಅಲ್ಲಿಲ್ಲ. ಕಲ್ಕಾ ಕೂಡಾ ಪರ್ವತ ಪ್ರದೇಶ. ನಮ್ಮ ರೂಮ್ ತಲುಪಿ ಸ್ನಾನ ಮಾಡಿ ಸುಸ್ತು ನಿವಾರಿಸಿಕೊಂಡು ಪಕ್ಕದಲ್ಲಿದ್ದ ಹೋಟೆಲ್ ಒಂದಕ್ಕೆ ಹೋಗಿ ಊಟ ಮಾಡಿದೆವು. ನಂತರ ಅದೇ ರಸ್ತೆಯಲ್ಲಿ ಸ್ವಲ್ಪ ಹತ್ತುತ್ತಾ ಮುಂದೆ ಸಾಗಿದೆವು. ವಾತಾವರಣ ತುಂಬಾ ತಂಪಾಗಿತ್ತು, ಹಿಮಾಲಯದ ತಣ್ಣನೆಯ ಗಾಳಿಯೂ ಬೀಸುತ್ತಿತ್ತು. ರಾತ್ರಿ ಸುಮಾರು ೧೧ ಗಂಟೆ ಆಗಿತ್ತು, ಹೆಚ್ಚಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಜನ ಸಂಚಾರವೂ ಕಡಿಮೆ ಇತ್ತು, ಎಲ್ಲೋ ಅಲ್ಲಿ ಇಲ್ಲಿ ಒಬ್ಬೊಬ್ಬರು ಓಡಾಡುತ್ತಿದ್ದರು. ಅಂಗಡಿಯೊಂದರ ಎದುರು ಸುಮ್ಮನೆ ಸ್ವಲ್ಪ ಹೊತ್ತು ಕುಳಿತೆವು. ನಂತರ ಮತ್ತೆ ನಮ್ಮ ರೂಮ್‌ಗೆ ಮರಳಿದೆವು.
                                                                                                     -ಮುಂದುವರಿಯುವುದು

Comments

Popular posts from this blog

ಗರುಡ ಹಾರಿದ ಹಾದಿ :ಭಾಗ-1

ಗರುಡ ಹಾರಿದ ಹಾದಿ: ಭಾಗ - 2

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