ವಿತ್ ಸೋ ಮಚ್ ಆಫ್ ಕನ್ಫ್ಯೂಷನ್.......!!!



'' ಎಂಥಾ ಹುಡುಗಿಯರಪ್ಪ ಈಗಿನ ಕಾಲದವು ಹಣೆಗೆ ಬೊಟ್ಟು ಇಡುದಿಲ್ಲಾ, ಕೈಗೆ ಬಳೆ ಹಾಕುದಿಲ್ಲ, ತಲೆಯಲ್ಲೊಂದು ಹೂವಿಲ್ಲ, ಕಾಲಿಗೆ ಗೆಜ್ಜೆ ಇಲ್ಲ.'' ರಾಧಕ್ಕ ಹೂವಿನ ಮನೆ ಪೋಜೆಯಲ್ಲಿ ವಾಸಂತಿಯಕ್ಕನ ಜೊತೆ ತನ್ನ ಸೊಸೆಯನ್ನ ದೂರ್ತಿದ್ರು...
ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸುದೇಷ್ಣೆ '' ಹಾಕದಿದ್ರೆ ಎಂಥಾ ಪ್ರೋಬ್ಲೆಮ್ ನಿಮ್ಗೆ, ನೀವ್ ಹಾಕ್ತೀರಲ್ಲ?'' ಅಂದ್ಳು...
''ನೋಡು ಈ ಹುಡುಗಿ ಬೊಟ್ಟು ಹಾಕಿದಾಳೆ ಆದ್ರೆ ಅದು ಕಣ್ಣಿಗೆ ಕಾಣುದಿಲ್ಲ, ಅದೆಷ್ಟು ಚಿಕ್ಕಕೆ ಹಾಕಿದಾಳೆ''
'' ಸರಿ ನೆಕ್ಸ್ಟ್ ಟೈಮ್ ಎಲ್ಲಿಗ್  ಹೋಗ್ತಿದ್ರೂ ಭೂತ ಕನ್ನಡಿ ಹಿಡ್ಕೊಂಡು ಹೋಗಿ. ಯಾರದ್ರು ನಮ್ಮಂತ ಹುಡುಗಿಯರು ಬಂದ್ರೆ ಅವ್ರು ಬೊಟ್ಟು  ಹಾಕಿದಾರಾ ಇಲ್ವಾ ಅಂತ ಚಕ್ ಮಾಡ್ಲಿಕ್ಕೆ ಬೇಕಾಗ್ಬೋದು.''  ಪ್ರಿಯಾ ಇನ್ನೂ ಚಿಕ್ಕಕೆ ಬೊಟ್ಟಿಟ್ಟಿದ್ಳು.
''ನೋಡಿ ಮಕ್ಳೇ ನಾವು ನಿಮ್ಮ ಒಳ್ಳೇದಕ್ಕೇ ಹೇಳುದು. ಮತ್ತೆ ಹೊರಗಿನವ್ರು ಯಾರದ್ರೂ ಎಂತಾದ್ರು ಹೇಳ್ಬಾರ್ದು, ಈ ಹುಡುಗೀರ್ಗೆ ಸಂಸ್ಕಾರ ಇಲ್ಲ, ಸಂಪ್ರದಾಯ ಗೊತ್ತಿಲ್ಲ ಅಂತ ಅದ್ಕೆ ಹೇಳಿದ್ದು''
'' ನೀವು ಬೇರೆಯವ್ರ ಮಕ್ಳ ಬಗ್ಗೆ ಆ ತರ ಅಂದುಕೊಳ್ಳದಿದ್ರೆ ನಿಮ್ಗೂ ಆ ರೀತಿಯ ಯೋಚನೆ ಬರ್ಲಿಕ್ಕಿಲ್ಲ, ಹೊರಗಿನವ್ರು ಅಂದುಕೊಂಡ್ರೆ ನಿಮ್ಗೆಂತ? ನಿಮ್ಗೆ ಹೊರಗಿನವ್ರಿಗೆ ಸರಿ ಅಂತ ಅನಿಸಿಕೊಳ್ಳೋದು ಮುಖ್ಯವಾ?''
'' ಅದೇ ನಮ್ಗೂ ಪೇಟೆಲಿ, ಕಾಲೇಜಲ್ಲಿ ಹೊರಗಿನವ್ರು ಅಂದ್ರೆ ನಮ್ಮ ಫ್ರೆಂಡ್ಸ್ ಹೇಳ್ತಾರೆ ನೋಡು ಅವ್ಳ್ ಫ್ಯಾಮಿಲಿಯವ್ರು ಸೀರೆ ಉಟ್ಟು ತಲೆಗೆ ಎಣ್ಣೆ ಹಾಕಿ ಮಧ್ಯ ಬೈತಲೆ ಮಾಡಿ, ಒಳ್ಳೆ ಶ್ರದ್ಧಾಂಜಲಿ ಫೋಟೋ ಗೆ ಹೂವು ಹಾಕಿದ ಹಾಗೆ ತಲೆಗೆ ಹೂವು ಮುಡ್ಕೊಂಡು, ದೊಡ್ಡ ಬೊಟ್ಟು ಇಟ್ಕೊಂಡು ಬರ್ತಾರೆ, ಒಳ್ಳೆ ಗೌರಮ್ಮನ್ ತರ ಅಂತ, ಹಾಗಂತ ನಾವೇನಾದ್ರೂ ನಿಮ್ಗೆ ಫೋರ್ಸ್ ಮಾಡಿದೇವಾ ಜೀನ್ಸ್ - ಟಿ ಷರ್ಟ್ ಹಾಕೊಂಡ್ ಬನ್ನಿ, ಹೈರ್ ಫ್ರೀ ಬಿಡಿ, ಬಳೆ ಬೊಟ್ಟು ಹಾಕ್ಬೇಡಿ, ಹೂವು ಮುಡಿಬೇಡಿ ಅಂತ... ನಮ್ಗೆಷ್ಟು ಶೇಮ್ ಆಗ್ತದೆ ಗೊತ್ತುಂಟಾ?''
''ಯಬ್ಬಾ ಈ ಹುಡ್ಗೀನೇ? ಅದೆಲ್ಲಾ ನಮ್ಮ ಸಂಪ್ರದಾಯ, ಅದನ್ನ ನಗಾಡ್ಕೊಳ್ಳುವವರು ನಗಾಡ್ಕೊಳ್ಳಿ ನಾವೆಂತಕ್ಕೆ ತಲೆ ಕೆಡ್ಸ್ಕೊಳ್ಬೇಕು?''
'' ನಮ್ಮ ಸಂಪ್ರದಾಯಾನ ನಾವೂ ಉಳಿಸ್ತೇವೆ. ದೇವಸ್ಥಾನಕ್ಕೆ ಹೋಗುವಾಗ, ಪೂಜೆಗ್ ಹೋಗುವಾಗ, ಇಲ್ಲಿ ಹಳ್ಳಿಲಿ ನಾವೂ ಬೊಟ್ಟು ಬಳೆ ಹಾಕ್ತೇವೆ, ಸೀರೆ ಉಡ್ತೇವೆ, ಅಷ್ಟೂ ಮಾಡ್ದೇ ಇರೋವು ಇದ್ರೆ ಅವ್ರಿಗ್ ಮಾತ್ರ ಹೇಳಿ, ಈಗಿನ್ ಕಾಲದ್ ಹುಡ್ಗೀರು ಅಂತ ಯಾತಕ್ಕೆ ಸೇರಿಸ್ತೀರಿ?''
'' ಅಲ್ಲಾ, ನೀವು ಹೇಳಿದ ಹಾಗೆ ನಾವು ಕೇಳ್ತೇವೆ, ಅದೇ ನಾವು ಹೇಳಿದಾಗೆ ನೀವು ಕೇಳ್ತೀರಾ?''
''ಅದೇ, ನೀವು ಸೀರೆ ಉಡಿ ಅಂದದಕ್ಕೆ ನಾವು ಉಟ್ತೇವೆ, ನಾವು ಜೀನ್ಸ್ ಹಾಕಿ ಅಂದ್ರೆ ನೀವು ಹಾಕ್ತೀರಾ?'' ಪ್ರಿಯಾ ರೇಗಿದ್ಳು.
''ನೋಡು ನಾವು ನಮ್ಮ ಸಂಪ್ರದಾಯಾನ ಉಳಿಸ್ಲಿಕ್ಕಾಗಿ ಹೇಳ್ತೇವೆ. ನೀವು ಇನ್ಯಾರದ್ದೋ ವಿದೇಶೀಯರ ಸಂಪ್ರದಾಯಕ್ಕೆ ಒತ್ತು ಕೊಡ್ತಿದ್ದೀರ, ನೀವು ಸೀರೆ ಉಟ್ರೆ ಅಡ್ಡಿಲ್ಲ. ನಾವು ಜೀನ್ಸ್ ಹಾಕಲ್ಲ. ಅದು ನಮ್ಮ ಸಂಪ್ರದಾಯಕ್ಕೆ ವಿರುದ್ದ, ಮತ್ತೆ ನಮ್ಗದು ಹಿಡಿಸುದಿಲ್ಲ'' ರಾಧಕ್ಕಂಗೂ ಸೋಲ್ಲಿಕ್ಕೆ ಮನ್ಸಾಗ್ಲಿಲ್ಲ.
'' ನಾವು ನೀವು ಹೇಳಿದ್ದನ್ನ ಕೇಳ್ತೇವೆ ಸೋ ಸಂಪ್ರದಾಯನ ಉಳಿಸ್ತೇವೆ. ಓಕೆ... ಆದ್ರೆ ನೀವು ಕಾಲಿ ಸಂಪ್ರದಾಯ ಉಳಿಸ್ಲಿಕ್ಕೋಸ್ಕರ ಮಾತ್ರ ಈ ರೀತಿ ಹೇಳುದಲ್ಲ, ಬದಲಾಗಿ ಈಗಿನ ಕಾಲದ ಹುಡ್ಗೀರನ್ನ ಬೈಯೋದು ನಿಮ್ಮ ನಾಲಿಗೆಗೆ ರುಚಿಯಾಗ್ತದೆ ಅದೂ ಕೂಡಾ ಇನ್ನೊಂದು ಕಾರಣ ಒಪ್ಪ್ಕೊಳ್ಳಿ....''
