ಹರಿದ್ವಾರ
ರೈಲಿನ ಕಿಟಕಿಯ ಮೂಲಕ ಹೊರಗಿನ ಸೌಂದರ್ಯವನ್ನು ನೋಡುತ್ತಾ ಕುಳಿತೆವು. ಚುಮು ಚುಮು ಚಳಿ ಬೇರೆ. ಅಂಬಾಲದ ನಂತರದ ಯಾವುದೋ ಒಂದು ಸ್ಟೇಷನ್‌ನಲ್ಲಿ ರೈಲು ನಿಂತಿತು. ಟೀ ಮಾರಿಕೊಂಡು ರೈಲಿನ ಸಿಬ್ಬಂದಿಗಳಾಗಲೀ, ಹೊರಗಿನವರಾಗಲೀ ಬರಲಿಲ್ಲ. ರೈಲ್ವೇ ಸ್ಟೇಷನ್‌ನ ಅಂಗಡಿಯೊಂದರಲ್ಲಿ ಟೀ ಕುಡಿದೆವು. ಮತ್ತೆ ರೈಲು ಹೊರಟಿತು. ಕೇಸರಿ ಅಂಗಿ ಚಡ್ಡಿ ಹಾಕಿದ ನಾಲ್ಕೈದು ಜನ ಹುಡುಗರು ರೈಲಿಗೆ ಹತ್ತಿದರು, ರೈಲಿನಲ್ಲಿ ಗದ್ದಲ ಮಾಡುತ್ತಾ, ರೈಲು ಸಿಗ್ನಲ್ಲಿಗಾಗಿ ನಿಂತಲ್ಲೆಲ್ಲಾ ಇಳಿಯುತ್ತಾ, ರೈಲು ಹೊರಟಾಗ ಓಡಿ ಬಂದು ಹತ್ತುತ್ತಾ ತಮ್ಮದೇ ಲೋಕದಲ್ಲಿದ್ದರು. ಮಾತನಾಡಿಸಿದಾಗ ಅವರೂ ಹರಿದ್ವಾರಕ್ಕೆ ಹೋಗುವವರು, 'ಕಾವುಡ ಯಾತ್ರೆ' ಮಾಡಲು ಬಂದಿರುವುದಾಗಿ ಹೇಳಿದರು. ೮.೩೦ರ ಸುಮಾರಿಗೆ ರೈಲು ಹರಿದ್ವಾರದ ರೈಲ್ವೇ ಸ್ಟೇಷನ್ ತಲುಪಿತು. ಸಣ್ಣಗೆ ಚಳಿ, ಅಲ್ಪ ಸ್ವಲ್ಪ ಮಂಜು, ದೊಡ್ಡ ದೊಡ್ಡ ಮರಗಳು ಹಾಗೂ ಹಚ್ಚ ಹಸುರು. ಹೆಚ್ಚು ಮಾಲಿನ್ಯ ಇಲ್ಲದ ಪ್ರದೇಶ. ನಮ್ಮ ಪಶ್ಚಿಮ ಘಟ್ಟಗಳಂತೆಯೇ ಅಲ್ಲೂ ಹಸಿರನ್ನೂ ಪರ್ವತಗಳನ್ನೂ ಕಂಡು ಖುಷಿಯಾಯಿತು. ನಮ್ಮದೇ ಊರೇನೋ ಅನ್ನುವ ಭಾವನೆ ಬಂತು. ನಾವು ರೂಮ್ ಬುಕ್ ಮಾಡಿದ್ದ ಹೋಟೆಲ್ ರೈಲ್ವೇ ಸ್ಟೇಷನ್‌ನ ಪಕ್ಕದಲ್ಲೇ ಇತ್ತು. ಹೋಟೆಲ್ ಒಂದಕ್ಕೆ ತಿಂಡಿ ತಿನ್ನಲು ಹೋದೆವು. ಆಲೂ ಪರೋಟ ಆರ್ಡರ್ ಮಾಡಿದೆವು. ನನಗಂತು ಅನ್ನ ಮಜ್ಜಿಗೆ ಬಿಟ್ಟು ಬೇರೇನು ಉಣ್ಣಲೂ ಮನಸ್ಸಾಗಲಿಲ್ಲ. ನಿನ್ನೆ ರಾತ್ರಿಯೂ ಊಟ ಮಾಡಿರಲಿಲ್ಲ. ಆದರೆ ಇಲ್ಲಿ ಅನ್ನ ಮಜ್ಜಿಗೆ ಇದೆಯೋ ಇಲ್ಲವೋ ಎಂದು ಅನುಮಾನದಿಂದಲೇ ಕೇಳಿದೆ. ಸರಿಯಾಗಿ ಬೆಂದಿರದ ಅನ್ನ ಹಾಗೂ ಮಜ್ಜಿಗೆ ಸಿಕ್ಕಿತು. ಸದ್ಯ ನೆಮ್ಮದಿಯಾಯಿತು. ಅಲ್ಲಿಂದ ಗೂಗಲ್ ಮ್ಯಾಪ್ ಸಹಾಯದಿಂದ ನಮ್ಮ ರೂಮ್ ಕಡೆ ನಡೆದೆವು. ಶ್ರವಣ ಕುಮಾರ ತಂದೆತಾಯಿಯನ್ನು ಕೂರಿಸಿಕೊಂಡು ತೀರ್ಥಯಾತ್ರೆ ಹೋಗಲು ತಯಾರಿಸಿದಂತಹ ತಕ್ಕಡಿಯ ರೀತಿಯದ್ದೊಂದನ್ನು ಹೆಗಲ ಮೇಲೆ ಹೊತ್ತುಕೊಂಡು ಬಹಳಷ್ಟು ಮಂದಿ ರಸ್ತೆಯಲ್ಲಿ ಹೋಗುತ್ತಿದ್ದರು. ಮಹಿ ಬಳಿ ಅದೇನೆಂದು ಕೇಳಿದೆ, ಅದನ್ನು 'ಕವ್ಡಾ' ಅಥವಾ 'ಖಂಡ್ವಾ' ಯಾತ್ರೆ ಹೋಗುವುದು ಎನ್ನುತ್ತಾರಂತೆ. ಅವರೆಲ್ಲರೂ ಕೇಸರಿ ಬಣ್ಣದ ಉಡುಪುಗಳನ್ನು ಧರಿಸಿದ್ದರು, ಹೆಚ್ಚಿನವರು ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ಹೆಚ್ಚಾಗಿ ಗಂಡಸರಿದ್ದರೂ ಕೆಲವೊಂದು ಕಡೆ ವಯಸ್ಸಾದ ಹೆಂಗಸರೂ ಕಾವ್ಡಾ ಯಾತ್ರೆಯಲ್ಲಿ ಪಾಲ್ಗೊಳ್ಳುವುದು ಕಂಡು ಬಂತು. ಶಿವ ಭಕ್ತರು ಕೈಗೊಳ್ಳುವ ಈ ಕಾವ್ಡಾ ಯಾತ್ರೆ ಶ್ರಾವಣ ಮಾಸದಲ್ಲಿ ಮಾತ್ರ ನಡೆಯುತ್ತದೆ. ಬಿದಿರ ಕೋಲೊಂದರ ಎರಡೂ ಬದಿಗೆ ಮಣ್ಣಿನ ಪಾತ್ರೆಗಳನ್ನು ಕಟ್ಟಿ ಅದರಲ್ಲಿ ಪವಿತ್ರವಾದ ಗಂಗಾ ನೀರನ್ನು ತೆಗೆದುಕೊಂಡು ತಮ್ಮ ಊರಿನ ಶಿವ ದೇವಾಲಯಕ್ಕೆ ಒಯ್ಯಲಾಗುತ್ತದೆ. ಈ ಕಾವ್ಡವನ್ನು ನೆಲಕ್ಕೆ ಮುಟ್ಟಿಸುವಂತಿಲ್ಲ, ಹಾಗೂ ಪಾದ ಯಾತ್ರೆಯ ಮೂಲಕವೇ ಕೊಂಡೊಯ್ಯುತ್ತಾರೆ. ಸುಮಾರು ೧೦೦ಕಿ.ಮೀ ಗೂ ಅಧಿಕ ದೂರ ಕ್ರಮಿಸುತ್ತಾರೆ. ಸಮುದ್ರ ಮಥನ ಕಾಲದಲ್ಲಿ ಬಂದಂತಹ ಹಾಲಾಹಲವನ್ನು ಶಿವ ಕುಡಿಯ ಹೊರಟು ನೀಲಕಂಠನಾದ ಕಥೆ ನಮಗೆಲ್ಲರಿಗೂ ತಿಳಿದಿದೆ. ರಾವಣನು ವಿಷದ ಪ್ರಭಾವವನ್ನು ಕಡಿಮೆ ಗೊಳಿಸಲು ಗಂಗಾ ಜಲವನ್ನು ಕವ್ಡಾ ದಲ್ಲಿ ತಂದು ಶಿವನಿಗೆ ಅಭಿಶೇಕ ಮಾಡುತ್ತಾನೆ. ಇದು 'ಕವ್ಡಾ' ಯಾತ್ರೆಗೆ ಹಿನ್ನೆಲೆ ಎಂದು ಹೇಳುತ್ತಾರೆ. 'ಕಾವ್ಡಾ' ಎಂದರೆ ಕನ್ನಡದಲ್ಲಿ ಬಿದಿರು ಎಂದು ಅರ್ಥ. ಈ ಯಾತ್ರೆಯನ್ನು ಮಾಡುವವರಿಗೆ 'ಕಣ್ವರಿಯರು' ಎನ್ನುತ್ತಾರೆ. ೧೯೬೦ ರಲ್ಲಿ ಹರಿದ್ವಾರದಲ್ಲಿ 'ಕಾವ್ಡಾ ಮೇಳ' ಪ್ರಾರಂಭಿಸಿದರು. ೧೯೯೦ ರ ತನಕವೂ ಈ ಯಾತ್ರೆಯನ್ನು ಸಾಧು- ಸಂತರು ಕೈಗೊಳ್ಳುತ್ತಿದ್ದರು, ತದನಂತರ ಉತ್ತರಾಖಂಡ್, ಡೆಲ್ಲಿ, ಉತ್ತರ ಪ್ರದೇಶ, ಹರ್ಯಾಣ, ಮಧ್ಯ ಪ್ರದೇಶ, ಬಿಹಾರ ಸೇರಿದಂತೆ ಉತ್ತರದ ಅನೇಕ ರಾಜ್ಯಗಳ ಜನರು ಪಾಲ್ಗೊಳ್ಳತೊಡಗಿದರು. ೨೦೦೩ರಲ್ಲಿ ಕನ್ವರ್ ಮೇಳದಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆ ೭೫.೫ ಮಿಲಿಯನ್ ಅಂತೆ. ಅಲಹಬಾದ್, ವಾರಣಾಸಿಗಳಲ್ಲಿಯೂ ಇಂತಹ ಚಿಕ್ಕ ಚಿಕ್ಕ ಮೇಳಗಳು ನಡೆಯುತ್ತವೆ. ತಮ್ಮ ಮನಸ್ಸಿನ ಇಷ್ಟಾರ್ಥಗಳು ಈಡೇರಲು ಈ ಯಾತ್ರೆ ಕೈಗೊಳ್ಳುತ್ತಾರೆ. ಹರಿದ್ವಾರಗಳ ರಸ್ತೆಗಳಲ್ಲಿ ''ಬಮ್ ಬಮ್ ಬೋಲೋ'' ಎಂದು ಕೂಗುತ್ತಾ ಕೇಸರಿ ಬಣ್ಣದ ಬಟ್ಟೆ ತೊಟ್ಟ ಭಕ್ತರು ಕೇಸರಿ ಬಣ್ಣದ 'ಕಾವ್ಡಾ' ಗಳನ್ನು ಏರಿಸಿಕೊಂಡು ಹೋಗುವ ದೃಶ್ಯ ತೀರಾ ಸಾಮನ್ಯವಾಗಿತ್ತು. ಆಕಾಶ, ಗಿಡ-ಮರಗಳು, ಹಾಗೂ ಗಂಗೆಯನ್ನು ಹೊರತುಪಡಿಸಿದರೆ ಕಣ್ಣು ಹಾಯಿಸಿದಲ್ಲೆಲ್ಲಾ ಕೇಸರಿಯೇ. ನಮ್ಮ ಹೋಟೆಲ್ ಸಿಕ್ಕಿತು. ನಾವು ಒಳಗಡೆ ಹೋಗುತ್ತಿದ್ದಂತೆ ಎರಡು ಜನ ಹಿರಿಯರು ಹರಿದ್ವಾರದಲ್ಲಿ ಯಾತ್ರೆ ಮುಗಿಸಿಕೊಂಡು ಬುಕ್ ಔಟ್ ಅಗುತ್ತಿದ್ದರು. ನಾವು ಮಾತನಾಡುತ್ತಿದ್ದುದನ್ನು ಗಮನಿಸಿದ ಅವರು " ಯಾವ ಊರು" ಅಂತ ಕನ್ನಡದಲ್ಲಿ ಕೇಳಿದರು. ಮಾತನಾಡುತ್ತಾ ಅವರು ಬೆಂಗಳೂರಿನವರು, ಹರಿದ್ವಾರ ಹೃಷಿಕೇಶ ಯಾತ್ರೆ ಮುಗಿಸಿ ಊರಿಗೆ ಹೊರಟಿರುವುದಾಗಿ ಹೇಳಿದರು. ಕನ್ನಡದವರು ಸಿಕ್ಕಿದ್ದು ನಮಗೂ ಬಹಳ ಖುಷಿ ಆಯಿತು, ಅವರಿಗೂ ಖುಷಿ ಆಯಿತು. ಮೊದಲೇ ಚಳಿ, ಜೊತೆಗೆ ಸ್ನಾನಕ್ಕೆ ಬಿಸಿನೀರೂ ಇರಲಿಲ್ಲ. ಅಲ್ಲಿಯ ನೀರಂತೂ ಫ್ರಿಜ್‌ನಲ್ಲಿಟ್ಟ ನೀರಿನ ಹಾಗಿತ್ತು.
