ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ
ಅ-ಬಲೆ
ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ.....
ಪಶ್ಚಿಮ ಘಟ್ಟದ ತಪ್ಪಲಲ್ಲಿರುವುದು ನಮ್ಮೂರು. ಅದೆಷ್ಟೋ ಬೆಟ್ಟ, ಗುಡ್ಡಗಳ ತವರು. ಬೆಳ್ಳಂ ಬೆಳ್ಳಗ್ಗೆ ಎದ್ದು ಸುತ್ತಾಡುವಾಗ ನಾನು ಸ್ವರ್ಗದಲ್ಲಿರುವೆನೇನೋ ಎಂಬ ಭಾವ. ಜೇಡರು ರಾತ್ರಿ ಪೂರ್ತಿ ಹುಲ್ಲು ಹಾಸಿನಲ್ಲಿ, ಪೊದರು ಗಂಟಿಗಳಲ್ಲಿ ಹಣೆಯುತ್ತಿದ್ದ ಬಲೆಯ ಮೇಲೆ ಕುಳಿತ ಮಂಜಿನ ಹನಿಗಳು ಹೆಜ್ಜೆ ಹೆಜ್ಜೆಗೂ ಬಿಳಿ ಚಿತ್ತಾರವನ್ನು ಮೂಡಿಸುತ್ತಿದ್ದವು. ಹಸುರು ಮತ್ತು ಬಿಳಿಯ ಈ ಸುಂದರ ಚಿತ್ರ ಬೆಳಗಿನ ಜಾವವೇ ಮನಸ್ಸಿಗೆ ಉತ್ಸಾಹ ತುಂಬುತ್ತಿತ್ತು. ಜೊತೆಗೆ ಬೀಸುವ ತಂಪು ಗಾಳಿ ಹಾಗೂ ಮಬ್ಬು ಮಬ್ಬಾದ ಹಿಮ....
ಇಂತಹುದ್ದೇ ಒಂದು ಸುಂದರವಾದ ತಾಜಾ ಹಾಗೂ ತಂಪಿನ ಭಾವನೆಯನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಅಕ್ಷರಗಳ ಮೂಲಕ ಈ ಬಲೆಯನ್ನು ಹಣೆಯಲಾಗಿದೆ. ಬಿಸಿಲೇರುತ್ತಾ ಬಲೆಯ ಮೇಲಿರುವ ಮಂಜಿನ ಹನಿ ಕರಗಿ ಬಲೆ ಇದೆಯೋ ಇಲ್ಲವೋ ಎಂದು ತಿಳಿಯದಾಗುತ್ತದೆ, ಇಲ್ಲಿಎಲ್ಲವೂ ಕ್ಷಣಿಕ ಎಂಬ ತತ್ತ್ವವಿದೆ. ಯಾವನೋ ಆಗಂತುಕ ಸುಂದರವಾದ ಬಿಳುಪಿನ ಬಲೆಯನ್ನು ನೋಡಿ ವಿಕೃತ ಸಂತೋಷಕ್ಕಾಗಿ ಆ ಬಲೆಗೆ ತುಳಿದು ನಾಶ ಪಡಿಸುತ್ತಾನೆ. ಆ ವೇದನೆಯ ಕಥೆಯಿದೆ. ಅಸಹಾಯಕ ಜೇಡವು ನಾಶವಾದ ತನ್ನ ಬಲೆಯ ಬಗ್ಗೆ ರೋಧಿಸುತ್ತಾ ಹಾಡುವ ಷಾಯಿರಿ ಇದೆ. ಮತ್ತೆ ಬಲೆ ಹಣೆಯಲು ತೊಡಗುವ ಜೇಡನ ಆಶಾವಾದದ ಬದುಕು ಇದೆ, ಗಟ್ಟಿ ನಿರ್ಧಾರವಿದೆ. ಸಮಸ್ಯೆಗಳನ್ನು ದಿಟ್ಟ ತನದಿ ಎದುರಿಸಿ ಎದುರಾಳಿಗೆ ಏದುಸಿರು ತರಿಸಿದ ಕಥೆಯಿದೆ. ಬಲೆಯ ಸೌಂದರ್ಯಕ್ಕೆ ಮರುಳಾಗಿ ಮೋಹಕ್ಕೆ ಒಳಗಾಗಿ ಬಂದು ಸೆರೆ ಸಿಕ್ಕಿ ಬಂಧಿಯಾಗಿ ಮೋಸ ಹೋದ ಕೀಟಗಳ ಜೀವನ ಪಾಠವಿದೆ. ಮರಳಿ ಯತ್ನವ ಮಾಡಿ ತನ್ನ ಹಸಿವನ್ನು ನೀಗಿಸಿಕೊಂಡ ಜೇಡನ ಶ್ರಮದ ಫಲವಿದೆ. ಬೆಳಕಿನ ಹಿಂದೆ ಕತ್ತಲು ಇದೆ, ಕತ್ತಲಿನಿಂದ ಮತ್ತೆ ಜೇಡ ತನ್ನ ಬದುಕನ್ನು ಕಟ್ಟಿಕೊಂಡ ಜೀವನ ಚಕ್ರ ಇಲ್ಲಿ ಇದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನೊಳಗೊಂಡ ಮನದ ಪಿಸು ಮಾತಿದೆ.ಭಾವನೆಗಳು ಷಾಯಿಯೊಂದಿಗೆ ಬೆರೆತು ಮನವು ಮೌನವಾಗಿ ಹಣೆದ ಬಲೆ. ಇದು ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ: ಅ-ಬಲೆ...
-ಪ್ರಗಲ್ಭಾ
Nice one :)
ReplyDeleteನಿಮ್ಮ ಭಾವಗಳು ಅಕ್ಷರಗಳಾಗಿ ನಮ್ಮನ್ನು ಸೇರಿ ನಮ್ಮಗಳ ಭಾವ ಲೋಕವೂ ಒಂದಿಷ್ಟು ವಿಸ್ತಾರವಾಗಲಿ...
ReplyDeleteಬರೆಯುತ್ತಲಿರಿ...
ನಿಮ್ಮ ಅಭಿಮಾನ ಪ್ರೀತಿಗಳೇ ನಮಗೆ ಪ್ರೇರಣೆ. ಚಿಕ್ಕವಳಿಗೆ ಹರಸಿದ್ದಕ್ಕಾಗಿ ಧನ್ಯವಾದಗಳು....
Delete