ಮಾನ್ಸೂನ್ ಟ್ರಿಪ್ ೨೦೧೮ - 4

ಜಲಿಯನ್ ವಾಲಾಭಾಗ್

ಭಾರತದ ಹೆಮ್ಮೆ ಉದಮ್ ಸಿಂಗ್
     ನಮ್ಮ ಹೆತ್ತವರೋ, ಮನೆಯವರೋ , ಪಕ್ಕದ ಮನೆಯವರೋ ಅಥವಾ ನಮ್ಮ ಜನರು ಅಥವಾ ನಾವೇ, ನಮ್ಮೂರಲ್ಲೇ ಆಯೋಜಿಸಿರುವ ಯಾವುದೋ ಒಂದು ಸಭೆಗೋ  ಸಮಾರಂಭಕ್ಕೋ ಹೋಗಿರುತ್ತೇವೆ. ಯಾವುದೇ ಪೂರ್ವ ಸೂಚನೆ ಇಲ್ಲದೇ ಒಬ್ಬ ರಾಕ್ಷಸ ಅಲ್ಲಿ ಪ್ರತ್ಯಕ್ಷವಾಗಿ ನಮ್ಮವರನ್ನೆಲ್ಲಾ ಕೊಂದು ಬಿಟ್ಟರೆ? ಒಮ್ಮೆ ಯೋಚಿಸಿ ಪರಿಸ್ಥಿತಿ ಎಷ್ಟು ಭಯಾನಕವಾಗಿರಬಹುದು ಅಂತ. ಇಂತಹುದ್ದೇ ಒಂದು ಘೋರವಾದ ಘಟನೆ ೧೯೧೯ನೇ ಇಸವಿಯ ಏಪ್ರಿಲ್ ೧೩ರಂದು ಪಂಜಾಬ್‍ನ ಅಮೃತ್ ಸರ್‌ನಲ್ಲಿರುವ ಜಲಿಯನ್ ವಾಲಾಭಾಗ್ ಎಂಬಲ್ಲಿಯೂ  ನಡೆಯಿತು. 
    ಅದು 'ಬೈಶಾಖಿ ಹುಣ್ಣಿಮೆಯ' ಪವಿತ್ರ ದಿನ.(ಸಿಖ್ಖರ ಪವಿತ್ರ ದಿನ, ಹಬ್ಬದ ದಿನ). ಹತ್ತಿರದಲ್ಲೇ ಸ್ವರ್ಣ ಮಂದಿರ ಇರುವುದರಿಂದ ಅನೇಕ ಯಾತ್ರಾರ್ಥಿಗಳು ಅಲ್ಲಿ ನೆರೆದಿದ್ದರು. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಡಾ. ಸತ್ಯಪಾಲ್ ಹಾಗೂ ಡಾ. ಸೈಫುದ್ದೀನ್ ಅವರನ್ನು ಬ್ರಿಟಿಷ್ ಸರಕಾರ ಬಂಧಿಸಿತ್ತು. ಇದನ್ನು ಖಂಡಿಸಿ ಸಾವಿರಾರು ಮಂದಿ ಜನರು ಜಲಿಯನ್ ವಾಲಾಭಾಗ್ ಎಂಬಲ್ಲಿ ಶಾಂತಿಯುತವಾದ ಪ್ರತಿಭಟನೆ ನಡೆಸಲು ಸೇರಿದ್ದರು. ಜಲಿಯನ್ ವಾಲಾಭಾಗ್ ಒಂದು ಉದ್ಯಾನವನವಾಗಿತ್ತು, ಸುತ್ತಲೂ ಇಟ್ಟಿಗೆಯ ಗೋಡೆಯಿದ್ದು ಪ್ರವೇಶಕ್ಕೆ ಕೆಲವು ಪುಟ್ಟ ಪುಟ್ಟ ದ್ವಾರಗಳಿದ್ದವಾದರೂ ಅವುಗಳನ್ನು ಮುಚ್ಚಲಾಗಿತ್ತು. ಆಗಲೇ ಅಲ್ಲೊಬ್ಬ ರಾಕ್ಷಸ ಪ್ರತ್ಯಕ್ಷನಾಗುತ್ತಾನೆ. ಜನ ಇಲ್ಲಿ ಸೇರಿರುವುದು ತಿಳಿದ ಬ್ರಿಟಿಷ್ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡಯರ್ ಬಂದೂಕ ಹಿಡಿದು ಸೈನಿಕರೊಂದಿಗೆ ಬಂದು ಗುಂಡಿನ ಮಳೆಗರೆಯುವಂತೆ ಸೂಚಿಸುತ್ತಾನೆ. ಎಲ್ಲಿ ಹೆಚ್ಚು ಜನರಿರುತ್ತಾರೋ ಅಲ್ಲಿಗೇ ಮತ್ತಷ್ಟು ಗುಂಡಿನ ದಾಳಿ ನಡೆಸುವಂತೆ ಆದೇಶಿಸುತ್ತಾನೆ. ಪ್ರಾಣ ಭೀತಿಯಿಂದ ಪಾರಾಗಲು ಜನರು ಓಡುತ್ತಾರೆ, ಕೆಲವರು ಅಲ್ಲೇ ಇದ್ದ ಬಾವಿಗೆ ಬೀಳುತ್ತಾರೆ. ಬಾವಿಗೆ ಬಿದ್ದ ನಂತರವೂ ಬಾವಿಯೊಳಕ್ಕೆ ಗುಂಡು ಹಾಕುವಂತೆ ಹೇಳುತ್ತಾನೆ ಡಯರ್. ಆತನ ಕ್ರೂರ ಪ್ರವೃತ್ತಿ ಹೇಗಿದ್ದಿರಬಹುದೆಂದು ಊಹಿಸಿ. ಜನ ಪಾರಾಗಲು ಗೋಡೆಯನ್ನು ಹತ್ತಲು ಪ್ರಯತ್ನಿಸುತ್ತಾರೆ, ಆದರೆ ಯಾವುದಕ್ಕೂ ಅವಕಾಶ ಕೊಡದೇ ಎಲ್ಲರ ಮೇಲೂ ಗುಂಡಿನ ದಾಳಿ ನಡೆಯುತ್ತದೆ. ಸತ್ತವರ ಸಂಖ್ಯೆ ೩೫೦ ಎಂದು ಬ್ರಿಟಿಷ್ ಸರಕಾರ ವರದಿ ನೀಡಿತು, ಆದರೆ ಖಾಸಗಿ ವರದಿಗಳ ಪ್ರಕಾರ ಮೃತ ಪಟ್ಟವರ ಸಂಖ್ಯೆ ೧೦೦೦. ಗಾಯ ಗೊಂಡವರ ಸಂಖ್ಯೆ ಅಂದಾಜು ೧೫೦೦. ಕೇವಲ ಬಾವಿಯಿಂದಲೇ॑ ೧೫೦ ಹೆಣಗಳನ್ನು ಹೊರತೆಗೆಯಲಾಗಿತ್ತು. ಈ ನರಮೇಧದ ಮುಖ್ಯ ರೂವಾರಿಗಳು ಬ್ರಿಗೇಡಿಯರ್  ಜನರಲ್ ರೆಜಿನಾಲ್ಡ್ ಡಯರ್ ಹಾಗೂ ಮೈಕಲ್ ಓ'ಡ್ವಾಯರ್.  ಡೈಯರ್‍ನನ್ನು  ಬ್ರಿಟೀಷ್ ಸರಕಾರವು ಅಧಿಕೃತವಾಗಿ ಅಮಾನತುಗೊಳಿಸಿತು, ಆದರೆ ಅವರಲ್ಲಿ ಡಯರ್‌ನ ಕ್ರಮವನ್ನು ಪ್ರಶಂಸಿಸಿದವರು ಹಲವರು. ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಡೈಯರ್‍ನಿಗಾಗಿ ಒಂದು ಸಹಾನುಭೂತಿ ನಿಧಿಯನ್ನು ಸ್ಥಾಪಿಸಿ ೨೬,೦೦೦ ಕ್ಕೂ ಹೆಚ್ಚು ಪೌಂಡ್‍ಗಳನ್ನು ಸಂಗ್ರಹಿಸಿತು . ಶುಭಕೋರಿರುವರ ಹೆಸರುಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಡೈಯರ್‍ಗೆ ಅರ್ಪಿಸಲಾಯಿತು. ಜಲಿಯನ್ ವಾಲಾಭಾಗ್ ಹತ್ಯಾಕಾಂಡವನ್ನು ಕಣ್ಣಾರೆ ಕಂಡ, ಸ್ವತಃ ಗಾಯಗೊಂಡ ತನ್ನವರನ್ನೆಲ್ಲರನ್ನೂ ಕಳೆದುಕೊಂಡ ಒಬ್ಬ ಕೆಚ್ಚೆದೆಯ ವೀರ ಪ್ರತೀಕಾರಕ್ಕಾಗಿ ಕಾಯುತ್ತಿದ್ದ. ಆತನೇ ವೀರ ಉದಮ್ ಸಿಂಗ್.  ಹತ್ಯಾಕಾಂಡದ ರೂವಾರಿಗಳಲ್ಲೊಬ್ಬನಾದ ರಾಕ್ಷಸ ಮೈಕಲ್ ಓ'ಡ್ವಾಯರ್‌ನನ್ನು ಉದಮ್ ಸಿಂಗ್ ಇಂಗ್ಲೆಂಡ್‌ಗೆ ಹುಡುಕಿಕೊಂಡು ಹೋಗಿ ಲಂಡನ್‌ನ  ಕ್ಯಾಕ್‍ಸ್ಟನ್ ಹಾಲ್ ನಲ್ಲಿ ಕೊಂದು ಹಾಕುತ್ತಾನೆ. ಕೊನೆಗೆ ಉದಮ್ ಸಿಂಗ್‍ಗೆ ಬ್ರಿಟಿಷ್ ಸರಕಾರ ಗಲ್ಲು ಶಿಕ್ಷೆ ವಿಧಿಸುತ್ತದೆ.