|
'ಕವ್ಡಾ' ಯಾತ್ರೆ (ಚಿತ್ರ ಕೃಪೆ: ಗೂಗಲ್) |
೯.೩೦ ರ ಸುಮಾರಿಗೆ ಗಂಗೆಯ ದರ್ಶನಕ್ಕೆ ಹೊರಟೆವು. ಸೈಕಲ್ ಗಾಡಿಯೊಂದರಲ್ಲಿ ಹೋದೆವು, ಆದರೆ ಅರ್ಧ ದಾರಿಯಲ್ಲೇ ನಿಲ್ಲಿಸಿದ ಡ್ರೈವರ್ ಮುಂದೆ ಪೋಲಿಸರು ವಾಹನಗಳನ್ನು ಹೋಗಲು ಬಿಡುವುದಿಲ್ಲ ಎಂದು ಅಲ್ಲೇ ಇಳಿಸಿದ. ಸರಿ, ಎಂದು ನಡೆಯುತ್ತಾ ಮುಂದೆ ಸಾಗಿದೆವು. ಇಕ್ಕಟ್ಟಾದ ರಸ್ತೆ, ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು, ರಸ್ತೆಯ ಎರಡೂ ಬದಿ ಸಂತೆ. ಬಟ್ಟೆ, ತಿಂಡಿ ತಿನಿಸುಗಳು, ಆಯುರ್ವೇದದ ಗಿಡ ಮೂಲಿಕೆಗಳು, ಆಟಿಕೆಗಳು, ಪೂಜಾ ಸಾಮಗ್ರಿಗಳು ಜೊತೆಯಲ್ಲಿ ಹಲವು ಅಂಗಡಿಗಳಲ್ಲಿ ಶಂಖಗಳು, ಸಾಲಿಗ್ರಾಮಗಳು, ನಾನಾ ವಿಧದ ಶಿಲೆಗಳಿಂದ ಮಾಡಿದಂತಹ ಕಲಾಕೃತಿಗಳು, ಗಾಜಿನ ಹಾಗೂ ಮರದ ಐಟಮ್‌ಗಳು ಹೀಗೆ... ಇಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಇನ್ನೊಂದು ವಸ್ತು ಎಂದರೆ ರುದ್ರಾಕ್ಷಿ ಚಿಕ್ಕ ಮ್ಯಾಟ್‌ಗಳನ್ನು ಹಾಕಿಕೊಂಡು ರುದ್ರಾಕ್ಷಿ ಮಾರಾಟಕ್ಕೆ ಕುಳಿತು ಬಿಡುತ್ತಿದ್ದರು. ರುದ್ರಾಕ್ಷಿ, ರುದ್ರಾಕ್ಷಿ ಮಾಲೆ ಎಲ್ಲಾ ಅಂಗಡಿಗಳಲ್ಲೂ ಕಾಣ ಸಿಗುತ್ತಿತ್ತು. ನಮ್ಮ ಮನೆಯಲ್ಲಿ ದೇವರ ಕೋಣೆಗೆ ಹೋಗುವ ಬಾಗಿಲಿನ ಹೊರ ಬಾಗಿಲಿನಲ್ಲಿ ಮೂರು ರುದ್ರಾಕ್ಷಿ ಮಾಲೆಗಳಿದ್ದವು. ಅಜ್ಜ ಹರಿದ್ವಾರ ಕಾಶಿ ಮುಂತಾದ ಕಡೆ ಹೋಗಿದ್ದಾಗ ತಂದಿದ್ದರು. ಮೊದಲೆಲ್ಲಾ ನಾನು ರುದ್ರಾಕ್ಷಿ ಪ್ಲಾಸ್ಟಿಕ್ ಮಣಿ ಎಂದು ಭಾವಿಸಿದ್ದೆ. ಆದರೆ ಇದು ಒಂದು ವಿಧವಾದ ಮರದಲ್ಲಿ ನೈಸರ್ಗಿಕವಾಗಿ ಬೆಳೆಯುವ ಹಣ್ಣಿನ ಬೀಜ. Elaeocarpus ganitrus roxb ಎಂಬ ಮರದಲ್ಲಿ ಬೆಳೆಯುತ್ತದೆ. ಇದು ಶಿವನಿಗೆ ಸಂಬಂಧ ಪಟ್ಟದ್ದು ಎಂಬ ನಂಬಿಕೆ. 'ರುದ್ರ' ಅಂದರೆ ಶಿವ, 'ಅಕ್ಷಿ' ಎಂದರೆ ಕಣ್ಣು. ಇದರಲ್ಲೂ ಹಲವು ವಿಧಗಳಿವೆ, ಪಂಚಮುಖೀ ರುದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಬಹಳ ಬೆಲೆ ಇದೆ. ಎಲ್ಲರಿಗೂ ತಿಳಿದಿರುವಂತೆ ರುದ್ರಾಕ್ಷಿಯನ್ನು ಜಪಮಾಲೆಯಾಗಿ ಬಳಸುತ್ತಾರೆ. ಭಾರತ, ಚೀನಾ, ನೇಪಾಳ, ತೈವಾನ್, ಮಲೇಷಿಯಾಗಳಲ್ಲಿ ಈ ಮರ ಕಂಡು ಬರುತ್ತದೆ. ಭಾರತದಲ್ಲಿ ಗಂಗಾ ಮೈದಾನ, ಹಿಮಾಲಯಗಳಲ್ಲಿ ಇರುತ್ತವೆ. ಇದರಲ್ಲಿ ೩೦೦ಕ್ಕೂ ಅಧಿಕ ಜಾತಿಗಳಿದ್ದು ೩೦ ಬಗೆಯವು ಭಾರತದಲ್ಲಿ ಇವೆ. ರುದ್ರಾಕ್ಷಿ ಹಣ್ಣಿನ ಹೊರಗಿನ ಸಿಪ್ಪೆ ನೀಲಿ ಬಣ್ಣದಲ್ಲಿರುತ್ತವೆ. ಮಾರ್ಕೆಟ್‌ಗಳಲ್ಲಿ ಹೆಚ್ಚಾಗಿ ನಕಲಿ ರುದ್ರಾಕ್ಷಿಗಳೆ ಇರುತ್ತವೆ. ಟಿ. ವಿ. ಚಾನೆಲ್‌ಗಳಲ್ಲೂ ರುದ್ರಾಕ್ಷಿಯ ಮಹಿಮೆ, ಅದರ ಚಂದದ ವರ್ಣನೆಗಳ ಸಾಕಷ್ಟು ಜಾಹಿರಾತುಗಳನ್ನು ನೀವು ನೋಡಿರಬಹುದು.
|
|
|
ರುದ್ರಾಕ್ಷಿ (ಚಿತ್ರ ಕೃಪೆ: ಗೂಗಲ್) |
ಮುಂದೆ ಹೋಗುತ್ತಾ ಅಂಗಡಿಗಳಲ್ಲಿ ಸಾಲಿಗ್ರಾಮಗಳು ಕಂಡೆವು. ಈ ಸಾಲಿಗ್ರಾಮ ಎಂಬುದು ಅಂಡಾಕಾರದ ಕಪ್ಪು ಕಲ್ಲು. ನಮ್ಮ ಮನೆಯಲ್ಲಿ ದಿನಾ ದೊಡ್ಡಪ್ಪ ಮಧ್ಯಾಹ್ನ ಮತ್ತು ರಾತ್ರಿ ಸಾಲಿಗ್ರಾಮ, ಚಕ್ರ, ಗಣಪತಿ, ದುರ್ಗೆ, ಶಿವಲಿಂಗಗಳಿಗೆ ಪೂಜೆ ಮಾಡುತ್ತಾರೆ. ಅಮ್ಮ ಹೇಳುತ್ತಿದ್ದಳು, ''ಈ ಕಲ್ಲು ನೇಪಾಳದ ಗಂಡಕೀ ನದಿಯಲ್ಲಿ ಮಾತ್ರ ಸಿಗುವುದಂತೆ, ಅದರ ಒಳಗಡೆ ಚಿನ್ನ ಇರುತ್ತದಂತೆ, ನೇಪಾಳದ ರಾಜ ಪ್ರತೀ ದಿನ ಅದರ ಒಳಗಿನಿಂದ ಚಿನ್ನವನ್ನು ತೂತು ಮಾಡಿ ತೆಗೆದು, ಅದನ್ನು ಪೂಜಿಸಿ ದಾನವಾಗಿ ಕೊಡುತ್ತಾನಂತೆ.'', ಅಂಗಡಿಯಲ್ಲಿ ವಿಚಾರಿಸಿದಾಗ ನೇಪಾಳದಿಂದ ತರಿಸುತ್ತೇವೆ ಎಂದ. ಸಾಲಿಗ್ರಾಮವನ್ನು ವಿಷ್ಣುವಿನ ರೂಪವಾಗಿ ಪೂಜಿಸಲಾಗುತ್ತದೆ. ಆದಿ ಶಂಕರಾಚಾರ್ಯರ ಕಾಲದಲ್ಲೇ ಸಾಲಿಗ್ರಾಮಕ್ಕೆ ಪೂಜೆ ನಡೆಯುತ್ತಿತ್ತು. ತೈತ್ತರೀಯ ಸಂಹಿತೆಗೆ ಶಂಕರಾಚಾರ್ಯರು ಬರೆದಿರುವ ವ್ಯಾಖ್ಯಾನದಲ್ಲಿ ಸಾಲಿಗ್ರಾಮದ ಉಲ್ಲೇಖ ಇದೆ. ಅತ್ಯಂತ ಭಾರವಾದ ಸಾಲಿಗ್ರಾಮ ಒರಿಸ್ಸಾದ ಪುರಿ ಜಗನ್ನಾಥ ಮಂದಿರದಲ್ಲಿ ಇದೆಯಂತೆ. ಅಲ್ಲದೇ ಸ್ಕಾಟ್‌ಲ್ಯಾಂಡಿನ 'ಕರುನ ಭವನ' ಎಂಬ ಇಸ್ಕಾನ್ ಮಂದಿರದಲ್ಲಿ ಹೆಚ್ಚಿನ ಸಂಖ್ಯೆಯ ಸಾಲಿಗ್ರಾಮಗಳು ಇವೆಯಂತೆ. ಈ ಸಾಲಿಗ್ರಾಮಗಳಲ್ಲಿ ಶಂಖ, ಚಕ್ರ, ಗದಾ ಮತ್ತು ಪದ್ಮಗಳ ಗುರುತು ಇರುತ್ತವೆಯಂತೆ. ಇದೇ ಅನುಕ್ರಮದಲ್ಲಿ ಇದ್ದರೆ (ಶಂಖ, ಚಕ್ರ, ಗದಾ ಮತ್ತು ಪದ್ಮ) ಆ ಸಾಲಿಗ್ರಾಮವನ್ನು ಕೇಶವನೆಂದು ಪೂಜಿಸಲಾಗುತ್ತದೆ. ಅದೇ ಅನುಕ್ರಮ ಬೇರೆ ಬೇರೆಯಾದರೆ ವಿಷ್ಣುವಿನ ಬೇರೆ ಬೇರೆ ಹೆಸರಿನಲ್ಲಿ ಪೂಜಿಸುತ್ತಾರಂತೆ. ಅಮ್ಮ ಹೇಳಿದ ಕಥೆಗೆ ಪೂರಕವಾಗಿ ಒಂದು ಸಾಲಿಗ್ರಾಮ ಇದೆಯಂತೆ, ಅದರ ಹೆಸರು ಹಿರಣ್ಯ ಗರ್ಭ ಸಾಲಿಗ್ರಾಮ, ಇದರಲ್ಲಿ ಚಿನ್ನದ ಬಣ್ಣದ ಡಾಟ್‌ಗಳನ್ನು ಕಾಣಬಹುದು ಎನ್ನುತ್ತಾರೆ ಸಾಲಿಗ್ರಾಮಗಳ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವ ಶ್ರೀ ರಾಮ್ ಮನೋಜ್ ಕುಮಾರ್ . ಬಿಳಿ, ಹಳದಿ, ಕೆಂಪು, ಹಸಿರು, ಬೂದು ಬಣ್ಣಗಳ ಸಾಲಿಗ್ರಾಮಗಳೂ ಇವೆಯಂತೆ. ನಾವು ಹರಿದ್ವಾರದ ಅಂಗಡಿಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಸಾಲಿಗ್ರಾಮಗಳನ್ನು ಮಾತ್ರ ಗಮನಿಸಿದ್ದೆವು. ಹಳದಿ, ಕೆಂಪು ಇನ್ನಿತರ ಬಣ್ಣಗಳದ್ದು ಕಲ್ಲೆಂದು ಭಾವಿಸಿದ್ದೆವು. ಶ್ರೀ ರಾಮ್ ಮನೋಜ್ ಕುಮಾರ್ ರ ಲೇಖನ ಓದಿದ ನಂತರ ಅವು ಸಾಲಿಗ್ರಾಮಗಳಾಗಿರಬಹುದೆಂದು ಅನಿಸುತ್ತಿದೆ. ಇವುಗಳು ನೇಪಾಳದ 'ಕಾಲಿ ಗಂಡಕೀ' ಎಂಬ ನದಿಯಲ್ಲಿ ಮಾತ್ರ ದೊರಕುವುದು, ಹಾಗೂ 'ವಜ್ರ ಕೀಟ' ಎಂಬ ಜೀವಿಯು ಕಲ್ಲನ್ನು ತನ್ನ ಹರಿತವಾದ ಹಲ್ಲುಗಳಿಂದ ಕೊರೆದು, ಸಾಲಿಗ್ರಾಮದಲ್ಲಿ ಚಕ್ರದಾಕಾರದ ರಚನೆಯನ್ನು ಮಾಡುತ್ತದೆ ಎನ್ನುತ್ತಾರೆ. ಇದರ ಹಲ್ಲು ಗ್ರಾನೈಟ್‌ಗಳಿಗಿಂತಲೂ ಹರಿತವಂತೆ. ಹೀಗೆ ಸಾಲಿಗ್ರಾಮದ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದರೆ ಇನ್ನೂ ಅನೇಕ ವಿಷಯಗಳಿವೆ.
