ಮಾನ್ಸೂನ್ ಟ್ರಿಪ್ ೨೦೧೮ - 5

ಸ್ವರ್ಣ ಮಂದಿರ. 


ಪವಿತ್ರ  ಸ್ವರ್ಣ ಮಂದಿರ
upper view
   ಜಲಿಯನ್ ವಾಲಾಭಾಗ್‍ನ ಪಕ್ಕದಲ್ಲೇ ಸಿಖ್‌ರ ಪವಿತ್ರ ದೇವಾಲಯವಾದ ಸ್ವರ್ಣ ಮಂದಿರವಿದೆ. ಇದನ್ನು 'ಶ್ರೀ ಹರ್ ಮಂದಿರ್ ಸಾಹೀಬ್' ಎಂದೂ ಕರೆಯುವರು. ಪ್ರತಿದಿನ ಇಲ್ಲಿಗೆ ಸಾವಿರಾರು ಮಂದಿ ಭಕ್ತರು ಆಗಮಿಸುವರು, ಹೊರಗಡೆ ಚಪ್ಪಲ್ ಸ್ಟ್ಯಾಂಡ್‌ನಲ್ಲಿ ತುಂಬಾ ರಶ್ ಇತ್ತು. ಸುಮಾರು ೬ ರಿಂದ ೭ ದೊಡ್ಡ ದೊಡ್ಡ ಕೌಂಟರ್‌ಗಳು ಚಪ್ಪಲ್‌ಗಳನ್ನು ಸಂಗ್ರಹಿಸುವುದಕ್ಕಾಗಿ ಇದ್ದವು.  ಸಿಖ್ಖರು ಪರೋಪಕಾರದಲ್ಲಿ ಹಾಗೂ ಸೇವೆ ಮಾಡುವುದರಲ್ಲಿ ಎತ್ತಿದ ಕೈ. ಆಗ್ರಾದಲ್ಲಿ ಒಂದು ಗುರುದ್ವಾರವಿದೆ (ಗುರು ಕಾ ತಾಲ್).  ಬಿಡುವಿರುವಾಗ ನಾವು ಈ ಗುರುದ್ವಾರಕ್ಕೆ ಹೋಗುವುದಿದೆ. ದಕ್ಷಿಣ ಕನ್ನಡದಲ್ಲಿ ಹೇಗೆ ಹೆಚ್ಚಿನ ದೇವಾಲಯಗಳಲ್ಲಿ ಅನ್ನ ಸಂತರ್ಪಣೆ ಇರುತ್ತದೋ ಹಾಗೆ ಇಲ್ಲೆಲ್ಲಾ ಗುರುದ್ವಾರಗಳಲ್ಲಿ ಭೋಜನದ ವ್ಯವಸ್ಥೆ ಇರುತ್ತದೆ. ಮಹಿ ಯಾವಗಲೂ ಒಂದು ಮಾತು ಹೇಳುವುದಿದೆ, ''ಉತ್ತರ ಭಾರತದಲ್ಲಿ ಎಲ್ಲಾದರೂ ಬಂದು ಸಿಕ್ಕಿ ಹಾಕಿಕೊಂಡರೆ ಮೊದಲು ಗುರುದ್ವಾರಗಳೆಲ್ಲಿವೆ? ಅಂತ ಹುಡುಕಬೇಕಂತೆ, ಅಲ್ಲಿ ಖಂಡಿತಾ ನಮಗೆ ಬೇಕಾದ ಸಹಾಯ ಸಿಗಬಹುದು'' ಎಂದು. ಸಿಖ್ ಧರ್ಮ ಸ್ಥಾಪನೆಯ ಮುಖ್ಯ ಉದ್ದೇಶವೇ ಅದಾಗಿತ್ತು, ಸಮಾಜಕ್ಕೆ ನಿಸ್ವಾರ್ಥವಾದ ಸೇವೆಯನ್ನು ಕೊಡುವುದು ಹಾಗೂ ರಕ್ಷಿಸುವುದು. ನಾವು ಆಗ್ರಾದಲ್ಲಿ 'ಗುರು ಕಾ ತಾಲ್‌'ಗೆ ಹೋಗಿದ್ದಾಗ ನೋಡಿದ್ದೆವು, ಅದೆಷ್ಟೋ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಸರ್ದಾರ್ಜಿಗಳು, ಶ್ರೀಮಂತ ಮನೆತನದ ಸಿಕ್ಖರೂ ಕೂಡಾ ಚಪ್ಪಲಿ ಕೌಂಟರ್‌ಗಳಲ್ಲಿ ಗುರುದ್ವಾರಕ್ಕೆ ಬಂದ ಭಕ್ತಾದಿಗಳ ಚಪ್ಪಲ್‍ಗಳನ್ನು ಸಂಗ್ರಹಿಸುವ ಕೆಲಸದಿಂದ ತೊಡಗಿ ಗುರುದ್ವಾರದ ಹೆಚ್ಚಿನ ಎಲ್ಲಾ ಕೆಲಸಗಳನ್ನು ಕೇವಲ ಸೇವಾ ದೃಷ್ಟಿಯಿಂದ ಮಾಡುತ್ತಾರೆ. ಗುರುದ್ವಾರಗಳಲ್ಲಿ ಎಲ್ಲಿಯೂ ಹಣ ವಸೂಲು ಮಾಡುವ ಪದ್ದತಿ ಇಲ್ಲ. ಅದು ಚಪ್ಪಲ್ ಕೌಂಟರ್‌ಗಳಲ್ಲಿ ಇರಬಹುದು ಅಥವಾ ದೇವರ ಸೇವಾ ವಿಚಾರದಲ್ಲಿರಬಹುದು. ಭಕ್ತ ತನ್ನ ಇಷ್ಟಕ್ಕನುಸಾರ ದಾನವಾಗಿ ಕೊಟ್ಟದ್ದನ್ನು ಅವರು ಪಡೆಯುತ್ತಾರೆ. ಆದರೂ ಗುರುದ್ವಾರಗಳನ್ನು ಅವರು ಎಲ್ಲಾ ಸೌಲಭ್ಯಗಳೊಂದಿಗೆ ವ್ಯವಸ್ಥಿತವಾಗಿಯೇ ನಿರ್ವಹಿಸುತ್ತಾ ಬಂದಿದ್ದಾರೆ. ಸ್ವಚ್ಛತೆಯ ವಿಚಾರಕ್ಕೆ ಬಂದರೂ ಅಷ್ಟೇ, ಗುರು ದ್ವಾರ ಹಾಗೂ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಿದ್ದಾರೆ. 

ಗುರು ಕಾ ತಾಲ್,  ಆಗ್ರಾ
   ನಮ್ಮ ಚಪ್ಪಲ್‌ಗಳನ್ನು ಚಪ್ಪಲ್ ಸ್ಟ್ಯಾಂಡ್‌ನಲ್ಲಿರಿಸಿ ಮುಂದೆ ಸಾಗಿದೆವು. ಬಿಸಿಲಿನ ಝಳಕ್ಕೆ ಬರಿಗಾಲಲ್ಲಿ ನಡೆಯಲು ಕಷ್ಟವಾಗುತ್ತಿತ್ತು. ಕಾಲೂ ಸುಡುತ್ತಿತ್ತು, ಜೊತೆಗೆ ತಲೆಯೂ ಸುಡುತ್ತಿತ್ತು. ಅಲ್ಲಲ್ಲಿ ಹೋಗುವ ದಾರಿಗೆ ಅಡ್ಡಲಾಗಿ ನೀರು ಹರಿಸಿದ್ದರು, ಎಲ್ಲರೂ ಕಾಲು ತೊಳೆದುಕೊಂಡು ಒಳ ನಡೆಯಬೇಕಿತ್ತು. ಮುಖ್ಯ ಪ್ರವೇಶ ದ್ವಾರದ ಪಕ್ಕದಲ್ಲಿ ಕುಡಿಯುವ ನೀರನ್ನು ಕೊಡುತ್ತಿದ್ದರು. ದೊಡ್ಡ ದೊಡ್ಡ ಪಾತ್ರಗಳಲ್ಲಿ ನೀರನ್ನು ತುಂಬಿಸಿ ನಾಲ್ಕೈದು ಜನರು ಪಿಂಗಾಣಿಗಳಲ್ಲಿ ನೀರನ್ನು ಹಂಚುತ್ತಿದ್ದರು. ಗುರುದ್ವಾರಗಳ ಒಳಗೆ ಹೋಗ ಬೇಕಾದರೆ ತಲೆಯನ್ನು ಬಟ್ಟೆಯಿಂದ ಮುಚ್ಚಿರಬೇಕಾಗುತ್ತದೆ. ಸಿಖ್ಖರಲ್ಲಿ ಗಂಡಸರು ತಲೆಗೆ ಮುಂಡಾಸನ್ನು ಧರಿಸಿರತ್ತಾರೆ, ಇದಕ್ಕೆ ದತ್ಸಾರ್ ಎನ್ನುತ್ತಾರೆ.  ಹೆಂಗಸರು ಶಾಲನ್ನು ಹಾಕಿರುತ್ತಾರೆ. ತಲೆಗೆ ಬಟ್ಟೆ ಕಟ್ಟದವರಿಗೆ ಶಿರವಸ್ತ್ರ ಅಲ್ಲೇ ನೀಡುತ್ತಾರೆ. ಹಿಂದಿರುಗುವಾಗ ಅದನ್ನು ಮರಳಿಸಿದರಾಯಿತು.  ಚಿಕ್ಕದೊಂದು ಟವೆಲ್ ಆದರೂ ಸಾಕು ಅದನ್ನು ತ್ರಿಕೋನಾಕೃತಿಯಲ್ಲಿ ಮಡಚಿ ತಲೆಗೆ ಕಟ್ಟಿಕೊಳ್ಳ ಬೇಕು. ಇದು ಗುರುಗಳಿಗೆ ಹಾಗೂ ದೇವರಿಗೆ ಗೌರವ ಸೂಚಕವಾಗಿ. ಶಿರ ಹೊದಿಕೆ ಧರಿಸದೇ ಇರುವವರಿಗೆ ಒಳಗಡೆ ಪ್ರವೇಶವಿಲ್ಲ. ನಾವು ಅಲ್ಲೇ ಇದ್ದ ಶಿರ ಹೊದಿಕೆಗಳನ್ನು ಧರಿಸಿ ಒಳಗಡೆ ಪ್ರವೇಶಿಸಿದೆವು.  