ದನಿ ಇರದ ಬಾಳಿನಲ್ಲಿ....

ಅವನೊಬ್ಬ ದೊಡ್ಡ ಹಾಡುಗಾರ. ೨೫ನೇ ವಯಸ್ಸಿಗಾಗಲೇ ಸಂಗೀತ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದ್ದ. ಶಾಸ್ತ್ರೀಯ ಸಂಗೀತವಿರಲಿ ಪಾಪ್ ಗಾಯನವಿರಲಿ ಬಹಳ ಸೊಗಸಾಗಿ ಹಾಡುತ್ತಿದ್ದ. ದೇಶ ವಿದೇಶಗಳಲ್ಲಿಯೂ ಅವನ ಅಭಿಮಾನಿ ಬಳಗ ಸೃಷ್ಟಿಯಾಗಿತ್ತು. ಜೊತೆಗೆ ಅವನು ಸಂಗೀತ ಸಂಯೋಜಿಸಿದ ಅದೆಷ್ಟೋ ಹಾಡುಗಳು ಲಕ್ಷ ಲಕ್ಷ ಜನರ ಮನಸ್ಸನ್ನು ಸೆಳೆದಿತ್ತು. ಒಂದು ದಿನ ಸರಕಾರದ ಜಾಹಿರಾತೊಂದರ ಶೂಟಿಂಗ್‌ಗಾಗಿ ಹಳ್ಳಿಯೊಂದಕ್ಕೆ ಹೋದ. ಹೆಚ್ಚಿನವರು ಅನಕ್ಷರಸ್ಥರಾಗಿದ್ದ ಊರದು. ಜನರ ಜೀವನ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ತೆಂಗಿನ ತಟ್ಟಿಯನ್ನು ಹಣೆದೋ, ಮುಳಿ ಹುಲ್ಲನ್ನು ಬಳಸಿಕೊಂಡೋ ಜೋಪಡಿಯನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವನಿಗೆ ಉಳಿದುಕೊಳ್ಳಲು ಗ್ರಾಮ ಪಂಚಾಯತ್ ಕಟ್ಟಡವೊಂದನ್ನು ನೀಡಲಾಗಿತ್ತು. ಅಲ್ಲಿ ತಕ್ಕ ಮಟ್ಟಿಗೆ ಎಲ್ಲಾ ಸೌಕರ್ಯಗಳೂ ಸಮರ್ಪಕವಾಗಿತ್ತು. ಕಟ್ಟಡದ ಹಿಂದೆ ಕೆಲವು ಜೋಪಡಿಗಳಿದ್ದವು. ಹಗಲಿಡೀ ಪ್ರಯಾಣ ಮಾಡಿ ಸುಸ್ತಾಗಿದ್ದ ಆತನಿಗೆ ಬೆಳ್ಳಗಾದದ್ದೇ ತಿಳಿಯಲಿಲ್ಲ. ತದರಿ ನಾ.... ನಾ..... ನ್ನಾ ಆಆ...... ಎಂದು ಹಿಂದೋಳ ರಾಗ(ಬಡಾ ಖೇಲ್) ಆಲಾಪಾನೆ ಕೇಳುತ್ತದೆ, ನಿದ್ದೆ ಮಂಪರಿನಲ್ಲಿ ಯಾರೋ ಕಾಲ್ ಮಾಡಿದ್ದಾರೆ, ಅಥವಾ ಅಲರಾಂ ಬಡಿದುಕೊಳ್ಳುತ್ತಿದೆ ಅಂದುಕೊಂಡ. ಎಚ್ಚರವಾಗಿ ನೋಡುತ್ತಾನೆ, ಅರೆ!! ನೆಟ್ ವರ್ಕೇ ಇಲ್ಲ. ಅಲರಾಂ ಕೂಡಾ ಸೆಟ್ ಮಾಡಿಟ್ಟಿಲ್ಲ....