|
ಸಾಲಿಗ್ರಾಮಗಳು (ಚಿತ್ರ ಕೃಪೆ: ಗೂಗಲ್) |
ಹರಿದ್ವಾರ 'ಸಪ್ತ ಪುರಿ' ಎಂದು ಕರೆಯಲಾಗುವ ೭ ಪುಣ್ಯಕ್ಷೇತ್ರಗಳಲ್ಲಿ ಒಂದು. ಸಮುದ್ರ ಮಥನ ಕಾಲದಲ್ಲಿ 'ಗರುಡ' ಅಮೃತವನ್ನು ಕೊಂಡೊಯ್ಯುವಾಗ ನಾಸಿಕ್, ಪ್ರಯಾಗ, ಉಜ್ಜೈನಿ ಹಾಗೂ ಹರಿದ್ವಾರಗಳಲ್ಲಿ ಒಂದೊಂದು ಬಿಂದು ಬಿತ್ತು ಎಂಬ ಪ್ರತೀತಿ ಇದೆ. ಇಲ್ಲಿನ ಪ್ರಮುಖ ಸ್ನಾನ ಘಟ್ಟಗಳಲ್ಲಿ ಒ೦ದಾದ 'ಹರಿ ಕಿ ಪೌರಿ' ಅಥವಾ 'ಬ್ರಹ್ಮ ಕುಂಡ' ಎಂಬಲ್ಲಿ ಅಮೃತ ಬಿದ್ದಿರುವುದು ಎಂದು ನಂಬುತ್ತಾರೆ. ಆದ್ದರಿಂದ ಇಲ್ಲಿರುವ ಸ್ನಾನ ಘಟ್ಟಗಳಲ್ಲಿ 'ಬ್ರಹ್ಮ ಕುಂಡ' ಅತ್ಯಂತ ಪವಿತ್ರವಾದದ್ದು ಎನ್ನುತ್ತಾರೆ. ಇಂದಿಗೂ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತಮ್ಮ ಪಾಪಗಳೆಲ್ಲ ಕಳೆದು ಮೋಕ್ಷ ದೊರಕುತ್ತದೆ ಎಂದು ಹೇಳುತ್ತಾರೆ. ನಡೆಯುತ್ತಾ ಗಂಗಾ ನದಿ ತೀರ ತಲುಪಿದೆವು. ಎಲ್ಲಿ ನೋಡಿದರೂ ಜನ ಸಾಗರ. ಗಂಗೆಯು ರಭಸದಿಂದಲೇ ಹರಿಯುತ್ತಿದ್ದಳು. ಮಳೆಗಾಲವಾದುದರಿಂದ ಪರ್ವತಗಳಿಂದ ಸೇರಿದ ಮಣ್ಣಿನಿಂದಾಗಿ ನೀರು ಬೂದು ಬಣ್ಣದಲ್ಲಿತ್ತು. ಭಕ್ತಾದಿಗಳು ಪವಿತ್ರ ಸ್ನಾನ ಮಾಡುತ್ತಿದ್ದರು. ಅಮ್ಮ ಆಗಲೇ ಹೇಳಿದ್ದಳು '' ಅಲ್ಲಿ ತನಕ ಹೋಗಿ ಗಂಗೆಯಲ್ಲಿ ಸ್ನಾನ ಮಾಡದೇ ಬರಬೇಡ'' ಎಂದು, ನಾನು ಸ್ನಾನ ಮಾಡುವ ಯೋಚನೆಯಲ್ಲಿದ್ದೆ. ಮೆಟ್ಟಿಲುಗಳನ್ನು ಇಳಿದು ಸ್ನಾನ ಘಟ್ಟಕ್ಕೆ ಬಂದೆವು. ಸಾವಿರಾರು ಸಂಖ್ಯೆಯಲ್ಲಿ ಕಣ್ವರಿಗಳು, ಭಕ್ತರು ತುಂಬಿದ್ದರು. ನದೀ ತೀರದಲ್ಲಿ ಹಲವರು ನಮ್ಮ ಪಿತೃಗಳಿಗೆ ಪಿಂಡ ಹಾಕುತ್ತಿದ್ದರು. ಸಾಮಾನ್ಯ ದಿನಗಳಲ್ಲೇ ಇಷ್ಟೊಂದು ಜನರಿದ್ದರೆ, 'ಕುಂಭ ಮೇಳ' ಸಮಯದಲ್ಲಿ ಹೇಗಿರಬಹುದೆಂದು ಊಹಿಸಲೂ ಕಷ್ಟ. ಆದರೆ ಇದು 'ಕಾವ್ಡಾ ಯಾತ್ರೆ'ಯ ಸಮಯವಾದುದರಿಂದ ಇಷ್ಟೊಂದು ಜನ ಸೇರಿದ್ದಿರಲೂ ಬಹುದು. ಗಂಗೋತ್ರಿಯಲ್ಲಿ ಹುಟ್ಟಿ ಹರಿವ ಗಂಗೆಯ ಉದ್ದಗಲ, ವಿಸ್ತಾರ ಆಕೆಯ -ಪಾವಿತ್ರ್ಯತೆಯ ಬಗ್ಗೆ, ಭಗೀರಥ ಪ್ರಯತ್ನದಿಂದ ಆಕೆ ಧರೆಗಿಳಿದ ಪೌರಾಣಿಕ ಕಥೆಗಳು ಇತ್ಯಾದಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ. ಉಪನದಿಗಳು, ಬಯಲು ಪ್ರದೇಶ ಆಕೆ ಸಮುದ್ರ ಸೇರುವ ಜಾಗ ಇತ್ಯಾದಿಗಳನ್ನು, ಪ್ರೈಮರಿ ಹೈಸ್ಕೂಲ್‌ಗಳಲ್ಲಿ ಸಮಾಜ ಪಾಠದಲ್ಲಿ ಹೆಚ್ಚಿನವರು ಓದಿರುತ್ತೀರಿ. ಕಾರ್ಖಾನೆಗಳಿಂದ ಬಂದು ಸೇರುವ ಮಾಲಿನ್ಯಗಳು ಜೊತೆಗೆ ಮಾನವನ ಅತೀಯಾದ ಚಟುವಟಿಕೆಗಳಿಂದಾಗಿ ಗಂಗೆ ಮಲಿನಳಾಗಿದ್ದಾಳೆ ಎಂದೆಲ್ಲಾ ನ್ಯೂಸ್ ಪೇಪರ್ ಗಳಲ್ಲಿ ಓದಿದ್ದೆ. ಗಂಗೆಯಲ್ಲಿ ಒಮ್ಮೆ ಮುಳುಗಿ ಮೇಲೇಳುವಾಗ ಅರೆಬರೆ ಬೆಂದ ಹೆಣಗಳ ಅವಶೇಷ ಸಿಕ್ಕಿ ಹಾಕಿಕೊಳ್ಳುತ್ತದೆ ಎಂದೆಲ್ಲಾ ಹೇಳುತ್ತಿದ್ದರು. ಆದರೆ ಹರಿದ್ವಾರದಲ್ಲಿ ಗಂಗೆ ಅಷ್ಟರ ಮಟ್ಟಿಗೆ ಮಲಿನಳಾಗಿಲ್ಲ ಅನಿಸುತ್ತದೆ. ಆದರೂ ಕೆಲವರು ಕಾವ್ಡಾ ಗಳನ್ನು ನದಿಗೆಸೆಯುತ್ತಿದ್ದುದು, ಹಾಗೇ ಕೆಲವರು ಪ್ಲಾಸ್ಟಿಕ್ ಕಾಗದ ಇನ್ನಿತರ ವಸ್ತುಗಳನ್ನು ಎಸೆಯುತ್ತಿದ್ದುದನ್ನು ನಾವೇ ನೋಡಿದ್ದೇವೆ. ಎಷ್ಟೇ ಭಕ್ತಿ ಇದ್ದರೂ ಏನೇ ಇದ್ದರೂ ಸ್ವಚ್ಛತೆಗೆ ಮಹತ್ವ ನೀಡದಿದ್ದರೆ ಏನೂ ಪ್ರಯೋಜನವಿಲ್ಲ. ಮೂರು ಸಲ ಮುಳುಗು ಹಾಕಿ ಮಹಿಳೆಯರ ಡ್ರೆಸ್ಸಿಂಗ್ ರೂಮ್‌ಗೆ ಹೋದೆ. ಅದೊಂದು ಹಾಲ್. ಅದರ ಒಳಗಡೆಯೂ ನದಿ ಹರಿಯುತ್ತದೆ. ಮಹಿಳೆಯರು ಅಲ್ಲೂ ಸ್ನಾನ ಮಾಡ ಬಹುದು. ವ್ಯವಸ್ಥೆಗಳೇನೂ ಚನ್ನಾಗಿಲ್ಲ. ಅಲ್ಲಲ್ಲಿ ಕೆಲವು ಅಜ್ಜಿಗಳು, ಪ್ರಾಯದ ಹೆಂಗಸರು ಹಾಗೂ ಲೇಡಿ ಪೋಲಿಸರು ಇದ್ದರು. ಹಾಗೂ ಕೆಲವು ಮಹಿಳಾ ಭಕ್ತಾದಿಗಳು. ಅಲ್ಲಿಂದ ಹೊರಡುವಾಗ ಒಂದಜ್ಜಿ ದಕ್ಷಿಣೆ ಕೊಡಿ ಎಂದು ಕೇಳಿದರು. ಯಾಕೆ ಎಂದು ತಿಳಿಯಲಿಲ್ಲ. ಅಲ್ಲಿ ಡ್ರೆಸ್ ಚೇಂಜ್ ಮಾಡಿದ್ದಕ್ಕಿರಬಹುದೇ? ಅಂದು ಕೊಂಡೆ. ಕೇಳಲು ನನಗೆ ಹಿಂದಿ ಬರುವುದಿಲ್ಲ. ಪೋಲಿಸರು ಏನೂ ಹೇಳಲಿಲ್ಲ. ಅಲ್ಲಿ ಕುಳಿತಿದ್ದ ಹೆಂಗಸರು ಬಹುಷಃ ಎಲ್ಲರಲ್ಲೂ ಹೀಗೆ ದಕ್ಷಿಣೆ ಕೇಳುತ್ತಾರೇನೋ ಅಂದುಕೊಂಡು ೧೦ ರೂ ಕೊಟ್ಟೆ. ''ಕಿತ್ನಾ ಅಚ್ಚೀ ಬೇಟೀ'' ಎಂದಳು , ಸಣ್ಣಗೆ ನಕ್ಕು ಹೊರ ಬಂದೆ. ನಿಜಕ್ಕೂ ಯಾಕೆ ಹಣ ಕೊಟ್ಟಿದ್ದೆಂದು ನನಗೆ ತಿಳಿಯಲಿಲ್ಲ. ಹೊರಗಡೆ ಡ್ರೆಸ್ಸಿಂಗ್ ರೂಮ್ ಫೀ ಎಂದು ಬೋರ್ಡ್ ಹಾಕಿದ್ದರು. ನಂತರ ಅಲ್ಲಿರುವ ದೇವಾಲಗಳಿಗೆ ಹೋದೆವು. ಅಲ್ಲಿನ ಪುರೋಹಿತರು ನಮ್ಮೂರಿನವರಂತಲ್ಲ. ಪಂಚೆ ಮತ್ತು ಅಂಗಿ ಹಾಕಿಕೊಂಡೆ ಪೂಜೆ ಮಾಡುತ್ತಾರೆ. ಬೇಸಿಗೆ ಗಾಲ ಬಿಟ್ಟು ಉಳಿದ ಸಮಯದಲ್ಲಿ ಅಲ್ಲಿ ಬಟ್ಟೆ ಹಾಕದೇ ಇರಲೂ ಸಾಧ್ಯವಿಲ್ಲ. ನಾವು ಮಥುರಾಕ್ಕೆ ಹೋಗಿದ್ದಾಗ ಅಲ್ಲಿನ ಪುರೋಹಿತರೆಲ್ಲ ಸುಮ್ಮನೆ ನಮ್ಮನ್ನು ಕರೆದು ಹಿಂದಿಯಲ್ಲಿ ಏನೋ ಪ್ರಾರ್ಥನೆ ಮಾಡಿ ೧೦೧ ರೂಪಾಯಿ ಇಟ್ಟು ನಮಸ್ಕಾರ ಮಾಡಿ ಎನ್ನುತ್ತಾ ಟೊಪ್ಪಿ ಹಾಕಿದ್ದರು. ಹೋದ ಗುಡಿಗಳಲ್ಲೆಲ್ಲಾ ಹೀಗೇ ೧೦೧ ಇಟ್ಟರೆ ಗೋವಿಂದ. ಎರಡು ಮೂರು ಸಲ ಈ ರೀತಿ ಆಗಿ ಬುದ್ದಿ ಬಂದಿತ್ತು, ನಂತರ ಅವರ ಬಳಿ ಹೋಗದೇ ದೂರದಿಂದಲೇ ಕೈ ಮುಗಿದು ಬರುತ್ತಿದ್ದೆವು. ಇಲ್ಲೂ ಹಾಗೇ ಆದರೆ ಎಂದು ಭಯವಾಯಿತು. ಒಂದು ಗುಡಿಯ ಬಳಿ ಹೋದಾಗ ಹೊರಗಿದ್ದ ಮೂರ್ತಿಯ ಹಿಂದೆ ಕುಳಿತು ಪುರೋಹಿತರು ಬುತ್ತಿಯಿಂದ ಚಪಾತಿ ತಿನ್ನುತ್ತಿದ್ದರು. ಎಂಟ್ರೆನ್ಸ್ ಅಲ್ಲಿ ಒಬ್ಬರು ಪುರೋಹಿತರು ಮಂತ್ರ ಹೇಳುತ್ತಾ ಒಬ್ಬನ ಕೈಗೆ ನೂಲು ಕಟ್ಟುತ್ತಾ ಆಶೀರ್ವಾದ ಮಾಡುತ್ತಾ ಇದ್ದರು. ನಮ್ಮನ್ನು ನಿಲ್ಲಿಸಿದರು. ನಮ್ಮ ಕೈಯಿಂದ ವಸೂಲು ಮಾಡುತ್ತಾರೆ ಅಂದುಕೊಂಡೆವು, ಪುಣ್ಯಕ್ಕೆ ಪ್ರಾರ್ಥನೆ ಮಾಡುವಾಗ ಎಷ್ಟು ರೂಪಾಯಿ ಎಂದು ಕೇಳಿದರು, ಇಪ್ಪತ್ತು ರೂಪಾಯಿ ಎಂದೆವು, ಏನೂ ಅನ್ನಲಿಲ್ಲ. ನಮ್ಮ ಕೈಗೂ ನೂಲು ಕಟ್ಟಿ ಆಶೀರ್ವಾದ ಮಾಡಿ ತೀರ್ಥ ಕೊಟ್ಟು ಕಳುಹಿಸಿದರು. ಸುಮ್ಮನೆ ಅನುಮಾನ ಪಟ್ಟೆವೇನೋ ಅಂದುಕೊಂಡು ಬೇರಾವ ಗುಡಿಗೂ ಹೋಗದೇ ಅಲ್ಲಿಂದ ಹೊರಗೆ ಬಂದೆವು.
