ಉಪ್ಪು- ರುಚಿಗೆ ತಕ್ಕಷ್ಟು....


  ಚಿಕ್ಕವಳಿರ್ಬೇಕಾದ್ರೆ ರಾತ್ರಿ ಮಲಗುವ ಹೊತ್ತಿಗೆ ದಿನಾ ಅಮ್ಮನನ್ನು ಪಿಡಿಸುತ್ತಿದೆ. ಅಮ್ಮಾ ಒಂದು ಕಥೆ ಹೇಳು ಅಂತ. ಅವಳಿಗೆ ಒಂದಷ್ಟು ಕಥೆಗಳು ಗೊತ್ತಿತ್ತು. ಅದರಲ್ಲಿ ರಾತ್ರಿ ಮಲಗುವ ಹೊತ್ತಿಗೆ ಹೇಳ್ತಿದ್ದದ್ದು ಕಾಗಕ್ಕ ಗುಬ್ಬಕ್ಕನ್ ಕಥೆ, ಪುಣ್ಯ ಕೋಟಿ ಕಥೆ, ಸುಟ್ಟವು ಮಾಣಿ ಕಥೆ ಹೀಗೆ ಒಂದಷ್ಟು. ಇವುಗಳನ್ನೇ ರೋಟೇಷನ್ ನಲ್ಲಿ ಪ್ರತಿ ದಿನ ಹೇಳ್ತಿದ್ಳು. ಹೇಳಿದ್ದನ್ನೇ ಹೇಳ್ಲಿಕೆ ಅವ್ಳಿಗೆ ಬೇಜಾರ್ ಆಗ್ತಿರ್ಲಿಲ್ಲ, ಪ್ರತಿ ಸಲ ಹೇಳುವಾಗಲೂ ಅಷ್ಟೇ ಸ್ವಾರಸ್ಯ ಕರವಾಗಿ, ರೋಮಾಂಚಕವಾಗಿ ಹೇಳ್ತಾ ಇದ್ಳು. ನಾನೂ ಅಷ್ಟೇ ಕುತೂಹಲದಿಂದ ಕೇಳ್ತಾ ಇದ್ದೆ.  ಇದ್ರಲ್ಲಿ ಕೆಲವು ಕಥೆಗಳನ್ನು ನೀವೂ ಕೇಳಿರಬಹುದು. ಅಮ್ಮಾ ಹೇಳುತ್ತಿದ್ದ ಕಥೆಗಳಲ್ಲಿ ಒಬ್ಬ ಸಾಹುಕಾರ ಹಾಗೂ ಅವನ ಮೂರು ಜನ ಮಗಳಂದಿರ ಕಥೆಯೂ ಒಂದು. ಇದರ ಶೀರ್ಷಿಕೆ ಏನು ಅಂತ ಗೊತ್ತಿಲ್ಲ, ಕಥೆ ಮಾತ್ರ ಇನ್ನೂ ಹಾಗೇ ನೆನಪಿದೆ.
  ಒಂದೂರಲ್ಲಿ ಒಬ್ಬ ಸಾಹುಕಾರ ಇದ್ದನಂತೆ. ಆತನಿಗೆ ಮೂರು ಜನ ಹೆಣ್ಣು ಮಕ್ಕಳು. ಮೂರು ಜನರ ಮೇಲೂ ಆತನಿಗೆ ತುಂಬಾ ಪ್ರೀತಿ. ಆದರೆ ಮಕ್ಕಳಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇರಬಹುದು ಎಂಬ ಕುತೂಹಲ . ಅದಕ್ಕಾಗಿ ಒಂದು ದಿನ ತನ್ನ ಮೂರೂ ಜನ ಹೆಣ್ಣು ಮಕ್ಕಳನ್ನು ಬಳಿ ಕರೆದು ''ಮಕ್ಕಳೇ ನಿಮಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ? ಹೇಳುವಿರಾ?" ಎಂದು ಕೇಳುತ್ತಾನೆ. ಥಟ್ಟನೆ ಹಿರಿ ಮಗಳು "ಅಪ್ಪಾ ನನಗೆ ನಿಮ್ಮ ಮೇಲೆ ಸಕ್ಕರೆಯಷ್ಟು ಪ್ರೀತಿ ಇದೆ" ಎನ್ನುತ್ತಾಳೆ. ಅಪ್ಪನಿಗೆ ಬಹಳ ಸಂತೋಷವಾಗುತ್ತದೆ. ಎರಡನೇ ಮಗಳು ಹೇಳುತ್ತಾಳೆ "ಅಪ್ಪಾ ನನಗೆ ನಿಮ್ಮ ಮೇಲೆ ಬೆಲ್ಲದಷ್ಟು ಪ್ರೀತಿ ಇದೆ" ಎಂದು. ಕೊನೆಗೆ ಮೂರನೆಯವಳಲ್ಲಿ ಕೇಳಿದಾಗ ಪಾಪ ಆಕೆ "ಅಪ್ಪಾ ನನಗೆ ನಿಮ್ಮ ಮೇಲೆ ಉಪ್ಪಿನಷ್ಟು ಪ್ರೀತಿ" ಇದೆ ಎಂದು ಹೇಳುತ್ತಾಳೆ. ಈ ಮಾತು ಕೇಳಿ ಅವನಿಗೆ ಸಿಟ್ಟು ಬಂತು. ''ಉಪ್ಪೆಷ್ಟು ಅಗ್ಗವಾದ ವಸ್ತು. ನಿನ್ನ ಪ್ರೀತಿ ಅಷ್ಟು ಕಡಿಮೆಯೇ? ಛೇ! ನಿನ್ನ ಪ್ರೀತಿ ಉಪ್ಪಿನಷ್ಟೆಯೇ?'' ಎಂದು ಸಿಡುಕುತ್ತಾನೆ. ನಂತರದ ದಿನಗಳಲ್ಲಿ ಅವನಿಗೆ ಕೊನೆಯ ಮಗಳ ಮೇಲೆ ಪ್ರೀತಿ ಕಡಿಮೆಯಾಗುತ್ತಾ ಹೋಗುತ್ತದೆ. ಮೂರು ಮಗಳಂದಿರೂ ಬೆಳೆದು ದೊಡ್ಡವರಾಗುತ್ತಾರೆ. ಮದುವೆ ಮಾಡಿಸುವ ಸಮಯ ಹತ್ತಿರ ಬರುತ್ತದೆ. ದೊಡ್ಡ ಮಗಳಿಗೆ ಸಿರಿವಂತನಾದ ವರನನ್ನೇ ಹುಡುಕಿ ಮದುವೆ ಮಾಡಿಸುತ್ತಾನೆ( ಸಕ್ಕರೆಯಷ್ಟು ಪ್ರೀತಿ). ಎರಡನೇ ಮಗಳಿಗೂ ಅನುಕೂಲಸ್ಥ ವರನನ್ನೇ ಹುಡುಕಿ ಕೊಡುತ್ತಾನೆ(ಬೆಲ್ಲದಷ್ಟು ಪ್ರೀತಿ). ಕೊನೆಯ ಮಗಳಿಗೆ ಒಬ್ಬ ಬಡವನೊಂದಿಗೆ ಮದುವೆ ಮಾಡಿಸುತ್ತಾನೆ. ಮದುವೆಯ ನಂತರ ಮೊದಲ ಎರಡು ಜನ ಮಗಳಂದಿರೂ ಖುಷಿಯಲ್ಲಿ ನೆಮ್ಮದಿಯಲ್ಲಿರುತ್ತಾರೆ, ಆದರೆ ಕೊನೆಯ ಮಗಳು ಕಷ್ಟ ಪಡಬೇಕಾಗುತ್ತದೆ. ಹೊತ್ತಿನ ತುತ್ತಿಗೂ ಆಕೆಗೆ ಕಷ್ಟವಿರುತ್ತದೆ. ಅಪ್ಪ ಉಳಿದಿಬ್ಬರು ಮಗಳಂದಿರ ಮನೆಗೆ ಆಗಾಗ ಹೋಗಿ ಕಷ್ಟ ಸುಖ ವಿಚಾರಿಸಿಕೊಂಡು ಬರುತ್ತಾನೆ, ಆದರೆ ಕೊನೆ ಮಗಳ ಮನೆಗೆ ಹೋಗುವುದೇ ಇಲ್ಲ. ಆಕೆಯಲ್ಲಿಗೆ ಹೋದರೆ ಊಟಕ್ಕೆ ಗತಿಯಿಲ್ಲ ಎಂಬ ತಾತ್ಸಾರ ಭಾವ. ಹೀಗೆ ಕಾಲ ಸಾಗುತ್ತಿರುತ್ತದೆ. ಒಮ್ಮೆ ಕೊನೆ ಮಗಳ ಗಂಡ ಕಾಡಲ್ಲಿ ಕೆಲಸ ಮಾಡುತ್ತಿರುವಾಗ ಆತನಿಗೆ ನಿಧಿ ಸಿಗುತ್ತದೆ. ಇದರಿಂದಾಗಿ ಅವರು ಅಗರ್ಭ ಶ್ರೀಮಂತರಾಗುತ್ತಾರೆ. ಕೊನೆಯ ಮಗಳ ಕಷ್ಟ ದೂರವಾಗುತ್ತದೆ. ಆಕೆ ಗರ್ಭಿಣಿಯಾಗುತ್ತಾಳೆ, ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಮಕ್ಕಳ ನಾಮಕರಣಕ್ಕೆ ತಂದೆಯನ್ನು ಆಹ್ವಾನಿಸುತ್ತಾಳೆ. ಮಗಳ ಮನೆಗೆ ಹೋಗಲು ತಂದೆಗೆ ಸ್ವಲ್ಪ ಮುಜುಗರವಾದರೂ ತೋರಿಸಿಕೊಳ್ಳದೆ ಲಗು ಬಗೆಯಿಂದಲೇ ಹೋಗುತ್ತಾನೆ. ಮಗಳು ಬಹಳ ಸಡಗರದಿಂದಲೇ ಓಡಾಡುತ್ತಾ ಬಂದ ಶ್ರೀಮಂತರನ್ನೆಲ್ಲಾ ಮಾತನಾಡಿಸುತ್ತಾ ಇರುತ್ತಾಳೆ. ತನ್ನ ತಂದೆ ಬಂದುದು ಕಾಣುತ್ತದೆ. ತನ್ನ ತಂದೆಗೆ ಪ್ರತ್ಯೇಕವಾಗಿ ವಿಶೇಷ ಅಡುಗೆ ಮಾಡಿಸುತ್ತಾಳೆ ಹಾಗೂ ಅಡುಗೆಯವರಿಗೆ ತಿಳಿಸುತ್ತಾಳೆ. ಯಾವುದೇ ಅಡುಗೆಗೆ ಉಪ್ಪು ಹಾಕಬೇಡಿ ಎಂದು. ಊಟದ ಸಮಯವಾಗುತ್ತದೆ. ಬಗೆ ಬಗೆ ಭಕ್ಷ್ಯ ಭೋಜನಗಳನ್ನು ತಯಾರು ಮಾಡಿರುತ್ತಾರೆ. ಎಲ್ಲರೂ ಊಟಕ್ಕೆ ಕುಳಿತುಕೊಳ್ಳುತ್ತಾರೆ. ತಂದೆಯನ್ನು ವಿಶೇಷವಾಗಿ ಸತ್ಕರಿಸಿ ಪ್ರತ್ಯೇಕವಾಗಿ ಊಟಕ್ಕೆ ಕುಳ್ಳಿರಿಸುತ್ತಾಳೆ. ಆದರೆ ಆತನಿಗೆ ಯಾವ ಭೋಜ್ಯವೂ ರುಚಿಸುವುದಿಲ್ಲ. ಮಗಳಲ್ಲಿ ಕೇಳುತ್ತಾನೆ. ''ಇದೇನಿದು? ಯಾವ ತಿನಿಸಿಗೂ ಉಪ್ಪು ಹಾಕಲಿಲ್ಲ, ಇದನ್ನು ಹೇಗೆ ಉಣ್ಣಲಿ? ಎಲ್ಲವೂ ಬರೇ ಸಪ್ಪೆ'' ಎಂದು. ಆಗ ಮಗಳು ಹೇಳುತ್ತಾಳೆ. ಈಗಲಾದರೂ ಗೊತ್ತಾಯಿತೇ ಉಪ್ಪಿನ ಮಹತ್ವ? ನಿಮ್ಮ ಮೇಲೆ ನನಗೆ ಉಪ್ಪಿನಷ್ಟು ಪ್ರೀತಿ ಎಂದದ್ದಕ್ಕಾಗಿ ನನ್ನನ್ನು ಕಡೆಗಣಿಸುತ್ತಾ ಬಂದಿರಿ, ಉಪ್ಪನ್ನು ಅಗ್ಗದ ವಸ್ತು, ಕೀಳು ಎಂದೆಲ್ಲಾ ಹೇಳಿದಿರಿ. ನಾನು ಪಡಬಾರದ ಪಾಡು ಪಡುವಂತೆ ಮಾಡಿದಿರಿ, ಎಷ್ಟೇ ರುಚಿಯಾದ ಅಡುಗೆ ಮಾಡಿದರೂ ಉಪ್ಪಿಲ್ಲದೆ ಹೋದರೆ ಅದು ರುಚಿಸಲಾರದು, ಹಾಗೇ ಉಪ್ಪು ಎಂಬುದು ಅಗ್ಗವಾಗಿ ದೊರಕಿದರೂ ಅದರ ಮಹತ್ವ ಏನೆಂದು ತಿಳಿಯಿತೇ?'' ಎಲ್ಲ ಜನರ ಮಧ್ಯೆ ಆತನಿಗೆ ಅಪಮಾನವಾಗುತ್ತದೆ ಜೊತೆಗೆ ತನ್ನ ತಪ್ಪಿನ ಅರಿವಾಗಿ ಮಗಳಲ್ಲಿ ಕ್ಷಮೆ ಕೇಳುತ್ತಾನೆ. ನಂತರ ತನ್ನ ಉಳಿದ ಮಗಳಂದಿರಂತೆ ಈಕೆಯನ್ನೂ ಪ್ರೀತಿಸುತ್ತಾನೆ. 
ಇಲ್ಲಿಗೆ ಕಥೆ ಮುಗಿಯಿತು. 
 ಸಾರಿಗೋ ಸಾಂಬಾರಿಗೋ ಸ್ವಲ್ಪ ಉಪ್ಪು ಕಡಿಮೆಯಾದರೂ ನನಗೆ ಊಟ ರುಚಿಸುವುದಿಲ್ಲ. ಮಜ್ಜಿಗೆಯ ಜೊತೆ ಉಪ್ಪಿಲ್ಲದೆ ನಾನು ಊಟ ಮಾಡಿದ್ದೇ ಇಲ್ಲ. ಪ್ರತಿ ಸಲ ಉಪ್ಪು ಬಡಿಸಿಕೊಳ್ಳುವಾಗಲೂ ಪಕ್ಕದಲ್ಲಿದ್ದ ಯಾರಾದರೂ ಹೇಳೇ ಹೇಳುತ್ತಾರೆ. ಸಾಕು ಮಾರಾಯಿತಿ, ಎಷ್ಟು ಉಪ್ಪು ತಿಂತಿ? ಇಷ್ಟೊಂದು ಉಪ್ಪು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಪಿ ಹೆಚ್ಚಾಗುತ್ತದೆ ಎಂದೆಲ್ಲಾ ಹೇಳುವವರಿದ್ದಾರೆ. ಆಗೆಲ್ಲಾ ನನಗೆ ಅಮ್ಮ ಹೇಳಿದ ಈ ಉಪ್ಪಿನ ಕಥೆ ನೆನಪಾಗುವುದು. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಅಂತ ನುಡಿಗಟ್ಟು ಬೇರೆ ಇದೆ, ಅದನ್ನೇ ಉಪೇಂದ್ರ ಅವ್ರೂ ಕೂಡಾ ಹೇಳಿದ್ದಾರೆ. ಉಪ್ಪನ್ನು ಬಯ್ಯುವ ಜನಗಳನ್ನು ಕಂಡ್ರೆ ನನಗೇಕೋ ಅಸಮಧಾನ.
    ಉಪ್ಪಿನ ಜೊತೆ ನನಗಂತೂ ಬಾಲ್ಯದಿಂದಲೂ ಸ್ನೇಹ . ನಮ್ಮನೆ ಹಟ್ಟಿಯಲ್ಲಿ ಹತ್ತು ಹನ್ನೆರಡು ಹಸುಗಳಿದ್ದವು. ಅವುಗಳಿಗೆ ದಿನಾಲೂ ಅಕ್ಕಚ್ಚು ಹಾಗೂ ತೆಳಿ ಕೊಡ್ತಿದ್ರು. ಅಕ್ಕಚ್ಚು ಅಂದ್ರೆ ಗೊತ್ತಿರ್ಬೋದು, ಅಕ್ಕಿ ತೊಳೆದ ನೀರು, ತೆಳಿ ಅಂದ್ರೆ ಅನ್ನ ಮಾಡಿದ ನಂತರ ಸಿಗುವ ನೀರು.  ಈ ನೀರಿಗೆ ಒಂದೊಂದು ಮುಷ್ಟಿ ಉಪ್ಪು ಹಾಕಿ ದನಗಳಿಗೆ ಕೊಡುವುದು ನಮ್ಮ ಕಡೆ ರೂಢಿ. ೫೦ ಕೆ. ಜಿ ಗೋಣಿಯಲ್ಲಿ ಕಲ್ಲುಪ್ಪು ತಂದು ಕೊಟ್ಟಿಗೆಯಲ್ಲಿದ್ದ ಡ್ರಮ್ಮಿಗೆ ತುಂಬಿಸಿಡುತ್ತಿದ್ದರು. ಅಡುಗೆಗೂ ಇದೇ ಉಪ್ಪು ಬಳಸುತ್ತಿದ್ದರು. ಹುಡಿ ಉಪ್ಪು ಬೇಕಾದರೆ ಕಲ್ಲುಪ್ಪನ್ನೇ ಅರೆಯುವ ಕಲ್ಲಿಗೆ ಹಾಕಿ ಹುಡಿ ಮಾಡಿ ಬಳಸುತ್ತಿದ್ರು. ಈ ಉಪ್ಪು ಒಂದೆರಡು ಮೂರು ತಿಂಗಳಿಗೆ ಸಾಕಾಗುತ್ತಿತ್ತು. ಈ ಉಪ್ಪಿನ ರಾಶಿಯನ್ನು ನೋಡುವುದೇ ಒಂದು ಸಂಭ್ರಮ. ನಾವೋ ಶಾಲೆಗೆ ಹೋಗುವ ಸಮಯದಲ್ಲಿ ಶನಿವಾರ ಆದಿತ್ಯವಾರ ಮನೆಯಲ್ಲಿದ್ರೆ ಗುಡ್ಡೆ ಗುಡ್ಡೆ ಸುತ್ತಿ ಕೇಪುಳೆ ಹಣ್ಣು ಅಬ್ಳುಕ ಹಣ್ಣು, ಗಡಿಯಾರದ ಹಣ್ಣು ಗುಡ್ಡೆಯಲ್ಲೆ ತಿಂದು , ಹುಳಿ ಸೊಪ್ಪು(ಮುಖ್ಯವಾಗಿ ಪುನರ್ಪುಳಿ ಸೊಪ್ಪು) ಅಥವಾ ಇನ್ಯಾವುದಾದರೂ ಹುಳಿ ವಸ್ತು( ಕೆಲವು ಸಮಯದಲ್ಲಿ ಅಂಬಟೆ ಹಾಗೂ ಮಾವಿನ ಮಿದಿ, ಮಾವು) ಮನೆಗೆ ತಂದು ಆ ಡ್ರಮ್ಮಿನಿಂದ ಕಲ್ಲುಪ್ಪು ತೆಕ್ಕೊಂಡು ತಿನ್ನುತ್ತಿದ್ದೆವು. ಕೆಲವೊಮ್ಮೆ ಯಾವುದೂ ಸಿಗದೇ ಹೋದರೆ ಕಾಲಿ ಉಪ್ಪನ್ನೇ ತಿಂದದ್ದುಂಟು. ಅದೇನೋ ಒಂದು ರುಚಿ. ನಮ್ಮಷ್ಟಕ್ಕೆ ಮನೆ ಆಟ, ಅಂಗಡಿ ಆಟ ಆಡುವಾಗಲೂ ಈ ಉಪ್ಪನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿದ್ದೆವು. ಹೀಗೆ ಆಟ ಆಡಿ ಆಡಿ ಸುಸ್ತಾದಾಗ ಮನೆಗೆ ಬಂದು ಮಜ್ಜಿಗೆ ನೀರು ಕುಡಿಯುವುದು. ಅದಂತೂ ಇನ್ನೆಲ್ಲಿದ ಖುಷಿ. ಮಜ್ಜಿಗೆ ತುಂಬಾ ಹುಳಿ ಇದ್ದರಂತು.... ವ್ಹಾ....!!! ರುಚಿಯೇ ಬೇರೆ ಅದಕ್ಕೆ ಸಾಕಷ್ಟು ನೀರು ಸೇರಿಸಿ ಇದೇ ಡ್ರಮ್ಮಿನಿಂದ ಉಪ್ಪು ತಂದು ಹಾಕಿ, ತೋಟದಲ್ಲಿದ್ದ ಗಾಂಧಾರಿ ಮೆಣಸು ತಂದು ಗುದ್ದಿ ಹಾಕಿ ಕುಡಿದರೆ ಅದರ ರುಚಿಯಂತೂ ಅದ್ಭುತ. ಉಪ್ಪು ಹಾಕದೇ ಹೋದರೆ ಅದೂ ರುಚಿ ಇಲ್ಲ. ಸಂಜೆ ಹೊತ್ತು ಅಂಗಳದಲ್ಲಿ ಬೆಳೆದ ಚಕ್ಕರ್ಪೆ(ಸೌತೆ ಕಾಯಿ ಮಿಡಿ) ಜೊತೆಗೆ ಉಪ್ಪು ಒಂದಿಷ್ಟು, ತಿನ್ತಾ ಇದ್ರೆ ಆ ದಿನದ ಆಯಾಸ ಮಾಯ.
   ಶಾಲೆಯಲ್ಲಿ ಸಮಾಜ ಪಾಠ ಮಾಡುವಾಗ ಗಿರಿಜಾ ಟೀಚರ್ ಹೇಳ್ತಿದ್ರು, ಗಾಂಧೀಜಿ ದಂಡಿಯಲ್ಲಿ ದೇಶವಾಸಿಗಳನ್ನು ಸೇರಿಸಿಕೊಂಡು ಉಪ್ಪಿನ ಸತ್ಯಾಗ್ರಹ ಮಾಡಿದರು ಅಂತ. ಉಪ್ಪಿನ ಸತ್ಯಾಗ್ರಹ ಅಂತಂದ್ರೆ, ಬ್ರಿಟಿಷರನ್ನು ಅವಲಂಬಿಸದೆ ನಾವೇ ಉಪ್ಪು ತಯಾರಿಸಿಕೊಂಡದ್ದು ಮತ್ತು ಅವರ ಉಪ್ಪನ್ನು ಬಹಿಷ್ಕರಿದ್ದು ಎಂದೆಲ್ಲಾ ಹೇಳುವಾಗ, ಉಪ್ಪು ಯಾವ ರೀತಿ ತಯಾರಿಸ್ತಾರಪ್ಪ? ಅನ್ನೋ ಕುತೂಹಲ. ಈಗ ಯೂ ಟ್ಯೂಬ್‍ನಲ್ಲಿಬ್ ಸರ್ಚ್ ಮಾಡಿದ್ರೆ ನೋಡ್ಬೋದು, ಆವಾಗ ಯಾವ ಟ್ಯೂಬ್‍ನಲ್ಲಿ ನೋಡಿದ್ರೂ ಕಾಣ್ತಿರ್ಲಿಲ್ಲ. 
