ಹಾಳು ಹರಟೆ!!!
ಬೇಡವೆಂದು ಎಸೆದ ಹಾಳೆ.....(ಇದನ್ನು ಪಬ್ಲಿಷ್ ಮಾಡುದಾ, ಬೇಡ್ವಾ ಅಂತ ಯೋಚಿಸುತ್ತಿರುವಾಗಲೇ ಗೋಡೆಯ ಬಲ ತುದಿಯಲ್ಲಿ publish ಅಂತಿರುವ ಕೇಸರಿ ಬಟನ್ ಪ್ರೆಸ್ ಆಗಿ ಹೋಗಿತ್ತು, ಕ್ಷಮೆ ಇರಲಿ) 🙏
ಇದೆಂಥಾ ಒಳ್ಳೆ ಡೈರಿ ತರ ಇದೆಯಲ್ಲಾ ಅಂತ ನಿಮಗನ್ನಿಸಿದರೆ ಅದು ನಿಮ್ಮ ತಪ್ಪಲ್ಲ, ಹಾಗಂತ ನನ್ನ ತಪ್ಪು ಅಂತ ಒಪ್ಪಿಕೊಳ್ಳಿಕ್ಕೆ ನಾನ್ ತಯಾರಿಲ್ಲ. ಯಾರೂ ಓದ್ಬಾರ್ದು ಅಂತ ಹೇಳಿಕೊಳ್ಳಿಕಾಗದೇ ಇರೋದನ್ನ ಡೈರಿಯಲ್ಲಿ ಬರೀತೇವೆ. ಇಲ್ಲಿ ಬರ್ದ್ರೂ ಅಷ್ಟೆ ಯಾರೂ ಓದ್ಲಿಕಿಲ್ಲ ಅಂದುಕೊಂಡೇ ಬರೆಯ ಹೊರಟೆ. (ಮನದ ಮೂಲೆಯಲ್ಲೆಲ್ಲೋ ಒಂದು ಸ್ವಾರ್ಥ ಇದೆ ಆದ್ರೂ ಯಾರಾದ್ರು ಓದ್ಬೋದು, ಸ್ವಲ್ಪ ದೊಡ್ದ ಜನ ಆಗುವ ಅಂತ!!)
ಹೆಚ್ಚೇನಲ್ಲ, ಎರಡು ಮೂರು ವರ್ಷಗಳ ಹಿಂದಿನ ಮಾತು. ನನ್ನಲ್ಲಿ ಸ್ಮಾರ್ಟ್ ಫೋನ್ ಇರ್ಲಿಲ್ಲ. ಅದಾಗಲೇ ನನ್ನ ಹತ್ತಿರದ ಬಂಧುಗಳಲ್ಲಿ, ಸ್ನೇಹಿತರಲ್ಲಿ ಎಲ್ಲರಲ್ಲೂ ಉಜ್ಜುವ ಮೊಬೈಲ್ ಇತ್ತು. ನನಗೂ ಬಹಳ ಆಸೆ ಇತ್ತು. ಟಚ್ ಸ್ಕ್ರೀನ್ ಬೇಕು ಅಂತ. ಆದರೆ ಆ ತುಡಿತ ತೀವ್ರ ಇರ್ಲಿಲ್ಲ. ಕಾರಣ ಸಿಂಪಲ್. ನನಗೆ ಗೊತ್ತಿತ್ತು ನಂಗೆ ತಗೊಳ್ಳಿಕೆ ಆಗುದಿಲ್ಲ ಅಂತ, ಪರಿಸ್ಥಿತಿ ಚನ್ನಾಗಿರ್ಲಿಲ್ಲ. ಜೀವನವನ್ನು ವೃತದಂತೆ ಪಾಲಿಸ್ತಿದ್ದೆ. ನಿಜಾ ಎರಡು ಸಾಲುಗಳಲ್ಲಿ ನಿಮ್ಗದು ಅರ್ಥ ಆಗ್ಲಿಕ್ಕೆ ಖಂಡಿತಾ ಸಾಧ್ಯ ಇಲ್ಲ. ಬಿಡಿ... ಆದರೆ ನಾನು ಒಂದನ್ನಂತು ಒಪ್ಪಿಕೊಳ್ತೇನೆ, ''ಪಾಸಿಟಿವ್ ಆಗಿ ಯೋಚಿಸ್ತಾ ಇದ್ರೆ ಪಾಸಿಟಿವ್ ಆಗೇ ಆಗ್ತದೆ'' ಹಲವು ಬಾರಿ ನನಗಾ ಅನುಭವ ಆಗಿದೆ. ಕೇವಲ ಅಂತಹ ಅನುಭವಗಳನ್ನಿಟ್ಟುಕೊಂಡೇ ನಾಲ್ಕಾರು ಸಾಲುಗಳನ್ನು ನಿಮ್ಮ ಮುಂದೆ ಹರವ ಬಲ್ಲೆ. ಇಲ್ಲೂ ಹಾಗೇ ಆಯ್ತು. ನನ್ನ ಮಾವ( ಅಮ್ಮನ ತಮ್ಮ) ನನಗೊಂದು ಹೊಸ ಸ್ಮಾರ್ಟ್ ಫೋನ್(ಮೈಕ್ರೋ ಮ್ಯಾಕ್ಸ್ ನೈಟ್ರಾ ೧೨೦೦೦ದ್ದು!!) ತೆಗೆದು ಕೊಟ್ರು. ಮಾವನಿಗೊಂದು ದೊಡ್ಡ ಥ್ಯಾಂಕ್ಸ್....
ಆವಾಗ ನನಗದೊಂದು ಅದ್ಭುತವಾದ ವಸ್ತುವಾಗಿ ಕಂಡಿತು. ನಾನೂ ವಾಟ್ಸಪ್, ಫೇಸ್‌ಬುಕ್ ಕುಟುಂಬಕ್ಕೆ ಸೇರಿಕೊಂಡೆ. ಒಮ್ಮೊಮ್ಮೆ ಭಯ, ಯಾರಾದ್ರು ಹ್ಯಾಕ್ ಮಾಡಿದ್ರೆ, ಪಾಸ್ ವರ್ಡ್ ಕದ್ರೆ, ಅನ್ನುವಂಥದ್ದು. ಹುಡುಗಿಯರು ಫೇಸ್ ಬುಕ್‍ನಲ್ಲಿ ಫೋಟೋ ಹಾಕ್ಲೇ ಬಾರ್ದು ಅಂತ ನಂಬಿದ್ದ ಗೆಳತಿಯರಲ್ಲಿ ನಾನೂ ಒಬ್ಬಳು. ಮೊದಲು ನನ್ನ ತಲೆಯಲ್ಲಿ ಒಂದು ಯೋಚನೆ ಇತ್ತು, ಫೇಸ್ ಬುಕ್‌ಗೆ ಹುಡುಗಿಯರು ಸೇರುವುದು ಮಹಾ ಅಪರಾಧ ಅಂತ. ನಾನೂ ಹಲವು(ನಾನು ಎಫ್.ಬಿ ಖಾತೆ ತೆರೆಯುವ ಮುನ್ನ) ಬಾರಿ ಗೆಳತಿಯರ ಜೊತೆಯಲ್ಲಿ ಮಾತನಾಡಿಕೊಂಡಿದ್ದೆ,''ಹೇ ಮಾರಾಯ್ತಿ ಅವ್ಳು ಫೇಸ್ ಬುಕ್‍ನಲ್ಲಿ ಇದಾಳಂತೆ ಎಂತದ ಅವಸ್ಥೆ?'' ನನ್ನ ಗೆಳತಿಯರೂ ಅದಕ್ಕೆ ದನಿ, ಪ್ರತಿ ಧ್ವನಿಗಳಾಗಿದ್ದರು '' ಹೌದಂತೆಯ, ಅವಳು ಯಾರ್ಯಾರೊಟ್ಟಿಗೆಲಾ ಚಾಟ್ ಮಾಡುದಂತೆ , ಮಲಗುವಾಗ ರಾತ್ರಿ ಒಂದು ಗಂಟೆ, ಎರಡು ಗಂಟೆ ಆಗ್ತದಂತೆಯಾ!!'' ಈ ರೀತಿ. ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಸ್ಮಾರ್ಟ್ ಫೋನ್‍ನ ಮೂಲಕ ಹಲವು ಹಲವುಗಳನ್ನು ನಾನು ಕಲ್ತ್ಕೊಂಡಿದ್ದೇನೆ, ತಿಳ್ಕೊಂಡಿದ್ದೇನೆ. ಬಹುಷಃ ಅದರ ಸಹಾಯದಿಂದಲೇ ಇವತ್ತು ಬ್ಲಾಗ್ ಕ್ರಿಯೇಟ್ ಮಾಡ್ಲಿಕ್ಕೆ ಸಾಧ್ಯ ಆಯ್ತು. ಧನಾತ್ಮಕವಾಗಿ ಉಪಯೋಗಿಸಿದರೆ ಎಲ್ಲವೂ ಒಳಿತೇ ಆಗ್ತದೆ.
ಯೋಚನೆಗಳು ಆವಾತ್ತೂ ಬರ್ತಿತ್ತು, ಇವತ್ತೂ ಬರ್ತವೆ. ಆವಾಗ ಬಂದ ಯೋಚನೆಗಳನ್ನು ಕಾಗದಗಳ ಮೇಲೋ ಪುಸ್ತಕಗಳ ಒಳಗಡೆಯೋ ಬರೆದಿಡ್ತಿದ್ದೆ. ಈ ಯೋಚನೆಗಳೇ ಹಾಗೆ, ಅವುಗಳಿಗೆ ನೀತಿ ನಿಯಮ ಹೊತ್ತು-ಗಿತ್ತು ಅನ್ನುವಂಥದ್ದು ಒಂಚೂರೂ ಇಲ್ಲ. ಹುಚ್ಚ್ರು. ಬರೀ ಹುಚ್ರು. ರಾತ್ರಿ ಎರಡು ಗಂಟೆಗೋ ಮೂರುಗಂಟೆಗೆಲ್ಲಾ ಎಬ್ಬಿಸಿದ್ದಿದೆ, ಹತ್ತು ದಿನದ ಬಾಳಂತಿ ತರ ಎದ್ದು ಕೂತಿದ್ದೆ. ಆ ಯೋಚನೆಗಳನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದೆ. ಒಂದಷ್ಟು ಹಿಡಿದಿಟ್ಕೊಂಡಿದ್ದೆ ಕೂಡಾ. ಆದ್ರೆ ಮಾಡೋದಾದ್ರೂ ಏನು. ಕಾಲ ಗರ್ಭದೊಳಗೆ ಲೀನವಾಗಿ ಬಿಟ್ಟವು. ಈಗ ಆದ್ಯಾವ ಗೆದ್ದಲ ಹುಳುವಿನ ಹೊಟ್ಟೆಯೊಳಗಿದೆಯೋ ಅಥವಾ ಅದ್ಲಿಚ್ಚನ ಗುಜುರಿ ಅಂಗಡಿಯಲ್ಲಿದೆಯೋ ನಾ ಕಾಣೆ!!
ಆದ್ರೆ ಸ್ಮಾರ್ಟ್ ಫೋನ್ ಬಂದ ನಂತರ ಈ ಯೋಚನೆಗಳ ಹುಚ್ಚಾಟ ಬಹಳಷ್ಟು ಮಟ್ಟಿಗೆ ಕಂಟ್ರೋಲ್ ಆಗಿದೆ. ಅಥವಾ ಉತ್ತರ ಸಿಗದೆ ಅಲೆಯುತ್ತಿದ್ದ ಅವುಗಳ ಅತೃಪ್ತ ಆತ್ಮ ಮೋಕ್ಷ ಪಡ್ಕೊಂಡಿದಾವೆ. ಯೋಚನೆ ನಿರ್ಧಾರ ಆಗಿ ಪರಿವರ್ತನೆ ಹೊಂದಿದೆ. ಇದಿಷ್ಟಾಗ್ಯೂ ಬಂದಂಥವುಗಳು ಫೇಸ್ ಬುಕ್ ಗೋಡೆಯ ಮೇಲೆ ಅಂಟಿಕೊಂಡಿದಾವೆ, ಇನ್ನೂ ಕೆಲವು ಇದೇ ರೀತಿಯ ಯಾವುದೋ ಬ್ಲಾಗ್ ಒಳಗಡೆ ಸೇರಿ ನನ್ನ ತರ ಮಾಡರ್ನ್ ಆಗಿದಾವೆ.
