ದನಿ ಇರದ ಬಾಳಿನಲ್ಲಿ....

 
  ಅವನೊಬ್ಬ ದೊಡ್ಡ ಹಾಡುಗಾರ. ೨೫ನೇ ವಯಸ್ಸಿಗಾಗಲೇ ಸಂಗೀತ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದ್ದ. ಶಾಸ್ತ್ರೀಯ ಸಂಗೀತವಿರಲಿ ಪಾಪ್ ಗಾಯನವಿರಲಿ ಬಹಳ ಸೊಗಸಾಗಿ ಹಾಡುತ್ತಿದ್ದ. ದೇಶ ವಿದೇಶಗಳಲ್ಲಿಯೂ ಅವನ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು. ಜೊತೆಗೆ ಅವನು ಸಂಗೀತ ಸಂಯೋಜಿಸಿದ ಅದೆಷ್ಟೋ ಹಾಡುಗಳು ಲಕ್ಷ ಲಕ್ಷ ಜನರ ಮನಸ್ಸನ್ನು ಸೆಳೆದಿತ್ತು.
    ಒಂದು ದಿನ ಸರಕಾರದ ಜಾಹಿರಾತೊಂದರ ಶೂಟಿಂಗ್‌ಗಾಗಿ ಹಳ್ಳಿಯೊಂದಕ್ಕೆ ಹೋದ. ಹೆಚ್ಚಿನವರು ಅನಕ್ಷರಸ್ಥರಾಗಿದ್ದ ಊರದು. ಜನರ ಜೀವನ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ.  ತೆಂಗಿನ ತಟ್ಟಿಯನ್ನು ಹಣೆದೋ, ಮುಳಿ ಹುಲ್ಲನ್ನು ಬಳಸಿಕೊಂಡೋ ಜೋಪಡಿಯನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವನಿಗೆ ಉಳಿದುಕೊಳ್ಳಲು ಗ್ರಾಮ ಪಂಚಾಯತ್ ಕಟ್ಟಡವೊಂದನ್ನು ನೀಡಲಾಗಿತ್ತು. ಅಲ್ಲಿ ತಕ್ಕ ಮಟ್ಟಿಗೆ ಎಲ್ಲಾ ಸೌಕರ್ಯಗಳೂ ಸಮರ್ಪಕವಾಗಿತ್ತು. ಕಟ್ಟಡದ ಹಿಂದೆ ಕೆಲವು ಜೋಪಡಿಗಳಿದ್ದವು.
   ಹಗಲಿಡೀ ಪ್ರಯಾಣ ಮಾಡಿ ಸುಸ್ತಾಗಿದ್ದ ಆತನಿಗೆ ಬೆಳ್ಳಗಾದದ್ದೇ ತಿಳಿಯಲಿಲ್ಲ. ತದರಿ ನಾ....  ನಾ..... ನ್ನಾ  ಆಆ...... ಎಂದು ಹಿಂದೋಳ ರಾಗ(ಬಡಾ ಖೇಲ್) ಆಲಾಪಾನೆ ಕೇಳುತ್ತದೆ, ನಿದ್ದೆ ಮಂಪರಿನಲ್ಲಿ ಯಾರೋ ಕಾಲ್ ಮಾಡಿದ್ದಾರೆ, ಅಥವಾ ಅಲರಾಂ ಬಡಿದುಕೊಳ್ಳುತ್ತಿದೆ ಅಂದುಕೊಂಡ. ಎಚ್ಚರವಾಗಿ ನೋಡುತ್ತಾನೆ, ಅರೆ!! ನೆಟ್ ವರ್ಕೇ ಇಲ್ಲ. ಅಲರಾಂ ಕೂಡಾ ಸೆಟ್ ಮಾಡಿಟ್ಟಿಲ್ಲ.  ಬಹಳ ಹತ್ತಿರದಿಂದ ಹಾಡು ಕೇಳಿದಂತಾಗುತ್ತಿತ್ತು. ಹಿಂದಿನ ಮನೆಗಳಲ್ಲಿ ಯಾರಾದರೂ ರೇಡಿಯೋ ಆನ್ ಮಾಡಿರಬಹುದೇನೋ ಅಂದುಕೊಂಡ. ಆ ಸ್ವರ ಅವನಿಗೆ ಬಹಳ ಇಷ್ಟವಾಯಿತು. ಹಾಡಿದ್ದು ಯಾರಿರಬಹುದು? ಗಂಗೂಬಾಯಿ ಹಾನಗಲ್ ಖಂಡಿತಾ ಅಲ್ಲ. ಹದಿನೈದು-ಇಪ್ಪತ್ತು ವರ್ಷಗಳಿಂದ ಅವರ ಸ್ವರ ಆಲಿಸಿ ಅಭ್ಯಾಸವಿದೆ. ಖಚಿತವಾಗಿ ಹೇಳಬಲ್ಲ ಅದು ಜಾನಕಿಯೂ ಅಲ್ಲ, ಲತಾ ಅಮ್ಮನೂ ಅಲ್ಲ. ಮತ್ತಿನ್ಯಾರಿರಬಹುದು??  ಎಂದು ಯೋಚಿಸುತ್ತಲೇ ಸ್ನಾನ ಮಾಡಿ ರೆಡಿ ಆದ.  