ಸುದೇಷ್ಣೆ ಮಾತಾಡಿದ್ದೆಲ್ಲಾ ಸರಿ ಇರುದಿಲ್ಲಾ, ಅವ್ಳಿಗೆ ಅಸಹನೆ ಸಿಟ್ಟು ಯಾಕಂದ್ರೆ ಅವ್ಳಜ್ಜಿ ಅವ್ಳಿಗ್ ಮಾತ್ರ ಶಾಸ್ತ್ರ ಕಂಪಲ್ಸರಿ ಮಾಡಿ ತಮ್ಮನನ್ನು ಆರಾಮಾಗಿ ಬಿಟ್ಟಿದ್ದಾರೆ.
 ''  ಗುರು ಹಿರಿಯರಿಗೆ ಗೌರವ ಕೊಡ್ಬೇಕು ಅನ್ನೋದು ಕೂಡಾ ನಮ್ಮ ಸಂಸ್ಕೃತಿ ಸಭ್ಯತೆ ಈ ರೀತಿ ರೇಗಾಡೋದು ಹುಡುಗೀರ್ಗೆ ಶೋಭೆ ಅಲ್ಲಾ, ಅಲ್ವೇನೆ ಶೋಭಾ?'' ವಾಸಂತಿಯಕ್ಕ ಶೋಭಕ್ಕನನ್ನೂ ತಮ್ಮ ಗುಂಪಿಗೆ ಸೇರಿಸಿಕೊಳ್ತಾರೆ.
'' ಅಲ್ದೇ ನಾಗವೇಣಿ, ನೀನ್ ಮೊನ್ನೆ ತಾನೆ ಹೇಳಿದ್ದು, ವಾಸಂತಿಯಕ್ಕ ಅವ್ರತ್ತೆಗೆ ಬೈತಾ ಇದ್ರು ಅಂತ?'' ಸುದೇಶ್ಣೆ ಬೇಕೆಂದೆ ಈ ಟಾಪಿಕ್ ತೆಗೀತಾಳೆ.
ನಾಗವೇಣಿ, ಸುದೇಷ್ಣೆ, ಪ್ರಿಯಾ ಎಲ್ರೂ ತಾವೇ ಗೆದ್ದೆವು ಎಂಬಂತೆ ನಗ್ತಾರೆ.
'' ಅತ್ತೆಗ್ ನಾನ್ ಬೈದಿದ್ದಲ್ಲ, ಅವ್ರಿಗೊಂದು ಸಲಹೆ ಕೊಟ್ಟಿದ್ದಷ್ಟೆ'' ವಾಸಂತಿಯಕ್ಕ ತಮನ್ನ ತಾವು ಸಮರ್ಥಿಸಿಕೊಳ್ತಾರೆ.
'' ಓಹೋಹೋ,'' ನಾಗವೇಣಿಗೆ ಪ್ರಾಯ ಐವತ್ತಾದರೂ ಆಕೆ ಆಧುನಿಕ ಜೀವನ ಶೈಲಿನೂ ಒಪ್ಪುತ್ತಾಳೆ, ಸಂಪ್ರದಾಯಕ್ಕೆ ಬದ್ದಳಾಗೂ ಇರ್ತಾಳೆ.
ಅವ್ಳ ಮಗ ಬೆಂಗಳೂರಲ್ಲಿ ಇಂಜಿನಿಯರ್ ಅವ್ಳು ಬೆಂಗ್ಳೂರು ಮಂಗ್ಳೂರು ಎಲ್ಲೇ ಹೋದ್ರೂ ಅಥವಾ ಕೆಲ್ಸ ಮಾಡುವಾಗ ಚೂಡಿದಾರ ಧರಿಸ್ತಾಳೆ. ಊರಲ್ಲಿ ಸೀರೆ.
''ನಮ್ಗೆ ಯಾವ ಟೈಮಲ್ಲಿ ಯಾವ್ದು ಕಂಫರ್ಟ್ ಆ ರೀತಿ ಬದ್ಕ್ಬೇಕು, ಚಳಿಗಾಲದಲ್ಲಿ ಸ್ವೆಟರ್ ಹಾಕ್ತೇವೆ, ಮಾಳೆಗಾಲದಲ್ಲಿ ರೈನ್ಕೋಟ್ ಹಾಕೊಳ್ತೇವೆ, ಬೇಸಿಗೆಯಲ್ಲಿ ಹತ್ತಿ ಬಟ್ಟೆ ಧರಿಸ್ತೇವೆ. ಸಂಪ್ರದಾಯ ಅಂತ ಆ ರೀತಿ ಮಾಡದೇ ಹೋದ್ರೆ ಅನಾವಶ್ಯಕವಾಗಿ ಕಷ್ಟ ಪಡ್ಬೇಕಾಗ್ತದೆ. ಸುಲಭ ದಾರಿಗಳಿದ್ರೂ ಕಷ್ಟವನ್ನ ಬೇಕು ಬೇಕಂತಲೇ ಅನುಭವಿಸ್ಕೊಳ್ತೇವೆ. ಯಾವುದೇ ತತ್ತ್ವಗಳಿಗೆ ಅಂಟಿಕೊಂಡಿರ್ಬಾರ್ದು, ಜೀವನ ವೃತ ಅಲ್ಲ, ಅದನ್ನು ಅನುಭವಿಸ್ಬೇಕು, ಎಲ್ಲಾ ವಿಷ್ಯಗಳನ್ನೂ ಸವಿಬೇಕು. ಹಾಗಂತ ಅತೀ ಆಗಿನೂ ಅಲ್ಲ. ಸಂಪ್ರದಾಯು ಅಥವಾ ಸಂಸ್ಕೃತಿಗಳು ಆಚರಣೆಗಳ ಮೂಲಕವೇ ಉಳಿಯುವುದು ನಿಜ. ಹಾಗಂತ ಬಲವಂತವಾಗಿ ಯಾರ ಮೇಲೂ ಹೇರ್ಲಿಕ್ ಹೋಗ್ಬಾರ್ದು. ಆವಾಗ್ಲೆ ಸಮಸ್ಯೆಗಳು ಉದ್ಭವಿಸ್ತವೆ. ಅನುಸರಿಸಬೇಕು ಅಂದುಕೊಂಡವನೂ ಕೂಡಾ ಈ ಅತಿಯಾದ ಹಾಗೂ ಕೊಂಕು ಮಾತುಗಳಿಗೆ ರೋಸಿ ಹೋಗಿ ಆ ವಿಚಾರಗಳ ಬಗ್ಗೆ ಉದಾಸೀನತೆ ಹೊಂದ್ತಾನೆ, ಅಥವಾ ಅದನ್ನು ನಿರಾಕರಿಸ್ತಾನೆ.''
ಅಲ್ಲೇ ಇದ್ದಾ ವೈದಿಕರು ಈ ವಿಚಾರಕ್ಕೆ ದನಿ ಕೂಡಿಸ್ತಾರೆ.
'' ಹೌದು ವೈದಿಕರು ಪ್ಯಾಂಟ್ ಹಾಕ್ಬಾರ್ದು, ನೀರುಳ್ಳಿ ಬೆಳ್ಳುಳ್ಳಿ ತಿನ್ಬಾರ್ದು, ಹೋಟೆಲ್ ಊಟ ಮಾಡ್ಬಾರ್ದು ಇತ್ಯಾದಿ ಇತ್ಯಾದಿ ಹೇಳ್ತಾರೆ. ನಮಗೆ ಹತ್ತು ಕಡೆ ಕಾರ್ಯಕ್ರಮ ಇರ್ತದೆ. ನಾವು ದ್ವಿಚಕ್ರ ವಾಹನ ಚಲಾಯಿಸ್ಬೇಕಾಗ್ತದೆ, ಆವಾಗ ಪಂಚೆ ಉಟ್ಕೊಂಡು ಕಷ್ಟ ಪಟ್ಟು ಬೈಕ್ ಓಡ್ಸೋದು ಅಲ್ಲೆಲ್ಲೋ ಬ್ಯಾಲೆಂನ್ಸ್ ತಪ್ಪಿ ಬಿದ್ದು ಕೈಕಾಲ್ ಮುರ್ಕೊಳ್ಳೋದು ಬೆಸ್ಟ್ ಆ? ಅಥವಾ  ಪ್ಯಾಂಟ್ ಹಾಕ್ಕೊಂಡು ಸೇಫ್ ಆಗಿ ಜಾಗ ಸೇರೋದು ಬೆಸ್ಟ್ ಆ?, ನೀರುಳ್ಳಿ, ಬೆಳ್ಳುಳ್ಳಿ ವೈದಿಕರು ಮಾತ್ರ ಅಲ್ಲ, ಬ್ರಾಹ್ಮಣರ್ಯಾರೂ ತಿನ್ಬಾರ್ದು, ಅದು ತಾಮಸ ಪದಾರ್ಥ ಅಂತ ಹೇಳಿದ್ದಾರೆ. ನೀವು ಮೊನ್ನೆ ನೀರುಳ್ಳಿ ಬಜ್ಜಿ ಮಾಡಿದ್ದು ನಮ್ಮನೆ ತನಕ ಪರಿಮಳ ಬರ್ತಾ ಇತ್ತು.!!! '' ಅಲ್ಲೊಬ್ಬ ಯಂಗ್ ಪುರೋಹಿತ್ರು ಕ್ವೆಶ್ಚನ್ ಮಾಡ್ತಾರೆ.
'' ಅಲ್ಲಾ ನೀವು ವೈದಿಕರು ಅಷ್ಟಕ್ಕಾಗಿ ಮಾತ್ರ ಪ್ಯಾಂಟ್ ಹಾಕೋದಲ್ಲ, ನೀವು ಶೋಕಿ ಮಾಡ್ತೀರಿ'' ಶೋಭಕ್ಕನ್ನ ಗಂಡ ಆರೋಪ ಮಾಡ್ತಾರೆ.