ಜಲಿಯನ್ ವಾಲಾಭಾಗ್ ಪ್ರವೇಶ ದ್ವಾರ
  ಜಲಿಯನ್ ವಾಲಾಭಾಗ್ ಪ್ರವೇಶಿಸುತ್ತಿದ್ದಂತೆಯೇ ಸಿಖ್ಖರ ವೀರ, ಭಾರತದ ಹೆಮ್ಮೆ ಉದಮ್ ಸಿಂಗರ ಮೂರ್ತಿ ಕಾಣಸಿಗುತ್ತದೆ. ನಂತರ ಪುಟ್ಟದೊಂದು ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಬಹುದು. 
ಒಳಗಡೆ ಸುಂದರವಾದ ಉದ್ಯಾನವನವಿದೆ. ೯೯ ವರ್ಷಗಳ ಹಿಂದೆ ಇಲ್ಲಿ ಜನರು ಸಭೆ ಸೇರುವಂತ ಸ್ಥಳವಿತ್ತು. ೯೯ ವರ್ಷಗಳ ಹಿಂದೆ ಆ ಪ್ರದೇಶದಲ್ಲಿಅಮಾಯಕರ ಮಾರಣ ಹೋಮ ನಡೆಯಿತು ಎಂದು ನೆನೆದಾಕ್ಷಣ ಮನಸ್ಸು ವಿಚಲಿತವಾಗುತ್ತದೆ. ಬಲ ಭಾಗದಲ್ಲಿ 'ಅಮರ್ ಜ್ಯೋತಿ' ಯನ್ನು ಸ್ಥಾಪಿಸಲಾಗಿದೆ. ಇದು ಸದಾ ಉರಿಯುತ್ತಿರುವ ಕಿಚ್ಚು. ಹುತಾತ್ಮರ ನೆನಪಿಗಾಗಿ ಅಮರಜ್ಯೋತಿಯನ್ನು ಸ್ಥಾಪಿಸಲಾಗಿದೆ. 

'ಅಮರ್ ಜ್ಯೋತಿ'
   ಎಡ ಭಾಗದಲ್ಲಿ ಒಂದು ಮ್ಯೂಸಿಯಮ್ ಇದೆ. ಅಲ್ಲಿ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಅನೇಕ ಮಾಹಿತಿಗಳು, ಪ್ರಮುಖ ನಾಯಕರ ಫೋಟೋ ಗಳು ಇವೆ. ಜೊತೆಗೆ ಬ್ರಿಗೇಡಿಯರ್ ತನ್ನ ತಪ್ಪನ್ನು ಸಮರ್ಥಿಸಿ ಬರೆದ ಪತ್ರವಿದೆ. 
ಹತ್ಯಾಕಾಂಡದ ದೃಶ್ಯ
    ಮುಂದೆ ಹೋದರೆ ಬಾವಿ ಇದೆ. ಅದೇ ಬಾವಿಯಲ್ಲಿ ಅಂದು ಅನೇಕ ಮಂದಿ ಹುತಾತ್ಮರಾಗಿದ್ದರು. ಇಟ್ಟಿಗೆಗಳ ಗೋಡೆಯಲ್ಲಿ ಇಂದಿಗೂ ಡಯರ್‌ನ ಬಂದೂಕುಗಳ ಗುಂಡಿನಿಂದಾದ ಗುರುತಿದೆ. 