   (ನಾನಂತೂ ಪಕ್ಕಾ ಲೋಕಲ್ ಗರ್ಲ್....) ಓದಿದ್ದು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ. ನಮ್ಮ ಶಾಲೆಗೆ ಆಗಾಗ ಸರಕಾರದ ವತಿಯಿಂದ ನರ್ಸ್ ಬರ್ತಾ ಇದ್ರು. ಒಮ್ಮೊಮ್ಮೆ ಇಂಜೆಕ್ಷನ್ ಕೊಡ್ತಿದ್ರು, ಇನ್ನೊಮ್ಮೊಮ್ಮೊ ಕಬ್ಬಿಣದ ಅಂಶದ ಮಾತ್ರೆ ಕೊಟ್ಟು ಹೋಗ್ತಿದ್ರು,(ಕಬ್ಬಿಣಾಂಶದ ಮಾತ್ರೆಯ ಜೊತೆಗೆ ಇನ್ನೊಂದು ಮಾತ್ರೆ ಕೊಡ್ತಿದ್ರು, ಅದ್ರೊಳಗೆ ಮೀನಿನೆಣ್ಣೆ ಇದೆ ಅಂತೆಲ್ಲಾ ತರಗತಿಯಲ್ಲಿ ಸುದ್ದಿಯಾಗಿತ್ತು. ಸಸ್ಯಾಹಾರಿಗಳಾದ ನಮಗೆ ಇದೊಂದು ದೊಡ್ಡ ವಿಷಯವೇನೋ ಅಂತ ಅನ್ನಿಸುತ್ತಿತ್ತು, ತಿಂದರೆ ಮಹಾ ಅಪರಾಧ ಎಂದು ಭಾವಿಸಿ ಸಂಜೆ ಮನೆಗೆ ಹೋಗುವಾಗ ದಾರಿಯಲ್ಲಿ ಸಿಗುತ್ತಿದ್ದ ಸೇತುವೆಯ ಮೇಲೆ ನಿಂತು ಹೊಳೆಗೆ ಎಸೆಯುತ್ತಿದ್ದೆವು) ಇನ್ನು ಕೆಲವೊಮ್ಮೆ ನಮ್ಮ ಎತ್ತರ, ತೂಕ ಎಲ್ಲ ನೋಡಿ ಬರ್ಕೊಂಡು ಹೋಗ್ತಿದ್ರು. ಇನ್ನೊಮ್ಮೊಮ್ಮೆ ಪೇಸ್ಟ್ ಮತ್ತೆ ಬ್ರಷ ಕೊಡ್ತಾ ಇದ್ರು. ಹೀಗೆ, ಒಂದು ಸಲ ಬಂದವರು ''ನೋಡಿ ಮಕ್ಳೆ ನಾಳೆ ಬರುವಾಗ ಎಲ್ಲರೂ ನಿಮ್ಮ ಮನೆಗೆ ತರುವ ಉಪ್ಪನ್ನು ಸ್ವಲ್ಪ ಶಾಲೆಗೆ ತರ್ಬೇಕು, ಸ್ವಲ್ಪ ಅಂದ್ರೆ ಸ್ವಲ್ಪ, ಸ್ವಲ್ಪವೇ ಸ್ವಲ್ಪ ತನ್ನಿ ಸಾಕು. ಅದರಲ್ಲಿ ಅಯೋಡಿನ್ ಉಂಟಾ ಅಂತ ಟೆಸ್ಟ್ ಮಾಡ್ಲಿಕ್ಕಿದೆ. ಅಯೋಡಿನ್ ಇಲ್ಲದ ಉಪ್ಪನ್ನು ಉಪಯೋಗಿಸಿದ್ರೆ ಗಳಗಂಡ ರೋಗ ಬರ್ತದೆ ಅಂತೆಲ್ಲಾ ಹೇಳಿದ್ರು. ಆವಾಗ ನಮಗೂ ಭಯ. ಮರುದಿನ ಎಲ್ಲರೂ ಮನೆಯಿಂದ ಉಪ್ಪುಕೊಂಡು ಹೋದೆವು. ಕೆಲವರಿಗೆ ತರ್ಲಿಕ್ಕೆ ಮರ್ತು ಹೋಗಿತ್ತು, ಮಾಷ್ಟ್ರು ಬಯ್ಯುವುದು ಬೇಡ ಅಂತ ತಂದವರಿಂದ ದಾನವಾಗಿ ಪಡೆದರು. ಉಪ್ಪಿನ ಪರೀಕ್ಷೆ ಆಗ್ತಾ ಇತ್ತು. ನರ್ಸ್ ಹತ್ರ ಒಂದು ಸೊಲ್ಯುಷನ್ ಇತ್ತು. ಅದನ್ನು ನಾವು ತಂದ ಉಪ್ಪಿಗೆ ಹಾಕ್ತಾ ಇದ್ರು. ಉಪ್ಪು ನೀಲಿ ಆದ್ರೆ ಐಯೋಡಿನ್ ಇದೆ, ಉಪ್ಪು ಬದಲಾಗದೇ ಹಾಗೇ ಇದ್ರೆ ಐಯೋಡಿನ್ ಇಲ್ಲ, ಆ ಉಪ್ಪು ಮನೆಗೆ ತರ್ಬಾರ್ದು, ಅದನ್ನು ಉಪಯೋಗಿಸಿದ್ರೆ ಗಳಗಂಡ ಬರ್ತದೆ ಅಂತ ಹೇಳಿದ್ರು. ನಮ್ಮ ಉಪ್ಪು ಪಾಸೋ ಫೈಲೋ ನೆನಪಿಲ್ಲ. ನಮ್ಮ ಮನೆಗಂತು ನಂತರವೂ ಆ ಉಪ್ಪನ್ನೆ ೫೦ಕೆ ಜಿ ತರಿಸ್ತಾ ಇದ್ರು. 