 '' ವೈದಿಕರು ಅಂತಲ್ಲ, ಭಾರತೀಯ ಸಂಸ್ಕೃತಿ ಪಂಚೆ, ಅದನ್ನು ಬೆಂಬಲಿಸುವವರ್ಯಾರೂ ಕೂಡಾ ಪ್ಯಾಂಟ್ ಹಾಕ್ಬಾರ್ದು, ಒಪ್ಪಿಕೊಳ್ಳಿಕ್ ತಯಾರಿದ್ದೀರಾ, ವಾಸಂತಿಯಕ್ಕ ಸೊಸೆಗೆ ಸೀರೆ ಕಂಪಲ್ಸರಿ ಮಾಡ್ದಂಗೆ ಮಗನಿಗೆ ಪಂಚೆ ಕಂಪಲ್ಸರಿ ಮಾಡ್ತೀರಾ?  ಏನ್ಬೇಕಾದ್ರು ಮಾಡ್ಬೋದು ನಾವು ಮಾಡಿದ್ರೆ ಮಾತ್ರ ಅದು ದೊಡ್ಡ ವಿಷ್ಯ, ಹೌದು ಸ್ವಾಮಿ ಶೋಕೀನೇ ಏನಿಗ? ನಾವು ಯಾರ್‍ಯಾರದ್ದೋ ತಲೆ ಒಡ್ದ ದುಡ್ಡಲ್ಲಲ ಶೋಕಿ ಮಾಡೋದು, ಸರಕಾರದಿಂದ ಮೀಸಲಾತಿ ಪಡ್ದಲ್ಲ ಶೋಕಿ ಮಾಡೋದು ನಾವು ಕಷ್ಟ ಪಟ್ಟು ದುಡ್ದ ಹಣದಲ್ಲಿ ಶೋಕಿ ಮಾಡ್ತೇವೆ'' ಅಲ್ಲಿ ರುದ್ರ ಪಠಣಕ್ಕೆ ಬಂದಿದ್ದ ವೈದಿಕರ ಗುಂಪೇ ಸೇರಿತು. ಅದ್ರಲ್ಲೊಬ್ಬ ಯಂಗೆಸ್ಟ್ ಪುರೋಹಿತ್ರು ಈ ಮಾತ್ ಹೇಳಿದ್ರು.
''ವೇದ-ಪುರಾಣ, ಮಂತ್ರ ಎಲ್ಲಾ ಅಭ್ಯಾಸ ಮಾಡಿದ ನೀವೇ ಹೀಗ್ ಹೇಳಿದ್ರೆ ಹೇಗೆ?'' ಹೆಂಗಸರ ಗುಂಪಿಂದ ಒಬ್ಳು ಕೇಳ್ತಾಳೆ.
''ನೋಡಿ ತಾಯಿ, ಎಲ್ಲಾ ಗ್ರಂಥಗಳು ಎಷ್ಟೇ ವಿಚಾರಗಳನ್ನು ಹೇಳ್ಲಿ, ಕೊನೇಗ್ ಒಂದು ಮಾತು ಹೇಳ್ತವೆ 'ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಂ' ಅಂತ. ನಾವ್ಯಾರನ್ನೂ ನೋಯಿಸ್ಲಿಲ್ಲ, ಅವ್ರವ್ರೇ ಉರ್ಕೊಂಡ್ ಹೊಟ್ಟೆಕಿಚ್ಚ್ ಪಟ್ಕೊಂಡ್ರೆ ನಾವೇನ್ ಮಾಡೋದು ಹೇಳಿ...?''
''ಹೌದು, ಅದಿವ್ರಿಗೆಲ್ಲಿ ಗೊತ್ತಾಗ್ಬೇಕು? ಯಾವಾಗ್ಲು ಕೊಂಕ್ ಮಾತಾಡ್ತಾ ಬೇರೆಯವ್ರ ಮನಸ್ ನೋಯಿಸ್ಲಿಕಷ್ಟೇ ಇವ್ರ ಶುದ್ಧ, ಶಾಸ್ತ್ರಗಳು ಸೀಮಿತ, ಅದನ್ನ ಸಂಪ್ರದಾಯ ಅನ್ನೋ ಹಿಟ್ಟಲ್ಲಿ ಅದ್ದಿ ಅಜ್ಞಾನ ಅನ್ನೋ ಎಣ್ಣೆಗ್ ಹಾಕಿ ಬಿಸಿ ಬಿಸಿ ಬಜ್ಜಿ ಮಾಡ್ ನಮ್ಮುಂದೆ ಇಡ್ತಾರೆ.'' ಆ ಮನುಷ್ಯ ಹೇಳಿದ್ ಮಾತು ತುಂಬಾ ಜನಕ್ಕೆ ಅರ್ಥಾನೇ ಆಗ್ಲಿಲ್ಲ.
''ಅದೆಲ್ಲಾ ಬಿಡಿ, ಸತ್ತ ತಂದೆ ಮುಖ ನೋಡ್ಲಿಕ್ಕೋಗದ ಮಗ, ಸಂಬಂಧಿಕರು, ಸಂಬಂಧಗಳೇ ಬೇಡದಂತೆ ಬದುಕುವ ಸೊಸೆ, ದೇವರಿಗೊಂದು ದೀಪ ಹಚ್ಚಿಡದ ಮಗಳು, ಕಣ್ಣು ಮುಂದೆ ಯಾರೋ ತಲೆಸುತ್ತಿ ಬಂದು ಬಿದ್ದಾಗ ಅವ್ರಿಗೆ ಸಹಾಯ ಮಾಡ್ಲಿಕ್ ಮುಂದಾಗದ ಅಳಿಯ, ಯಾರ್ಯಾರ ಜೊತೆ ಊರೂರು ಸುತ್ತುವ ಮೊಮ್ಮಗ, ಮೊಮ್ಮಗಳು ಮುಂತಾದ ನೈತಿಕ ಗುಣಗಳೇ ಇಲ್ಲದವರು ಎಷ್ಟು ಮನೆಯಲ್ಲಿಲ್ಲ. ನಿಮ್ಗೆ ಯಾರನ್ನಾದ್ರೂ ದೂರ್ಲೇ ಬೇಕು. ಯಾರದ್ದೋ ತಪ್ಪು ಹುಡ್ಕ್ಲೇ ಬೇಕು, ಯಾರಿಗಾದ್ರೂ ಬುದ್ದಿ ಹೇಳ್ತಾನೆ ಇರ್ಬೇಕು ಅಂತಂದ್ರೆ ಇವ್ರಿಗ್ ಹೇಳಿ, ಯಾಕ್ ಸಾಧ್ಯ ಆಗೋದಿಲ್ಲ?'' ಗುಂಪಿನಿಂದ ಗಂಡಸು ಧ್ವನಿಯೊಂದು ಕೇಳಿ ಬಂತು.
