ಸ್ವರ್ಣ ಮಂದಿರದಿಂದ ಹೊರಗೆ ಬಂದ ನಂತರ ಕೆರೆಯ ಸುತ್ತಲೂ ಇದ್ದ ಪುಟ್ಟ ಪುಟ್ಟ ಮಂದಿರಗಳಿಗೆ ಹೋದೆವು, ಅಲ್ಲು ಇದೇ ರೀತಿ ಗ್ರಾಂಥಿಗಳು 'ಶ್ರೀ ಗುರುಗ್ರಂಥ್ ಸಾಹೇಬ್'ನ್ನು ಪಠಿಸುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಪ್ರಸಾದ ವಿತರಿಸುತ್ತಿದ್ದರು. ಇದನ್ನು 'ಖಾದಾ' ಪ್ರಸಾದ ಎನ್ನುತ್ತಾರೆ. ಗೋಧಿ ಹುಡಿ, ತುಪ್ಪ ಹಾಗೂ ಸಕ್ಕರೆ ಹಾಕಿ ತಯಾರಿಸುತ್ತಾರೆ. ನಮ್ಮಲ್ಲಿ ಸತ್ಯನಾರಾಯಣ ಪೂಜೆಗೆ ಮಾಡುವ 'ಸಪಾದ ಭಕ್ಷ್ಯ'ದ ರೀತಿಯದ್ದು.
|
'ಖಾದಾ' ಪ್ರಸಾದ |
ಪ್ರಸಾದ ಸ್ವೀಕರಿಸಿದ ನಂತರ ನಾವು ಅಲ್ಲೇ ಇರುವ ಭೋಜನಾಲಯಕ್ಕೆ ತೆರಳಿದೆವು. ಇದನ್ನು 'ಲಂಗರ್' ಎಂದು ಕರೆಯುವರು. ಸ್ವರ್ಣ ಮಂದಿರದ ಈ ಲಂಗರ್‌ಗೆ 'ಗುರು ರಾಮ್ ದಾಸ್ ಲಂಗರ್' ಎಂದು ಹೆಸರಿಡಲಾಗಿದೆ. ಸಾಮಾನ್ಯವಾಗಿ ಸಿಖ್ಖರ ಹೆಚ್ಚಿನ ಗುರುದ್ವಾರಗಳಲ್ಲಿ ಲಂಗರ್‌ಗಳಿರುತ್ತವೆ. ಕೆಲವೊಮ್ಮೆ ಕೆಲವು ಕಡೆಗಳಲ್ಲಿ ( ರೋಡ್ ಸೈಡ್) ಸಣ್ಣ ಪುಟ್ಟ ಟೆಂಟ್‌ಗಳನ್ನು ಹಾಕಿ ಊಟ ಅಥವಾ ಪಾನೀಯಗಳನ್ನು ನೀಡುತ್ತಿರುತ್ತಾರೆ. ಇದು ಸಮಾಜಕ್ಕೆ ಅವರು ಮಾಡುವ ಸೇವೆ. ಸ್ವರ್ಣ ಮಂದಿರದ ಬೃಹತ್ ಲಂಗರ್‌ನ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಬಟ್ಟಲು ಹಾಗೂ ಪಿಂಗಾಣಿ, ಚಮಚಗಳನ್ನು ನೀಡುತ್ತಾರೆ. ವಿಶಾಲವಾದ ಹಾಲ್ ನೊಳಗೆ ಸಾವಿರಾರು ಮಂದಿ ಕುಳಿತುಕೊಳ್ಳಬಹುದು. ಎಲ್ಲರೂ ಒಮ್ಮೆಲೇ ಕುಳಿತು ಕೊಳ್ಳಬೇಕು, ಒಟ್ಟಿಗೇ ಬಡಿಸುವುದು ಎಂಬ ನಿಯಮವೇನಿಲ್ಲ. ಜನರು ಬಂದು ಕುಳಿತಂತೆಲ್ಲಾ ಬಡಿಸುತ್ತಾ ಹೋಗುತ್ತಾರೆ. ಇಲ್ಲಿ ಟೇಬಲ್ ಅಥವಾ ಬಫೆ ಪದ್ದತಿ ಇಲ್ಲ. ಎಲ್ಲರೂ ನೆಲದಲ್ಲೇ ಕುಳಿತು ಊಟ ಮಾಡಬೇಕು. ಆ ದಿನ ಖೀರು, ರೊಟ್ಟಿ, ಪಂಜಾಬಿ ದಾಲ್ ಮಖಾನಿ, ಸಬ್ಜಿ ಹಾಗೂ ಅನ್ನ ಇತ್ತು. ಇಲ್ಲಿ ಎಷ್ಟು ಬೇಕಾದರೂ ಉಣ್ಣ ಬಹುದು ಆದರೆ ಆಹಾರವನ್ನು ಎಸೆಯುವ ಹಾಗಿಲ್ಲ. ರೊಟ್ಟಿಯನ್ನು ಬಟ್ಟಲಿಗೆ ಹಾಕುವುದಿಲ್ಲ. ಎರಡೂ ಕೈ ಗಳನ್ನು ಮುಂದೆ ಚಾಚಿ ತೆಗೆದುಕೊಳ್ಳಬೇಕು. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಇಲ್ಲಿ ಸ್ವಯಂ ಸೇವಕರಾಗಿ ಬಡಿಸುವುದನ್ನು ಕಾಣಬಹುದು. ಜೊತೆಗೆ ಲಂಗರ್‌ನಲ್ಲಿ ಹೆಚ್ಚಿನ ಎಲ್ಲಾ ಕೆಲಸಗಳನ್ನು (ತರಕಾರಿ ಹಚ್ಚುವುದು, ಪಾತ್ರೆಗಳನ್ನು ತೊಳೆಯುವುದು ಇತ್ಯಾದಿ) ಅವರು ಸೇವೆಯಾಗಿ ಮಾಡುತ್ತಾರೆ. ಸುತ್ತ ಮುತ್ತಲಿನ ಊರಿನ ಜನ ಇಲ್ಲಿ ಸಹಕರಿಸುತ್ತಾರೆ. ಅಲ್ಲಿನ 'ಖಾನಾ' ಬಹಳ ರುಚಿಯಾಗಿತ್ತು. ನ್ಯಾಷನಲ್ ಜಿಯೋಗ್ರಫಿ ಚಾನೆಲ್ 'ಇಂಡಿಯಾ'ಸ್ ಮೆಗಾ ಕಿಚನ್' ಎಂಬ ಕಾರ್ಯಕ್ರಮದಲ್ಲಿ ಇಲ್ಲಿನ ಲಂಗರ್‌ನ ಬಗ್ಗೆ ವಿಸ್ತೃತವಾದ ಮಾಹಿತಿ ಪ್ರಸಾರ ಮಾಡಿತ್ತು. ನಮಗೆ ಮಾತ್ರ ಬೆಳಗಿನ ಆಲೂ ಕುಲ್ಚ, ಅಮೃತ್ ಸರ್ ಸ್ಪೆಷಲ್ ಲಸ್ಸಿ ಕರಗಿರಲಿಲ್ಲ. ಊಟ ಮಾಡಿದ್ದು ಹೆಚ್ಚಾಗಿ ಹೊಟ್ಟೆ ಬಿರಿಯುವಂತಾಯಿತು. ಹಿಂದಿನ ದಿನದ ಪ್ರಯಾಣ, ಆ ಬಿಸಿಲಿನಲ್ಲಿ ಓಡಾಡಿದ್ದು, ಕ್ಯೂ ನಿಂತಿದ್ದು ಎಲ್ಲಾ ಸೇರಿ ನನಗೆ ತಲೆನೋವೋ ಸಂಕಟವೋ ಆಗುತ್ತಿತ್ತು. ಅಂತೂ ಇಂತೂ ಊಟ ಮುಗಿಸಿ ಊಟದ ಹಾಲ್‌ನಿಂದ ಹೊರಬಂದೆವು. ಬಟ್ಟಲುಗಳನ್ನು ನಾವು ತೊಳೆಯಬೇಕಾಗಿರಲಿಲ್ಲ. ಕೈ ತೊಳೆಯುವ ಸ್ಥಳಗಳಲ್ಲಿ ಬಟ್ಟಲುಗಳ ಸಂಗ್ರಹಕ್ಕಾಗಿ ನಿಂತಿರುತ್ತಿದ್ದರು. ಅವರ ಬಳಿ ಕೊಡಬೇಕಿತ್ತು. ಕೈ ತೊಳೆದು ಲಂಗರ್‌ನಿಂದ ಹೊರ ನಡೆದೆವು. ನನಗಂತೂ ಸುಸ್ತಾಗಿತ್ತು, ನಿದ್ದೆಯೂ ಬರುತ್ತಿತ್ತು, ಜೊತೆಗೆ ತಲೆನೋವು. ಕೆರೆಯ ಸುತ್ತಲೂ ಜಗುಲಿ ಇತ್ತು. ಅಲ್ಲಿ ಹಲವರು ಮಲಗಿ, ಕುಳಿತು ವಿಶ್ರಮಿಸುತ್ತಿದ್ದರು. ನಾವೂ ಅಲ್ಲೇ ಸ್ವಲ್ಪ ಹೊತ್ತು ಮಲಗಿದೆವು, ನಿದ್ದೆ ಬಂತು. ಹದಿನೈದು- ಇಪ್ಪತ್ತು ನಿಮಿಷ ಅಲ್ಲಿ ವಿಶ್ರಾಂತಿ ಪಡೆದು. ಸ್ವರ್ಣ ಮಂದಿರದಿಂದ ತೆರಳಿದೆವು. ಚಪ್ಪಲ್ ಸ್ಟ್ಯಾಂಡ್ ಬಳಿ ಬಂದೆವು. ಅಲ್ಲಿ ಹಲವು ಚಪ್ಪಲ್ ಕೌಂಟರ್ ಇದ್ದು, ನಾವು ಚಪ್ಪಲಿ ಇಟ್ಟ ಕೌಂಟರ್ ಯಾವುದು ಎಂದು ಗಲಿಬಿಲಿ ಆಯಿತು.
|
ಸ್ವಚ್ಛವಾಗಿ ತೊಳೆದಿಡಲಾಗುವ ಬಟ್ಟಲುಗಳು |
|
ಅಡುಗೆಗೆ ಸುತ್ತ-ಮುತ್ತಲಿನ ಊರಿನವರ ಸಹಕಾರ |
|
ರೊಟ್ಟಿ ತಯಾರಿಸುತ್ತಿರುವುದು |
|
ರೊಟ್ಟಿ, ಧಾಲ್, ಖೀರು, ಸಬ್ಜಿ |
|
|
ಚಪ್ಪಲಿ ಹಾಕಿಕೊಂಡು ಹೊರ ಬರುತ್ತಿದ್ದಂತೆಯೇ 'ವಾಘಾ' ಬಾರ್ಡರ್‌ಗೆ ಕರೆದುಕೊಂಡು ಹೋಗುತ್ತೇವೆ, ಎ.ಸಿ ವಾಹನ ಇದೆ ಎಂದೆಲ್ಲಾ ಒಬ್ಬ ಚೌಕಾಸಿ ಮಾಡ ತೊಡಗಿದ. ಅವನ ಬಳಿಯಿಂದ ತಪ್ಪಿಸಿಕೊಂಡು ಬಂದೆವು. ಅದಾಗಲೇ ಸಮಯ ೨ ಗಂಟೆ ಆಗಿತ್ತು. ಬೆಳಗ್ಗೆ ಜಲಿಯನ್ ವಾಲಾ ಬಾಗ್ ನಿಂದ ಬರುವಾಗ ಆಟೋದವನೊಬ್ಬ ವಾಘಾ ಬಾರ್ಡರ್‌ಗೆ ಬರುವುದಿದ್ದರೆ ತನ್ನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಹೇಳಿದ್ದ. ವಾಘಾ ಬಾರ್ಡರ್‌ಗೆ ಕರೆದುಕೊಂಡು ಹೋಗಿ ವಾಪಾಸ್ ಕರೆದುಕೊಂಡು ಬರುತ್ತಾನೆ, ನಮ್ಮಂತೆ ಇನ್ನೂ ಕೆಲವು ಪ್ರವಾಸಿಗರೂ ಇರುತ್ತಾರೆ. ಇದಕ್ಕೆ ಆತನಿಗೆ ಹೆಸರು ಮತ್ತು ಅಡ್ವಾನ್ಸ್ ನೀಡಬೇಕಿತ್ತು. ಈಗಲೂ ಅವನೇ ಸಿಕ್ಕಿದ. ನಾವು ಹೇಗೂ 'ಅಟಾರಿ' ಬಾರ್ಡರ್‌ಗೆ ಹೋಗುವವರು. ಅವನಲ್ಲಿ ಬರುವುದಾಗಿ ಹೇಳಿದೆವು. ೪.