ಮಾನ್ಸೂನ್ ಟ್ರಿಪ್ ೨೦೧೮ - 3

೩೦/೦೭/೨೦೧೮  (ವೀರರ ನಾಡಿನಲ್ಲಿ)
   ಬೆಳಗ್ಗೆ ೬.೩೦ರ ಸುಮಾರಿಗೆ ಅಮೃತ ಸರ ತಲುಪಿದೆವು. ಇಲ್ಲೂ ನಮ್ಮ ಸ್ವಾಗತಕ್ಕೆ ಟ್ಯಾಕ್ಸಿ ಆಟೋ , ಸೈಕಲ್ ಗಾಡಿಯವರು ಕಾದು ಕುಳಿತಿದ್ದರು. ಬಸ್‍ನಿಂದ ಇಳಿಯುತ್ತಿದ್ದಂತೇ ನಮ್ಮ ಲಗೇಜ್‍ಗಳನ್ನು ಹಿಡಿದುಕೊಳ್ಳಲು ಸಹಾಯಕ್ಕೆ ಮುಂದಾದರು. ಅವರ ಸಹಾಯವನ್ನು ಪ್ರೀತಿಯಿಂದಲೇ ನಿರಾಕರಿಸಿದೆವು. ನಮಗೆ ಅಮೃತ್ ಸರದಲ್ಲಿ ಒಳ್ಳೆಯ ಹೋಟೆಲ್ ಬುಕ್ ಮಾಡಿ ಕೊಡುವುದಾಗಿಯೂ ಎಲ್ಲಾ ಕಡೆ ಸುತ್ತಾಡಿಸುವುದಾಗಿಯೂ ಎಲ್ಲಾ ವ್ಯವಸ್ಥೆಗಳನ್ನು ಮಾದುವುದಾಗಿಯೂ ತಿಳಿಸಿದರು ಆ ನಮ್ಮ ಹಿತೈಷಿಗಳು. ಇಲ್ಲ ನಾವು ಸೈನಿಕ್ ಆರಾಮ್ ಘರ್‌ನಲ್ಲಿ ರೂಮ್ ಬುಕ್ ಮಾಡಿರುವೆವು ಎಂದದಕ್ಕೆ ಅದು ಹಳೇ ಕಟ್ಟದ ಜೊತೆಗೆ ಅಲ್ಲಿನ ವ್ಯವಸ್ಥೆ ಚೆನ್ನಾಗಿಲ್ಲ, ಅದಕ್ಕಿಂತ  ಒಳ್ಳೆಯದು ವ್ಯವಸ್ಥಿತವಾಗಿರುವುದು ನಾವು ತೋರಿಸಿ್ಕೊಡುತ್ತೇವೆ, ನಮ್ಮೊಂದಿಗೆ ಬನ್ನಿ ಕೇವಲ ೧೫೦೦ ರೂ ಕೊಟ್ಟರೆ ಸಾಕು ಎಂದರು. ಇಲ್ಲಾ ಸ್ವಾಮಿ ನಮಗೆ ಬೇಡ ಎಂದದಕ್ಕೆ ಇನ್ನೂ ಕಡಿಮೆಗೆ ಮಾಡಿ ಕೊಡುವುದಾಗಿ ಹೇಳಿದರು. ಈ ಪರಿಯಾದ ಉಪಟಳ ಹೆಚ್ಚಿನ ಎಲ್ಲಾ ಕಡೆಯೂ ನಮಗೆ ಎದುರಾಗಿದೆ, ನಾವು ಒಪ್ಪುವ ವರೆಗೂ ಬಿಡದೆ ರಚ್ಚೆ ಹಿಡಿಯುತ್ತಿದ್ದರು.  ಕೊನೆಗೆ ಸೈನಿಕ್ ಆರಾಮ್ ಘರ್‍ಗೆ ಬಿಡುವುದಾಗಿ ಹೇಳಿದರು, ೧೦೦ ರೂಪಾಯಿ ಕೊಡಬೇಕಾಗಿ ತಿಳಿಸಿದರು. ಒಲಾ ದಲ್ಲಿ ನೋಡಿದಾಗ ೭೦-೮೦ ರೂಪಾಯಿತೋರಿಸುತ್ತಿತ್ತು. ಒಲಾ ಬುಕ್ ಮಾಡಿ ಸೈನಿಕ್ ಆರಾಮ್ ಘರ್ ತಲುಪಿದೆವು. ರೂಮ್ ಸಿಕ್ಕಿತು, ಅಲ್ಲಿ ಫ್ರೆಶ್ ಆಗಿ ಗೋಲ್ಡನ್ ಟೆಂಪಲ್, ಜಲಿಯನ್ ವಾಲಾ ಭಾಗ್ ಹಾಗೂ ವಾಘಾ ಬಾರ್ಡರ್ ನೋಡಲು ಹೊರಟೆವು. ನಿನ್ನೆ ರಾತ್ರಿಯಿಂದಲೇ ಹಸಿವಾಗುತ್ತಿತ್ತು, ಬಸ್‍ನಲ್ಲಿ ಮಾರಿಕೊಂಡು ಬಂದಿದ್ದ ಲೇಯ್ಸ್ ಮತ್ತು ಜ್ಯೂಸ್ ಬಿಟ್ಟರೆ ಬೇರೇನು ತಿಂದಿರಲಿಲ್ಲ. ಹೋಟೆಲ್ ಹುಡುಕುತ್ತಾ ಸಾಗಿದೆವು. ನಮ್ಮನ್ನು ನೋಡಿ ಪ್ರವಾಸಿಗರೆಂದು ತಿಳಿದ ರಿಕ್ಷಾದವರು ನಮ್ಮನ್ನೇ ಹಿಂಬಾಲಿಸಿಕೊಂಡು ಬಂದು, ಅಮೃತ್ ಸರ್ ‌ನ ಎಲ್ಲಾ ಸ್ಥಳಗಳಿಗೂ ಕರೆದುಕೊಂಡು ಹೋಗುವೆವು, ಅಷ್ಟು ಕೊಡಿ ಇಷ್ಟು ಕೊಡಿ ಎಂದು ದಂಬಾಲು ಬಿದ್ದರು. ಕೊನೆಗೆ ಓಲಾದಲ್ಲಿ ಇಷ್ಟಿದೆ ನೀವೇನು ಹೆಚ್ಚು ಹೇಳುತ್ತಿರುವಿರಿ ಎಂದು ಕೇಳಿದಕ್ಕೆ, ಅದೇ ರೇಟಿಗೆ ಒಪ್ಪುವುದಾಗಿ ತಿಳಿಸಿದರು. ನಮಗೆ ಹೋಟೆಲ್ ಸಿಕ್ಕಿದ್ದರೆ ಸಾಕಿತ್ತು, ಕೊನೆಗೊಬ್ಬ ಆಟೋದವ ನಾವು ತಿಂಡಿ ತಿಂದು ಬರುವವರೆಗೂ ಕಾಯುವುದಾಗಿ ಅವನ ಆಟೋದಲ್ಲೇ ಹೋಗಬೇಕೆಂದ. ಸರಿ, ಎಂದು ಅಲ್ಲೇ ಪಕ್ಕದಲ್ಲಿದ್ದ ಹೋಟೆಲೊಂದಕ್ಕೆ ಹೋದೆವು. ಅಲ್ಲಿ ಆಲೂ ಕುಲ್ಚ ಹಾಗೂ ಚೋಳ(ಉತ್ತರ ಭಾರತದಲ್ಲಿ ಕಡ್ಲೆಯಿಂದ ಮಾಡುವ ಒಂದು ಬಗೆಯ ಸಾಂಬಾರ್) ತಿಂದೆವು. ಪಂಜಾಬ್ ಸ್ಪೆಷಲ್ ಲಸ್ಸಿ ಎಂದು ಮೆನುವಿನಲ್ಲಿ ಕಂಡಿತು. ಇದೇನಪ್ಪ ಸ್ಪೆಷಲ್ ಲಸ್ಸಿ? ಎಂದು ಆರ್ಡರ್ ಮಾಡಿದೆವು. ಲಸ್ಸಿ ಬಹಳ ರುಚಿ ಇತ್ತು, ಆದರೆ ಅದರ ಗಾತ್ರ ಮಾತ್ರ ಭಯಾನಕವಾಗಿತ್ತು. ದೊಡ್ಡ ಲೋಟದಲ್ಲಿ ಸುಮಾರು ಒಂದು ಲೀಟರ್‌ನಷ್ಟು ಲಸ್ಸಿ ಇತ್ತು. ಅದನ್ನು ಪೂರ್ತಿ ಕುಡಿಯಲು ಸಾಧ್ಯವಾಗಲೇ ಇಲ್ಲ. ಕೊನೆಗೇ ಸಾಧ್ಯವಾಗುವಷ್ಟು ಕುಡಿದು ಬಂದೆವು. ಆ ಆಟೋದವ ಇನ್ನು ನಮಗಾಗೇ ಕಾಯುತ್ತಿದ್ದ. ಅಲ್ಲೆಲ್ಲಾ ಅಂಗಡಿಗಳು ಬಾಗಿಲು ತೆರೆಯುವುದು ಬಹಳ ತಡವಾಗಿ, ೧೦.೩೦, ೧೧ ಗಂಟೆಗೆ. ಹೆಚ್ಚಿನ ಅಂಗಡಿಗಳು ಬಂದಾಗಿತ್ತು. ಅವನು ನಮ್ಮನ್ನು ಜಲಿಯನ್ ವಾಲಾಭಾಗ್ ಗೆ ಕರೆದುಕೊಂಡು ಹೋದ. 
Partition Museum, Amrit sar