  ಮಾವಿನ ಸೀಸನ್‍ನಲ್ಲಂತೂ ಉಪ್ಪಿಗೆ ಎಲ್ಲಿಲ್ಲದ ಮನ್ನಣೆ. ಎಲ್ಲಾ ಮಕ್ಕಳ ಕಿಸೆಯಲ್ಲೂ ಮಾವಿನ ಮಿಡಿ ಸಾಮಾನ್ಯ. ಕೆಲವರ ಮನೆಯಲ್ಲಿ ಒಳ್ಳೊಳ್ಳೆ ಮಾವಿನ ಮಿಡಿ ಇರುತ್ತಿತ್ತು. ಅವ್ರೆಲ್ಲಾ ಮಾವಿನ ಮಿಡಿ ಶಾಲೆಗೆ ತರ್ತಾ ಇದ್ರು. ಕ್ಲಾಸ್‍ ಆಗ್ತಾ ಇರುವಾಗ ಇದನೆಲ್ಲಾ ತಿನ್ತಾ ಇರ್ಲಿಲ್ಲ. ಕೊನೆಯ ಆಟದ ಪಿರಿಡ್ ನಲ್ಲಿ ನರ್ಸ್‍ನ ಆರೋಗ್ಯ ಕೇಂದ್ರಕ್ಕೆ ಹೋಗ್ತಾ ಇದ್ದೆವು. ಅಲ್ಲಿ ನರ್ಸ್ ವಾರದಲ್ಲಿ ಎರಡು ದಿನ ಇರುತ್ತಿದ್ದರು. ಉಳಿದಂತೆ ಅಲ್ಲಿ ಯಾರೂ ಇರ್ತಿರ್ಲಿಲ್ಲ. ನಾಲ್ಕು ಜನ ಮಾವಿನ ಮಿಡಿ ತಂದ್ರೆ, ಒಂದೆರಡು ಜನ ಉಪ್ಪು ತರ್ತಾ ಇದ್ರು. ನಾನಂತು ಕಾಗದದಲ್ಲಿ ಕಟ್ಟಿ ಅದೇ ಕಲ್ಲುಪ್ಪನ್ನು ತೆಕ್ಕೊಂಡ್ ಹೋಗ್ತಿದ್ದೆ. ಅಲ್ಲಿ ಆರೋಗ್ಯ ಕೇಂದ್ರದ ಗೋಡೆಯ ಮೇಲೆಲ್ಲಾ ಮಾವಿನ ಮಿಡಿಯ ಸೊನೆಯನ್ನು ಗೀಚಿ ಉಪ್ಪು ಮುಟ್ಟಿಸಿ ಮಾವಿನ ಮಿಡಿ ತಿನ್ನುವುದೇ ಹಬ್ಬ. ಆಟದ ಪಿರಿಡ್‍ನಲ್ಲಿ ನಮಗಿದೇ ಆಟ. ಒಂದು ಸಲ ಮಾತ್ರ ನರ್ಸ್ ಕೈಗೆ ಸಿಕ್ಕಿ ಬಿದ್ದೆವು. ಗೋಡೆಯ ಮೇಲೆಲ್ಲಾ ಸೊನೆ ಮೆತ್ತಿ ಉಪ್ಪು ಮುಟ್ಟಿಸಿ ಮಿಡಿ ತಿನ್ನುವಾಗ ಆಕೆಯ ಪ್ರವೇಶವಾಯಿತು. ಅಲ್ಲಿಂದ ಸೀದಾ ಓಡಿ ಹೋದೆವು. ಉಪ್ಪಿನ ಪೊಟ್ಟಣ ಅಲ್ಲೇ ಬಾಕಿ. ಇನ್ನು ಮಾವಿನ ಹಣ್ಣಿನ ಸಮಯದಲ್ಲಿ ಬಾಳೆಲೆಯ ಒಂದು ಬದಿಯಲ್ಲಿ ಉಪ್ಪಿಗೆ ಸ್ಥಾನ. ಮಾವಿನ ಹಣ್ಣು, ಉಪ್ಪು ಹಾಗೂ ಹಸಿಮೆಣಸು ಅಲ್ಲೇ ಮಿಕ್ಸ್ ಆಗಿ ಬಾಳೆಲೆಯಲ್ಲೇ ಮಾವಿನ ಹಣ್ಣಿನ ಹಸಿ ಗೊಜ್ಜಿ( ತುಳುವಿನಲ್ಲಿ ಚಂಡ್ರುಪುಳಿ ) ತಯಾರಾಗುತ್ತಿತ್ತು. ಮಾವಿನ ಉಪ್ಪಿನ ಕಾಯಿ ಹಾಕುವ ಸಂದರ್ಭದಲ್ಲಂತೂ ಉಪ್ಪು ಕೆ.ಜಿ ಗಟ್ಟಲೆ ಬೇಕು. ನಮ್ಮಲ್ಲಿ, ತುಳುನಾಡಲ್ಲಿ ಊಟಕ್ಕೆ ಯಾವುದೇ ಬಗೆ ಇಲ್ಲದಿದ್ರೂ ರುಚಿಕರವಾದ ಊಟ ಮಾಡ್ಬೋದು, ಹೇಗೆ ಗೊತ್ತಾ? ಬಿಸಿ ಬಿಸಿಯಾದ ಕುಚ್ಚಲು ಅಕ್ಕಿ ಗಂಜಿ ಮತ್ತೆ ಉಪ್ಪು, ಬೆಳಗಿನ ತಿಂಡಿ ಮಾಡದಿದ್ರೂ ಆರೋಗ್ಯಕರವಾದ ಆಹಾರ ತಿನ್ಬೋದು. ಹೇಗೆ ಗೊತ್ತಾ? ಮೊದಲಿನ ದಿನದ ಕುಚ್ಚಲು ಅಕ್ಕಿ ಅನ್ನ(ತಂಗಳನ್ನ), ಮೊಸರು ಹಾಗೂ ಉಪ್ಪು.