೩೦ಕ್ಕೆ 'ವಾಘಾ'ಬಾರ್ಡರ್‌ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನದ ಗಡಿ ಭದ್ರತಾ ಪಡೆಗಳ ಧ್ವಜಾವರೋಹಣ ಪೆರೇಡ್‌ಗೆ ವೀಕ್ಷಕರಿಗೆ ಪ್ರವೇಶ ಪ್ರಾರಂಭವಾಗುತ್ತದೆ. ರಶ್ ಇರುವ ದಿನಗಳಲ್ಲಿ ಮೊದಲೇ ತಲುಪದಿದ್ದಲ್ಲಿ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಸೀಟ್ ಸಿಗುವುದಿಲ್ಲ, ಪೆರೇಡ್‌ನ್ನು ಸರಿಯಾಗಿ ವೀಕ್ಷಿಸುವುದು ಅಸಾಧ್ಯ. ಅಮೃತ್ ಸರ್‌ನಿಂದ 'ವಾಘಾ' ಬಾರ್ಡರ್‌ಗೆ ಸುಮಾರು ೩೦ ಕಿ.ಮೀ ಅಂತರವಿದೆ. ಕನಿಷ್ಟ ೩ ಗಂಟೆಗಾದರೂ ಅಮೃತ್ ಸರ್‌ನಿಂದ ಹೊರಡಬೇಕು. ಆ ಆಟೋ ರಿಕ್ಷಾದವ ನಮ್ಮನ್ನು ಜಲಿಯನ್ ವಾಲಭಾಗ್‌ನಲ್ಲಿ ಕುಳಿತುಕೊಳ್ಳಲು ಹೇಳಿ, ರಿಕ್ಷಾಕ್ಕೆ ಇನ್ನೂ ಕೆಲವು ಜನ ಬರುವವರಿದ್ದಾರೆ. ನಂತರ ಹೊರಡೋಣ ನಾನು ಕಾಲ್ ಮಾಡುತ್ತೇನೆ ಎಂದು ನಂಬರ್ ತೆಗೆದುಕೊಂಡ. ಜಲಿಯನ್ ವಾಲಾಭಾಗ್‌ನ ವಿಶ್ರಾಂತಿ ಗೃಹದಲ್ಲಿ ಕುಳಿತು ಸ್ವಲ್ಪ ನಿದ್ದೆ ಮಾಡಿದೆವು. ತಲೆ ನೋವು ಸುಸ್ತು ಕಡಿಮೆಯಾಯಿತು. ಸ್ವಲ್ಪ ಉಲಾಸವಾಯಿತು. ೩ ಗಂಟೆಯಾದರೂ ಆ ವ್ಯಕ್ತಿ ಕಾಲ್ ಮಾಡಲಿಲ್ಲ. ಅಲ್ಲಿಂದ ಹೊರ ಬಂದು ಉದಮ್ ಸಿಂಗರ ಮೂರ್ತಿ ಬಳಿ ಇದ್ದ ಚಿಟ್ಟೆಯಲ್ಲಿ ಕುಳಿತುಕೊಂಡೆವು. ಕಾಶ್ಮೀರದ ಒಂದು ಕುಟುಂಬ ನಮ್ಮ ಜೊತೆ ಬರುವವರಿದ್ದರು ''ಅವರು ಬಾಟಲ್‌ಗಳಿಗೆ ನೀರು ತುಂಬಿಕೊಳ್ಳಲು ಸ್ವರ್ಣ ಮಂದಿರಕ್ಕೆ ಹೋಗಿದ್ದಾರೆ, ಇನ್ನೇನು ಬಂದುಬಿಡುತ್ತಾರೆ'' ಅವರಿಗೆ ಕಾಯುತ್ತಿರುವುದಾಗಿ ಹೇಳಿದ. ೩.೩೦- ೩.೩೫ ರ ಹೊತ್ತಿಗೆ ಅವರೂ ಬಂದರು. ಹೇಳಿದ ಸಮಯಕ್ಕಿಂತ ಅರ್ಧ ಗಂಟೆ ಲೇಟ್ ಮಾಡಿದ್ದ. ರಿಕ್ಷಾ ಬಂತು ಅವನು ಡ್ರೈವರ್ ಆಗಿರಲಿಲ್ಲ, ಆತ ಒಬ್ಬ ಏಜೆಂಟ್. ಅಮೃತ ಸರದಿಂದ ವಾಘಾ ಬಾರ್ಡರ್‌ಗೆ ಹೀಗೆ ಅನೇಕ ವಾಹನಗಳು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತವೆ. ಜಲಿಯನ್ ವಾಲಾಭಾಗ್‌ಗೆ ಹೋಗುವ ಮಾರ್ಕೆಟ್ ರೋಡ್‌ನಲ್ಲಿ ಹೀಗೆ ಹಲವು ಮಂದಿ ಏಜೆಂಟರು, ಡ್ರೈವರ್‌ಗಳು ತಮ್ಮ ವಾಹನದಲ್ಲಿ ಬರುವಂತೆ ಒತ್ತಾಯಿಸುತ್ತಿರುತ್ತಾರೆ. ರಿಕ್ಷಾದ ಹಿಂದಿನ ಭಾಗ ಕ್ಲೊಸ್ ಇರಲಿಲ್ಲ, ಡಿಕ್ಕಿ ಇರಬೇಕಾದ ಸ್ಥಳದಲ್ಲೂ ಸೀಟ್ ಹಾಕಲಾಗಿತ್ತು. ಮಾರ್ಗಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕಾಗಿತ್ತು. ನಾವಿಬ್ಬರು ಹಾಗೂ ಇನ್ನೊಬ್ಬ ಹುಡುಗ ಅಲ್ಲಿ ಕುಳಿತೆವು. ಕಾಶ್ಮೀರದ ಕುಟುಂಬ(ನಾಲ್ಕು ಮಂದಿ ಇದ್ದರು) ಒಳಗಿನ ಸೀಟ್‌ನಲ್ಲಿ ಕುಳಿತಿತು. ಏಜೆಂಟ್ ಹಾಗೂ ಇನ್ನೊಬ್ಬ ಎದುರಿನ ಡ್ರೈವರ್ ಸೀಟಿನ ಪಕ್ಕದಲ್ಲಿ ಕುಳಿತರು. ರಿಕ್ಷಾ ವಾಘಾ ಬಾರ್ಡರ್ ಕಡೆ ಹೊರಟಿತು. ಅಮೃತ್ ಸರ್ ತುಂಬಾ ದೊಡ್ಡ ಸಿಟಿ ಏನಲ್ಲ. ಅಮೃತ್ ಸರದ ಕೆಲವು ಗಲ್ಲಿ ಗಲ್ಲಿಗಳಲ್ಲಿ ಸುತ್ತು ಹಾಕಿಸಿಕೊಂಡು ಹೋದ. ಮುಖ್ಯ ರಸ್ತೆ ಸಿಕ್ಕಿತು. ಈ ರಸ್ತೆಯನ್ನು 'ಗ್ರ್ಯಾಂಡ್ ಟ್ರಂಕ್ ರೋಡ್' ( ಜಿ.ಟಿ ರೋಡ್) ಎಂದು ಕರೆಯುತ್ತಾರೆ.
|
ಅಟಾರಿ ಬಾರ್ಡರ್‌ಗೆ ಹೋಗುವ ಆಟೋದಲ್ಲಿ |
|
ಹೋಟೆಲ್ ಬಳಿ ನಿಲ್ಲಿಸಿದಾಗ ತೆಗೆದ ಫೋಟೋ |
ಈ ರಸ್ತೆ ಬಹು ಪುರಾತನವಾದ ರಸ್ತೆ. ಗೂಗಲ್‌ನಲ್ಲಿ ತಡಕಾಡಿದಾಗ ಇದರ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿತು. ಈ ರಸ್ತೆಗೆ ಸರಿ ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿದೆ. ಚಂದ್ರಗುಪ್ತ ಮೌರ್ಯನ ಕಾಲದಲ್ಲೇ ಈ ರಸ್ತೆ ಇತ್ತು ಎಂಬುವುದಾಗಿ ಲ್ಲೇಖಗಳಿವೆ. ಪುರಾತನ ಭಾರತದಲ್ಲಿ ಈ ರಸ್ತೆಯನ್ನು 'ಉತ್ತರ ಪಥ' ಎಂದು ಕರೆಯುತ್ತಿದ್ದರು. ನಂತರ ಆಳಿದ ಅನೇಕ ರಾಜ ವಂಶಸ್ಥರ ಕಾಲದಲ್ಲಿ ರಸ್ತೆಯು ನವೀಕರಣಗೊಳ್ಳುತ್ತಾ ಸಾಗಿತು. ಬ್ರಿಟಿಷರ ಕಾಲದಲ್ಲಿ ಇದನ್ನು