ಹ್ಮ್ಂ!! ನಾನೂ ಹಾಗೇ ಇದ್ದೆ. ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದವಳು ನಾನು. ಇವತ್ತಿಗೂ ಸಂಪ್ರದಾಯಗಳಿಗೆ, ಆಚಾರ-ವಿಚಾರಗಳಿಗೆ ಬೆಲೆ ಕೊಡ್ತೇನೆ. ಆದರೆ ಜೀವನ ಅನ್ನುವಂಥದ್ದು ವೃತ ಅಲ್ಲ. ಇದು ನನ್ನ ಅರಿವೆಗೆ ಬಂದದ್ದು ಇತ್ತೀಚಿನ ಎರಡು ಮೂರು ವರ್ಷಗಳಲ್ಲಿ. ಜಗತ್ತನ್ನು ಸಂಪೂರ್ಣವಾಗಿ ತೆರೆದ ಕಣ್ಣುಗಳಿಂದ ನೋಡುವ ಸಾಹಸ ಮಾಡ್ತಿದ್ದೇನೆ. ಎಷ್ಟೋ ಪ್ರಶ್ನೆಗಳ, ಭಾವನೆಗಳ, ನೋವುಗಳ ಹುಟ್ಟಿಗೂ ಇದು ಕಾರಣ ಆಗಿರಬಹುದು. ಆದರೆ ಪರಿಸ್ಥಿತಿ, ವ್ಯವಸ್ಥೆ ಹಾಗೂ ಅವಸ್ಥೆಗಳಿಗೆ ಕಾರಣವನ್ನು ಊಹಿಸಿಕೊಳ್ಳಲು ಇದು ಸಹಾಯಕವಾಗಿದೆ. ಎಲ್ಲೋ ಒಂದು ಕಡೆ ಕನಸಿನೆಡೆಗೆ ಸಾಗುವ ಹಾದಿಯ ಬಾಗಿಲು ಮೆಲ್ಲನೆ ತೆರೆದುಕೊಳ್ಳುತ್ತಿದೆಯೋ ಎಂಬ ಆಶಾ ಭಾವದ ಚಿಗುರಿಗೆ ಕಾರಣವಾಗಿದೆ.
ನಾನು ಹೀಗಿದ್ದೆ- ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದ ಹೆಣ್ಣು ಮಗಳು. ಚೂಡಿದಾರ, ಲಾಲ್ ಗಂಧ, ಪ್ರತಿದಿನ ತಲೆಗೆ ಅಮ್ಮ ಹಾಕುತ್ತಿದ್ದ
ಎಣ್ಣೆ, ಮಧ್ಯ ಬೈತಲೆ, ಎಂದೆಂದಿಗೂ ಬದಲಾಗದ ೮೫% ಮಾರ್ಕ್ಸ್. ಪಬ್ಲಿಕ್‍ನಲ್ಲಿ ಅಥವಾ ನಾಲ್ಕು ಜನರ ಮುಂದೆ ಮಾತ್ರ ತೆಪ್ಪಗಿರುವ ನಾಲಗೆ, ತಿಥಿ, ಪೂಜೆ, ಮದುವೆ, ಉಪನಯನ, ಬೊಜ್ಜ, ಹೋಳಿಗೆ, ಲಾಡು, ಜಿಲೇಬಿ, ಕಡ್ಲೆ ಪಾಯಸ ಎಕ್ಸೆಟ್ರಾ ಎಕ್ಸೆಟ್ರಾಗಳು. ಪುತ್ತೂರು ಕೂಡಾ ಒಬ್ಬಳೇ ಹೋಗಿ ಬರಲಾರದಷ್ಟು ದೂರದ ಊರು. ಕಣ್ಣ ಮುಂದೆ ಕತ್ತಲು, ಕನಸುಗಳಿವೆ ಆದರೆ ಅದಕ್ಕೆ ಟಾರ್ಚ್ ಹಾಕಿ ಎಲ್ಲಿವೆ, ನಾನ್ ಹೇಗೆ ಹೋದ್ರೆ ತಲುಪಬಹುದು ಅಂತ ಹುಡುಕ್ಲಿಕ್ ಕಷ್ಟ ಆಗ್ತಿದ್ದ ಕಾಲ ಹಾಗೂ ಸನ್ನಿವೇಶ.
