ಮಾನ್ಸೂನ್ ಟ್ರಿಪ್ ೨೦೧೮ -2


೨೯/೦೭/೨೦೧೮
   ಬೆಳಗ್ಗೆ ನಮ್ಮ ಟ್ರೈನ್ ( ಪಂಚವಲ್ಲೀ ಎಕ್ಸ್ ಪ್ರೆಸ್) ಎಲ್ಲಿಗೆ ತಲುಪಿದೆ ಎಂದು ಚೆಕ್ ಮಾಡುವಾಗ ನಿನ್ನೆ ಎಲ್ಲಿತ್ತೋ ಅಲ್ಲೇ ಇದ್ದಂತೆ ತೋರಿಸುತ್ತಿತ್ತು, ಮುಂದೆ ಬಂದ ಸೂಚನೆಯೇ ಇಲ್ಲ. ಇದೇಕೆ ಹೀಗೆ ಎಂಬ ಅನುಮಾನ ಶುರುವಾಯಿತು. ಮಧ್ಯಾಹ್ನ ಊಟ ಮಾಡಿ, ಫ಼್ರಿಡ್ಜ್‌ನಲ್ಲಿದ್ದ ವಸ್ತುಗಳನ್ನೆಲ್ಲ ಖಾಲಿ ಮಾಡಿ, ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನೆಲ್ಲಾ ಭದ್ರವಾಗಿರಿಸಿ, ರಾತ್ರಿ ಊಟಕ್ಕೆ ನೀರು ದೋಸೆ, ಜೊತೆಗೆ ಕಿಸಾನ್ ಮಿಕ್ಸ್ಡ್ ಫ್ರೂಟ್ ಜಾಮ್ ಪ್ಯಾಕ್ ಮಾಡಿ, ಉಳಿದಿದ್ದ ಕುಡಿಯುವ ನೀರನ್ನು ಬಾಟಲಿಗಳಿಗೆ ತುಂಬಿಸಿ ತೆಗೆದುಕೊಂಡೆವು. ಫ಼್ರಿಡ್ಜ್ ಕನೆಕ್ಶನ್, ಗ್ಯಾಸ್ ಕನೆಕ್ಷನ್ ಎಲ್ಲ ತಪ್ಪಿಸಿ, ದೇವರಿಗೆ ಕೈ ಮುಗಿದು ಪ್ರಾರ್ಥಿಸಿ, ಮನೆಯಲ್ಲಿದ್ದ ವಸ್ತುಗಳಿಗೆಲ್ಲಾ ಬಯ್ ಬಾಯ್ ಹೇಳಿ ಹೊರಟೆವು.  ಸಂಜೆ ೪.೨೦ಕ್ಕೆ ಆಗ್ರಾ ಕ್ಯಾಂಟ್ ರೈಲ್ವೇ ಸ್ಟೇಷನ್‌ನಿಂದ ರೈಲ್ ಹತ್ತ ಬೇಕಾಗಿದ್ದುದರಿಂದ ೩.೩೦ಕ್ಕೆ ಮನೆಯಿಂದ ಹೊರಟೆವು. ಒಂದು ಎಲೆಕ್ಟ್ರಿಕ್ ರಿಕ್ಷಾದ ಮೂಲಕ ರೈಲ್ವೇ ಸ್ಟೇಷನ್ ತಲುಪಿದೆವು. ಆ ಸಮಯದಲ್ಲಿ ಬಂದು ಹೋಗುವ ಎಲ್ಲಾ ರೈಲ್‌ಗಳ ಬಗ್ಗೆಯೂ ಅಲ್ಲಿ ಅನೌಂನ್ಸ್‌ಮೆಂಟ್‌ಗಳು ಮಾಹಿತಿಗಳು ಸಿಗುತ್ತಿದ್ದರೂ ನಮ್ಮ ಪಂಚವಲ್ಲಿ ಎಕ್ಸ್‌ಪ್ರೆಸ್‌ನ ಬಗ್ಗೆ ಸುದ್ದಿಯೇ ಇಲ್ಲ. ಅರೆ, ಏನಾಯಿತು? ಎಂದು ವಿಚಾರಿಸಿದಾಗ, ಮಹಾರಾಷ್ಟ್ರದಿಂದ ರೈಲು ಹೊರಟಿದ್ದು, ಅದನ್ನು ಮಧ್ಯಪ್ರದೇಶದಲ್ಲೆಲ್ಲೋ ಬೇರೊಂದು ರೈಲಿನೊಂದಿಗೆ ಮರ್ಜ್ ಮಾಡಲಾಗಿದೆ, ಅಮೃತ ಸರಕ್ಕೆ ತೆರಳಲಿರುವ ಪ್ರಯಾಣಿಕರಿಗಾಗಿ ಒಂದು ಪ್ರತ್ಯೇಕ ಭೋಗಿಯನ್ನು ಇನ್ನೊಂದು ರೈಲಿಗೆ ಸೇರಿಸಲಾಗಿದೆ. ಆದರೆ ಅದು ಕೂಡಾ ದೆಲ್ಲಿಯ ನಿಜಾಮುದ್ದೀನ್ ಸ್ಟೇಷನ್ ತನಕ ಹೋಗಾಲಿದ್ದು, ಅಮೃತ್ ಸರ್‌ಗೆ ಟ್ರೈನ್ ಕ್ಯಾನ್ಸಲ್ ಆಗಿದೆ ಅನ್ನುವ ಮಾಹಿತಿ ಸಿಕ್ಕಿತು. ಛೇ, ನಾವೇನು ಆಗಬಾರದು ಅಂತ ಅಂದುಕೊಂಡಿದ್ದೆವೋ, ಅದೇ ಆಯಿತಲ್ಲಾ ಎಂದು ಪರಿತಪಿಸಬೇಕಾಯಿತು. ನನಗಂತು 'ನಿರಂಜನ್ ವಾನಳ್ಳಿ' ಯವರ 'ಏಪಲ್ ನಾಡಿನ ಮೆಲುಕು' ಲೇಖನ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಲ್ಲಿದ್ದ ಒಬ್ಬ ಸರ್ದಾರ್ಜಿಯಲ್ಲಿ ಈ ಬಗ್ಗೆ ಹೇಳಿದಾಗ, ಡೆಲ್ಲಿಯಿಂದ ಅಮೃತ್ ಸರ್‌‍ಗೆ ಬೇಕಾದಷ್ಟು ಬಸ್‌ಗಳಿರುತ್ತವೆ, ಬಸ್‍ ಮೂಲಕ ಹೋಗಿ ಎಂಬ ಉತ್ತರ ದೊರಕಿತು. ೪.೨೦ಕ್ಕೆ ನಮ್ಮ ರೈಲು ಆಗ್ರಾ ಕ್ಯಾಂಟ್‌ನಿಂದ ದೆಲ್ಲಿ ಕಡೆ ಹೊರಟಿತು. ಅದರಲ್ಲಿದ್ದ ಅಮೃತ್ ಸರಕ್ಕೆ ಹೊರಟಿದ್ದ ಹಲವು ಜನ ಪ್ರಯಾಣಿಕರಿಗೆ ರೈಲು ದೆಹಲಿಯವರೆಗೆ ಮಾತ್ರ ಹೋಗಲಿದೆ ಎಂದು ತಿಳಿದೇ ಇರಲಿಲ್ಲ. ನಮ್ಮ ಪಕ್ಕದ ಸೀಟ್‌ನಲ್ಲಿ ದಂಪತಿ ಮತ್ತು ಎರಡು ಪುಟ್ಟ ಮಕ್ಕಳು ಅಮೃತ್‌ಸರ್‌ಗೆ ಹೋಗುವವರಿದ್ದರು. ಮಾತನಾಡಿ ಪರಿಚಯ ಮಾಡಿಕೊಂಡೆವು. ಅವರೂ ಆರ್ಮಿ ಯಲ್ಲಿ ಸೇವೆ ಸಲ್ಲಿಸುತ್ತಿರುವವರು. ಮೊದಲು ಅಮೃತ್ ಸರದಲ್ಲೇ ಪೋಸ್ಟಿಂಗ್ ಇದ್ದು ಹಲವು ಬಾರಿ ಹೋಗಿದ್ದವರು. ಈಗ ಹೆಂಡತಿ ಮತ್ತು ಮಕ್ಕಳೊಂದಿಗೆ ಪ್ರವಾಸ ಹೊರಟಿದ್ದರು. ಅವರಿಗೂ ಈ ವಿಷಯ ತಿಳಿದಿರಲಿಲ್ಲ. ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವಾಗ ಮಹಿ ಮೊಬೈಲ್ ಸ್ವಿಚ್ ಆಫ್ ಆಯಿತು. ಗ್ರಹಚಾರಕ್ಕೆ ಅದು ಓನ್ ಆಗಲೆ ಇಲ್ಲ. ರೈಲಿನ ಟಿಕೆಟ್‌ಗಳು, ಬುಕ್ ಮಾಡಿದ ರೂಮ್‌ಗಳ ಮಾಹಿತಿ (ಹಾಲಿಡೇ ಹೋಮ್) ಸೇರಿದಂತೆ ಹಲವು ಇಂಪಾರ್ಟೆಂಟ್ ಡಾಕ್ಯುಮೆಂಟ್‌ಗಳು ಅದರಲಿದ್ದವು. ನಾವು ಹೊರಟ ಘಳಿಗೆಯೇ ಸರಿಯಿಲ್ಲವೇನೋ ಅಂದುಕೊಂಡೆವು. ತುಂಬಾ ಹೊತ್ತಿನ ನಂತರ ಮೊಬೈಲ್ ಓನ್ ಆಯಿತು. ಸದ್ಯ, ಸರಿ ಆಯಿತಲ್ಲ ಎಂಬ ನಿಟ್ಟುಸಿರು ಬಿಟ್ಟೆವು. ನಂತರ ಅದೇ ಮೊಬೈಲ್‌ನಲ್ಲಿ ಲೂಡೋ ಆಡುತ್ತಾ ಕೂತೆವು. ಅದಾಗಲೇ ೭ ಗಂಟೆ ಆಗಿತ್ತು. ನಾವು ಮನೆಯಲ್ಲಿ ಮಾಡಿ ತಂದಿದ್ದ  ನೀರ್ ದೋಸೆ, ಹಾಗು ಜಾಮ್‌ನ್ನು ತಿಂದೆವು. ಜೊತೆಗೆ ರೈಲಿನಲ್ಲಿ ಮಾರಿಕೊಂಡು ಬರುತ್ತಿದ್ದ ಟೀ ಹಾಗೂ ಸಮೋಸ ತೆಗೆದುಕೊಂಡೆವು.  ಇನ್ನೊಂದು ಗಂಟೆಯಲ್ಲಿ ದೆಲ್ಲಿ ತಲುಪಲಿದ್ದೆವು. ಸುಮಾರು ೮ ಗಂಟೆಯ ಹೊತ್ತಿಗೆ ನಾವು ದೆಲ್ಲಿಯ 'ಹಝಾರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್‌'ಗೆ ತಲುಪಿದೆವು. ಆದರೆ ಅಲ್ಲಿಯೂ ಅಮೃತ್ ಸರಕ್ಕೆ ಹೋಗಲು ಯಾವುದೇ ಟ್ರೈನ್ ಇಲ್ಲ. ಆರ್ಮಿ ಮ್ಯಾನ್ ತಾವು ಪಂಜಾಬ್‍ನ ಜಲಂದರ್ ಎಂಬಲ್ಲಿಗೆ ಹೋಗಿ ಅಲ್ಲಿಂದ ಬೇರೊಂದು ರೈಲಿನ ಮೂಲಕ ಅಮೃತ್ ಸರ್‌‌ಗೆ ಹೋಗುವುದಾಗಿ ತಿಳಿಸಿದರು. ಆದರೆ ಆ ಟ್ರೈನ್ ತುಂಬಾ ತಡವಾಗುವುದರಿಂದ ನಾವು ನ್ಯೂ ಡೆಲ್ಲಿಗೆ ಹೋಗಿ ಅಲ್ಲಿಂದ ಬಸ್‍ ಮೂಲಕ ಹೋಗುವುದಾಗಿ ತಿಳಿಸಿ ಅವರಿಗೆ ಬಾಯ್ ಬಾಯ್ ಹೇಳಿದೆವು. ಹಜಾರತ್ ನಿಜಾಮುದ್ದಿ‍ನ್‌ನಿಂದ ನ್ಯೂ ಡೆಲ್ಲಿಗೆ ಹೋಗಲು ''ಹಿಮಸಾಗರ್'' ಎಕ್ಸ್ ಪ್ರೆಸ್ ಸಿಕ್ಕಿತು. ಈ ರೈಲುಗಳ ಹೆಸರು ಬಹಳ ಸೊಗಸಾಗಿರುತ್ತದೆ. ಮಂಗಳೂರಿನಿಂದ ಡೆಲ್ಹಿ ಗೆ ಮಂಗಳ ಲಕ್ಷ ದ್ವೀಪ್, ಹಾಗೇ ಪಂಚವಲ್ಲೀ, ಹಿಮಸಾಗರ್, ಮತ್ಸ್ಯ ಗಂಧ, ಧನುಷ್ಕೋಟಿ, ಅವಂತಿಕಾ, ಆಜ಼ಾದ್ ಹಿಂದ್, ಬ್ಲ್ಯಾಕ್ ಡೈಮಂಡ್ ಹೀಗೆ ಭಾರತದ ರೈಲುಗಳ ಹೆಸರು ತುಂಬಾ ಚಂದ. ಆದರೆ ರೈಲಿನ ಒಳಗಿನ ಚಂದ ಮಾತ್ರ ಬಲ್ಲವನೇ ಬಲ್ಲ. ಆದರೆ ದುಬಾರಿ ರೈಲುಗಳಾದ ಶತಾಬ್ಧಿ, ರಾಜಧಾನಿ ಮುಂತಾದವುಗಳು ನಿಜಕ್ಕೂ ಚಂದ. ಹೀಗೆ ರೈಲಿನಲ್ಲಿ ಹೋಗುತ್ತಿರಬೇಕಾದರೆ ಇನ್ನೊಂದು ಆತಂಕ ಎದುರಾಯಿತು. ದೆಲ್ಲಿಯಿಂದ ಅಮೃತಸರಕ್ಕೆ ೧೦.೩೦ಕ್ಕೆ ಲಾಸ್ಟ್ ಬಸ್ ಅಂತ ಗೂಗಲ್ ತೋರಿಸುತ್ತಿತ್ತು. ಆಗಲೇ ಸಮಯ ೯ ಆಗಿತ್ತು. ಇನ್ನು ರೈಲ್ವೇ ಸ್ಟೇಷನ್‌ನಿಂದ ಬಸ್ ಸ್ಟ್ಯಾಂಡ್ ತಲುಪಿ, ಬಸ್ ಟಿಕೆಟ್ ಮಾಡಿ ಅದೂ ಟ್ರಾಫಿಕ್ ಇದ್ದರೆ ಬಸ್‍ ಸ್ಟಾಂಡ್ ತಲುಪುವುದು ಇನ್ನೂ ತಡವಾಗಬಹುದು, ಎಂದು ಚಿಂತೆಯಾಯಿತು. ಮಹಿ ಬೈ ಏರ್ ಹೋಗುವುದಾದರೆ ಹೇಗೆ ಎಂದು ನೋಡಿದ. ೨,೫೦೦ಕ್ಕೆಲ್ಲಾ ಟಿಕೇಟ್ ಅವೈಲೇಬ್ಲ್ ಇತ್ತು. ಬಸ್ ತಪ್ಪಿದರೆ ವಿಮಾನದಲ್ಲಿ ಹೋಗುವುದು ಎಂದು ನಿರ್ಧಾರವಾಯಿತು. ೯.