''ಅದು ಬಿಟ್ಟು ಈಗಿನ ಕಾಲದವರ ಬುದ್ಧಿಯೇ ಸರಿ ಇಲ್ಲ ಅಂತ ಬೊಬ್ಬೆ ಹಾಕ್ಬೇಡಿ. ನಿಮ್ಗೆ ಎಟಿಎಂ ನಿಂದ ಹಣ ಡ್ರಾ ಮಾಡ್ಲಿಕ್ ಬರೋದಿಲ್ಲ. ಅರ್ಜೆಂಟಾಗಿ ಆಧಾರ್ ಕಾರ್ಡ್ ಬೇಕಾದ್ರೆ ವಾಟ್ಸಪ್ ನಲ್ಲಿ ಅದ್ರದ್ದೊಂದು ಫೋಟೋ ಕಳಿಸ್ಲಿಕ್ ಬರುದಿಲ್ಲ, ಹತ್ತು ರೂಪಾಯಿ ಖರ್ಚಗ್ತದಲ್ಲಾ ಅಂತ ಬಾಯಾರಿಕೆ ಆದಾಗ ಒಂದು ಬಾಟ್ಲ್ ನೀರ್ ತೆಗ್ದು ಕುಡಿಯದೇ ಕಷ್ಟ್ ಪಡ್ತೀರಿ, ನಿಮ್ಮ ಲೈಫ್ ಇಟ್ಕೊಂಡು ಒಂದು ರಿಯಾಲಿಟಿ ಶೋ ಮಾಡ್ಬೋದು'' ಅಲ್ಲೊಬ್ಬ ಪಿಯು ಓದ್ತಿರುವ ಹುಡುಗ ತನ್ನದೊಂದು ವಾಕ್ಯ ಇರ್ಲಿ ಅಂತ ಸೇರಿಸ್ತಾನೆ.
''ಅಲ್ಲಾಪ್ಪಾ, ನೀನು ಸುಖವಾಗಿರ್ಲಿ ನಿನಗ್ ಮುಂದಕ್ಕೆ ಹಣದ ಅವಶ್ಯಕತೆ ಬರ್ತದೆ , ನಿನ್ನ ಉಳಿತಿಗಾಗಿ ನಿನ್ನ ತಂದೆ ತಾಯಿ ಈ ರೀತಿ ಕಷ್ಟ ಪಟ್ರೆ ಅದ್ಕೆ ಹೀಗಾ ಹೇಳುದು?'' ಅಲ್ಲೊಬ್ಬ ಅಜ್ಜ ಕೇಳ್ತಾರೆ.
''ಅಲ್ಲಾ, ಅವ್ರು ತಮ್ಮ ತಮ್ಮೊಳಗೇ ಏನೋ ಮಾತಾಡ್ತಿದ್ರು, ಅದನ್ನ ಇಷ್ಟೊಂದು ದೊಡ್ಡ ವಿಷ್ಯ ಮಾಡಿ ಎಲ್ರೂ ಇಲ್ಲಿ ಸೇರಿದೀರಲ್ಲ,'' ಮನೆಯ ಯಜಮಾನ ಬಂದ.