ಬಿಸಿಲಿನ ಕಾವು ಮತ್ತಷ್ಟು ಹೆಚ್ಚಿತ್ತು. ಮೆಟ್ಟಿಲುಗಳ ಮೇಲೆ ಮ್ಯಾಟ್‍ಗಳನ್ನು ಹಾಕಿದ್ದರೂ ಕಾಲು ಸುಡುತ್ತಿತ್ತು. ಮೆಟ್ಟಿಲುಗಳನ್ನು ಹತ್ತುತ್ತಾ ಮುಂದೆ ನಡೆದವು. ವಿಶಾಲವಾದ ಕೆರೆಯ ಮಧ್ಯೆ ಸ್ವರ್ಣ ಮಂದಿರ ಶೋಭಿಸುತ್ತಿತ್ತು. ಭವ್ಯವಾದ ಆಕರ್ಷಕ ಮಂದಿರವದು. ಸಿಖ್ಖ್ ಧರ್ಮದ ನಾಲ್ಕನೆಯ ಗುರು, ಗುರು ರಾಮ ದಾಸರು ಕ್ರಿ.ಶ ೧೫೭೭ ರಲ್ಲಿ ಈ ಕೆರೆಯನ್ನು ನಿರ್ಮಿಸಿ ಅಮರತ್ವದ ಕೆರೆ(ಅಮೃತ್ ಸರ್) ಎಂದು ಹೆಸರು ಕೊಟ್ಟರು. ತದನಂತರ ಕ್ರಿ. ಶ. ೧೫೮೮ ರಲ್ಲಿ ಸಿಖ್ಖರ ಐದನೆ ಗುರು 'ಗುರು ಅರ್ಜುನ್ ದೇವರು' ಇಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭಿಸಿದರು.  ಇವರ ಸ್ನೇಹಿತ  ಲಾಹೋರಿನ  ಮುಸ್ಲಿಂ ಸೂಫಿ ಸನ್ಯಾಸಿ 'ಹಜರತ್ ಮಿಯಾನ್ ಮೀರ್' ಮೊದಲ ಕಲ್ಲನ್ನು ಇಡುವುದರ ಮೂಲಕ ಮಂದಿರದ ರಚನೆಯನ್ನು ಪ್ರಾರಂಭಿಸಿದರು ಎನ್ನುತ್ತದೆ ಇತಿಹಾಸ.  ದೇವಾಲಯದ ನಿರ್ಮಾಣ ಕಾರ್ಯ ಸಂಪೂರ್ಣವಾಗುವುದರ ಮೊದಲೇ ಮೊಘಲರ ಧಾಳಿಗೆ ತುತ್ತಾಯಿತಾದರೂ ಮತ್ತೆ ಕ್ರಿ. ಶ. ೧೬೦೪ ರಲ್ಲಿ  ಸ್ವರ್ಣ ಮಂದಿರ ನಿರ್ಮಾಣವಾಯಿತು. 'ಬಾಬಾ ಬುದ್ದ ಜಿ' ಎಂಬವರನ್ನು ಉಪನ್ಯಾಸಕರಾಗಿ ನೇಮಿಸುತ್ತಾರೆ. ಆದರೆ ಮತ್ತೆ ಅಫ್ಘನ್ನರ ಆಕ್ರಮಣಕ್ಕೆ ತುತ್ತಾಗುತ್ತದೆ. ೧೭೬೦ ರಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಸ್ವರ್ಣ ಮಂದಿರಕ್ಕೆ ನಾಲ್ಕು ದ್ವಾರಗಳಿವೆ. ಸ್ವರ್ಣ ಮಂದಿರವು ಅಮೃತ ಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು ಚಿನ್ನದ ಲೇಪನ ಮಾಡಲಾಗಿದೆ. ಆ ಕೆರೆಯಲ್ಲಿ ಕೈ ಕಾಲುಗಳನ್ನು ತೊಳೆದು ಕೊಂಡೆವು. ಅಲ್ಲಿ ಹಲವರು ಪವಿತ್ರ ಸ್ನಾನ ಮಾಡುತ್ತಿದ್ದರು. ಚೌಕಾಕಾರದ ಆ ಕೆರೆಯ ಮಧ್ಯೆ ಸ್ವರ್ಣ ಮಂದಿರವಿದೆ. 