೩೦ ರ ಹೊತ್ತಿಗೆ ನ್ಯೂ ಡೆಲ್ಹಿ ತಲುಪಿದೆವು. ರೈಲ್ವೇ ಸ್ಟೇಷನ್‌ನಿಂದ ಹೊರ ಬರುತ್ತಿದ್ದಂತೆ ನಮ್ಮನ್ನು ಸ್ವಾಗತಿಸಲು ಹಲವು ಜನರು ಕಾದಿದ್ದರು. ನಮ್ಮ ಲಗೇಜ್ ತೆಗೆದುಕೊಳ್ಳಲು ತಮ್ಮ ಟ್ಯಾಕ್ಸಿ ಆಟೋಗಳಲ್ಲಿ ಬರುವಂತೆ ಬಹಳ ಒತ್ತಾಯ ಮಾಡುತ್ತಿದ್ದರು. ನಮ್ಮ ಸಂಬಂಧಿಕರು, ಸ್ನೇಹಿತರೂ ಕೂಡ ಈ ಪರಿ ಸ್ವಾಗತ ಮಾಡಲಾರರು ಎಂಬಂತೆ ತೋರುತ್ತಿತ್ತು. ಅಂತೂ ಇಂತೂ ಒಬ್ಬ ಅಟೋ ಡ್ರೈವರ್ ನಮ್ಮನ್ನು ಪುಸಲಾಯಿಸಿ ಅಮೃತ್ ಸರಕ್ಕೆ ಹೋಗುವ ಬಸ್ ಕಾಶ್ಮೀರ್‍ ಗೇಟ್ ಬಳಿ ಇರುತ್ತದೆ. ತಾನು ಅಲ್ಲಿಗೆ ಕರೆದುಕೊಂಡು ಹೋಗುವುದಾಗಿ ರಿಕ್ಷಾಕ್ಕೆ ಹತ್ತಿಸಿಕೊಂಡ. ಸಮಯ ಆಗಲೇ ೧೦.೩೦ ಆಗಿತ್ತು. ಆತ ೧೧.೩೦ ರ ತನಕವೂ ಪಂಜಾಬ್ ಬಸ್ ಇರುತ್ತದೆ ಎಂದ. ಕೊನೆಗೂ ನಿರ್ವಿಘ್ನವಾಗಿ ಕಾಶ್ಮೀರ್ ಗೇಟ್ ತಲುಪಿದೆವು. ಅಲ್ಲೆಲ್ಲೋ ಒಬ್ಬ ಏಜೆಂಟ್ ಬಳಿ ಕರೆದೊಯ್ದು ಅಮೃತ ಸರ ಹೋಗುವ ಬಸ್ಸಿನ ಟಿಕೆಟ್ ಮಾಡಿಸಿದ. ಸ್ಲೀಪರ್ ಬೇಡ ಕುಳಿತು ಕೊಂಡು ಹೋಗುವ ಬಸ್ ಸಾಕೆಂದು ಟಿಕೆಟ್ ಮಾಡಿಸಿದ್ದೆವು, ಕೊನೆಗೆ ಬಸ್ ಬಳಿ ಹೋದಾಗ ಅದು ಎ/ಸಿ ಸ್ಲೀಪರ್ ಲಕ್ಸುರಿ ಬಸ್ ಆಗಿತ್ತು. ನಾವು ಮೊದಲು ಕೊಟ್ಟಿದ್ದ ತಲಾ ೧೨೦೦ ರೂ ಅಲ್ಲದೇ ಮತ್ತೆ ೪೦೦ ರೂ ಕಿತ್ತುಕೊಂಡ. ಅವನನ್ನು ಬೈದುಕೊಳ್ಳುತ್ತಾ ಬಸ್ ಹತ್ತಿದೆವು. ೧೧.೪೫ಕ್ಕೆ ಬಸ್ ದೆಲ್ಲಿಯಿಂದ ಅಮೃತ್ ಸರಕ್ಕೆ ಹೊರಟಿತು. ಬಸ್ ಡ್ರೈವರ್ ಓರ್ವ ಸರ್ದಾರ್ಜಿ ಆಗಿದ್ದು ಅದು ಪಂಜಾಬಿನದ್ದೇ ಬಸ್ ಆಗಿತ್ತು. ಟಿವಿಗಳಲ್ಲಿ ಪಂಜಾಬಿ ಸಿನಿಮಾಗಳ ಚಿತ್ರ ಗೀತೆಗಳನ್ನೇ ಹಾಕುತ್ತಿದ್ದರು. ನಮಗೆ ಕೊನೆಯ ಸೀಟ್ ಸಿಕ್ಕಿತ್ತು. ಬಸ್ ಶರವೇಗದಲ್ಲಿ ಸಾಗುತ್ತಿತ್ತು. ಭಾರತದ ವಾಯುವ್ಯದ ಕಡೆಗೆ ಸಾಗುತ್ತಿದ್ದೇವೆ. ಸುಮಾರು ೫.