ಬಾವಿಯ ಸುತ್ತು ಗೋಡೆ ಕಟ್ಟಲಾಗಿದೆ
ಗೋಡೆಗಳಲ್ಲಿ ಬುಲೆಟ್ ಮಾರ್ಕ್
   ಅವುಗಳನ್ನು ಸುಣ್ಣದಲ್ಲಿ ಮಾರ್ಕ್ ಮಾಡಿ ಹೈಲೈಟ್ ಮಾಡಿದ್ದಾರೆ. ಪಂಜಾಬಿನ ಬಿಸಿಲ ಝಳ ಬಹಳ ಜಾಸ್ತಿ. ಅದಾಗಲೇ ಸಮಯ ೧೧ ಆಗಿತ್ತು. ಅಲ್ಲಿನ ವಿಶ್ರಾಂತಿ ಕೊಠಡಿಯಲ್ಲಿ ಸ್ವಲ್ಪ ಹೊತ್ತು ಕುಳಿತೆವು. ಪ್ರತೀ ಕಂಬದಲ್ಲೂ ಅಶೋಕ ಚಕ್ರವನ್ನು ಕೆತ್ತಲಾಗಿತ್ತು. 

ವಿಶ್ರಾಂತಿ ಕೊಠಡಿಯ ಕಂಬಗಳು
  ಸುತ್ತಲೂ ಬಣ್ಣ ಬಣ್ಣದ ಹೂವುಗಳಿಂದ ಕಂಗೊಳಿಸುವ ವಿವಿಧ ಜಾತಿಯ ಹೂ ಗಿಡಗಳು, ಹಾಗೂ ಸುಂದರವಾದ ಗಾರ್ಡನ್. ಹುತಾತ್ಮತರ ನೆನಪಿಗಾಗಿ ನಿರ್ಮಿಸಿದ ಸ್ಮಾರಕವೊಂದು ಅಲ್ಲಿದೆ. ಬಹುಷಃ ಇದನ್ನು ಕೆಂಪು ಶಿಲೆಯಲ್ಲಿ ನಿರ್ಮಿಸಲಾಗಿದೆ. ಅಮೇರಿಕಾದ ವಾಸ್ತು ವಿನ್ಯಾಸಕ ಬೆಂಜಮಿನ್ ಪೋಲ್ ಈ ವಿಶಿಷ್ಟ ರೀತಿಯ ಭವ್ಯ ಸ್ಮಾರಕವನ್ನು ರೂಪಿಸಿದ್ದಾನೆ.  ಗಲ್ಲು ಶಿಕ್ಷೆ ಪಡೆದು ವೀರ ಮರಣವನ್ನಪ್ಪಿದ ಉದಮ್ ಸಿಂಗ‌ರ ಚಿತಾ ಭಸ್ಮ ಇಲ್ಲಿನ ಮ್ಯೂಸಿಯಮ್‌ನಲ್ಲಿ ಇಡಲಾಗಿದೆ. 

ಸ್ಮಾರಕ
   ಅಲ್ಲಿನ ಬಿಸಿಲಿಗೆ ಬೆವರಿ ಒದ್ದೆಯಾಗಿದ್ದೆವು. ಜೊತೆಗೆ ಉರಿಯುವ ಸೂರ್ಯನ ಶಾಖ. ೧೧.೩೦ರ ಸಮಯಕ್ಕೆ ಸ್ವರ್ಣ ಮಂದಿರ ತಲುಪಿದೆವು (ಗೋಲ್ಡನ್ ಟೆಂಪಲ್). ಜಲಿಯನ್ ವಾಲಭಾಗ್ ಹಾಗೂ ಸ್ವರ್ಣ ಮಂದಿರಕ್ಕೆ ನಡೆಯುತ್ತಾ ಸಾಗಿದರೆ ೫ ನಿಮಿಷಗಳ ಅಂತರ.  
                                                                                                - ಮುಂದುವರಿಯುವುದು....

Comments

Post a Comment

thank you...

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....