ಒಮ್ಮೊಮ್ಮೆ ಹೀಗೂ ಆಗುವುದು....

     
  ವಯಸ್ಸು ಎಪ್ಪತ್ತಾಗ್ಲಿಲ್ಲ, ಆದ್ರೂ ಇಪ್ಪತ್ತರ ಹುಮ್ಮಸ್ಸಿಲ್ಲ. ಬದುಕಲ್ಲಿ ಇಂಟರೆಸ್ಟೇ ಇಲ್ಲ. ಬದುಕಬೇಕು ಅಂತ ಅನ್ನಿಸ್ತಾನೇ ಇಲ್ಲ. ಹಾಗಂತ ಸಾಯ್ಲಿಕ್ಕೂ ಬೋರು. ‘ಬೇಕು’ ಅನ್ನಿಸುವುದಿಲ್ಲ, ಬೇಡಾಂತಲೂ ಅನ್ನಿಸುವುದಿಲ್ಲ. ಚೈತನ್ಯ ಇಲ್ಲ. ಶಕ್ತಿ ಇದೆಯಾ ಅಂತ  ಪರೀಕ್ಷಿಸ್ಲಿಕ್ಕೆ ಮನಸ್ಸಿಲ್ಲ. ನಿರ್ಲಿಪ್ತ ಭಾವ. ಬ್ರೇಕ್ ಇಲ್ಲದ, ಚೈನ್ ಕಟ್ಟಾದ, ಟಯರ್ ಪಂಕ್ಚರ್ ಆದ, ಸೀಟು ಹರಿದ, ಕ್ಯಾರಿಯರ್ ಮುರಿದ, ಪೆಡಲ್ ಲೂಸ್ ಆದ, ಎಣ್ಣೆ ನೀರು ಕಾಣದೆ ಧೂಳು ಹಿಡಿದು ಮೂಲೆಯಲ್ಲಿ ಬಿದ್ದ ಹಳೇ ಗುಜುರಿ ಹರ್ಕ್ಯುಲೆಸ್ ಸೈಕಲ್ ನಂತಾಗಿದೆ ಜೀವನ. ಏಕೋ ಏನೋ, ನಗ್ಲಿಕ್ಕಿಷ್ಟ ಇಲ್ಲ, ನಗಿಸ್ಲಿಕ್ಕೆ ಇಷ್ಟ ಇಲ್ಲ, ಅಳ್ಲಿಕ್ಕೆ ಇಷ್ಟ ಇಲ್ಲ, ಅಳಿಸ್ಲಿಕ್ಕೂ ಇಷ್ಟ ಇಲ್ಲ. ಹಾಡ್ಲಿಕ್ಕೆ ಇಷ್ಟ ಇಲ್ಲ, ಕುಣಿಲಿಕ್ಕಿಷ್ಟ ಇಲ್ಲ, ಆಡ್ಲಿಕ್ಕೆ , ಓದ್ಲಿಕ್ಕೆ ಬರೀಲಿಕ್ಕೆ ಯಾವುದಕ್ಕೂ ಮನಸ್ಸೇ ಇಲ್ಲ. ಮೂಗಿನ ಮೇಲೆ ಜೋರಾಗಿ ಒಂದೇಟು ಕೊಟ್ರೂ ಪಕ್ಕಾ ಕನ್ನಡಿಗರಾದ ಕಣ್ಣುಗಳು ಒಂದು ಬಿಂದು ನೀರನ್ನೂ ಬಿಟ್ಟುಕೊಡುವುದಿಲ್ಲ. ದ್ವೇಷ, ಅಸೂಯೆ, ದುಃಖ ಯಾವುದೂ ಸೃಷ್ಟಿ ಆಗ್ತಾನೇ ಇಲ್ಲ. ಶೃಂಗಾರ, ಹಾಸ್ಯ, ಕರುಣ, ಭೀಭತ್ಸ್ಯ ಮೊದಲಾದವು ಒಣಗಿ ಹೋಗಿದೆಯೋ, ಬತ್ತಿ ಹೋಗಿದೆಯೋ ಅಲ್ಲ ಇನ್ನು ಸತ್ತೇ ಹೋಗಿದೆಯೋ ನಾನರಿಯೆ… ಮೆಸೇಜ್ ಬಂದ್ರೆ ರಿಪ್ಲೈ ಮಾಡ್ಲಿಕ್ಕಿಷ್ಟ ಇಲ್ಲ, ಕಾಲ್ ರಿಸೀವ್ ಮಾಡುವ ಗೋಜಿಗೆ ಹೋಗುವುದೇ ಇಲ್ಲ. ವಾಟ್ಸಪ್, ಫೇಸ್ ಬುಕ್, ಹೈಕ್, ಹ್ಯಾಂಗ್ ಔಟ್, ಗೂಗಲ್ ಮ್ಯಾಪ್, ಕ್ಯಾಂಡಿ ಕ್ರಷ್, ಡಾಕ್ಟರ್ ಡ್ರೈವ್, ವಿಡ್ ಮೇಟ್, ಗುಡ್ ರೀಡ್ಸ್ ಗಳನ್ನು ತುದಿಬೆರಳಿನಿಂದ ಸ್ಪರ್ಶಿಸದೆ ದಿನಗಳೆಷ್ಟೋ ಸಂದವು. ಲ್ಯಾಪ್ ಟಾಪ್ ಗೆ ಚಳಿ ಹಿಡಿದಿರಬಹುದು. ಮದುವೆಗೂ ಹೋಗುವುದಿಲ್ಲ. ಬೊಜ್ಜಕ್ಕೂ ಇಲ್ಲ. ಜೀವನದಲ್ಲಿ ಜಿಗುಪ್ಸೆ. ಜಿಗುಪ್ಸೆಯೇ ಹೌದಾ? ಅಲ್ಲ ಬೇರಿನ್ನೇನಾದ್ರ ಗೊತ್ತಿಲ್ಲ. ನಿಮಗೂ ಇಂತಹ ಅನುಭವ ಕೆಲವೊಮ್ಮೆ ಆಗಿರಬಹುದು.  ಕೋಲ್ಡೂ ಅಲ್ಲ, ಹಾಟೂ ಅಲ್ಲ, ಮೀಡಿಯಂ ಹೌದಾಂತ ಗೊತ್ತಿಲ್ಲ.  ಆ್ಯಸಿಡ್ಡೂ ಅಲ್ಲ, ಬೇಸೂ ಅಲ್ಲ. ನನಿಗದನ್ನ ಪಿ. ಎಚ್. ಸೆವೆನ್  ಅಂತ ಕರೀಲಿಕ್ಕೆ ಇಷ್ಟ.
   ಹೌದು ಸ್ನೇಹಿತರೆ, ಕೆಲವೊಮ್ಮೆ ಇಂತಹ ಮನಸ್ಥಿತಿ ನಿಮ್ಮಲ್ಲೂ ಬಂದಿರಬಹುದು. ಬಹುಷಃ ಇದಕ್ಕೆ ಕಾರಾಣ ಯಾರೋ  ನೀವು ತುಂಬಾ ನಂಬಿದವರು ಇಷ್ಟ ಪಟ್ಟವರು ನಿಮಗೆ ಮಾಡಿದ ದ್ರೋಹದಿಂದಿರಬಹುದು, ಅಥವಾ ಅವ್ರು ದೂರವಾದದ್ದಾಗಿರಬಹುದು, ಅಥವಾ ತಿಳಿದೋ ತಿಳಿಯದೆಯೋ ನೀವು ಮಾಡಿದ ತಪ್ಪಿಗೆ ನೀವು ಅನುಭವಿಸುತ್ತಿರುವ ಪಶ್ಚಾತ್ತಾಪವಿರಬಹುದು, ಕಾರಣ ನೂರಿರಬಹುದು. ಆದರೆ ಈ ತರನಾದ ಮನಸ್ಥಿತಿ ಬಂದು ಬಿಟ್ಟರೆ ಜೀವ ಇದ್ದೂ ಸತ್ತಂತ ಅನುಭವವಾಗಿರಬಹುದು. ನೀವು ತುಂಬಾ ಇಷ್ಟ ಪಡೋ ತಿಂಡಿ ಕಣ್ಣಮುಂದಿಟ್ಟರೂ ರುಚಿಸುವುದಿಲ್ಲ. ಎಷ್ಟೇ ದೊಡ್ಡ ಕಾಮೆಡಿ, ಜೋಕ್ಸ್ ಹೇಳಿದ್ರೂ ನಗು ಬರುವುದಿಲ್ಲ. ಹಾಗದ್ರೆ ಇದರಿಂದ ಹೊರ ಬರುವುದು ಹೇಗೆ. ಜೀವನ ಪ್ರೀತಿ ಅನ್ನುವಂಥಹದ್ದು ಇಲ್ಲದೇ ಹೋದರೆ ಬದುಕುವುದು ದೊಡ್ಡ ಟಾಸ್ಕ್ ಆಗಿ ಬಿಡುತ್ತದೆ. 