|
ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಿರುವುದು (ಚಿತ್ರ ಕೃಪೆ: ಗೂಗಲ್) |
|
ಗಂಗೆ, ಹರಿದ್ವಾರ (ಚಿತ್ರ ಕೃಪೆ: ಗೂಗಲ್) |
ಅಲ್ಲಿಂದ ಸ್ವಲ್ಪ ದೂರ ಬೇರೆ ಬೇರೆ ಗುಡ್ಡಗಳ ಮೇಲೆ 'ಮನ್ಸಾ ದೇವಿ ಹಾಗೂ ಚಂಡೀ ದೇವಿ' ಮಂದಿರಗಳಿವೆ. ಸ್ನಾನ ಘಟ್ಟಕ್ಕೆ 'ಮನ್ಸಾ ದೇವಿ' ಮಂದಿರ ಸಣ್ಣದಾಗಿ ಕಾಣುತ್ತದೆ. ಹಿಮಾಲಯದ ಪ್ರಾರಂಭದ ಸಿವಾಲಿಕ್ ಪರ್ವತಗಳ 'ಬಿಲ್ವ' ಎಂಬ ಪರ್ವತದಲ್ಲಿ ಈ ಮಂದಿರವಿದೆ. 'ಮನ್ಸಾ' ಎಂದರೆ ಮನೋಕಾಮನೆಗಳು ಎಂದರ್ಥ. ಭಕ್ತರ ಮನಸ್ಸಿನ ಇಷ್ಟಾರ್ಥಗಳನ್ನು ಆಕೆ ನೆರವೇರಿಸುವಳು ಎಂಬ ಭಾವ. ಮನ್ಸಾ ದೇವಿಯ ಬಗ್ಗೆ ಇಲ್ಲಿ ಒಂದು ಜನಪದ ಕಥೆ ಇದೆ. "ಆಕೆ ಸತ್ಯವನ್ನು ತಿಳಿದುಕೊಳ್ಳುವುದಕ್ಕಾಗಿ ಶಿವನ ಕುರಿತು ತಪಸ್ಸನ್ನು ಮಾಡುತ್ತಾಳೆ, ಆಕೆಯ ಭಕ್ತಿಗೆ ಶಿವ ಒಲಿಯುತ್ತಾನೆ, ಹಾಗೂ ಆಕೆಗೆ ಸತ್ಯದ ದರ್ಶನವಾಗುತ್ತದೆ. ನಂತರ ಆಕೆ ದೈವತ್ವವನ್ನು ಪಡೆಯುತ್ತಾಳೆ ಹಾಗೂ ಜನರ ಕ್ಷೇಮವನ್ನು ಕಾಪಡುವ ಶಕ್ತಿ ಹೊಂದುತ್ತಾಳೆ," ಎಂದು. ಆದ್ದರಿಂದ ಇಲ್ಲಿ ತಮ್ಮ ಬಯಕೆಗಳನ್ನು ಸಂಕಲ್ಪ ಮಾಡಿಕೊಂಡು ಅಲ್ಲಿನ ಮರವೊಂದಕ್ಕೆ ನೂಲನ್ನು ಕಟ್ಟಿ, ನಮ್ಮ ಇಷ್ಟಾರ್ಥ ಸಿದ್ದಿಯಾದ ಮೇಲೆ ನೂಲನ್ನು ಬಿಡಿಸುವ ಸಂಪ್ರದಾಯವಂತೆ. ಮನ್ಸಾ ದೇವಿ ಮಂದಿರ ಒಂದು ಸಿದ್ದ ಪೀಠ. ಹರಿದ್ವಾರದಲ್ಲಿ ಇಂತಹ ಮೂರು ಸಿದ್ದ ಪೀಠಗಳಿವೆ. ಒಂದು ಮನ್ಸಾ ದೇವಿ, ಇನ್ನೊಂದು ಚಂಡೀ ದೇವಿ ಹಾಗೂ ಮಾಯಾ ದೇವಿ ಮಂದಿರಗಳು. ಇವೆಲ್ಲವೂ ಪಾರ್ವತಿಯ ಅವತಾರಗಳೇ ಎನ್ನುತ್ತಾರೆ. ಮನ್ಸಾ ದೇವಿ ಮಂದಿರಕ್ಕೆ ಸಾಮಾನ್ಯವಾಗಿ 'ರೋಪ್ ವೇ' ಮೂಲಕವೇ ಹೋಗುತ್ತಾರೆ. ನಡೆದು ಹೋಗುವವರು ಬೆಟ್ಟ ಹತ್ತುತ್ತಾ ಚಾರಣ ಹೋಗುತ್ತಾರೆ. ರೋಪ್ ವೇ ಯ ಒಟ್ಟು ಉದ್ದ, ೧೭೭೦ ಫೀಟ್‌ಗಳು, ಮತ್ತು ೫೭೮ ಫೀಟ್ ಎತ್ತರ. ಅಥವಾ ನಡೆದು ಹೋಗುವುದಾದರೆ ಸುಮಾರು ೩ ಕಿ. ಮೀನಷ್ಟು ದೂರವಿದೆ. ಮನ್ಸಾ ದೇವಿ ಹಾಗೂ ಚಂಡೀ ದೇವಿ ಯಾವಾಗಲೂ ಒಟ್ಟಿಗೆ ಇರುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ಸಾಮಾನ್ಯವಾಗಿ ಹರಿದ್ವಾರಕ್ಕೆ ಬಂದವರು ಮನ್ಸಾ ದೇವಿ ಮಂದಿರಕ್ಕೆ ಹೋಗದೇ ಇರುವುದಿಲ್ಲ. ಮಹಿ ಹಿಂದಿನ ಬಾರಿ ಬಂದಿದ್ದಾಗ ಮನ್ಸಾ ದೇವಿ ಮಂದಿರಕ್ಕೆ ಹೋಗಿದ್ದು, ಚಂಡೀ ಮಂದಿರಕ್ಕೆ ಹೋಗಿರಲಿಲ್ಲವಂತೆ. ಹಾಗಾಗಿ ನಾವು ಚಂಡೀ ಮಂದಿರಕ್ಕೆ ಹೋಗುವುದು ಮತ್ತೆ ಸಮಯವಿದ್ದರೆ ಮನ್ಸಾ ದೇವಿ ಮಂದಿರಕ್ಕೆ ಹೋಗುವುದಾಗಿ ನಿರ್ಧರಿಸಿದೆವು. ಚಂಡೀ ದೇವಿ ಮಂದಿರವು 'ಸಿವಾಲಿಕ್ ಹಿಲ್'ನ 'ನೀಲ್' ಪರ್ವತದಲ್ಲಿದೆ. ೧೯೨೯ ನೇ ಇಸವಿಯಲ್ಲಿ ಕಾಶ್ಮೀರದ ರಾಜ 'ಸುಚತ್ ಸಿಂಗ್' ಈ ದೇವಾಲಯ ಕಟ್ಟಿಸಿದನಂತೆ. ಚಂಡೀ ದೇವಿಯ ಮೂರ್ತಿಯನ್ನು ಆದಿ ಶಂಕರಾಚಾರ್ಯರು ೮ನೇ ಶತಮಾನದಲ್ಲಿ ಸ್ಥಾಪಿಸಿದರು ಎನ್ನಲಾಗುತ್ತದೆ. ಚಂಡೀ ದೇವಿ ಮಂದಿರವನ್ನು 'ನೀಲ ಪರ್ವತ ತೀರ್ಥ' ಎಂದೂ ಕರೆಯಲಾಗುತ್ತದೆ. ಶುಂಭ ನಿಶುಂಭರನ್ನು ಕೊಂದ ನಂತರ ಚಂಡೀ ದೇವಿ ಇಲ್ಲಿ ವಿರಮಿಸಿದಳು ಎಂದು ಪ್ರತೀತಿ ಇದೆ. 'ಹರ್ ಕಿ ಪೌರಿ' ಎಂಬಲ್ಲಿಂದ ಚಂಡೀ ಮಂದಿರಕ್ಕೆ ಸುಮಾರು ೪ ಕಿ.ಮೀ ಇದೆ. ಚಂಡೀ ಘಾಟ್ ಎಂಬಲ್ಲಿಂದ ೩ ಕಿ. ಮೀ ಟ್ರಕ್ಕಿಂಗ್ ರೂಟ್‌ನಲ್ಲಿ ಹೋಗಿ ನಂತರ ಮೆಟ್ಟಿಲುಗಳನ್ನು ಹತ್ತುತ್ತಾ ಪರ್ವತದ ಮೇಲಿರುವ ಚಂಡೀ ಮಂದಿರ ತಲುಪಬಹುದು ಅಥವಾ ರೋಪ್ ವೇ ಮೂಲಕವೂ ಹೋಗಬಹುದು. 9,500 ft ಎತ್ತರದಲ್ಲಿ ಈ ಮಂದಿರವಿದೆ. ರೋಪ್ ವೇ ಯ ಒಟ್ಟು ಉದ್ದ 2,430 ft ಹಾಗೂ ಎತ್ತರ 682 ft. ೧೧.೩೦-೧೨.೦೦ ಗಂಟೆಯ ಸಮಯ, ನಾವು 'ಹರ್ ಕಿ ಪೌರ್' ನಿಂದ ಸೇತುವೆಯ ಮೂಲಕ ಗಂಗಾ ನದಿ ದಾಟಿ ಸ್ವಲ್ಪ ದೂರ ನಡೆದೆವು. ಅಲ್ಲಿಂದ ಚಂಡೀ ದೇವಿ ಮಂದಿಕ್ಕೆ ಹೋಗುವ ರೋಪ್ ವೇ ಯ ಸ್ಟಾರ್ಟಿಂಗ್ ಪಾಯಿಂಟ್ ತಲುಪಲು ಆಟೋ ಸಿಕ್ಕಿತು. ನಮ್ಮಂತೆ ಇನ್ನೂ ಕೆಲವರು ಆಟೋದಲ್ಲಿದ್ದರು. ರಸ್ತೆ ಪರ್ವತಗಳ ಸುತ್ತು ಹಾಕುತ್ತಾ ಸಾಗಿತ್ತು. ನಮ್ಮಲ್ಲಿನ ಆಗುಂಬೆ ಗಾಟಿಯ ನೆನಪಾಯಿತು. ಅಂತಹದ್ದೇ ಹಸಿರು, ಗಾಟಿ ಅಷ್ಟೊಂದು ದೊಡ್ಡದಾಗಿರಲಿಲ್ಲ. ಹಿಮಾಲಯದ ಬುಡದಲ್ಲಿದ್ದೆವು. ಬಹಳ ಬಾಯಾರಿಕೆಯಾಗುತ್ತಿತ್ತು. ರಸ್ತೆ ಬದಿಯಲ್ಲಿದ್ದ ಒಬ್ಬ ಹುಡುಗನ ಅಂಗಡಿಯಲ್ಲಿ ಗೋಲಿ ಸೋಡ ಕುಡಿದೆವು. 'ರೋಪ್ ವೇ' ಗೆ ಟಿಕೆಟ್ ತೆಗೆದುಕೊಳ್ಳಲು ಸಾಲಿನಲ್ಲಿ ನಿಲ್ಲಬೇಕಾಯಿತು. ಒಂದರ್ಧ ಗಂಟೆಯ ನಂತರ ಟಿಕೆಟ್ ಸಿಕ್ಕಿತು. ಮತ್ತೆ ರೊಪ್ ವೇ ಯಲ್ಲಿ ಹೋಗಲು ಕ್ಯೂ. ಅಂತೂ ನಮ್ಮ ಸರದಿ ಬಂತು. ನನಗಿದು ಮೊದಲ ಅನುಭವ. ಎದುರಿಗೆ ತುಂಬಾ ಎತ್ತರದಲ್ಲಿ ಚಂಡಿ ಮಂದಿರ ಕಾಣಿಸುತ್ತಿತ್ತು. ನಾವು ನಿಂತಲ್ಲಿಂದ ಅಲ್ಲಿಗೆ ಗಟ್ಟಿಯಾದ ಕಬ್ಬಿಣ ಅಥವಾ ಇನ್ನಾವುದೋ ಲೋಹದ ದಪ್ಪದ ಹಗ್ಗಗಳನ್ನು ಕಟ್ಟಿದ್ದರು. ಕೆಳಗಡೆ ಕುಮಾರ ಪರ್ವತದ ಮಾರಿ ಗುಂಡಿಯಂತಹ ಪ್ರಪಾತ. ಒಂದು ಬಾಸ್ಕೆಟ್ ತರದ ಗಾಡಿಯ ಮೇಲ್ಭಾಗದಲ್ಲಿ ಕೊಕ್ಕೆಯ ರೀತಿಯ ರಚನೆ ಇದೆ. ಅದು ರೋಪಿನಲ್ಲಿ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ. ಆಗ ಗಾಡಿಯೂ ಚಲಿಸುತ್ತದೆ. ನಾಲ್ಕು ಜನ ಮಾತ್ರ ಕುಳಿತುಕೊಳ್ಳಬಹುದಾದಷ್ಟು ದೊಡ್ಡ ಬಾಸ್ಕೆಟ್ ಅದು. ಮಹಿ ಭಯ ಪಡಬೇಡ ಎಂದು ಹೇಳುತ್ತಿದ್ದರೂ ರೋಪ್ ಕಟ್ಟಾದರೆ ಎಂಬ ಭಯ ಮನದಲ್ಲಿ ಹಾಗೆ ಸುಳಿದು ಹೋಯಿತು. ಕ್ಯೂ ನಲ್ಲಿ ನಮ್ಮೆದುರು ನಿಂತಿದ್ದ ನವ ವಿವಾಹಿತ ದಂಪತಿಗಳು ಹಾಗೂ ನಾವಿಬ್ಬರು ಒಂದು ಗಾಡಿಯಲ್ಲಿ ಕುಳಿತುಕೊಂಡೆವು. ಅದರ ನಿರ್ವಾಹಕರೊಬ್ಬರು ಗಾಡಿಯನ್ನು ನೂಕಿ ಬಿಟ್ಟರು. ನಮ್ಮ ಗಾಡಿ ಹೊರಟಿತು. ಆ ವಯರ್‌ಗಳಲ್ಲಿ ಇಲೆಕ್ಟ್ರಿಸಿಟಿ ಪಾಸ್ ಆಗುತ್ತಿರುತ್ತದೆ. ಕೆಳಗೆ, ಮೇಲೆ, ಸುತ್ತಾ ಮುತ್ತಾ ಎಲ್ಲಿ ನೋಡಿದರೂ ಹಸಿರು. ಸಾಮಾನ್ಯ ನಮ್ಮ ಪಶ್ಚಿಮ ಘಟ್ಟಗಳ ರೀತಿಯದ್ದೇ ಪರ್ವತ. ಕೆಳಗೆ ನೋಡಿದರೆ ಆಳವಾದ ಪ್ರಪಾತ ಹಾಗೂ ನೀರ ಝರಿಗಳು, ಚಿಕ್ಕ ಚಿಕ್ಕ ಜಲಪಾತಗಳು, ಸಣ್ಣ ಪುಟ್ಟ ತೊರೆಗಳು ಹರಿಯುತ್ತಿತ್ತು. ದೂರದಲ್ಲಿ ಹರಿಯುತ್ತಿದ್ದ ಗಂಗೆ ಹಾಗೂ ಹರಿದ್ವಾರ ಪಟ್ಟಣ ಪುಟ್ಟದಾಗಿ ಕಾಣುತ್ತಿತ್ತು. ತಂಪಾದ ವಾತಾವರಣ ಹಾಗೂ ಪ್ರಕೃತಿಯ ಆ ನಯನ ಮನೋಹರ ನೋಟ, ವ್ಹಾ... ಅದ್ಭುತ ಲೋಕವನ್ನೇ ಸೃಷ್ಟಿಸಿತ್ತು. ನನ್ನೆದುರಿಗೆ ಕುಳಿತ ಆ ಹೆಂಗಸಂತು ಭಯದಿಂದ ಕಣ್ಣು ಮುಚ್ಚಿಕೊಂಡಿದ್ದಳು. ಮಹಿ ಅಲ್ಲಿ ಕೆಲವೇ ಕೆಲವು ಸೆಲ್ಫಿ ಹಾಗೂ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿದ್ದು ಬಿಟ್ಟರೆ, ಕ್ಯಾಮೆರಾ ಹೊರಗಡೇ ತೆಗೆಯಲೇ ಇಲ್ಲ. ಆ ಗಾಡಿ ಆಗಾಗ ಡಗ್ ಡಗ್ ಎಂದು ಸೌಂಡ್ ಮಾಡುತ್ತಾ ಅಲುಗಾಡುತ್ತಿತ್ತು, ಕರೆಂಟ್ ಲೈನ್ ಪಾಸಾಗುವ ಜಾಗದಲ್ಲಿ ಹಾಗಾಗುತ್ತಿತು. ಆಗಂತೂ ಒಮ್ಮೆ " ಅಬ್ಬ" ಎಂಬ ಉದ್ಘಾರ ಗೊತ್ತಿಲ್ಲದೇ ಬಾಯಿಂದ ಹೊರ ಬರುತ್ತಿತ್ತು. ನಮ್ಮ ಪಕ್ಕದಲ್ಲೇ ಇನ್ನೊಂದು ರೋಪ್ ವೇ ನಲ್ಲಿ ಜನರು ಚಂಡಿ ಮಂದಿರದಿಂದ ವಾಪಸ್ ಬರುತ್ತಿದ್ದರು. ಸಾಕಷ್ಟು ಗಾಡಿ ಹೋಗಿ ಬಂದು ಮಾಡುತ್ತಿರುತ್ತದೆ. ನಮ್ಮಿಂದ ಸಾಕಷ್ಟು ದೂರದಲ್ಲಿದ್ದ ಗಾಡಿಯಲ್ಲಿ ಕುಳಿತವರು "ಹೋ... ಹಾ..." ಎಂದು ಕಿರುಚುತ್ತಿದ್ದುದು ಕೇಳಿಸುತ್ತಿತ್ತು. ಗಾಳಿಯಲ್ಲಿ ಈ ರೀತಿ ತೇಲಾಡುತ್ತಾ ಸಾಗಲು ಇರುವ ಅವಕಾಶ ಕೇವಲ ನಾಲ್ಕೈದು ನಿಮಿಷಗಳು. ಆಗಲೇ ಚಂಡೀ ಮಂದಿರಕ್ಕೆ ತಲುಪಿದ್ದೆವು. ಅಲ್ಲಿನ ಸ್ಟೇಷನ್‌ನಲ್ಲಿ ನಮ್ಮನ್ನು ಇಳಿಸಲು ನಿರ್ವಾಹಕರು ಇದ್ದರು. ಚಂಡೀ ಮಂದಿರ ಪುಟ್ಟದೊಂದು ಮಂದಿರ. ಎಷ್ಟೇ ಪ್ರಖ್ಯಾತವಾದ ದೇವಾಲಯವಾದರೂ ನಮ್ಮ ದಕ್ಷಿಣದಲ್ಲಿರುವಷ್ಟೂ ವಿಶಾಲವಾದ ಹಾಗೂ ಶಾಸ್ತ್ರೀಯವಾದ ದೇವಾಲಯಗಳು ಇಲ್ಲಿ ತೀರಾ ವಿರಳ. ದೇವರ ಮೂರ್ತಿಗಳೂ ಹಾಗೇ ಕಲರ್ ಫುಲ್ ಆಗಿರುತ್ತವೆ. ಆ ಮೂರ್ತಿಗಳಿಗೆ ಅಭಿಷೇಕ ಮಾಡುವುದು ಕಷ್ಟ. ಅಲಂಕಾರ ಮಾತ್ರ 'ಜಿಗ್ಗಿ ಜಿಗ್ಗಿ'ಯಾಗಿ ಮಾಡಿರುತ್ತಾರೆ. ಮುಂದೆ ಹೋದೆವು. ಸಾಕಷ್ಟು ಮಂಗಗಳು ಕಾಣ ಸಿಕ್ಕಿದವು, ಹಲವು ಕಡೆ ಮಂಗಗಳಿವೆ ಎಚ್ಚರ ಎಂಬ ಬೋರ್ಡ್ ಕೂಡಾ ಇತ್ತು. ನಮ್ಮೂರಿನ ಮಂಗಗಳಿಗಿಂತ ಇವುಗಳು ಸ್ವಲ್ಪ ಭಿನ್ನ. ಇವುಗಳ ಸ್ಪೀಸಿಸ್ ಬೇರೆ. ಚಂಡಿ ಮಂದಿರದ ಪಕ್ಕದಲ್ಲಿ ಒಂದು ಹನುಂತ ದೇವಾಲಯವಿದೆ. ಅಂಜನಾ ದೇವಿ ಗುಡಿಯೂ ಇದೆ. ಚಂಡೀ ಮಂದಿರಕ್ಕೆ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವಾಗ ಒಬ್ಬರು ಹನುಮಂತನ ವೇಷ ಧರಿಸಿ ಮಿಮಿಕ್ರಿ ಮಾಡುತ್ತಾ ನಿಂತಿದ್ದರು. ಸ್ವಲ್ಪ ಮುಂದೆ ಮಂಗವೊಂದು 'ಮೊಂಟೆನ್ ಡ್ಯೂ' ಜ್ಯೂಸ್‌ನ್ನು ಯಾರ ಬಳಿಯಿಂದಲೋ ಕಿತ್ತುಕೊಂಡು ಬಾಟಲ್‌ನು ಮಗುಚಿ ಹಾಕಿ ಜ್ಯೂಸನ್ನು ನೆಲಕ್ಕೆ ಚೆಲ್ಲಿ ಕುಡಿಯುತ್ತಾ ಎಂಜಾಯ್ ಮಾಡುತ್ತಿತ್ತು. ಮೆಟ್ಟಿಲು ಹತ್ತುತ್ತಾ ಮುಂದೆ ಸಾಗಿದೆವು. ನಮ್ಮಲ್ಲಿ ಹಣ್ಣು ಕಾಯಿ ಅಂಗಡಿಗಳಿರುವಂತೆ ಇಲ್ಲೂ ಪ್ರಸಾದದ ಅಂಗಡಿಗಳಿವೆ. ತೆಂಗಿನ ಕಾಯಿ, ಹುರಿಯಕ್ಕೆ, ಕಲ್ಲು ಸಕ್ಕರೆ ಮೊದಲಾದವುಗಳನ್ನು ದೇವರಿಗೆ ಕೊಂಡೊಯ್ಯಬಹುದು. ಜೊತೆಗೆ ಒಂದಷ್ಟು ಹೋಟೆಲ್‌ಗಳು ಹಾಗೂ ಅಂಗಡಿಗಳಿದ್ದವು. ನಮ್ಮ ಚಪ್ಪಲಿಯನ್ನು ಚಪ್ಪಲ್ ಸ್ಟ್ಯಾಂಡ್‌ನಲ್ಲಿಟ್ಟು, ಮುಂದೆ ಹೋದೆವು. ಅಲ್ಲಲ್ಲಿ ಪೋಲಿಸರು ಇದ್ದರು, ಸ್ವಲ್ಪ ನೂಕು ನುಗ್ಗಲೂ ಇತ್ತು. ಒಳಗಡೆ ಚಂಡೀ ದೇವಿಯ ಮೂರ್ತಿ ಇತ್ತು. ಅಲ್ಲಿ ದೇವರಿಗೆ ವಂದಿಸಿ ಸುತ್ತು ಬಂದು ಒಂದು ಕ್ಷಣ ಕುಳಿತು ಹೊರ ಬಂದೆವು. ಹೊರಗಡೆ ಜನ ಸಾಲಾಗಿ ಚಿಕ್ಕದೊಂದು ಎಲೆಯ ದೊನ್ನೆಯನ್ನು ಹಿಡಿದು ನಿಂತಿದ್ದರು, ಸ್ವಲ್ಪ ಮುಂದೆ ಪ್ರಸಾದ ನೀಡುತ್ತಿದ್ದರು. ಬಹಳ ಹಸಿವಾಗಿತ್ತು, ಅಲ್ಲಿ ಕೊಟ್ಟ ಪ್ರಸಾದ 'ಕಿಚಡಿ' ತುಂಬಾ ರುಚಿಯಾಗಿತ್ತು. ಮಹಿ ಪಾಲಿನದ್ದನ್ನೂ ನಾನೇ ತಿಂದೆ, ಹೋಟೆಲ್ ಒಂದರಲ್ಲಿ ಜ್ಯೂಸ್ ಕುಡಿದು ಹನುಮಂತನ ಗುಡಿಗೆ ಹೋದೆವು. ಅಲ್ಲೇ ಪಕ್ಕದಲ್ಲಿದ್ದ ಅಂಜನಾ ದೇವಿ ಮಂದಿರಕ್ಕೂ ಹೋದೆವು. ಹನುಮಂತನ ಮಂದಿರದ ಹೊರ ಬದಿಗೆ ಕೆಳಗಡೆ ಆಳವಾದ ಪ್ರಪಾತ. ಆ ಪರ್ವತದ ತುದಿಯಲ್ಲಿ ಚಂಡೀ ಮಂದಿರ ಹಾಗೂ ಹನುಮಂತನ ಮಂದಿರವಿದ್ದಷ್ಟೇ ಜಾಗ, ಸುತ್ತಲೂ ಪ್ರಪಾತ. ನಾವು ಹಿಮಾಲಯದ ಒಂದು ಪುಟ್ಟ ಪರ್ವತದ ತುದಿಯಲ್ಲಿದ್ದೇವೆ. ಅಲ್ಲಿಂದ ಮತ್ತೆ ಹೊರಟು, ರೋಪ್ ವೇ ಸ್ಟೇಶನ್ ಹತ್ತಿರ ಬಂದು ಕ್ಯೂ ನಿಂತೆವು. ಇಲ್ಲಿ ಮತ್ತೆ ಅರ್ಧ ಮುಕ್ಕಾಲು ಗಂಟೆ ಕ್ಯೂ ನಿಲ್ಲಬೇಕಾಗಿ ಬಂತು. ಪುನಃ ರೋಪ್ ವೇ ಮೂಲಕ ಇಳಿದೆವು. ಮತ್ತೆ ಅದೇ ಸುಂದರ ಪ್ರಕೃತಿಯ ದರ್ಶನ.