ಅವ್ನ ಮಗಳು ಬಂದ್ಳು, ಆಕೆ ಹಾರ್ವಡ್ ಯುನಿವರ್ಸಿಟಿಯಲ್ಲಿ ಬಾಟನಿ ಪ್ರೊಫೆಸರ್ ಪೂಜೆಗಾಗಿ ಊರಿಗೆ ಬಂದಿದ್ಳು.'' ಯಾವುದೇ ಸಂಪ್ರದಾಯಗಳನ್ನು ಆಚರಿಸುವ ಮೊದಲು ಅದರ ಹಿಂದಿನ ಕಾರಣ ತಿಳ್ದಿದ್ರೆ ಒಳ್ಳೇದು. ಯಾಕೆ ಹಣೆಗೆ ಬೊಟ್ಟು ಹಾಕ್ಬೇಕು, ಅಂತಂದ್ರೆ ಇಟ್ ಮೆ ಬಿ ಬೊಟ್ಟಿಡುವ ಹಣೆಯ ಆ ಭಾಗದಲ್ಲಿ ಅದೆಷ್ಟೋ ನರಗಳು ಇರ್ತವೆ, ನಾವು ಬಲವಾಗಿ ಅದುಮಿ ಆ ಭಾಗದಲ್ಲಿ ಸಿಂಧೂರ ತಿಲಕ ಇಟ್ಟರೆ ಅವು ಚೈತನ್ಯಗೊಳ್ತವೆ ಎಂಬ ಉದ್ದೇಶ ಇರ್ಬೋದು. ಅದೂಕೂಡಾ ಶುದ್ಧ ಕುಂಕುಮ ಇಡ್ಬೇಕು. ಇವತ್ತು ಮಾರ್ಕೆಟ್‌ನಲ್ಲಿ ಸಿಗುವ ಕೆಮಿಕಲ್ ಕುಂಕುಮ ಇಟ್ರೆ ಅದು ಪರಿಣಾಮಕಾರಿ ಅಂತ ಹೇಳ್ಲಿಕ್ ಸಾಧ್ಯ ಇಲ್ಲ. ವಾಸಂತಿಯಕ್ಕ ನೀವು ಮನೇಲೇ ಕುಂಕುಮ ತಯಾರ್ ಮಾಡ್ಬೇಕು. ಹೇಗ್ ಮಾಡೋದು ಅಂತ ನಾನ್ ಹೇಳ್ಕೊಡ್ತೇನೆ. ಅದು ಬಿಟ್ಟು ದೊಡ್ಡದಾಯಿತು, ಚಿಕ್ಕದಾಯ್ತು, ಬೊಟ್ಟಿಡ್ಲಿಲ್ಲ ಅಂತ ಕೊಂಕಾಡೊದು ಸರಿಯಾ? ಆಚರಣೆಗಳ ಹಿಂದಿನ ಉದ್ದೇಶ ತಿಳಿದಿರ್ಬೇಕು. ಹುಡುಗಿಯರಿಗೆ ಬೋಧನೆ ಮಾಡ್ಲಿಕ್ಕಾಗಿ ಆಚರಣೆ ಆಗಿರ್ಬಾರ್ದು.''
'' ಏನೋ ನಿಮ್ಮಷ್ಟು ಓದ್ಕೊಂಡಿಲ್ಲಾ, ಅದೂ ಅಲ್ದೇ ನಾವು ನಮ್ಮ ಹಿರಿಯರು ಕಾಪಡ್ಕೊಂಡ್ ಬಂದದ್ದನ್ನ ನಮ್ಮಕ್ಳು ಉಳ್ಸ್ಕೊಳ್ಳಿ ಅಂತ ಹೇಳ್ತೇವಷ್ಟೆ'' ರಾಧಕ್ಕ ಮುಖ ಸಿಂಡರ್ಸಿಕೊಳ್ತಾಳೆ.
''ಅಕ್ಕಾ, ನಾನು ಪ್ರತೀ ಮಂಗಳವಾರ ಶುಕ್ರವಾರ ಲಲಿತಾ ಸಹಸ್ರನಾಮ ಓದ್ತೇನೆ, ಭಗವದ್ಗೀತೆಯ ಒಂದಷ್ಟು ಶ್ಲೋಕಗಳು ಬಾಯಿ ಪಾಠ ಬರ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಬಲ್ಲೆ. ನಾನು ವೇದಾಧ್ಯಯನ ಮಾಡಿಲ್ಲವಾದರೂ ಒಂದಷ್ಟು ಮಂತ್ರಗಳು ಕೇಳಿ ಕೇಳಿಯೇ ಕಲಿತಿದ್ದೇನೆ. ನನಗೂ ನನ್ನ ಧರ್ಮದ ಬಗ್ಗೆ, ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನವಿದೆ, ಗೌರವವಿದೆ, ಪ್ರೀತಿ ಇದೆ. ನನ್ನ ಧರ್ಮವನ್ನು ಸಂಸ್ಕೃತಿಯನ್ನು ,ಸಂಸ್ಕಾರ, ಸಂಪ್ರದಾಯಗಳನ್ನು ಉಳಿಸ್ಬೇಕು ಅನ್ನೋ ಕನಿಷ್ಟ ಪ್ರಜ್ಞೆ ನನಗೂ ಇದೆ. ಸನಾತನವಾದ ನನ್ನ ಧರ್ಮದಲ್ಲಿ, ಧರ್ಮಗ್ರಂಥಗಳಲ್ಲಿ ಅಡಗಿರುವ ತತ್ವಗಳ ಬಗ್ಗೆ, ಅಂಶಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ, ಆಸಕ್ತಿ ಇದೆ. ಈ ಬಗ್ಗೆ ಜ್ಞಾನವಂತರು ಯಾರೇ ಸಿಕ್ಕಿದರು ಅವರಲ್ಲಿ ಮಾತನಾಡ್ತೇನೆ. ಆ ಬಗ್ಗೆ ಚರ್ಚೆ ಮಾಡ್ತೇನೆ. ನನ್ನ ಆತ್ಮಕ್ಕೆ ಮೋಸ ಮಾಡ್ಲಿಕ್ಕೆ ನಂಗಿಷ್ಟ ಇಲ್ಲ. ಅಕ್ಕಾ ಸತ್ಯ ಹೇಳ್ತೇನೆ, ನನಗೆ ನನ್ನ ಸಂಸ್ಕೃತಿಯ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ. ''
''ಅಷ್ಟಿದ್ರೆ ನಮ್ಮ ಸಂಸ್ಕೃತಿ ಉಳಿತದೆ, ಸುಮ್ಮನೆ ಬೇರೆ ಸಂಸ್ಕೃತಿಯ ಅಂಧಾನುಕರಣೆಯಿಂದ ಏನೂ ಪ್ರಯೋಜನ ಇಲ್ಲ. ಹಾಗಂತ ಪರಿಸ್ಥಿತಿಗೆ ತಕ್ಕ ಹಾಗೆ ಕಾಲಕ್ಕೆ ತಕ್ಕ ಹಾಗೆ ಹೊಂದಿಕೊಳ್ಳೋದು ತಪ್ಪಲ್ಲ. ಪೇಟೆಲಿ ಪಾಶ್ ಆಗಿ ಇದ್ದು ಹಳ್ಳಿಲಿ ಹಳ್ಳಿಯವ್ರ ತರ ಇರೋರನ್ನ ನೋಡಿ ಸಾಚಾ ತರ ನಾಟಕ ಮಾಡ್ತಾನೆ ಅಂತ ಹಳಿಯುವುದು ತಪ್ಪು. ಯಾಕಂದ್ರೆ ಅವ್ನು ಯಾವ ಯಾವ ಪ್ರದೇಶದಲ್ಲಿ ಹೇಗೆ ಬೇಕು ಹಾಗೆ ಹೊಂದಿಕೊಳ್ತಾನೆ.''