ಬಹುಷಃ ಪುತ್ತೂರು ಸೇರಿದ ಮೇಲೆ ಯೋಗ ಬದಲಾದದ್ದೋ, ಹಿರಿಯರು ಮಾಡಿಟ್ಟ ಪುಣ್ಯದ ಫಲವೋ, ಅತ್ತಿಗೆ ನಮ್ಮ ಮನೆ ಸೇರಿದ್ದೋ, ಟಾರ್ಚ್ ಇರುವ ಸ್ಮಾರ್ಟ್ ಫೋನ್ ಕೈ ಸೇರಿದ್ದೋ, ಅಷ್ಟು ವರುಷಗಳ ಕಾಲ ಹಲುಬಿದ ಕಣ್ಣೀರ ಹನಿಗಳು ಚಿಪ್ಪಿನೊಳಗಡೆ ಸೇರಿ ಮುತ್ತುಗಳಾದವೋ ಗೊತ್ತಿಲ್ಲ. ಸಜ್ಜನರ ಸಂಗ, ಅವಕಾಶಗಳ ಆಗಮನ ಏನೇನೋ ಆಗಿ ಬದಲಾದೆ. ಕಣ್ಣು ಬಿಟ್ಟು ಪ್ರಪಂಚವನ್ನು ಬದುಕನ್ನು ನೋಡಲು ಶಕ್ಯಳಾದೆ. ನಾನೇನನ್ನೂ ಸಾಧಿಸಿಲ್ಲ. ಇದು ವರೆಗಿನ ಅನುಭವ ಯಾತಕ್ಕೂ ಸಾಲದು. ನನ್ನ ವಯಸ್ಸು ೨೨ ( ೦೩.೦೨.೨೦೧೮ಕ್ಕೆ) ಬದುಕಿನ, ಸಮಾಜದ ಹಾಗೂ ಇನ್ನಿತರ ಈ ಕ್ಯಾಟಗರಿಗೆ ಸೇರಿದ ಭಯಂಕರ, ಭಯಾನಕಗಳ ಬಗ್ಗೆ ಏನನ್ನು ಹೇಳ ಹೊರಟರೂ ಅಧಿಕ ಪ್ರಸಂಗಿತನ ಆಗ್ತದೆ, ಅಥವಾ ಮಕ್ಕಳಾಟದ ರೀತಿ ಆಗ್ತದೆ.
ಬರೆದಿಟ್ಟ ಸಾಲುಗಳು ಎಲ್ಲೆಲ್ಲೋ ಹಾರಿ ಹೋಗಿ ನಷ್ಟವಾಗದಿರಲಿ, ಎಲ್ಲವೂ ಒಂದೇ ಕಡೆ ಇದ್ದರೆ, ಮುಂದೊಂದು ದಿನ ಬೇಜಾರಾದಗ ಅಥವಾ ಸಂತೋಷ ಆದಾಗ ಕುಳಿತು ಓದಬಹುದಲ್ಲಾ ಎಂಬ ಕಾರಣಕ್ಕೆ ಈ ಬ್ಲಾಗ್ ರಚಿಸಿದೆ. ನನ್ನ ಅನುಭವಗಳನ್ನು ಖುಷಿಯನ್ನು ಯೋಚನೆಗಳನ್ನು ಇಲ್ಲಿ ಬರೆಯ ಹೊರಟಿರುವೆ. ತಲೆ ಕೆಟ್ಟು ಬರೆದದ್ದು, ಓವರ್ ಎಕ್ಸೈಟ್ ಆಗಿ ಬರೆದದ್ದು, ನೋವಾದಾಗ ಬರೆದದ್ದು, ಪ್ರೀತಿಯಿಂದ ಬರೆದದ್ದು ಎಲ್ಲವೂ ಇದೆ. ಓದಿದಾಗ ನಿಮಗೂ ಖುಷಿ ಆದರೆ ನನಗೆ ಸಂತೋಷ. ಸಾಲುಗಳು ಬೋರ್ ಅನಿಸಿದ್ರೆ ಖಂಡಿತಾ ಓದ್ಬೇಡಿ, ಪ್ರೀತಿಯ ನಮಸ್ಕಾರ. ಏನಾದ್ರೂ ಹೇಳ್ಬೇಕು ಅಂತನ್ನಿಸಿದ್ರೆ ಕಾಮೆಂಟ್ ಮಾಡಿ, ನಗುಮೊಗದ ಸ್ವಾಗತ.... ಒಂದಷ್ಟು ಜ್ಞಾನ(ನಾಲೆಡ್ಜ್) ಸಿಕ್ಕಬಹುದು ಅಂತ ತಿಳಿದುಕೊಳ್ಳಲೇ ಬೇಡಿ. ಹಾಳು ಹರಟೆಯಷ್ಟೇ ಇದೆ, ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು.
(ನಿಜವಾಗ್ಲೂ ಇದಿಷ್ಟು ಬೇಕಿತ್ತಾ?🙆 )
-ಪ್ರಗಲ್ಭಾ
Comments
Post a Comment
thank you...