ಓಹ್! ಲೇಟ್ ಆಯಿತು ಅಂದುಕೊಂಡು ಶೂಟಿಂಗ್ ಗೆ ಹೊರಟ. ದಿನವಿಡೀ ಅದೇ ಸ್ವರದ ಗುಂಗಿನಲ್ಲಿದ್ದ. ಹಾಡಿದ್ದು ಯಾರೆಂಬ ಕುತೂಹಲ ಕಡಿಮೆಯಾಗಿತ್ತಾದರೂ ಹಾಡು ಮಾತ್ರ ಮನದಲ್ಲೇ ಇಂಗಿಹೋಗಿತ್ತು. ಮತ್ತೆ ಮತ್ತೆ ಆ ಹಾಡನ್ನೇ ಗುನುಗುತ್ತಿದ್ದ. ಅಂದು ಶೂಟಿಂಗ್ ಮುಗಿಯದೆ ಮತ್ತಿನ್ನೆರಡು ದಿನ ಉಳಿಯಬೇಕಾಗಿ ಬಂತು.
              ಪ್ರತಿ ದಿನ ಬೆಳಗ್ಗೆ ಅದೇ ಸಮಯಕ್ಕೆ ಸರಿಯಾಗಿ ಹಾಡುಗಳು ಕೇಳಿಬರತೊಡಗಿದವು. ಈಗ ಮಾತ್ರ ಆತ ಸ್ವಲ್ಪ ಯೋಚಿಸಬೇಕಾಗಿತ್ತು. ಅವನು ಎರಡು ಅಂಶಗಳನ್ನು ಗಮನಿಸಿದ್ದ. ಮೊದಲನೆಯದು, ಆತ ಸಂಜೆ ಅಭ್ಯಾಸ ನಡೆಸುವಾಗ  ಯಾವ ಹಾಡು ಹಾಡುತ್ತಿರುತ್ತಾನೋ ಅದೇ ಹಾಡು ಬೆಳಗ್ಗೆ ಕೇಳಿಸುತ್ತದೆ. ಆದರೆ ಫಿಮೇಲ್ ವಾಯ್ಸ್. ಇನ್ನೊಂದು ಬೆಳಗ್ಗೆ ಕೇಳಿಸುವ ಆ ದ್ವನಿಯೊಂದಿಗೆ ಹಿಮ್ಮೇಳ ಇರಲಿಲ್ಲ. ಅಲ್ಲಿಗೆ ಅದು ರೇಡಿಯೋ ಅಲ್ಲ,  ಯಾರೋ ಹಾಡುತ್ತಾರೆ ಅನ್ನುವುದು ಸ್ಪಷ್ಟವಾಯಿತು. ಉಳಿದವರಲ್ಲಿ, ಹಳ್ಳಿಯ ಪರಿಚಯಸ್ಥರಲ್ಲಿ ವಿಚಾರಿಸಿದ, ಇಲ್ಲಿ ಯಾರಾದರು ಹಾಡುಗಾರರಿದ್ದಾರೋ ಎಂದು. ಇಲ್ಲ, ಆ ಹಳ್ಳಿಯಲ್ಲಿ ಸಿನಿಮಾ ಹಾಡುಗಳನ್ನೇ ಲಯಬದ್ಧವಾಗಿ ಹಾಡುವವರು ಇರಲಿಲ್ಲ, ಇನ್ನು ಶಾಸ್ತ್ರೀಯ, ಅದೂ ಹಿಂದುಸ್ತಾನಿ" ಇಲ್ಲ ಸ್ವಾಮೀ ಎಂಬುದೇ ಉತ್ತರವಾಗಿತ್ತು. ದೊಡ್ಡ ಹಾಡುಗಾರರ ಹೊರತಾಗಿ ಇಷ್ಟೊಂದು ಶ್ರುತಿ ಬದ್ಧವಾಗಿ, ಲಯಬದ್ದವಾಗಿ, ಸ್ಪಷ್ಟವಾಗಿ ಹಾಡುವುದು ಕಷ್ಟಸಾಧ್ಯ. ಬೇರೆ ಊರಿನವರಾರಾದರೂ ಬಂದಿದ್ದಾರೋ ಎಂದು ವಿಚಾರಿಸಿದ. ಇಲ್ಲ, ಧ್ವನಿಯ ದನಿಯಾರೆಂಬುದು ತಿಳಿಯಲು ಸಾಧ್ಯವಾಗಲಿಲ್ಲ.  ಆ ಸ್ವರಕ್ಕೆ ಆತ ದಾಸನಾಗಿ ಬಿಟ್ಟಿದ್ದ. ಆಕೆ ಯಾರೆಂದು ತಿಳಿಯದೇ  ಪರಿತಪಿಸುತ್ತಲೇ ಆ ಹಳ್ಳಿಯಿಂದ ಹೊರಟ.......
                                                                                                                ಮುಂದುವರೆಯುವುದು.......      

Comments

Popular posts from this blog

ಗರುಡ ಹಾರಿದ ಹಾದಿ :ಭಾಗ-1

ಗರುಡ ಹಾರಿದ ಹಾದಿ: ಭಾಗ - 2

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