   ಅಲ್ಲೇ ಪಕ್ಕದಲ್ಲಿ 'ಪಾರ್ಟಿಷನ್ ಮ್ಯೂಸಿಯಮ್' ಇದೆ. ಈ ಮ್ಯೂಸಿಯಮ್ ಭಾರತ ಪಾಕಿಸ್ತಾನ ವಿಭಜನೆಯಾದ ಸಂದರ್ಭದಲ್ಲಿ ಜನರು ತಮ್ಮ ಜೊತೆಗೆ ತಂದಂತಹ ವಸ್ತುಗಳು, ವಿಭಜನೆಗೆ ಸಂಬಂಧ ಪಟ್ಟ ಮಾಹಿತಿಗಳು ಆ ಕಾಲದ ಇನ್ನೂ ಅನೇಕ ವಿಚಾರಗಳನ್ನು ಒಳಗೊಂಡಿದೆ. ವಿಭಜನೆಯ ಸಂದರ್ಭ ಅದೆಷ್ಟೋ ಲಕ್ಷ ಜನರು ತಾವು ಹುಟ್ಟಿದ ಊರು, ಆಸ್ತಿ-ಪಾಸ್ತಿ ಸಂಪತ್ತು ಎಲ್ಲವನ್ನೂ ಕಳೆದುಕೊಂಡು ವಲಸೆ ಹೋಗಬೇಕಾಯಿತು. ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಸೇರಿದಂತೆ ಭಾರತದಲ್ಲೂ ಹಲವೆಡೆ ಒತ್ತಾಯ ಪೂರ್ವಕವಾಗಿ ಜನರು ವಲಸೆ ಹೋಗುವಂತೆ ಮಾಡಲಾಯಿತು. ಭಿನ್ನ ಕೋಮುಗಳ ನಡುವೆ ಗಲಭೆ ಉಂಟಾಯಿತು, ರಕ್ತ ಪಾತವೇ ನಡೆಯಿತು. ಇತಿಹಾಸದಲ್ಲಿ ನಾವೆಲ್ಲರೂ ಇದನ್ನು ಓದಿರುವವರೇ. ಆದರೆ ದೇಶ ವಿಭಜನೆಯ ಆ ಭೀಕರತೆಯ ಅನುಭವ ಇಲ್ಲಿನ ಜನಗಳಿಗೆ ಆಗಿದೆ. ಇವುಗಳಲ್ಲಿ ಒಂದಷ್ಟನ್ನು ಹೊರ ಜಗತ್ತಿಗೆ ತೋರಿಸ ಹೊರಟ 'ಪಾರ್ಟಿಷ್ಯನ್ ಮ್ಯೂಸಿಯಮ್'ಗೆ ಆ ದಿನ ರಜೆ ಇದ್ದುದರಿಂದ ಮ್ಯೂಸಿಯಮ್ ನೋಡಲು ಸಾಧ್ಯವಾಗಲಿಲ್ಲ. ಮ್ಯೂಸಿಯಮ್ ನ ಹೊರಗಡೆ ಬಹಳ ಸುಂದರವಾದ ಗಾರ್ಡನ್‍ ಇದೆ. ಅದೇ ರೀತಿ ಅಲ್ಲಿರುವ 'ಭಾಂಗ್ರಾ' ನೃತ್ಯದ ಮೂರ್ತಿಗಳು ಕಲಾಕೃತಿಗಳು ನೋಡುಗರ ಮನ ಸೆಳೆಯುತ್ತವೆ. ಅಲ್ಲೆಲ್ಲಾ ಫೋಟೋ ಕ್ಲಿಕಿಸುತ್ತಾ ಮುಂದೆ ಸಾಗಿದೆವು. 