ಅಮರತ್ವದ ಕೆರೆ
   ಕೆರೆಯ ಬದಿಯಲ್ಲಿ ನಡೆಯುತ್ತಾ ಸ್ವರ್ಣ ಮಂದಿರದ ಮುಖ್ಯ ದ್ವಾರವನ್ನು ಪ್ರವೇಶಿಸಿದೆವು. ಪ್ರವೇಶಕ್ಕಾಗಿ ಜನರ ಗುಂಪಿನಲ್ಲಿ ನಿಂತೆವು. ಬಹಳಷ್ಟು ರಶ್ ಇತ್ತು. ನನಗಂತು ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲಿ ದೇವರ ದರ್ಶನಕ್ಕೆ ನಿಂತಂತೆ ಭಾಸವಾಗುತ್ತಿತ್ತು. ಕೀರ್ತನೆಗಳನ್ನು ದೊಡ್ಡದಾಗಿ ಹಾಕಲಾಗಿತ್ತು. ಹಲವರು ಮಂತ್ರಗಳನ್ನು ಪಠಿಸುತ್ತಿದ್ದರು. ಗುಂಪು ಸ್ವಲ್ಪ ಸ್ವಲ್ಪವೇ ಮುಂದಕ್ಕೆ ಹೋಯಿತು. ಅಲ್ಲಿ ಚಿಕ್ಕ ಚಿಕ್ಕ ಮಕ್ಕಳು, ವೃದ್ಧರು, ಮಧ್ಯ ವಯಸ್ಸಿನವರು, ಯುವಕರು ಹೀಗೆ ಎಲ್ಲರೂ ಸೇರಿದ್ದರು. ಸಾಲಿನಲ್ಲಿ ನಿಂತಿದ್ದಾಗ  ಚಿಕ್ಕದೊಂದು ಭಯ ಸುಳಿಯಿತು. ಒಳಗಡೆ ಬರುವ ಯಾರನ್ನೂ ಚಕ್ ಮಾಡುತ್ತಿರಲಿಲ್ಲ. ಅಲ್ಲದೇ ಅಮೃತ ಸರಕ್ಕೂ ಪಾಕಿಸ್ತಾನಕ್ಕೂ ಕೆಲವೇ ಕೆಲವು ಮೈಲುಗಳ ಅಂತರ. ಯಾರಾದರೂ ಬಾಂಬ್ ತೆಗೆದುಕೊಂಡು ಬಂದಿದ್ದರೆ ಎಂದು ಭಯವಾಗುತ್ತಿತ್ತು. ಸುಮಾರು ೧೨.೪೦ ಕ್ಕೆಲ್ಲಾ ಒಳಗಡೆ ಹೋಗಲು ಸಾಧ್ಯವಾಯಿತು. ಒಳಗಡೆ ಪವಿತ್ರವಾದ 'ಗುರು ಗ್ರಂಥ ಸಾಹೇಬ್' ಇದೆ. ಹಾಗೂ ಸುತ್ತಲೂ ಕುಳಿತ ಸಿಖ್ ಉಪನ್ಯಾಸಕರು ಅಥವಾ ಗುರುಗಳು ಅದನ್ನು ಓದುತ್ತಿರುತ್ತಾರೆ. ಅಲ್ಲೇ ನಮಸ್ಕರಿಸಿ ಕೆಲವರು ಕುಳಿತುಕೊಂಡು ಪಠಣ ಮಾಡುತ್ತಿದ್ದರು. ಒಳಗಡೆ ಮತ್ತೊಂದಷ್ಟು ಗುರುಗಳು ಕುಳಿತುಕೊಂಡು ಪಠಣ ಧ್ಯಾನ ಮಾಡುತ್ತಿದ್ದರು. ಜೊತೆಗೆ ಅನೇಕ ಸಂಕೀರ್ತನೆಗಳನ್ನು ಹೇಳುತ್ತಿದ್ದರು. ಅಲ್ಲಿ ಗ್ರಂಥ ಇದೆ ಎಂಬುದು ಸ್ಪಷ್ಟವಾಯಿತು, ಉಳಿದಂತೆ ಹೆಚ್ಚಿನ ಮಾಹಿತಿ ಪಡೆಯಲು, ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಒಂದಂತು ತಿಳಿಯಿತು, ಅಲ್ಲಿ ಯಾವುದೇ ದೇವರ ಮೂರ್ತಿ ಇಲ್ಲ. ಗುರು ಗ್ರಂಥ ಸಾಹೇಬ್‌ನ್ನೇ ಪೂಜಿಸಲಾಗುತ್ತದೆ. ಮಧ್ಯದಲ್ಲಿ ಗ್ರಂಥವಿದ್ದರೆ ಗ್ರಂಥದ ಎಡ ಬಲಗಳಲ್ಲಿ ಗ್ರಂಥಿಗಳು ಕುಳಿತುಕೊಂಡಿದ್ದರು. ಹಾಗೂ ಭಕ್ತರು ಪ್ರದಕ್ಷಿಣಾಕಾರದಲ್ಲಿ ಸುತ್ತು ಬರುತ್ತಿದ್ದರು.  ಸ್ವರ್ಣ ಮಂದಿರದಲ್ಲಿ ಮೂರು ಅಂತಸ್ತುಗಳಿದ್ದು ನಾವು ಮೆಟ್ಟಿಲುಗಳನ್ನು ಹತ್ತುತ್ತಾ ಎರಡನೇ ಅಂತಸ್ತಿಗೆ ಹೋದೆವು. ಒಳಗಿನ ಕಲಾಕೃತಿಗಳು, ವರ್ಣ ಮಯವಾದ ಚಿತ್ತಾರಗಳು ನಿಜಕ್ಕೂ ಅತ್ಯಾಕರ್ಷಕ. ಎಲ್ಲಿ ನೋಡಿದರೂ ಜನ ಕುಳಿತು ಗುರು ಗ್ರಂಥವನ್ನು ಓದುತ್ತಿದ್ದರು. ಮೂರನೇ ಅಂತಸ್ತಿನಲ್ಲೂ ಪುಟ್ಟ ಪುಟ್ಟದಾದ ಗುಡಿಯ ರೀತಿಯ ರಚನೆ.  ಮೂರನೇ ಅಂತಸ್ತಿನಲ್ಲಿ ನಿಂತು ಕೆಳಗಡೆ ನೋಡುವುದೇ ಖುಷಿ ಕೊಡುತ್ತಿತ್ತು. ಮೇಲೆ ಬಿಸಿಲಿನ ಶಾಖ. ಕೆಳಗಡೆ ಕೆರೆಯ ತಣ್ಣನೆಯ ನೀರು, ಜೊತೆಗೆ ಮಂದಿರದ ಚಿನ್ನದ ಹೊಳಪು. ನಯನ ಮನೋಹರವಾದ ಈ ಸ್ವರ್ಣ ಮಂದಿರದ ಸೌಂದರ್ಯವನ್ನು, ರಚನೆಯನ್ನು ಕೇವಲ ಅಕ್ಷರಗಳಲ್ಲಿ ಕಟ್ಟಿ ಕೊಡಲು ಸಾಧ್ಯವಿಲ್ಲ. ಪಂಜಾಬಿ, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಏನೋ ಒಂದಷ್ಟು ವಿಚಾರಗಳನ್ನು ಬರೆದಿದ್ದರು. ಮೆಟ್ಟಿಲುಗಳಲ್ಲಿಯೂ ಉರ್ದು ಅಕ್ಷರಗಳಿದ್ದವು. ಇನ್ನೊಂದು ದ್ವಾರದ ಮೂಲಕ ಮಂದಿರದಿಂದ ಹೊರಗಡೆ ಬಂದೆವು. 

ಸ್ವರ್ಣ ಮಂದಿರದ ಒಳಭಾಗ
ಭಜನೆ ಹಾಗೂ ಸಂಕೀರ್ತನೆಗಳನ್ನು ಹೇಳುತ್ತಿರುವುದು
   ಸಿಖ್ಖರು ಧರ್ಮಕ್ಕೆ ಸಂಬಂಧಪಟ್ಟಂತ ಈ ಐದನ್ನು ಸದಾ ಧರಿಸುವಂತೆ ಸೂಚಿಸಲಾಗಿದೆ. ಇವುಗಳನ್ನು ಪಾಂಚ್ ಕಾಕರ್ ಅಥವಾ Five 'k' s ಎನ್ನುತ್ತಾರೆ. ಅವುಗಳು  1.Kesh- Uncut hair, 2.Kirpan-A strapped curved sword, 3. Kara- This is metal bracelet., 4. Kangha- It is wooden comb, 5. Kacchera- A specific style of cotton undergarments. ಈ ಪಾಂಚ್ ಕಾಕರ್‌ಗಳನ್ನು ಗುರು ಗೋಬಿಂದ್ ಸಿಂಗರು ಆದೇಶಿಸಿರುತ್ತಾರೆ.  ಸಿಖ್ಖರು ತಲೆಕೂದಲನ್ನು ತೆಗೆಸುವಂತಿಲ್ಲ. ಅದು ದೇವರು ಕೊಟ್ಟದ್ದು, ಪ್ರಕೃತಿ ಸಹಜವಾದದ್ದು ಅದನ್ನು ತೆಗೆದರೆ ದೇವರಿಗೆ ಅಗೌರವ ಸೂಚಿಸಿದಂತೆ.  