ಮಾನ್ಸೂನ್ ಟ್ರಿಪ್ ೨೦೧೮ - 1

    ದಿನಾಂಕ ೨೯ ಜುಲಾಯಿ ೨೦೧೮ ರಿಂದ ೫ ಅಗಸ್ಟ್ ೨೦೧೮ ರ ವರೆಗೆ ನನ್ನ ಗಂಡ ಮಹಾಬಲೇಶ್ವರ ಪನೆಯಾಲ ಮತ್ತು ನಾನು ಅಮೃತ ಸರ, ಹರಿದ್ವಾರ, ಹೃಷಿಕೇಶ, ಚಂಡೀ ಘಡ ಹಾಗೂ ಶಿಮ್ಲಾಕ್ಕೆ ಪ್ರವಾಸ ಹೋಗಿ ಬಂದೆವು. ನಾವು ನೋಡಿದ ಸ್ಥಳಗಳು, ಅಲ್ಲಿನ ವಿಶೇಷತೆಗಳು,  ದಾರಿ ಮಧ್ಯೆ ನಮಗಾದ ಅನುಭವಗಳು ಹಾಗೂ ಇನ್ನಿತರ ವಿಚಾರಗಳ ಕುರಿತಂತೆ ಪುಟ್ಟದೊಂದು ಪ್ರವಾಸ ಕಥನವನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ. ಓದಿ ಪ್ರೋತ್ಸಾಹಿಸಿ, ಅಭಿಪ್ರಾಯ ತಿಳಿಸಿ.....

     ಆ ದಿನಗಳಲ್ಲಿ ಕೇವಲ ಭೂಪಟವನ್ನು ನೋಡುತ್ತಾ ಕೂತಲ್ಲೇ ಬಹಳಷ್ಟು ಪ್ರದೇಶಗಳನ್ನು ಸುತ್ತುತ್ತಿದ್ದೆ. ಅದೊಂದು ಹಳೇ ಬ್ರಿಜಬಾಸಿ ಅಟ್ಲಾಸ್. ಪ್ರೈಮರಿಯಲ್ಲಿ ಗಿರಿಜಾ ಟೀಚರ್ ಸಮಾಜ ವಿಜ್ಞಾನ ಪಾಠ ಮಾಡುವಾಗ ಅಟ್ಲಾಸ್‌ನ್ನು ತರಗತಿಗೆ ಒಯ್ಯಬೇಕಿತ್ತು.  ಟೀಚರ್ ಪಾಠ ಮಾಡುತ್ತಾ ಕೆಲವೊಂದು ಸ್ಥಳಗಳನ್ನು ಅಟ್ಲಾಸ್‍ನಲ್ಲಿ ಗುರುತಿಸಲು ಹೇಳುತ್ತಿದ್ದರು. ಇತಿಹಾಸಕ್ಕೆ ಬಂದರೆ, ಹಲವು ರಾಜ ವಂಶಸ್ಥರ ರಾಜಧಾನಿಗಳು, ಅವರು ಧಾಳಿ ಮಾಡಿದ ಪ್ರದೇಶಗಳು, ಅವರ ಸಾಮ್ರಾಜ್ಯ ವಿಸ್ತರಣೆ ಮುಂತಾದ ಜಾಗಗಳನ್ನು ಗುರುತಿಸಲಾಗುತ್ತಿತ್ತು. ಭೂಗೋಳ ಶಾಸ್ತ್ರಕ್ಕೆ ಬಂದರೆ, ಹಿಮಾಲಯದ ಪರ್ವತಗಳು, ಥಾರ್ ಮರುಭೂಮಿ, ದಖ್ಖನ್ ಪ್ರಸ್ಥ ಭೂಮಿ, ಉತ್ತರದ ವಿಶಾಲ ಮೈದಾನಗಳು, ಗಂಗಾ ಯಮುನಾ ನದಿಗಳು, ಉಪನದಿಗಳು, ಸೂಚಿ ಪರ್ಣ ಕಾಡುಗಳು ಹೀಗೆ ಹತ್ತು ಹಲವು ಭೂಭಾಗಗಳನ್ನು ಗುರುತಿಸುತ್ತಿದೆವು. ಆಗೆಲ್ಲಾ ಆ ಜಾಗಗಳ ಬಗ್ಗೆ ಕುತೂಹಲ, ಅಲ್ಲೆಲ್ಲಾ ಸುತ್ತಾಡಬೇಕು ಎಂಬ ಬಯಕೆ. ಆದರೆ ಅದೆಲ್ಲಾ ಸಾಧ್ಯ ಇಲ್ಲಾ ಎಂಬ ನಿರಾಸೆ. ನನಗೆ ಸರಿಯಾಗಿ ನೆನಪಿಲ್ಲ, ಬಹುಷಃ ನಾವು ಏಳನೆಯೋ ಎಂಟನೆಯೋ ತರಗತಿಯಲ್ಲಿರುವಾಗ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ರಮ್ಯಾ ಹಾಗೂ ಧ್ಯಾನ್ ಅಭಿನಯದ ' ಅಮೃತ ಧಾರೆ' ಸಿನೆಮಾ ನೋಡಿದ್ದೆ. ಅದು ಎಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವ ಬೀರಿತ್ತು ಅಂತಂದ್ರೆ ಸಾಯುವುದರ ಒಳಗೆ ಒಮ್ಮೆ ಆದರೂ ಭಾರತ ಪೂರ್ತಿ ಸುತ್ತ ಬೇಕು ಎಂಬ ಆಸೆಗೆ ಬಣ್ಣ ಹಚ್ಚಿತು, ಜೊತೆಗೆ ಹೈಸ್ಕೂಲ್‍ನಲ್ಲಿದ್ದಾಗ ಓದಿದ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳು. ಇದು ನನ್ನ ಕಥೆ ಆದರೆ, ನನ್ನ ಗಂಡಂದು ಇನ್ನೊಂದು ಕಥೆ. ಆತ ಚಿಕ್ಕದರಲ್ಲೇ ಕೆಸವಿನ ಎಲೆಗಳನ್ನು ರೆಕ್ಕೆ ಅಂತ ಕಟ್ಟಿಕೊಂಡು ಹಾರಲು ಹೊರಟ ಮಹಾನುಭಾವ. 