Statues of  Bhangra dance

ಆ ಜಾಗಕ್ಕೆ ಧರಮ್ ಸಿಂಗ್ ಮಾರ್ಕೆಟ್ ಎಂದು ಹೆಸರು.  ಪಂಜಾಬ್‌ನ್ನು ಕಟ್ಟಿದ, ಪಂಜಾಬನ್ನು ಆಳಿದ ಪಂಜಾಬಿನ ಸಿಂಹ ಎಂದೇ ಕರೆಯಲ್ಪಡುವ ರಾಜಾ ರಂಜಿತ್ ಸಿಂಗ್‍ನ ಪುತ್ಥಳಿಯೂ ಇಲ್ಲಿ ಕಾಣಸಿಗುತ್ತದೆ.  ಆತನ ಕಾಲ ೧೭೮೦ ರಿಂದ ೧೮೩೯. ಈತ ಹುಟ್ಟಿದ್ದು ಪಂಜಾಬಿನ ಗುಜ್ರಾನ್ವಾಲಾ ಎಂಬ ಪ್ರದೇಶದಲ್ಲಿ. ಆ ಪ್ರದೇಶ ಈಗ ಪಾಕಿಸ್ತಾನದಲ್ಲಿದೆ. ಬಾಲ್ಯದಲ್ಲಿ ಸಿಡುಬು ರೋಗಕ್ಕೆ ತುತ್ತಾಗಿ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದ.  ಈತ ಕಟ್ಟಿ ಬೆಳೆಸಿದ 'ಖಲ್ಸಾ' ಸೈನ್ಯ ಬಹಳ ಬಲಿಷ್ಟ ಸೈನ್ಯವಾಗಿದ್ದಿತು. ಸಮರ್ಥವಾಗಿ ಅಫ್ಘಾನಿಸ್ಥಾನವನ್ನು ಹಿಮ್ಮೆಟ್ಟಿಸಿ ಪಂಜಾಬ್‍ನ್ನು ರಕ್ಷಿಸಿದ ದೊರೆ. ಕೊನೆಗೆ ಲಾಹೋರ್‌ನಲ್ಲಿ ಜೂನ್ ೨೭, ೧೮೩೯ ರಂದು ನಿಧನ ಹೊಂದಿದ. ಇಂದಿಗೂ ಆತನ ಸಮಾಧಿ ಲಾಹೋರ್‌ನಲ್ಲಿದೆ. 'ಪಾರ್ಟಿಷನ್ ಮ್ಯೂಸಿಯಂ' ನಿಂದ ಕಾಲ್ನಡಿಗೆಯಂತರದಲ್ಲೇ 'ಜಲಿಯನ್ ವಾಲಾಭಾಗ್' ಇದೆ. 
                                                                                                              - ಮುಂದುವರಿಯುವುದು.....

Comments

Post a Comment

thank you...

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....