ಪುಟ್ಟದೊಂದು ಜಿಜ್ಞಾಸೆ....





   ದುಃಖ ಯಾಕಾಗ್ತದೆ ಅಂತಂದ್ರೆ, ನಂಗೆ ನನ್ನ ಜೀವನವನ್ನು ಬಿಟ್ಟು ಬೇರೆಲ್ಲರ ಜೀವನವನ್ನೂ ಸಂಭ್ರಮಿಸ್ಲಿಕ್ ಸಾಧ್ಯ! ಓಹ್, ಅವನೊಬ್ಬ ಸಿನಿಮಾ ನಾಯಕ, ದಿನಾ ಅವನ ಬಗ್ಗೆ ಟಿವಿಲಿ ಬರ್ತಾ ಇರ್ತದೆ. ವ್ಹಾ! ಅವನಿಗೆಷ್ಟ್ ಚಂದ.
 ''ವೈದ್ಯೋ ನಾರಾಯಣೋ ಹರಿಃ'' ಅವನೊಬ್ಬ ಡಾಕ್ಟರ್, ಸಮಾಜದಲ್ಲಿ ಎಷ್ಟೊಂದು ದೊಡ್ಡ ಸ್ಥಾನ ಇದೆ ಆತನಿಗೆ, ಎಲ್ಲರೂ ಡಾಕ್ಟ್ರೇ ಅಂತ ಎಷ್ಟು ಗೌರವ ಕೊಡ್ತಾರೆ, ಅವನ ಬದುಕೆಷ್ಟು ಸುಂದರ ಅನ್ನಿಸ್ತದೆ. 
ಅವನೆಷ್ಟು ಚನ್ನಾಗ್ ಚಿತ್ರ ಮಾಡ್ತಾನೆ, ಎಲ್ರು ಅವನ ಬಗ್ಗೆ ಗ್ರೇಟ್ ಅಂತ ಕಮೆಂಟ್ ಮಾಡ್ತಾರೆ, ಎಲ್ಲೇ ಹೋದ್ರು ಅವನಿಗೆ ಮನ್ನಣೆ ಸಿಕ್ತದೆ. 
ಅವಳೆಷ್ಟ್ ಚಂದ, ಬೇಕಾದಷ್ಟು ಹಣ ಇದೆ, ರಿಚ್ ಫ್ಯಾಮಿಲಿಯಿಂದ ಬಂದವಳು, ಅಷ್ಟೊಂದು ದೊಡ್ಡ ಕಾಲೇಜಲ್ಲಿ ಕಲಿತಾ ಇದಾಳೆ, ಎಷ್ಟು ಜನ ಫ್ರೆಂಡ್ಸ್ ಇದಾರೆ, ಅವಳ ಫೇಸ್ ಬುಕ್ ಪ್ರೊಫೈಲ್ ನೋಡಿದ್ರೆ ತಿಳಿತದೆ ಅವಳ ಲೈಫ್ ಎಷ್ಟು ಬ್ಯೂಟಿಫುಲ್ ಅಂತ.
 ಹೀಗೆ ನಾನು ನನ್ನನ್ನ ಅವ್ರೆಲ್ಲರ ಜೊತೆ ಹೋಲಿಸಿಕೊಳ್ಳೋದು ಮತ್ತು ಕೊರಗುವುದು, ಜೊತೆಗೆ ಅವರು ಅವರ ಬದುಕನ್ನು ಎಷ್ಟರ ಮಟ್ಟಿಗೆ ಸಂಭ್ರಮಿಸಿದ್ದಾರೋ ನಾ ಕಾಣೆ, ಆದರೆ ನಾನು ಮಾತ್ರ ಅವರೆಲ್ಲರ ಬದುಕನ್ನು ಸಂಭ್ರಮಿಸ್ತೇನೆ, ಕೆಲವೊಮ್ಮೆ ಅದೆಷ್ಟು ಅವಿವೇಕವಾಗಿ ಅಂತಂದ್ರೆ ಕೇವಲ ಕೆಲವರ ಫೇಸ್ ಬುಕ್ ಪ್ರೊಫೈಲ್ ನೋಡಿ ಅವರು ಅಪ್‍ಲೋಡ್ ಮಾಡಿದ ಸುಂದರ ಚಿತ್ರಗಳನ್ನು ನೋಡಿ ನನಗೆ ಇಂತಹ ಭಾಗ್ಯ ಬರ್ಲಿಕ್ಕೇ ಇಲ್ಲ ಅಂತ ಶೂನ್ಯಕ್ಕೆ ಕುಸುದೋಗೋದು. ಇನ್ನೂ ಕೆಲವೊಮ್ಮೆ  ಅಂತಹವರ ಸಹವಾಸ ಮಾಡಿದ್ರೆ ನನಗಾ ಅವಕಾಶ ಸಿಕ್ಬೋದೇನೋ ಅಂತಂದ್ಕೊಂಡು  ಅವರ ಬಾಳಲ್ಲಿ ಇಣುಕಿ ನೋಡುದು.