|
ರೋಪ್ ವೇ (ಚಿತ್ರ ಕೃಪೆ: ಗೂಗಲ್) |
|
ಚಂಡೀ ಮಂದಿರ್ (ಚಿತ್ರ ಕೃಪೆ: ಗೂಗಲ್) |
ರೋಪ್ ವೇ ನಿಂದ ಇಳಿದು ಹೋಟೆಲ್‌ಗೆ ಹೋಗಿ ಊಟ ಮುಗಿಸಿ ರಿಕ್ಷಾ ಸ್ಟ್ಯಾಂಡ್ ಹತ್ತಿರ ಬಂದೆವು. ಜನ ಆಗದೇ ಯಾವ ರಿಕ್ಷವೂ ಹೊರಡುವ ಹಾಗೆ ಕಾಣುತ್ತಿರಲಿಲ್ಲ. ಓಲಾ ಇದೆಯೇ ನೋಡಿದಾಗ ಬರುವುದು ಸ್ವಲ್ಪ ಲೇಟ್ ಆಗಬಹುದು ಎಂದು ತಿಳಿಯಿತು. ಸ್ವಲ್ಪ ಹೊತ್ತು ಅಲ್ಲೇ ರಿಕ್ಷಾಗಳಿಗೆ ಕಾಯುತ್ತಾ ನಿಂತೆವು. ಒಂದು ರಿಕ್ಷಾದ ಡ್ರೈವರ್ ಕುಳಿತುಕೊಳ್ಳಿ ಇನ್ನೇನು ಹೊರಡುವುದು ಎಂದ, ನಾಲ್ಕು ಜನ ಬಂದರು. ಇನ್ನೊಬ್ಬರು ಬಂದ ಕೂಡಲೇ ಹೊರಡುವ ಎಂದು ಎಲ್ಲರನ್ನೂ ರಿಕ್ಷಾದಲ್ಲಿ ಕುಳಿತುಕೊಳಿಸಿ ಅಲ್ಲೆಲ್ಲೋ ಹೋದ. ಕಾಲು ಗಂಟೆ ಕಳೆದರೂ ಆಸಾಮಿ ಪತ್ತೆ ಇಲ್ಲ. ಎಲ್ಲರ ಅಸಹನೆ ಮೀರಿತ್ತು. ಬೇರೊಂದು ರಿಕ್ಶಾಕ್ಕೆ ಹೋಗುವುದಾಗಿ ನಿರ್ಧರಿಸಿ ಎಲ್ಲರೂ ಇಳಿದು ಇನ್ನೊಂದು ರಿಕ್ಷಾ ಗೊತ್ತು ಮಾಡಿ ಹೋದೆವು. ಬೆಳಗ್ಗೆ ನಾವು ರಿಕ್ಷಾ ಹತ್ತಿದ ಸ್ಥಳದಲ್ಲಿ ಅವರೆಲ್ಲಾ ಇಳಿದುಕೊಂಡರು, ನಾವು ಅದೇ ರಿಕ್ಷಾವನ್ನು ನಮ್ಮ ಹೋಟೆಲ್ ಬಳಿ ಹೋಗಲು ಹೇಳಿದೆವು. ಆಗಲೇ ಗಂಟೆ ನಾಲ್ಕಾಗಿತ್ತು. ತುಂಬಾ ಸುಸ್ತಾಗಿತ್ತು. ಒಮ್ಮೆ ಹೋಟೆಲ್‌ಗೆ ತಲುಪಿ ಹಾಸಿಗೆ ಮೇಲೆ ಬಿದ್ದರೆ ಸಾಕು ಅನಿಸುತ್ತಿತ್ತು. ಅಂತೂ ಹೋಟೆಲ್ ತಲುಪಿದೆವು. ಸಂಜೆ ೬.೩೦ಕ್ಕೆ ಗಂಗಾರತಿ ನೋಡಲು ಮತ್ತೆ ನದಿ ಹತ್ತಿರ ಹೋಗಬೇಕಿತ್ತು. ೫.೩೦ಕ್ಕೆ ಅಲರಾಮ್ ಸೆಟ್ ಮಾಡಿ ಮಲಗಿದೆವು, ಆದರೆ ಎದದ್ದು ಮಾತ್ರ ೬ ಗಂಟೆಗೆ, ಆದರೂ ತಡಮಾಡದೇ ಹೊರಟು ನದಿ ಬಳಿ ತಲುಪುವಷ್ಟರಲ್ಲಿ ಗಂಗಾರತಿ ಮುಗಿದಿತ್ತು. ಮಧ್ಯಾಹ್ನ ಅಲ್ಲಿನ ಪೋಲಿಸರ ಬಳಿ, ಪುರೋಹಿತರ ಬಳಿ ಮಹಿ ಕೇಳಿದಾಗ ೬.೩೦ಕ್ಕೆ ಅಂದಿದ್ದರಂತೆ, ಬಹುಷಃ ಅದಕ್ಕು ಮೊದಲೇ ಮಾಡಿರಬೇಕು. ರಾತ್ರಿಯಂತೂ ಗಂಗೆ ಬೇರೆಯೇ ರೀತಿ ಕಾಣುತ್ತಿದ್ದಳು. ನೀರ ಮೇಲೆ ಬೀಳುವ ಬೆಳಕು, ಭಕ್ತರು ತೇಲಿ ಬಿಟ್ಟ ಹಣತೆಗಳು, ಸುತ್ತಲಿನ ಲೈಟಿಂಗ್ಸ್, ಆ ಝುಳು ಝುಳು ನಿನಾದ, ದೇಶದ ಮೂಲೆ ಮೂಲೆಗಳಿಂದ ಬಂದ ಭಕ್ತರ, ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದ ಜನರ ಗೌಜಿ ಗದ್ದಲಗಳು, " ಜೈ ಗಂಗೇ ಮಾತಾ...." ಎಂದು ರಾಗವಾಗಿ ಮೊಳಗಿ ಬರುತ್ತಿದ್ದ ಭಜನೆ, ಕೈಯಲ್ಲಿ ಬೆಲೂನ್ ಹಿಡಿದು ಬಾಯಲ್ಲಿ ಪೀ ಪೀ ಊದುತ್ತಿದ್ದ ಮಕ್ಕಳು ಹಾಗೂ ಅವುಗಳನ್ನು ಮಾರಾಟ ಮಾಡುತ್ತಿದ್ದ ಜನರು ಹೀಗೆ ಆ ಪ್ರದೇಶ ಗಿಜಿ ಗಿಜಿ ಗುಟ್ಟುತ್ತಿತ್ತು. ಅಲ್ಲಿ ಒಂದಷ್ಟು ಫೋಟೋ ಕ್ಲಿಕ್ಕಿಸಿ ಮತ್ತೆ ಅದೇ ಸಂತೆಯ ಮಾರ್ಗವಾಗಿ ಬಂದು ಹೋಟೆಲ್ ಒಂದರಲ್ಲಿ ರಾತ್ರಿಯ ಊಟ ಮುಗಿಸಿ ನಮ್ಮ ರೂಮ್‌ಗೆ ಮರಳಿದೆವು. ಇವತ್ತು ಗಂಗಾರತಿ ಮಿಸ್ ಆಗಿದ್ದಕ್ಕೆ ನಾಳೆ ಬೆಳಗ್ಗೆ ನೋಡಲೇ ಬೇಕು ಅಂದುಕೊಂಡೆವು. ಬೆಳಗ್ಗೆ ೫.೩೦ಕ್ಕೆ ಗಂಗಾರತಿ ಇರುತ್ತದೆ ಎಂದಿದ್ದರು, ನಾವು ಅರ್ಧ ಗಂಟೆ ಮೊದಲೇ ಹೋಗ ಬೇಕೆಂದು ನಿರ್ಧರಿಸಿದೆವು. ಶ್ರೀ ಶಂಕರ ಚಾನೆಲ್ ನಲ್ಲಿ ಗಂಗಾರತಿ ನೋಡಿದ್ದೆ, ಎಲ್ಲರೂ ಮೆಟ್ಟಿಲುಗಳಲ್ಲಿ ನಿಂತು ಗಂಗೆಗೆ ಆರತಿ ಮಾಡುತ್ತಿದ್ದ ದೃಶ್ಯವದು. ಅದು ಹರಿದ್ವಾರದ್ದಾ ಅಥವಾ ಕಾಶಿ ಮೊದಲಾದ ಕಡೆಗಳದ್ದೋ ಗೊತ್ತಿಲ್ಲ.
|
ದಿಯಾಗಳು (ಚಿತ್ರ ಕೃಪೆ: ಗೂಗಲ್) |
|
ಗಂಗಾನದಿ, ಹರಿದ್ವಾರ್ |
೦೧/೦೮/೨೦೧೮
ಬೆಳಗ್ಗೆ ೪ ಗಂಟೆಗೇ ಎದ್ದು ತಯಾರಾದೆವು. ನಡೆದುಕೊಂಡೇ ನದಿಯ ಕಡೆಗೆ ಸಾಗಿದೆವು. ರಾತ್ರಿ ರಾಯಭಾರ ಮಾಡಿದ್ದ ರಾಯಲ್ ಹೋಟೆಲ್‌ಗಳು, ರಾಯರ ಅಂಗಡಿಗಳೆಲ್ಲವೂ ಬೆಚ್ಚನೆ ಹೊದ್ದು ಮಲಗಿದ್ದವು. ರಸ್ತೆ ಬದಿ ಮ್ಯಾಟ್ ಹಾಕಿ ನೆಲದಲ್ಲಿ ಕುಳಿತು ಆಟಿಕೆ, ಮಾಲೆಗಳು, ಬೆಲುನ್, ಬೆಡ್ ಶೀಟ್ ಮುಂತಾದವುಗಳನ್ನು ಮಾರುತ್ತಿದ್ದ ಸಣ್ಣ ಸಣ್ಣ ವ್ಯಾಪಾರಸ್ಥರು ಅವುಗಳನ್ನೆಲ್ಲಾ ಗಂಟು ಕಟ್ಟಿ ಪಕ್ಕಕ್ಕಿರಿಸಿಕೊಂಡು ರಸ್ತೆ ಬದಿಯಲ್ಲೇ ಮಲಗಿದ್ದರು. ಮೈ ಕೊರೆಯುವ ಚಳಿ ಇರಲಿಲ್ಲವಾದರೂ, ಹೊರಗೆ ಆ ರೀತಿ ಮಲಗಿದವರನ್ನು ಗಡ ಗಡ ನಡುಗಿಸಲು ಅಲ್ಲಿನ ಚಳಿಯೂ, ಬೀಸುತ್ತಿದ್ದ ತಂಪು ಗಾಳಿಯೂ ಸಾಕಿತ್ತು. ೧೦, ೨೦ ರೂ ಗಳ ಸರಗಳು,ಬಳೆಗಳು, ಕೈಗೆ ಹಾಕುವ ಬ್ಯಾಂಡ್‌ಗಳು , ಬೆಲೂನ್‌ಗಳು, ಪೀಪೀ ಆಟಿಕೆಗಳು ಇಂತಹ ವಸ್ತುಗಳನ್ನು ಮಾರಾಟ ಮಾಡುತ್ತಾ ಅವರೆಷ್ಟು ಲಾಭ ಗಳಿಸಿಯಾರು? ಆ ಹಣದಲ್ಲಿ ಹೇಗೆ ಸಂಸಾರ ನಿಭಾಯಿಸಿಯಾರು, ನೆನೆದಾಗ ತುಂಬಾ ಸಂಕಟವಾಯಿತು. ಎಲ್ಲೇ ಜಾತ್ರೆ, ಸಮಾರಂಭ ಅಥವಾ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮ ನಡೆಯಲಿ ಅವರು ಬರದಿದ್ದರೆ ಊಹಿಸಿ ಅದೇನು ಚಂದ ವಿರಬಹುದು? ನಮ್ಮೂರಲ್ಲಿ ಜಾತ್ರೆ ನಡೆದರೆ ಜನ ದೇವರ ತೇರು ನೋಡುವುದಕ್ಕಿಂತಲೂ ಜಾಸ್ತಿ ಸಂತೆ ನೋಡುತ್ತಿರುತ್ತಾರೆ, ಒಮ್ಮೆ ದೇವಸ್ಥಾನಕ್ಕೆ ಹೋಗಿ ಬಂದು ಸಂತೆಯಲ್ಲೇ ಸುತ್ತಾಡುತ್ತಿರುತ್ತಾರೆ. ಆ ಸಂತೆ ಅಂಗಡಿಗಳನ್ನು ಇಡುವವರು ಬರದೇ ಹೋದರೆ ಎಷ್ಟೇ ಜನ ಸೇರಲಿ, ಎಷ್ಟೇ ದೊಡ್ಡ ತೇರಿರಲಿ, ಎಷ್ಟೇ ದೊಡ್ಡ ದೇವಸ್ಥಾನವೇ ಆಗಲಿ ಆ ಜಾತ್ರೆ ಸಂಪೂರ್ಣ ಖುಷಿ ನೀಡದು. ಜಾತ್ರೆಯಿಂದ ಮನೆಗೆ ಹೋದಾಗ ಮನೆಯಲ್ಲಿ ದೇವರ ಪ್ರಸಾದ ತಂದಿದೀಯ ಅಂತ ಕೇಳುವ ಜನಕ್ಕಿಂತ ಹೆಚ್ಚು ಸಂತೆಯಿಂದ ಎಂತ ತಂದೆ? ಹುರಿಯಕ್ಕಿ, ಕಡ್ಲೆ ಮಿಠಾಯಿ ತಂದಿದೀಯ? ಬಳೆಗಾರನ ಕೈಯಿಂದ ಬಳೆ ತಂದಿದೀಯ? ಬಚ್ಚಂಗಾಯಿ, ಚಿತ್ತುಪುಳಿ ತಂದಿದೀಯಾ? ಅಂತಲೇ ಕೇಳ್ತಾರೆ. ಅದನ್ನೆಲ್ಲಾ ತಂದಿಟ್ಟು ಜಾತ್ರೆಯ ಸಂಭ್ರಮ ಹೆಚ್ಚಿಸುವ ಆ ಜನರು ಇಲ್ಲದಿದ್ರೆ ಏನ್ ಚಂದ ಇರ್ಬೋದು? ಪಾಪ ಅವರ ಬದುಕು ಎಷ್ಟು ಕಷ್ಟದಲ್ಲಿರುತ್ತದೆ.