೩೦ ರ ಸಮಯಕ್ಕೆ ಲೂಧಿಯಾನ ತಲುಪಿದೆವು.  ಬಸ್ ನಿಂತಿತು. ಬಸ್‍ಗೆ ಪಂಜಾಬಿ ಪೋಲಿಸರು ಹತ್ತಿ ಬಸ್‌ನ್ನು ಪ್ರಯಾಣಿಕರನ್ನು ಚೆಕ್ ಮಾಡಿದರು.  ಅನಾಥವಾಗಿ ಬಿದಿದ್ದ ಲಗೇಜೊಂದನ್ನು ಕಂಡ ಪೋಲಿಸರು ಇದು ಯಾರ ಲಗೇಜ್ ಎಂದು ವಿಚಾರಿಸುತ್ತಿದ್ದರು. ನಮ್ಮಲ್ಲಿ ಎರಡು ಬಾರಿ ಕೇಳಿದರು. ನಮ್ಮದಲ್ಲ ಎಂದ ಮೇಲೆ, ನಮ್ಮ ಪಕ್ಕದ ಸೀಟಿನಲ್ಲಿ ವಿಚಾರಿಸಿದರು.  ಅದು ಅಲ್ಜೀರಿಯಾ ದೇಶದ ಪ್ರಜೆಯೊಬ್ಬನದ್ದಾಗಿತ್ತು. ಆ ಲಗೇಜನ್ನು ಉಳಿದ ಪ್ರಯಾಣಿಕರ ಲಗೇಜ್‍ಗಳಿಗಿಂತ ಜಾಸ್ತಿ ಕೂಲಂಕುಶವಾಗಿ ಪರಿಶೀಲಿಸಿದರು. ಲಗೇಜ್‍ನಲ್ಲಿದ್ದ ಪ್ರತಿಯೊಂದು ವಸ್ತುವನ್ನು ಹೊರಗಡೆ ತೆಗೆದು ನೋಡಿದರು. ಹಲವು ಶೋ ಕೇಸ್ ಪೀಸ್‍ಗಳು, ಇನ್ನಿತರ ಗಿಫ಼್ಟ್ ಐಟಂಗಳು, ಅವನ ಬಟ್ಟೆ ಬರೆಗಳು ಅದರಲಿತ್ತು. ಪಾಪ ಆತ ನಿದ್ದೆ ಮಂಪರಿನಲ್ಲಿ ನೋಡುತ್ತಿದ್ದ. ಕೊನೆಗೆ ಹಾಗೆಯೇ ತುಂಬಿಸಿ ವಾಪಾಸ್ ಕೊಟ್ಟರು. 
                                                                                                              -  ಮುಂದುವರಿಯುವುದು.....

Comments

Post a Comment

thank you...

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....