    ಪ್ರವಾಸದ ಹಿಂದಿನ ದಿನ ಹೀಗೆ ಫ಼ೇಸ್ ಬುಕ್ ನೋಡುತ್ತಿರಬೇಕಾದರೆ 'ನಿರಂತರ' ಬ್ಲಾಗ್ ನೋಡಿದೆ. ಮತ್ತೆ ಒಳಹೊಕ್ಕಾಗ 'ನಿರಂಜನ್ ವಾನಳ್ಳಿ' ಅವರ "ಏಪಲ್ ನಾಡಿನ ಮೆಲುಕು" ಶೀರ್ಷಿಕೆಯ ಲೇಖನ ಮಾಲಿಕೆ ಕಣ್ಣಿಗೆ ಬಿತ್ತು. ನಾವು ಹೋಗ ಬೇಕಾಗಿದ್ದ ಜಾಗಗಳಿಗೆ ಹಲವು ವರ್ಷಗಳ ಮೊದಲು ಅವರು ಹೋಗಿದ್ದ ಪ್ರವಾಸದ ಕಥೆಯದು. ಅವರು ಕಾಶ್ಮೀರ ಪ್ರವಾಸದ ಪ್ಲ್ಯಾನ್‍ ಹಾಕಿಕೊಂಡಿದ್ದರು, ಆದರೆ ಅಲ್ಲಿ ಪ್ರವಾಹ ಬಂದು ಅವರ ಪ್ರವಾಸದ ಪ್ಲ್ಯಾನ್‌ನ್ನು ಬದಲಿಸಿಕೊಂಡಿದ್ದರು. ಕಾಶ್ಮೀರಕ್ಕೆ ಬುಕ್ ಮಾಡಿದ ವಿಮಾನದ ಟಿಕೆಟ್‌ಗಳನ್ನೇ ಇಟ್ಟುಕೊಂಡು ಅಮೃತ್ ಸರ್‌ದಲ್ಲೇ ಇಳಿದುಕೊಳ್ಳಲು ಅನುಮತಿ ಪಡೆಯಲು ಅವರು ಮಾಡಿದ ಕಸರತ್ತುಗಳು, ನಂತರ ದಾರಿ ಮಧ್ಯೆ ಎದುರಿಸಿದಂತಹ ಅನುಭವಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಕಾಕತಾಳೀಯವೆಂಬಂತೆ ನನಗೆ ಲೇಖನ ಓದಲು ದಕ್ಕಿತು. ನನಗೂ ಚಿಕ್ಕ ಭಯ ಪ್ರಾರಂಭವಾಯಿತು, ಇನ್ನೆಲ್ಲಿ ಏನಾದರೂ ಅನಾಹುತವಾಗಿ ನಮ್ಮ ಪ್ರವಾಸವೂ ಕ್ಯಾನ್ಸಲ್ ಆದರೆ ಎಂದು. ಅದಕ್ಕೆ ಸರಿಯಾಗಿ ಅಮ್ಮ ಕಾಲ್ ಮಾಡಿದಾಗಲೆಲ್ಲಾ '' ಅಲ್ಲೆಲ್ಲಾ ಉತ್ತರ ಭಾರತದಲ್ಲಿ ಪ್ರವಾಹ ಬಂದಿದೆಯಂತೆ ಜಾಗೃತೆ'' ಎಂದು ಎಚ್ಚರಿಸುತ್ತಿದ್ದಳು. 
                                                                                                                 ಮುಂದುವರಿಯುವುದು......
                                                                 

Comments

Post a Comment

thank you...

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....