ಕೇಶವನ್ನು ರಕ್ಷಿಸಲು ದತ್ಸಾರ್ ಅಥವಾ ಮುಂಡಾಸನ್ನು ಧರಿಸಿರುತ್ತಾರೆ, ಕಿರೀಟದ ಸೂಚಕವಾಗಿಯೂ ಇದನ್ನು ಧರಿಸಲಾಗುತ್ತದೆ. ಆತ್ಮ ವಿಶ್ವಾಸ ಹೆಚ್ಚಿಸಲು, ಹಾಗೂ ಭಕ್ತಿಯ ಸಂಕೇತವಾಗಿ ದತ್ಸಾರ್‌ನ್ನು ಧರಿಸಲಾಗುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ಇನ್ನೊಂದು ವಿಚಾರ, ಸಿಖ್ಖರು ತಮ್ಮ ಹೆಸರಿನ ಜೊತೆಗೆ 'ಸಿಂಗ್' ಎಂಬುದನ್ನು ಇಟ್ಟುಕೊಂಡಿರುತ್ತಾರೆ. ಸಿಂಗ್ ಎಂದರೆ ಸಿಂಹ ಎಂದರ್ಥ. ಅಂದರೆ ಬಲಿಷ್ಟ ಎಂಬುದನ್ನು ಸೂಚ್ಯವಾಗಿ ಹೇಳಲಾಗುತ್ತದೆ, ಸಿಖ್ಖರೆಲ್ಲರೂ ಸಮಾನರು ಎಂದು ಈ ಮೂಲಕ ಹೇಳುತ್ತಾರೆ. ಎಲ್ಲಾ ಹೆಂಗಸರು 'ಕೌರ್' ಎಂದು ಸೇರಿಸಿಕೊಳ್ಳುತ್ತಾರೆ. 'ಕೌರ್' ಎಂದರೆ ರಾಜಕುಮಾರಿ ಎಂದು ಅರ್ಥ. ಇವರು ತಮ್ಮ ಹೆಸರಿನೊಂದಿಗೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದಿಲ್ಲ. ದತ್ಸಾರ್‌ನು ಒಮ್ಮೆ ಧರಿಸಿದರೆ ಅದು ದೇಹದ ಒಂದು ಭಾಗ ಎಂದು ಪರಿಗಣಿಸಲಾಗುತ್ತದೆ. 
  'ಕಿರ್ಪಾನ್' ಸಿಖ್ಖರು ಧರಿಸುವ ಧಾರ್ಮಿಕ ಹಿನ್ನೆಲೆಯ ಖಡ್ಗ ಅಥವಾ ಚಾಕು, ಗುರು ಗೋಬಿಂದೋ ಸಿಂಗರ ಆಜ್ಞೆ. ಇದು ನಂಬಿಕೆಯ ಸಂಕೇತವಾಗಿದೆ ಜೊತೆಗೆ ರಕ್ಷಣೆಯ ಉದ್ದೇಶವೂ ಇದೆ. ಇತಿಹಾಸದ ಪುಟಗಳನ್ನು ತೆರೆದರೆ, ಹದಿನೈದನೇ ಶತಮಾನದಲ್ಲಿ ಸಿಖ್ಖ ಧರ್ಮವು ಉದಯವಾದ ಹೊತ್ತಿನಲ್ಲಿ ಸಿಖ್ಖರಿಗೆ ಮೊಘಲರ ಉಪಟಳ ಹೆಚ್ಚಿತ್ತು. ಅಕ್ಬರನ ಉತ್ತರಾಧಿಕಾರಿಯಾದ ಜಹಾಂಗೀರ್ ಹಾಗೂ ಸಿಖ್ಖರ ನಡುವಿನ ಬಾಂಧವ್ಯ ಚೆನ್ನಾಗಿರಲಿಲ್ಲ. ಮೊಘಲರು ಇವರನ್ನೆಲ್ಲಾ ಇಸ್ಲಾಮಿಕ್‌ಗೆ ಮತಾಂತರ ಮಾಡ ಹೊರಟರು. ಜೊತೆಗೆ, ಸಿಖ್ಖರ ಐದನೇ ಧರ್ಮ ಗುರುವಾದ ಗುರು ಅರ್ಜನ್ ದೇವ್ ರನ್ನು ಮರಣದಂಡನೆಗೆ ಒಳಪಡಿಸಿದರು. ಈ ಘಟನೆಯ ನಂತರ ಸಿಖ್ಖ ಧರ್ಮದಲ್ಲಿ ಹೊಸದೊಂದು ಮಾರ್ಪಾಡನ್ನು ಮಾಡಲಾಯಿತು. ಇಡೀ ಸಿಖ್ಖ್ ಸಮುದಾಯವನ್ನೇ ಸೈನ್ಯವಾಗಿ ಪರಿವರ್ತಿಸಲಾಯಿತು. ಅರ್ಜನ್ ಸಿಂಗ್‌ರ ಮಗ ಗುರು ಹರ್ ಗೋಬಿಂದರು ಜನರ ರಕ್ಷಣೆಗಾಗಿ ಸೈನ್ಯ ಕಟ್ಟಿದರು ಜೊತೆಗೆ 'ಕಿರ್ಪಾನ್' ಹಾಗೂ 'ಸಂತ ಸಿಪಾಯಿ'ಎಂಬ ಪರಿಕಲ್ಪನೆಗಳನ್ನು ಜಾರಿಗೆ ತಂದರು. ತದನಂತರ ಸಿಖ್ಖರ ೧೦ನೇ ಗುರುಗಳು ಗುರು ಗೋಬಿಂದೋ ಸಿಂಗರು 'ಕಿರ್ಪಾನ್‌' ಧರಿಸುವುದನ್ನು ಹಾಗೂ ಅಗತ್ಯವಿರುವವರಿಗೆ, ಅಶಕ್ತರಿಗೆ, ರಕ್ಷಣೆ ಬಯಸುವವರಿಗೆ ರಕ್ಷಣೆ ಒದಗಿಸುವುದನ್ನು ಕಡ್ಡಾಯಗೊಳಿಸಿದರು. ಹಾಗೂ ಅನ್ಯಾಯದ ಅಧರ್ಮದ ವಿರುದ್ಧ ಬಳಸಲು ಸೂಚಿಸಿದರು.  ಅದರೆ ಯಾವತ್ತೂ ಕಲ್ಸ ಮೊದಲಾಗಿ ಧಾಳಿ ಮಾಡದಂತೆ ಸೂಚನೆ ನೀಡಿದರು. ಪ್ರಪಂಚದಾದ್ಯಂತ ಪಸರಿಸಿರುವ ಸಿಖ್ಖ್ ಧರ್ಮ ಹಾಗೂ ಸಿಖ್ಖರಿಗೆ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ 'ಕಿರ್ಪಾನ್' ಧರಿಸಲು ಅನುಮತಿ ಇದೆ. ಭಾರತದ ಸಂವಿಧಾನದ ೨೫ನೇ ಆರ್ಟಿಕಲ್ ಪ್ರಕಾರ  ಸಿಖ್ಖರು ತಾವು ಕಾರ್ಯ ನಿರ್ವಹಿಸುವ ಸ್ಥಳಗಳಿಗೆ ಕಿರ್ಪಾನ್‌ನ್ನು ಒಯ್ಯುವುದು ಅಕ್ರಮವಲ್ಲ. ಜೊತೆಗೆ ಭಾರತದ ಸೇನೆಯ ಯುದ್ಧದ ಸಂದರ್ಭದಲ್ಲೂ ಕಿರ್ಪಾನ್ ನ್ನು ಒಯ್ಯಲು ಅನುಮತಿ ನೀಡಲಾಗಿದೆ. 'ಕಿರ್ಪಾನ್' ಧಾರಣೆಯನ್ನು ವಿಧಿ ವಿಧಾನಗಳ ಮೂಲಕ ಸಂಪ್ರದಾಯ ಬದ್ಧವಾಗಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಬ್ರಾಹ್ಮಣರಲ್ಲಿ ಉಪನಯನ ಕರ್ಮದಂತೆ ಸಿಖ್ಖರಲ್ಲಿ ಕಿರ್ಪಾನ್ ಧಾರಣೆ ಎನ್ನಬಹುದು.  ಇದನ್ನು ' ಅಮೃತ್ ಸಂಚಾರ್' ಅಥವಾ ಪಂಜಾಬಿಯಲ್ಲಿ ಖಂಡಾ ದಿ ಪಹುಲ್ (`baptism of the sword', Khalsa initiation ceremony) ಎನ್ನುವರು. ಈ ಸಂದರ್ಭದಲ್ಲಿ ಕಿರ್ಪಾನ್ ಧಾರಣೆ ಮಾಡುವವನಿಗೆ ಅವನ ಕರ್ತವ್ಯದ ಕುರಿತಾಗಿ, ಆತ ಬದುಕ ಬೇಕಾದ ರೀತಿಯ ಕುರಿತಾಗಿ ವಿಷಯಗಳನ್ನು ಬೋಧಿಸಲಾಗುತ್ತದೆ. ಮಾಂಸ, ಮಧ್ಯ ತ್ಯಜಿಸುವಂತೆ, ಯಾವುದೇ ದುಶ್ಚಟಗಳಿಗೆ ಹಾಗೂ ಮಾದಕ ವ್ಯಸನಗಳನ್ನು ಮೈಗೂಡಿಸಿಕೊಳ್ಳಬಾರದೆಂದು ಬೋಧಿಸಲಾಗುತ್ತದೆ.  ನಂತರ ಯಾವತ್ತೂ ಕೂದಲನ್ನು ಕತ್ತರಿಸಬಾರದು ಹಾಗೂ 'ಕಿರ್ಪಾನ್' ನ್ನು ಸದಾ ಧರಿಸಿರಬೇಕು. ಈ ಕಾರ್ಯಕ್ರಮವನ್ನು ವ್ಯಕ್ತಿಗೆ ಮರು ಜನ್ಮ ನೀಡುವ ಕಾರ್ಯಕ್ರಮ ಎಂದು ನಂಬುತ್ತಾರೆ. ಇದು ಬಹಳಷ್ಟು ಸಂಪ್ರದಾಯಗಳನ್ನು, ವಿಧಿ ವಿಧಾನಗಳನ್ನು ಒಳಗೊಂಡಿದೆ. 