''ಅಲ್ಲ, ಹಾಗಾದ್ರೆ ಈ ಎಲ್ಲಾ ಆಚರಣೆಗಳು ಹಳ್ಳಿಗೆ ಮಾತ್ರ ಸೀಮಿತವಾ ಪೇಟೆಲಿ ಹೇಗಿದ್ರೂ ಪರವಾಗಿಲ್ವಾ?''
''ಅಲ್ಲ, ಯಾವ ಕಡೆ ಹೇಗೆ ಬೇಕು ಹಾಗೆ ಇರ್ಬೇಕು, ಅಥವಾ ನಿನಗೆ ಸಾಧ್ಯವಾ ಈ ವ್ಯವಸ್ಥೆಯನ್ನೇ ಬದಲಾಯಿಸು. ಅವ್ರೂ ನಮ್ಮ ಸಂಪ್ರದಾಯ ಅನುಸರಿಸೋ ಹಾಗೆ ಮಾಡು''
''ನಿನ್ನಿಷ್ಟದಂತೆ ಬದುಕು, ಯಾರನ್ನೂ ಈ ವಿಷಯವಾಗಿ ಅತಿಯಾಗಿ ಬಲವಂತ ಮಾಡ್ಬೇಡ. ನಮ್ಮ ಆಚರಣೆಗಳಿಗೂ ತೊಂದರೆ ಬರ್ಬಾರ್ದು, ಉಳಿದವ್ರಿಗೂ ನೋವಾಗ್ಬಾರ್ದು, ನಮ್ಮ ತನ ಇತಿಹಾಸ ಆಗ್ಲಿಕ್ಕೆ ನಾವು ಕಾರಣರಾಗ್ಬಾರ್ದು'' ಆ ಮನೆಯ ಕುಲಪುರೋಹಿತರು ಊಟಕ್ಕೆ ಎಲೆ ಹಾಕುವಂತೆ ಸೂಚಿಸಿ ಗುಂಪನ್ನು ಚದುರಿಸಿದರು.
''ಏನು ಮಾಡೋದು ಸಂಪ್ರದಾಯ ಸತ್ತ್ ಹೋಗ್ತಾ ಇದೆ, ಯಾರ್ಗೂ ಉಳ್ಸ್ಕೊಳ್ಳೋಕೆ ಇಷ್ಟ ಇಲ್ಲ, ನಾವಿರುವಲ್ಲಿಯವರೆಗೆ ಇರ್ತದೆ. ನಮ್ಮ ಮಕ್ಕಳ ಕಾಲಕ್ಕೆ ಯಾವುದು ಇರ್ಲಿಕಿಲ್ಲ.'' ರಾಧಕ್ಕ ಅಸಮಧಾನದಿಂದ ನುಡಿಯುತ್ತಾರೆ.
ನಾನಂತು ಎಲ್ಲಾ ಕೇಳ್ತಾ ದೊಡ್ಡ ಗೊಂದಲಕ್ಕೆ ಒಳಗಾದೆ, ಇಲ್ಲಿ ಸಂಪ್ರದಾಯ ಸತ್ತೋಗ್ತಾ ಇದೆಯಾ? ಅಲ್ಲಾ, ಬೇಕಾದಂತೆ ಬದುಕುವ ಸ್ವಾತಂತ್ರ್ಯ ಸತ್ತೋಗ್ತಾ ಇದೆಯಾ? ಇದು ಸ್ವಾತಂತ್ರ್ಯ ಅಷ್ಟೆನಾ? ಅಲಾ, ಸ್ವೇಚ್ಚಾಚಾರಕ್ಕೆ ತಿರುಗಿ ಬಿಟ್ಟಿದೆಯಾ?  ಇನ್ನೂ ಯೋಚಿಸುತ್ತಲೇ ಇದ್ದೇನೆ.....
                                                                                                                                    -ಪ್ರಗಲ್ಭಾ

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....