ಮಾನ್ಸೂನ್ ಟ್ರಿಪ್ ೨೦೧೮ - 10
೦೩/೦೮/೨೦೧೮ ಬೆಳಗ್ಗೆ ೪.೩೦ಕ್ಕೆ ಎದ್ದು ರೆಡಿಯಾದೆವು. ೫.೩೦ಕ್ಕೆಲ್ಲಾ ರೂಮ್ ಬಿಟ್ಟೆವು. ಬಿಟ್ಟು ಬಿಟ್ಟು ಸಣ್ಣಗೆ ಮಳೆ ಬರುತ್ತಿತ್ತು. ರೂಮ್‌ನಿಂದ ಹತ್ತು ಹೆಜ್ಜೆ ನಡೆದ ಕೂಡಲೇ ಒಬ್ಬರು ಅಜ್ಜ ಸಣ್ಣದೊಂದು ಟೀ ಅಂಗಡಿಯಲ್ಲಿ ಟೀ ಮಾರುತ್ತಿದ್ದರು. ಅಲ್ಲೇ ಟೀ ಕುಡಿಯುತ್ತಿರಬೇಕಾದರೆ ಮತ್ತೆ ಮಳೆ ಪ್ರಾರಂಭವಾಯಿತು. ಐದು ನಿಮಿಷದಲ್ಲಿ ಮಳೆ ಬಿಟ್ಟಿತು, ರೈಲ್ವೇ ಸ್ಟೇಷನ್‌ನತ್ತ ಹೆಜ್ಜೆ ಹಾಕಿದೆವು. ರೈಲ್ವೇ ಸ್ಟೇಷನ್‌ನ ಒಳಗಿನ ಅಂಗಡಿಯೊಂದರಿಂದ ಬರ್ಗರ್ ಪಾರ್ಸೆಲ್ ತೆಗೆದುಕೊಂಡೆವು. ಅಲ್ಲಿ ಎರಡು ಮೂರು ಟಾಯ್ ಟ್ರೈನ್‌ಗಳಿದ್ದವು. ನಾವು ಹೋಗಾಬೇಕಾಗಿದ್ದ ಟ್ರೈನ್ ಯಾವುದೆಂದು ನೋಡಿದೆವು. ಟ್ರ್ಯಾಕ್‌ನಲ್ಲಿ ಹೋಗುವುದು ಎಂಬುದೊಂದನ್ನು ಬಿಟ್ಟರೆ ಒಳಗಡೆ ವಿನ್ಯಾಸವೆಲ್ಲಾ ಬಸ್ಸಿನಂತೆ ಇತ್ತು. ಇದರ ಅಗಲ ಬಸ್‌ಗಿಂತಲೂ ಕಡಿಮೆ. ನಮ್ಮ ಸೀಟ್ ಹುಡುಕಲು ಸ್ವಲ್ಪ ಕಷ್ಟವಾದರೂ ಸೀಟ್ ಸಿಕ್ಕಿತು. ಅತಿ ಕಡಿಮೆ ಭೋಗಿಗಳಿದ್ದವು, ಸಿಟುಗಳೂ ಅಷ್ಟೆ ತುಂಬಾ ಕಡಿಮೆ ಅಂದಾಜು ೩೦ ಸೀಟ್‌ಗಳು. ಭಾರತದಲ್ಲಿ ೫ ಕಡೆ ಇತಂಹ ಟಾಯ್ ಟ್ರೈನ್‌ಗಳನ್ನು ಕಾಣಬಹುದು. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (ಪಶ್ಚಿಮ ಬಂಗಾಳ), ಕಲ್ಕಾ-ಶಿಮ್ಲಾ ರೈಲ್ವೇ (ಹಿಮಾಚಲ ಪ್ರದೇಶ), ನೀಲಗಿರಿ ಮೌಂಟೈನ್ ರೈಲ್ವೇ (ತಮಿಳು ನಾಡು), ಮತೆರಾನ್ ಹಿಲ್ ರೈಲ್ವೇ (ಮಹಾರಾಷ್ಟ್ರ) , ಕಾಂಗ್ರಾ ವ್ಯಾಲಿ ರೈಲ್ವೇ (ಹಿಮಾಚಲ್ ಪ್ರದೇಶ). ಇವುಗಳೆಲ್ಲವೂ ಬ್ರಿಟಿಷರ ಕಾಲದಲ್ಲೇ ನಿರ್ಮಾಣ...