  ಸಿಖ್ಖರು ಕೈಗೆ ಸದಾ ಖಡಗವನ್ನು ಧರಿಸಿರುತ್ತಾರೆ. ಇದಕ್ಕೆ 'ಖರ' ಎನ್ನುತ್ತಾರೆ. ಇದು ಕಬ್ಬಿಣದಿಂದಲೇ ಮಾಡಲ್ಪಟ್ಟಿರಬೇಕು. ಚಿನ್ನ ಅಥವಾ ಬೆಳ್ಳಿಯಿಂದ ಮಾಡಿರಬಾರದು.  ಇದು ಶಕ್ತಿ ಮತ್ತು ರಕ್ಷಣೆಯ ಪ್ರತೀಕ. ಜೊತೆಗೆ ವೃತ್ತಾಕಾರವು ದೇವರಿಗೆ ಆದಿ ಹಾಗೂ ಅಂತ್ಯ ಇಲ್ಲ ಎಂಬುದರ ಸೂಚಕವಾಗಿಯೂ ಗೋಚರಿಸುತ್ತದೆ. 
 ಸಿಖ್ಖರು ಸದಾ ಧರಿಸಬೇಕಾದ ಇನ್ನೊಂದು ವಸ್ತು 'ಖಂಗಾ'. 'ಖಂಗಾ' ಎಂಬುದು ಒಂದು ಚಿಕ್ಕ ಮರದ ಬಾಚಣಿಗೆ. ದಿನದಲ್ಲಿ ಎರಡು ಬಾರಿ ಕೂದಲನ್ನು ಬಾಚಿಕೊಳ್ಳುವಂತೆ ಹೇಳಲಾಗಿದೆ. ಖಂಗಾ ದೇಹದ ಶುಚಿತ್ವಕ್ಕೆ ಮಹತ್ವ ನೀಡಬೇಕೆಂಬುದನ್ನು ಸೂಚಿಸುತ್ತದೆ. ಶುದ್ದವಾದ ದೇಹ ಶುದ್ದವಾದ ಮನಸ್ಸನ್ನು ನಿರ್ಮಿಸುತ್ತದೆ. 
 'ಕಚೇರ' ಎಂಬುವುದು ಹತ್ತಿಯಿಂದ ತಯಾರಿಸಲ್ಪಟ್ಟ ಒಂದು ವಿಧವಾದ ಒಳ ಉಡುಪು. ಯುದ್ಧಕ್ಕೆ ಸದಾ ಸಿದ್ದರಾಗಿರಲು ಈ ವಸ್ತ್ರಗಳನ್ನು ಧರಿಸುವಂತೆ ಆದೇಶಿಸಿದ್ದಾರೆ.  ಆ ಕಾಲದ ಸಾಂಪ್ರದಾಯಿಕ ವಸ್ತ್ರಗಳಿಗೆ  ಹೋಲಿಸಿದರೆ ಕಚೇರಾವನ್ನು ಒಯ್ಯಲು ಹಾಗೂ ತೊಳೆಯಲು ಸುಲಭ. ಜೊತೆಗೆ ಇಲ್ಲಿನ ಅತೀ ತಾಪಮಾನದ ವಾತಾವರಣದಲ್ಲಿ ಇವುಗಳನ್ನು ಬಳಸುವುದೇ ಉತ್ತಮವಾಗಿತ್ತು. ಈ ಎಲ್ಲಾ ಕಾಕರ್(ಪಾಂಚ್ ಕಾಕರ್ ಅಥವಾ Five 'k' s )ಗಳನ್ನು ಮಹಿಳೆ ಹಾಗೂ ಪುರುಷ ಎಂಬ ಬೇಧ- ಭಾವವಿಲ್ಲದೆ ಎಲ್ಲರೂ ಅನುಸರಿಸಬಹುದು. 
                                                                                                               -ಮುಂದುವರಿಯುವುದು

Comments

Post a Comment

thank you...

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....