೪.೪೫ರ ಹೊತ್ತಿಗೆ ನಾವಲ್ಲಿ ತಲುಪಿದ್ದೆವು. ಆಗಲೇ ಕಣ್ವರಿಗಳು, ಭಕ್ತಾದಿಗಳು, ಪೋಲಿಸರು ಪುರೋಹಿತರು ಸೇರಿದ್ದರು. ಪೋಲಿಸರ ಸೀಟಿ ಸದ್ದಿನ ಜೊತೆಗೆ ನಿನ್ನೆಯಂತೆ ಅದೇ ಗೌಜಿ ಗದ್ದಲಗಳು. ಸುಮಾರು ಹೊತ್ತು ಅಲ್ಲಿ ನಿಂತು ಗಂಗಾರತಿ ನೋಡಲು ಕಾಯುತ್ತಿದ್ದೆವು. ಹೆಂಗಸೊಬ್ಬರು ಬಂದು ಕೇಸರಿ ಕ್ಯಾನ್‌ಗಳನ್ನು ಮಾರಾಟ ಮಾಡುತ್ತಿದ್ದರು. ಗಂಗಾ ನೀರು ಒಯ್ಯಲು. ಇನ್ನೊಬ್ಬರು ನದಿಗೆ ಹಾಲೆರೆಯಿರಿ ಎಂದು ಹಾಲನ್ನು ಮಾರಾಟ ಮಾಡುತ್ತಿದ್ದರು. ಹಲವರು ಆ ಬೆಳಗಿನ ಚಳಿಯಲ್ಲೇ ಫ್ರಿಡ್ಜ್‌ನಲ್ಲಿಟ್ಟ ನೀರಿನಂತಿರುವ ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದರು. ಹಲವರು ಖಾವ್ಡಾ ಯಾತ್ರೆ ಮಾಡುವವರು. ಇನ್ನೂ ಕೆಲವರು ತಮ್ಮ ಖಾವ್ಡಾವನ್ನು ಸಿದ್ದ ಪಡಿಸುತ್ತಿದ್ದರು. ಕೆಲವು ಪುರೋಹಿತರು ಪ್ರಾರ್ಥನೆ ಮಾಡಿ ಖಾವ್ಡಾ ಯಾತ್ರೆಗೂ ಮೊದಲಿನ ಪೂಜೆಯನ್ನು ಮಾಡುತ್ತಿದ್ದರು. ಗಂಗಾರತಿಗೆ ಸಮಯವಾಯಿತು. ಅಲ್ಲಿದ್ದ ಶೃಂಗೇರಿ ಮಠದ ಗುಡಿಯ ಪಕ್ಕದಲ್ಲಿ ನದಿಗೆ ಮುಖಮಾಡಿ ನಿಂತು ಪುರೋಹಿತರೊಬ್ಬರು ಗಂಗೆಗೆ ಆರತಿ ಮಾಡುತ್ತಿದ್ದರು. ಅವರ ಸುತ್ತಲೂ ಜನರಿದ್ದರು. ನಾವು ಆರತಿ ಮಾಡುತ್ತಿದ್ದುದರ ಎದುರು ಕಡೆ ನದಿಯ ಇನ್ನೊಂದು ಬದಿ ನಿಂತಿದ್ದೆವು. ನಂತರ ಆರತಿ ಸ್ವೀಕರಿಸುವಂತೆ ಎಲ್ಲರ ಬಳಿಗೂ ತಂದರು.
|
ಗಂಗಾರತಿ (ಚಿತ್ರ ಕೃಪೆ: ಗೂಗಲ್) |
ಅಲ್ಲಿಂದ ಹೊರಟಾಗ ಬೆಳಕು ಹರಿದಿತ್ತು, ಹೆಚ್ಚಿನ ಅಂಗಡಿಗಳು ತೆರೆದಿರಲಿಲ್ಲ. ನಿನ್ನೆ ರಾತ್ರಿ ಮೈಸೂರ್ ಕೆಫೆ ಎಂಬ ಹೋಟೆಲ್ ನೋಡಿದ್ದೆವು, ಇವತ್ತು ಸಾಧ್ಯವಾದರೆ ಅಲ್ಲೇ ತಿಂಡಿ ತಿನ್ನುವುದು ಅಂದುಕೊಂಡಿದ್ದೆವು, ಆದರೆ ಅದಿನ್ನೂ ತೆರೆದೇ ಇರಲಿಲ್ಲ. ಹಾಗಾಗಿ ಓಪನ್ ಇದ್ದ ಹೋಟೆಲ್ ಒಂದರಲ್ಲಿ ಉಪಾಹಾರ ಮುಗಿಸಿ ರೂಮ್ ಗೆ ಬಂದು, ಲಗೇಜ್ ಪ್ಯಾಕ್ ಮಾಡಿ ೮ ಗಂಟೆಗೆಲ್ಲಾ ಅಲ್ಲಿಂದ ಹೊರಟೆವು. ಸೈಕಲ್ ಗಾಡಿಯೊಂದರಲ್ಲಿ ಬಂದು, ಹೃಷಿಕೇಶಕ್ಕೆ ಹೋಗುವ ವಾಹನಗಳು ಇರುವ ಸ್ಥಳಕ್ಕೆ ಬಂದೆವು. ಹರಿದ್ವಾರದಿಂದ ಹೃಷಿಕೇಶಕ್ಕೆ ಸುಮಾರು ಒಂದು ಗಂಟೆಯಷ್ಟು ದೂರದ ಪ್ರಯಾಣ. ಹರಿದ್ವಾರದಿಂದ ಹೃಷಿಕೇಶಕ್ಕೆ ಹೋಗಲೂ ಬೇಕಾದಷ್ಟು ಸರ್ವಿಸ್ ಆಟೋ ರಿಕ್ಷಾಗಳು ಇರುತ್ತವೆ, ನಾವೂ ಒಂದು ಆಟೋದಲ್ಲಿ ಹೃಷಿಕೇಶಕ್ಕೆ ಹೋದೆವು. ೯.೩೦ರ ಸುಮಾರಿಗೆ ಹೃಷಿಕೇಶ ತಲುಪಿದೆವು.
ಹೃಷಿಕೇಶ
ಹೃಷಿಕೇಶವು ಹಿಮಾಲಯದ ತಪ್ಪಲಿನಲ್ಲಿರುವ ಪ್ರದೇಶ. ಡೆಹರಾಡೂನ್ ಜಿಲ್ಲೆಗೆ ಸೇರಿದ ಹೃಷಿಕೇಶವನ್ನು ಜಗತ್ತಿನ ಯೋಗದ ರಾಜಧಾನಿ ಎಂದೂ ಕರೆಯುವರು. ೨೦೧೫ ಸೆಪ್ಟೆಂಬರ್‌ನಲ್ಲಿ ಹರಿದ್ವಾರ ಹಾಗೂ ಹೃಷಿಕೇಶವನ್ನು 'ರಾಷ್ಟ್ರೀಯ ಪರಂಪರೆಯ ಅವಳಿ ನಗರಗಳೆಂದು' ಘೋಷಿಸಲಾಯಿತು. ಇಲ್ಲಿನ ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೃಷಿಕೇಶದಲ್ಲಿ ಮದ್ಯ ಮತ್ತು ಮಾಂಸವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅನಾದಿಕಾಲದಿಂದಲೂ ಸಾಧು ಸಂತರು ತಪಸ್ಸಿಗೆ ಹಾಗೂ ಧ್ಯಾನಕ್ಕೆ ಇಲ್ಲಿಗೆ ಬರುತ್ತಿದ್ದರು. ಇಂದೂ ಅಷ್ಟೇ ಅನೇಕ ಸಾಧುಗಳನ್ನು ನಾವಿಲ್ಲಿ ನೋಡಬಹುದು. ಈ ಸ್ಥಳದ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಹೃಷಿಕೇಶ ಎಂಬುವುದು ವಿಷ್ಣುವಿನ ಹೆಸರಾಗಿದ್ದು ವಿಷ್ಣು ಸಹಸ್ರನಾಮದಲ್ಲಿ ಈ ಹೆಸರಿನ ಉಲ್ಲೇಖವಿದೆ. ಸ್ಕಂದ ಪುರಾಣದಲ್ಲಿ ಈ ಸ್ಥಳವನ್ನು 'ಕುಬ್ಜಾಮ್ರಕ' ಎಂದು ಹೇಳಲಾಗಿದೆ. ಇಲ್ಲಿಅಗ್ನಿಸ್ಪೋಟಗೊಂಡು ಶಿವನು ಅಗ್ನಿ ದೇವನ ಮೇಲೆ ಸಿಟ್ಟಾಗಿ ಆತನನ್ನು ಶಪಿಸಿದನು , ಆಗ ಅಗ್ನಿಯು ಈ ಸ್ಥಳದಲ್ಲಿ ಶಾಪ ವಿಮೋಚನೆಗಾಗಿ ಪ್ರಾರ್ಥಿಸಿಕೊಂಡನು ಆದ್ದರಿಂದ ಈ ಸ್ಥಳಕ್ಕೆ 'ಅಗ್ನಿತೀರ್ಥ' ಎಂಬ ಹೆಸರೂ ಇದೆ ಎನ್ನುತ್ತಾರೆ. ಶ್ರೀ ರಾಮನು ರಾವಣನನ್ನು ಕೊಂದ ನಂತರ ಪ್ರಾಯಶ್ಚಿತ್ತವನ್ನು ಇಲ್ಲೇ ಮಾಡಿಕೊಂಡನು ಎಂದು ಪುರಾಣ ಹೇಳುತ್ತದೆ. ಹಾಗೆಯೇ ಲಕ್ಷ್ಮಣನು ಗಂಗೆಯನ್ನು ದಾಟುವುದಕ್ಕಾಗಿ ಇಲ್ಲಿ ಸೆಣಬನ್ನು ಉಪಯೋಗಿಸಿ ಸೇತುವೆ ನಿರ್ಮಿಸಿದನು, ಅದೇ ಜಾಗದಲ್ಲಿ ಇಂದು 'ಲಕ್ಷ್ಮಣಝುಲ್ಲಾ' ತೂಗು ಸೇತುವೆ ಇದೆ. ಬಹಳ ಹಿಂದಿನಿಂದಲೂ ಇಲ್ಲಿ ಸೆಣಬಿನ ಸೇತುವೆ ಇದ್ದು, ೧೮೮೯ರಲ್ಲಿ ಅದನ್ನು ಬದಲಾಯಿಸಿ ಕಬ್ಬಿಣವನ್ನು ಉಪಯೋಗಿಸಿ ತೂಗು ಸೇತುವೆ ನಿರ್ಮಿಸಲಾಯಿತು. ನಂತರ ೧೯೨೪ರ ಲ್ಲಿ ಬಂದ ಪ್ರವಾಹಕ್ಕೆ ಈ ಸೇತುವೆಯೂ ಹಾನಿಗೊಂಡು ಈಗ ಇರುವ ಬಲಿಷ್ಟವಾದ ತೂಗು ಸೇತುವೆ 'ಲಕ್ಷ್ಮಣ ಜುಲ್ಲಾ'ವನ್ನು ನಿರ್ಮಿಸಲಾಯಿತು. ಈ ತೂಗು ಸೇತುವೆಯ ಅನತಿ ದೂರದಲ್ಲೇ 'ರಾಮ್ ಜುಲ್ಲಾ' ಎಂಬ ಇನ್ನೊಂದು ತೂಗು ಸೇತುವೆಯೂ ಇದೆ. ಈ ತೂಗು ಸೇತುವೆ ಶಿವಾನಂದ ನಗರ ಹಾಗೂ ಸ್ವರ್ಗಾಶ್ರಮ ಎಂಬ ಪ್ರದೇಶಗಳನ್ನು ಸೇರಿಸುತ್ತದೆ. ಇದನ್ನು ೧೯೮೯ ರಲ್ಲಿ ನಿರ್ಮಿಸಲಾಯಿತು. ಇಲ್ಲಿಂದ ಮುಂದೆ ಗಂಗಾ ನದಿಯು 'ಶಿವಾಲಿಕ್ ಪರ್ವತ'ಗಳನ್ನು ತೊರೆದು ಬಯಲು ಪ್ರದೇಶದಲ್ಲಿ ಹರಿಯುತ್ತದೆ. ಹರಿದ್ವಾರದಂತೆ ಇಲ್ಲಿಯೂ ಗಂಗಾ ನದಿಯ ತೀರದಲ್ಲಿ ಅನೇಕ ಮಂದಿರಗಳನ್ನು ಕಾಣಬಹುದು. ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಂತಹ 'ಶತ್ರುಘ್ನ ಮಂದಿರ', 'ಭರತ ಮಂದಿರ' ಹಾಗೂ 'ಲಕ್ಷ್ಮಣ ಮಂದಿರ'ಗಳು ಇಲ್ಲಿವೆ. ಜಗತ್ತಿನಲ್ಲಿರುವ ಕೇವಲ ೩ ಶತ್ರುಘ್ನನ ದೇವಾಲಯಗಳಲ್ಲಿ ಹೃಷಿಕೇಶದ 'ಮುನಿ ಕಿ ರೆತಿ'ಯಲ್ಲಿರುವ ಈ ಮಂದಿರವೂ ಒಂದು. ಕೇರಳದ ತ್ರಿಶೂರ್ ಜಿಲ್ಲೆಯ 'ಪಯಮ್ಮಲ್' ಹಾಗೂ ಮಥುರಾದ 'ಕಾನ್ಸ್ ತಿಲಾ' ಎಂಬಲ್ಲಿ ಉಳಿದೆರಡು ಮಂದಿರಗಳಿವೆ. ಹೃಷಿಕೇಶವು ಆಯುರ್ವೇದ ಚಿಕಿತ್ಸೆಗೂ ಹೆಸರು ವಾಸಿಯಾದಂತಹ ಪ್ರದೇಶ. ಯೋಗಾಸನ ವನ್ನು ಹೇಳಿಕೊಡುವಂತಹ ಅನೇಕ ಯೋಗ ಸೆಂಟರ್ಗಳನ್ನು ಇಲ್ಲಿ ಕಾಣಬಹುದು. ಇದೇ ಕಾರಣಕ್ಕಾಗಿ ಇಲ್ಲಿಗೆ ದೇಶ ವಿದೇಶಗಳಿಂದ ಹಲವಾರು ಜನರು ಬರುತ್ತಿರುತ್ತಾರೆ. ಅಲ್ಲದೇ ವೇದಗಳನ್ನೂ ಒಳಗೊಂಡಂತೆ ಅನೇಕ ಪುರಾತನವಾದಂತಹ ಗ್ರಂಥಗಳನ್ನು ವಸ್ತುಗಳನ್ನು ರಕ್ಷಿಸಿಕೊಂಡು ಬರಲಾಗಿದೆ. ಇಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ 'ರಿವರ್ ರಾಫ಼್ಟಿಂಗ್'. ರಿವರ್ ರಾಫ಼್ಟಿಂಗ್, ಭಂಗೀ ಜಂಪ್ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಇಲ್ಲಿ ಅವಕಾಶವಿದೆ. ಆದರೆ ಮಳೆಗಾಲದಲ್ಲಿ ಇವುಗಳು ತೆರೆದಿರುವುದಿಲ್ಲ. ನಾವು ಹೋಗಿರುವುದು ಮಾನ್ಸೂನ್ ಸಮಯದಲ್ಲಾದುದರಿಂದ ನಮಗೆ ಈ ಅವಕಾಶ ದೊರಕಲಿಲ್ಲ. ರಿಕ್ಷಾ ಸ್ಟ್ಯಾಂಡ್‌ನಿಂದ ನಾವು ರೈಲ್ವೇ ಸ್ಟೇಶನ್‌ಗೆ ಹೋಗಿ ಅಲ್ಲಿನ ಕ್ಲಾಕ್ ರೂಮ್‌ನಲ್ಲಿ ನಮ್ಮ ಲಗೇಜ್ ಇಟ್ಟು ಗಂಗಾ ನದಿಯ ಬಳಿ ಬಂದೆವು. ಹರಿದ್ವಾರದಲ್ಲಿ ಆಕೆ ಕವಲು ಕವಲಾಗಿ ಹರಿಯುತ್ತಿದ್ದರೆ ಇಲ್ಲಿ ವಿಶಾಲವಾಗಿ ಒಂದೇ ನದಿಯಾಗಿ ಹರಿಯುತ್ತಿದ್ದಳು. ವಿಶಾಲವಾಗಿ ಮೈದುಂಬಿ ಹರಿಯುವ ಆಕೆಯನ್ನು ನೋಡುತ್ತಾ ಅಲ್ಲೇ ಕುಳಿತು ಬಿಡೋಣ ಅನಿಸುತ್ತದೆ. ನೀರಂತು ತುಂಬಾ ತಂಪಾಗಿತ್ತು. ಒಂದೆರಡು ಸೆಕುಂಡು ಕಾಲಿಟ್ಟರೆ ಸಾಕು ಕಾಲು ಸಿಡಿಯಲು ಪ್ರಾರಂಭವಾಗುತ್ತಿತ್ತು. ಅಲ್ಲಿ ಹರಿದ್ವಾರದಷ್ಟು ಭಕ್ತರು ತುಂಬಿ ತುಳುಕುತ್ತಿರಲಿಲ್ಲ. ಧ್ಯಾನ ಮಾಡುವುದಕ್ಕೆ ಯೋಗ್ಯ ಸ್ಥಳ. ನದಿಯ ಆಚೆ ಬದಿಗೆ ಮಂದಿರಗಳಿದ್ದವು. ಅದರಾಚೆಗೆ ಪರ್ವತಗಳು ತಲೆಯೆತ್ತಿ ನಿಂತಿದ್ದವು. ಹಸುರುಮಯವಾದಂತಹ ಪ್ರದೇಶ. ದಟ್ಟವಾದ ಕಾನನ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದೆ ಕುಮಾರ ಪರ್ವತ ಕಾಣುವುದಲ್ಲಾ ಅದೇ ರೀತಿ ಇಲ್ಲಿ ಪರ್ವತಗಳು ಕಾಣುತ್ತಿದ್ದವು. ನಮ್ಮೆದುರಿಗೆ ಮೈದುಂಬಿ ಹರಿಯುತ್ತಿರುವ ಗಂಗಾ ನದಿ, ಅದರೆದುರು ಪುಟ್ಟ ಪುಟ್ಟ ಮಂದಿರಗಳು, ಅದರ ಹಿಂಭಾಗ ಬೃಹತ್ ಪರ್ವತಗಳು. ಅದೇ ಹಿಮಾಲಯದ ಪ್ರಾರಂಭ. ನದಿಯ ನೀರನ್ನೇ ನೋಡುತ್ತಾ ಕುಳಿತಿದ್ದೆ, ಅದರ ಹರಿವು ಹೇಗಿತ್ತೆಂದರೆ, ಒಂದೇ ಸಮನೆ ನೋಡುತ್ತಾ ಕುಳಿತಿದ್ದ ನನಗೆ ಮೆಟ್ಟಿಲುಗಳ ಸಮೇತ ನಾನು ಕುಳಿತ ಪ್ರದೇಶದ ಸಮೇತ ನಾನೇ ಹಿಂದೆ ಹಿಂದೆ ಚಲಿಸಿದ ಅನುಭವವಾಗುತ್ತಿತ್ತು. ( ನದಿಯ ವಿರುದ್ಧ ದಿಕ್ಕಿಗೆ ಚಲಿಸಿದ ಅನುಭವ) ತಕ್ಷಣ ಅಲ್ಲಿಂದ ದೃಷ್ಟಿಯನ್ನು ತೆಗೆದೆ. ಮತ್ತೊಮ್ಮೆ ನದಿಯನ್ನು ದಿಟ್ಟಿಸಿ ತದೇಕಚಿತ್ತದಿಂದ ನೋಡಿದೆ, ಮತ್ತದೇ ಅನುಭವ. ಬೇರಾವ ನದಿಗಳನ್ನೂ ನಾನೀರೀತಿ ನೋಡಿರಲೂ ಇಲ್ಲ, ನನಗಾ ಅನುಭವ ಆಗಲೂ ಇಲ್ಲ. ಆಗಲೇ ಅಲ್ಲಿಗೆ ಎರಡು ಮೂರು ಜನ ಮಕ್ಕಳು ದೀಪ (ಅದೊಂದು ಎಲೆಯ ತಟ್ಟೆಯಲ್ಲಿ ಹೂವು, ಅದರ ಮಧ್ಯ ಉರಿಸಿಟ್ಟ ಬತ್ತಿ) ಕೊಂಡುಕೊಳ್ಳಿ ನದಿಗೆ ಬಿಡಿ ಎನ್ನುತ್ತಾ ಬಂದರು. ಅದನ್ನು 'ದಿಯಾ' ಎಂದು ಕರೆಯುತ್ತಾರೆ. ಅವರ ಕಯ್ಯಿಂದ ದೀಯಾವನ್ನು ಕೊಂಡುಕೊಂಡು ನದಿಯಲ್ಲಿ ತೇಲಿ ಬಿಟ್ಟೆವು.
|
ಗಂಗಾ ನದಿ, ಹೃಷಿಕೇಶ್ |
|
ದಿಯಾಗಳನ್ನು ಮಾರುತ್ತಿರುವ ಮಕ್ಕಳು |
|
ದಿಯಾ |
ನಂತರ ಸ್ವಲ್ಪ ಮುಂದೆ ಹೋಗಿ ಒಂದು ಅಶ್ವತ್ಥ ಮರದ ಬಳಿ ಬಂದೆವು. ಅಲ್ಲಿ ಒಬ್ಬ ಸಾಧು ಮಲಗಿದ್ದರು. ಆ ಮರದ ಮೇಲೆ ಹಲವು ಲಂಗೂರ್‌ಗಳು ಇದ್ದವು. ಮಹಿ ಬಾಟಲ್‌ಗೆ ಗಂಗಾ ಜಲವನ್ನು ತುಂಬಿಸಿಕೊಳ್ಳುತ್ತಿದ್ದರೆ, ನಾನು ಲಂಗೂರ್‌ಗಳ ಫೋಟೋ ಕ್ಲಿಕ್ಕಿಸಿಕೊಂಡೆ.
|
ಲಂಗೂರ್ |
ನಂತರ ರಾಮ್ ಜುಲ್ಲಾ ತೂಗು ಸೇತುವೆಯಲ್ಲಿ ನಡೆಯುತ್ತಾ ನದಿಯ ಆಚೆ ಬದಿ ತಲುಪಿದೆವು. ಆ ಸೇತುವೆಯಲ್ಲಿ ಎಲ್ಲಾ ದ್ವಿಚಕ್ರ ವಾಹನಗಳಿಗೂ ಪ್ರವೇಶವಿದೆ. ಅಲ್ಲಿನ ಯಾವುದೇ ಮಂದಿರಗಳಿಗೂ ಹೋಗದೇ ನದಿಯನ್ನು ನೋಡುತ್ತಾ ಕುಳಿತೆವು. ಆಗಲೇ ಹೇಳಿದಂತೆ ಹೃಷಿಕೇಶದಲ್ಲಿ ಅಡ್ವೆಂಚರ್ ಗೇಮ್‌ಗಳು ಜನಪ್ರಿಯ. ಇಲ್ಲಿನ ರಸ್ತೆ ಬದಿಗಳಲ್ಲಿ ಹಲವಾರು ಇಂತಹ ಗೇಮ್‌ಗಳ ಏಜೆಂಟ್ ಗಳ ಓಫಿಸ್‌ಗಳನ್ನು ಕಾಣಬಹುದು, ಆದರೆ ಮಳೆಗಾಲವಾದುದರಿಂದ ಎಲ್ಲವೂ ಮುಚ್ಚಿತು. ಹಲವು ಕಡೆ ವಿಚಾರಿಸಿದೆವು, ಇನ್ನು ಸೆಪ್ಟೆಂಬರ್‌ನಲ್ಲೇ ಪ್ರಾರಂಭವಾಗುವುದು ಎಂಬ ಉತ್ತರ ಸಿಕ್ಕಿತು. ಗಂಗಾ ನದಿ, ರಾಮ್ ಜುಲ್ಲಾ, ಲಕ್ಷ್ಮಣ್ ಜುಲ್ಲಾ ಸೇತುವೆಗಳು ಹಾಗೂ ಮಂದಿರಗಳನ್ನು ಬಿಟ್ಟರೆ ಇಲ್ಲಿನ ಮನೋಹರವಾದ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು.
|
ರಾಮ್ ಜುಲ್ಲಾ,ಹಿಂಬದಿ ಕಾಣಿಸುತ್ತಿರುವುದು ಶಿವಾಲಿಕ್ ಪರ್ವತಗಳು |
|
ಗಂಗಾ ತಟದಲ್ಲಿರುವ ಮಂದಿರಗಳು, ಹೃಷಿಕೇಶ್
|
|
ಸಾಧು ಸಂತರು |
|
ಗಂಗಾ ತೀರದಲ್ಲಿ |
ನಂತರ ಅಲ್ಲಿಂದ ಹೊರಟು, ಹೋಟೆಲ್ ಒಂದರಲ್ಲಿ ಊಟ ಮಾಡಿ( ಹೋಟೆಲ್ 'ಮದ್ರಾಸ್', ದಕ್ಷಿಣ ಭಾರತದ ಶೈಲಿಯ ಆಹಾರ ಸಿಕ್ಕಿತು) ಮತ್ತೆ ರೈಲ್ವೇ ಸ್ಟೇಷನ್ ಗೆ ಬಂದು ನಮ್ಮ ಲಗೇಜ್ ಪಡೆದು ೪.೩೦ ರ ಸುಮಾರಿಗೆ ಅಂಬಾಲಕ್ಕೆ ಹೋಗುವ ರೈಲನ್ನು ಹತ್ತಿದೆವು. ಅದಾಗಲೇ ಜೋರಾಗಿ ಮಳೆ ಪ್ರಾರಂಭವಾಯಿತು. ರೈಲು ಹೊರಟಿತು. ರಾತ್ರಿ ಸುಮಾರು ೭.೩೦ ರ ಸುಮಾರಿಗೆ ಅಂಬಾಲ ತಲುಪಿದೆವು. ಇದು ಹರ್ಯಾಣ ಹಾಗೂ ಪಂಜಾಬ್‌ಗಳ ಬಾಡರ್‌ನಲ್ಲಿರುವ ಪ್ರದೇಶ. ಅಂಬಾಲ ರೈಲ್ವೇ ಸ್ಟೇಷನ್‌ನಂತೂ ಬಹಳ ದೊಡ್ಡದಾದ ರೈಲ್ವೇ ಸ್ಟೇಷನ್. ಅಲ್ಲಿಂದ ಸೈಕಲ್ ಗಾಡಿಯೊಂದರಲ್ಲಿ ನಾವು ಬುಕ್ ಮಾಡಿದ್ದ ರೂಮ್ ತಲುಪಿದೆವು.
-ಮುಂದುವರಿಯುವುದು.....
Comments
Post a Comment
thank you...