       ನಾನು ಸೋತದ್ದು ಬಹುಷಃ ಅಲ್ಲೇ ಇರ್ಬೇಕು, ನನಗೆ ನನ್ನ ಬದುಕಿನ ಕ್ಷಣಗಳನ್ನು ಸಂಭ್ರಮಿಸಲು ಮರೆತೇ ಹೋಗಿದೆ. ಅದಕ್ಕೆ ನಾನಿವತ್ತು ನನ್ನಲ್ಲಿಲ್ಲ, ಬೇರೆಯವರಲ್ಲೂ ಇಲ್ಲ. ಎಲ್ಲೋ ಆವಿಯಾಗಿ ಬಿಟ್ಟಿದ್ದೇನೆ. ಅದು ನನಿಗ್ ಗೊತ್ತಾದದ್ದೇ ವಿಚಿತ್ರವಾಗಿ, ನಂಗಾಗ ಅಳ್ಲಿಕ್ಕೂ ಬರ್ತಿರ್ಲಿಲ್ಲ, ನಗ್ಲಿಕ್ಕೂ ಬರ್ತಿರ್ಲಿಲ್ಲ, ಬೇಜಾರವೂ ಆಗ್ತಿರ್ಲಿಲ್ಲ, ಭಯವೂ ಆಗ್ತಿರ್ಲಿಲ್ಲ. ನೋಡ್ತೇನೆ, ನಾನಲ್ಲಿರ್ಲೇ ಇಲ್ಲ. 
 ತೀರಾ, ಹಳತಲ್ಲ..... ಕೆಲವು ವರ್ಷಗಳ ಹಿಂದೆ,
  ಚೋಮಣ್ಣನ ಅಂಗಡಿಯಿಂದ ಒಂದು ಸ್ಲೇಟ್ ಕಡ್ಡಿ ಹೊಸತು ತೆಗೆದ್ಕೊಂಡ್ರೆ ಖುಷಿ ಆಗ್ತಾ ಇತ್ತು, ಒಂದು ತಿಂಗಳು ಕಳೆದ್ರೂ ಆ ಕಡ್ಡಿ ಹೊಸತೇ ಆಗಿರ್ತಿತ್ತು. ನಿಮಿಷಕ್ಕೊಮ್ಮೆ ಆ ಕಡ್ಡಿಯನ್ನು ನೋಡ್ತಿದೆ ತುಂಬಾ ಖುಷಿ ಆಗ್ತಿತ್ತು. ಅಜ್ಜ ವರ್ಷಕ್ಕೊಮ್ಮೆ ನಂಗೂ ತಂಗಿಗೂ ಪುತ್ತೂರಿಂದ ತರ್ತಿದ್ದ ಹೊಸ ಅಂಗಿ ತುಂಬಾ ಖುಷಿ ಕೊಡ್ತಾ ಇತ್ತು, ಬಹಳ ಹತ್ತಿರದ ಸಂಬಂಧಿಕರ ಮದುವೆಗೋ ಉಪನಯನಕ್ಕೋ  ಹೋಗ್ಲಿಕ್ಕಾಗುವಾಗ ಅಮ್ಮ ಪೆಟ್ಟಿಗೆಯಿಂದ ಆ ಅಂಗಿ ತೆಗಿವಾಗ ಅದರ ಪರಿಮಳ ಹಿತವಾಗಿರ್ತಿತ್ತು. ಅಜ್ಜಿ ಎರೆದು ಕೊಡುತ್ತಿದ್ದ ಚಿಕ್ಕ ಚಿಕ್ಕ ದೋಸೆಗಳನ್ನು ಖುಷಿಯಿಂದ ತಿನ್ನುತ್ತಿದ್ದೆ, ಹಟ್ಟಿಯಲ್ಲಿದ್ದ ದನವನ್ನು  ತೆಕ್ಕೊಂಡು ಹೋಗ್ಲಿಕ್ಕೆ ಯಾರಾದ್ರು ಬಂದ್ರೂ ಕುತೂಹಲ ಆಗ್ತಿತ್ತು ಆ ಕ್ಷಣವನ್ನು ಸಂಭ್ರಮಿಸ್ತಿದ್ದೆ. ಅಜ್ಜ ಆಡು  ತರುವ ಅಂತ ಮಾತ್ರ ಹೇಳಿದ್ದು ನಾನು ಅದಾಗ್ಲೇ ಆಡಿನ ಮರಿಗಳೊಂದಿಗೆ ಆಡಿ ಆಗಿತ್ತು.  