 ಖಾಲಿ ಬಾಳೆ ಎಲೆಗೆ ಅನ್ನ ಬಳುಹಿಸಬಾರದು, ಅದು ತಿಥಿಗೆ ಮಾತ್ರ. ಆದ್ದರಿಂದ ಊಟಕ್ಕೆ ಬಳುಹಿಸುವಾಗ ಮೊದಲು ಬಾಳೆಲೆಯ ಎಡ ತುದಿಯಲ್ಲಿ ಯಾವಾಗಲೂ ಉಪ್ಪು ಬಳಿಸಿರಬೇಕು ಎಂಬುದು ನಮ್ಮ ಮನೆಯಲ್ಲಿ ಅನುಸರಿಸುತ್ತಿದ್ದ ಶಾಸ್ತ್ರ. ಊಟದ ನಂತರ ಹಾಕಿಕೊಂಡ ಉಪ್ಪು ಉಳಿದರೆ ಅದನ್ನು ಹಾಗೆಯೆ ಬಿಡಬಾರದು, ನೀರು ಹಾಕಿ ಕರಗಿಸಿ ಬಿಡಬೇಕು ಎಂಬುವುದು ಉಪ್ಪಿನ ಬಗೆಗಿರುವ ನನಗೆ ತಿಳಿದ ಇನ್ನೊಂದು ಶಾಸ್ತ್ರ. ಯಾಕ್ ಹಾಗೆ ಅಂತ ಕೇಳ್ಬೇಡಿ, ನಾನೂ ಕೇಳಿದ್ದೆ, ಉತ್ತರ ಸಿಗ್ಲಿಲ್ಲ. 
  ಹೀಗೆ ಉಪ್ಪಿನ ಬಗ್ಗೆ ಬರೆಯುತ್ತಾ ಹೋದರೆ ಸಾಕಷ್ಟಿದೆ. ವೈಜ್ಞಾನಿಕವಾಗಿ ಉಪ್ಪಿನ ಬಗೆಗೆ ಹಲವು ವಿಚಾರಗಳನ್ನು ಮಂಡಿಸಬಹುದು. ಉಪ್ಪು ಅನಾದಿ ಕಾಲದಿಂದಲೂ ಮಾನವನ ಒಡನಾಡಿ. "ಉಪ್ಪಿಷ್ಟು ಹುಳಿಯಿಷ್ಟು ಖಾರ ಸಿಹಿ ಇಷ್ಟಿಷ್ಟು ಒಪ್ಪಿರ್ದೊಡೆ ಭೋಜ್ಯವಂತು ಜೀವಿತಮಂ" ಅಂತ ಡಿ.ವಿ.ಜಿ ಹೇಳಿದ್ದಾರೆ. ಉಪ್ಪಿಲ್ಲದ ಅಡುಗೆ ಯಾರೂ ಒಪ್ಪುವುದಿಲ್ಲ. ಉಪ್ಪಿನ ಹೊರತಾಗಿ ಬದುಕು ಕಷ್ಟ. ನಮ್ಮ ಮನೆಯಲ್ಲಿ ಮಾತ್ರ ಈಗ ಉಪ್ಪಿನ ಬಳಕೆ ಕಡಿಮೆಯಾಗಿದೆಯೋ, ಉಪ್ಪಿನ ಡ್ರಮ್ಮು ಹರಿದು ಹೋಗಿದೆಯೋ, ಹಸುಗಳಿಗೆ ಬಿಪಿ ಉಂಟೋ ಗೊತ್ತಿಲ್ಲ. ೫೦ ಕೆ.ಜಿಯ ಉಪ್ಪಿನ ಚೀಲ ಮನೆಗೆ ಬರುವುದು ನಿಂತು ಹೋಗಿದೆ. ಅಯೋಡಿನ್ ಯುಕ್ತ ಶುದ್ದ ಉಪ್ಪು ಪ್ಯಾಕೇಟ್‍ನಲ್ಲಿ ಬರ್ತಾ ಇದೆ, ಉಪ್ಪು ಹುಡಿ ಮಾಡುವ ಕಲ್ಲು ಮೂಲೆಗೊಂದಿದೆ, ಹುಡಿಯುಪ್ಪೇ ನೇರವಾಗಿ ದೊರಕುತ್ತಿದೆ. ಅದಕ್ಕಾಗಿ ದುಃಖ ಇಲ್ಲ. ಸಂಭ್ರಮ ಮೊದಲೇ ಇಲ್ಲ. 
ನಮಸ್ಕಾರ.....


Comments

  1. ಬರವಣಿಗೆ ಚೆನ್ನಾಗಿದೆ...ಹೀಗೇ ಮುಂದುವರೆಯಲಿ😀

    ReplyDelete

Post a Comment

thank you...

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....