   ಅಂತಹ ಸಂದರ್ಭದಲ್ಲಿ ಏನನ್ನೂ ಮಾಡಬೇಡಿ. ಸುಮ್ಮನಿದ್ದು ಬಿಡಿ. ಪ್ರಯತ್ನ ಪಟ್ಟು ಯಾರಲ್ಲೂ ಮಾತನಾಡಬೇಡಿ. ಎಲ್ಲಾದರೂ ಹಸುರು, ನದಿ ಮುಂತಾದ ನೈಸರ್ಗಿಕ ಸ್ಥಳಗಳಿಗೆ ಭೇಟಿ ನೀಡಿ. ಹಕ್ಕಿಗಳ ಕೂಗಿಗೆ, ಚಿಲಿಪಿಲಿಗೆ ಕಿವಿ ಕೊಡಿ.  ಒಬ್ಬರೇ ಕುಳಿತು ಯಾವುದಾದರೂ ಮೆಲೋಡಿಯಸ್ ಹಾಡನ್ನು ಕೇಳಿ. ಆ ಹಾಡನ್ನು ಮನಸ್ಸು ಒಪ್ಪುವುದಿಲ್ಲವಾದರೆ ಇನ್ನೊಂದನ್ನು ಪ್ರಯತ್ನಿಸಿ. ಯಾವುದೂ ಮನಸ್ಸಿಗೆ ಇಷ್ಟವಾಗದಿದ್ದರೆ ಒತ್ತಾಯ ಪೂರ್ವಕವಾಗಿ ಹೇರಬೇಡಿ. ಬುದ್ದಿಯಿಂದ ಮನಸ್ಸನ್ನು ಕಂಟ್ರೋಲ್ ಮಾಡುವ ವ್ಯರ್ಥ ಪ್ರಯತ್ನ ಮಾಡಬೇಡಿ. ಬೀದಿ ಬದಿ ಆಟವಾಡುವ ಮಕ್ಕಳನ್ನು ನೋಡಿ, ನಡೆದ ಕೆಟ್ಟ ಸಂಗತಿಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಆ ಮಕ್ಕಳ ಆಟವನ್ನ ಸಂಭ್ರಮಿಸುವ ಪ್ರಯತ್ನ ಪಡಿ. ನೀವು ತುಂಬಾ ಇಷ್ಟ ಪಡುವ ಗೆಳೆಯನಲ್ಲಿಗೋ, ಸ್ನೇಹಿತೆಯಲ್ಲಿಗೋ ಹೋಗಿ, ಇದಾವುದೂ ಸಾಧ್ಯವಾಗದಿದ್ದರೆ ಸುಮ್ಮನಿದ್ದುಬಿಡಿ. ಕಾಲವೇ ಎಲ್ಲದಕ್ಕೂ ಸಮಾಧಾನ ನೀಡುತ್ತದೆ. ಎಲ್ಲಾ ನೋವುಗಳನ್ನೂ ಮರೆಸಿ ತನ್ನೊಂದಿಗೆ ನಮ್ಮನ್ನೂ ಕರೆದುಕೊಂಡು ಸಾಗುತ್ತದೆ. ಇರುಳು ಕಳೆದು ಬೆಳಕು ಬಂದೇ ಬರುತ್ತದೆ. ಮತ್ತೆ ಇರುಳು, ಮತ್ತೆ ಬೆಳಗು.... ಇದೇ ಜೀವನ ಚಕ್ರ, ಸಾಗುತ್ತಿರುತ್ತದೆ, ಸಾಗುತ್ತಲೇ ಇರುತ್ತದೆ.....

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....