ಗ್ರಾಂಡ್ ಟ್ರಂಕ್ ರೋಡ್ ಎಂದು ಕರೆಯುತ್ತಿದ್ದರು. ಗ್ರೀಕ್ ನ ಪ್ರವಾಸಿಗ ಮೆಗಾಸ್ತನೀಸ್‌ನ ಉಲ್ಲೇಖಿಸಿದ ಪ್ರಕಾರ ಈ ರಸ್ತೆಯ ಅಧಿಕೃತ ನಿರ್ವಹಣೆಗಾಗಿ ಚಂದ್ರಗುಪ್ತ ಮೌರ್ಯನು ತನ್ನ ಸೈನ್ಯದ ಅಧಿಕಾರಿಗಳನ್ನು ನಿಯೋಜಿಸಿದ್ದ. ಆ ಕಾಲದಲ್ಲಿ ಇದು ಭಾರತದ ಎಂಟು ಮುಖ್ಯ ಪ್ರದೇಶಗಳನ್ನು ಸಂಧಿಸುತ್ತಿತ್ತು, ನಂತರ ಮೊಘಲರ ಕಾಲದಲ್ಲಿ 'ಶೇರ್ ಶಾ' ರಸ್ತೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿದ ರಸ್ತೆಯ ಬದಿ ಸಾಲು ಮರಗಳನ್ನು ನೆಡಿಸಿದ, ಬಾವಿಗಳನ್ನು ತೋಡಿಸಿದ ಎಂದು ಇತಿಹಾಸ ಹೇಳುತ್ತದೆ. ಈಸ್ಟ್ ಇಂಡಿಯಾ ಕಂಪೆನಿಯು ರಸ್ತೆಯನ್ನು ಆಧುನೀಕರಣ ಗೊಳಿಸಿತು. ದೇಶ ವಿಭಜನೆಯಾದರೂ ರಸ್ತೆ ಮಾತ್ರ ನಾಲ್ಕು ದೇಶಗಳನ್ನು ಸೇರಿಸುತ್ತದೆ. ೨,೭೦೦ ಕಿ.ಮೀ ಉದ್ದ ಈ ರಸ್ತೆ ಚಿತ್ತಗಾಂಗ್, ಢಾಕಾ, ರಾಜ್ಷಾಹಿ, ಪೂರ್ನಿಯಾ, ವಾರಣಾಸಿ, ಅಲಹಾಬಾದ್, ಕಾನ್ಪುರ್, ಆಗ್ರಾ, ಮಥುರಾ, ಡೆಲ್ಹಿ, ಸೋನೀ ಪತ್, ಪಾಣಿಪತ್, ಕುರುಕ್ಷೇತ್ರ, ಅಂಬಾಲ, ಲುಧಿಯಾನ, ಅಮೃತ್ ಸರ್, ಲಾಹೋರ್, ಗುಜ್ರಾನ್ ವಾಲಾ, ರಾವಲ್ಪಿಂಡಿ, ಪೇಶಾವರ, ಜಲಾಲಬಾದ್, ಕಾಬೂಲ್ ಇಷ್ಟು ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಈ ರಸ್ತೆಯನ್ನು ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ ಸೇರಿಸಲಾಗಿದೆ. ೧೯೯೯ರಲ್ಲಿ ಮಾಜಿ ಪ್ರಧಾನಿ ದಿ| ಅಟಲ್ ಬಿಹಾರಿ ವಾಜಪೇಯಿಯವರ ಹಸಿರು ನಿಶಾನೆಯೊಂದಿಗೆ ಪ್ರಾರಂಭಗೊಂಡ ಡೆಲ್ಲಿ ಟು ಲಾಹೋರ್ ಬಸ್ ಇದೇ ಗ್ರಾಂಡ್ ಟ್ರಂಕ್ ರೋಡ್ ಮೂಲಕ ಪಾಕಿಸ್ತಾನಕ್ಕೆ ಸಾಗುತ್ತದೆ.
- ಮುಂದುವರಿಯುವುದು...
Comments
Post a Comment
thank you...