ಅಣ್ಣನೊಂದಿಗೆ ಟಯರ್ ಓಡ್ಸುದು,ತಂಗಿ ಜೊತೆ ಜಗಳ ಮಾಡೋದು, ಸಂಜೆ ಶಾಲೆ ಬಿಟ್ಟು ಬರುವಾಗ ಅದೊಂದು ಸಂಭ್ರಮ ಇವತ್ತು ನಡುಮನೆಯಲ್ಲೋ,  ಮೂಲೆ ಮನೆಯಲ್ಲೋ ತಿಥಿ, ಸಂಜೆ ಮನೆಗ್ ತಲುಪಿದ್ ಕೂಡ್ಲೇ  ಅಲ್ಲಿಗೆ ಊಟಕ್ಕ್ ಹೋಗುದು. ದಾರಿಲಿ ಬರ್ತಾ ನಮ್ಮೊಟ್ಟಿಗೆ ತಿಥಿ ಊಟಕ್ಕೆ ಬರುವ ಚಿಕ್ಕಪ್ಪನ್ ಮಕ್ಳು, ಕೆಳಗಿನ್ ಮನೆ ಮಕ್ಳು ಜೊತೆ ನೀವ್ ಮೊದ್ಲು ಹೋದ್ರೆ ಸೊಪ್ಪ್ ಹಾಕಿ ದಾರಿಯಲ್ಲಿ , ನಾವು ಹೋದ್ರೆ ನಾವು ಹಾಕ್ತೇವೆ ಅಂತ ಒಪ್ಪಂದ ಮಾಡಿಕೊಳ್ತಿದ್ದೆವು. ಇನ್ನು ಶನಿವಾರ ಬಂತಂದ್ರೆ ಖುಷಿ, ಮಧ್ಯಾಹ್ನ ಶಾಲೆ ಬಿಟ್ಟು ಮನೆಗ್ ಹೋಗೋದ್ ಖುಷಿ, ಶಾಲೆಯಲ್ಲಿ ನಲ್ಲಿ ನೀರು ಬರ್ತಾ ಇಲ್ಲ ಅಂತಂದ್ರೆ ಖುಷಿ , ಯಾಕಂದ್ರೆ ಪಕ್ಕದಲ್ಲಿದ್ದ ಹೊಳೆಗೆ ಬಟ್ಟಲು ತೊಳೆಯಲು ಹೋಗ್ಬೋದಿತ್ತು. ಸ್ಟಡಿ ಬೆಲ್ ಆದ್ರೂ ತರಗತಿಗೆ ಹಿಂತಿರುಗದೇ ಅಲ್ಲೇ ಒಟ್ಟಿಗಿದ್ದವ್ರು ಹೇಳ್ತಿದ್ದ ಸುಳ್ಳು ಸುಳ್ಳು ಕಥೆಗೆ ನಾವೂ ಸುಳ್ಳ್ ಸುಳ್ಳಾಗೇ ಮಾತು ಸೇರಿಸಿ ಏನೋ ಒಂದು ಖುಷಿ ಪಡ್ತಿದ್ದೆವು. ತರಗತಿ ನಡೀತಿದ್ದ ಸಂದರ್ಭ ಯಾವುದೋ ಊರಿನ ಒಬ್ಬ ವ್ಯಕ್ತಿ ಪೆನ್ನೋ, ಮ್ಯಾಜಿಕ್ ಬುಕ್ಕೋ ಮತ್ತಿನ್ನೇನೋ ಮಾರಿಕೊಂಡು ಬಂದ್ರೆ ಅದನ್ನು ಕೊಂಡುಕೊಳ್ಳಿಕ್ ಸಾಧ್ಯ ಇಲ್ಲದೇ ಹೋದ್ರೂ ಅದೇನೋ ಒಂದು ಸಂಭ್ರಮ. ಖುಷಿ ವಿಚಾರ ಮಾತ್ರ ಅಲ್ಲ, ದುಃಖ, ಭಯ, ಆಶ್ಚರ್ಯ ಎಲ್ಲವನ್ನೂ ಅನುಭವಿಸುತ್ತಾ ಇದ್ದೆವು. ಅಜ್ಜಿ ಹೇಳುವ ಭೂತದ ಕಥೆ ಭಯ ಹುಟ್ಟಿಸ್ತಿತ್ತು, ಹಾಲಿವುಡ್‍ನ ಯಾವ ಹಾರರ್ ಮೂವಿ ಆದ್ರೂ  ಆ ಕಥೆಗಳ ಮುಂದೆ ಸೋತೇ ಹೋಗ್ಬೇಕು, ಅದು ತ್ರಿಲ್ ಅಂಥ ಗೊತ್ತಾಗಿದ್ದು ಇತ್ತೀಚೆಗಷ್ಟೇ. ಮನೆಯಿಂದ ಕೊಟ್ಟ ಹಣದಲ್ಲಿ ಒಂದು ರೂಪಾಯಿ ಕಳೆದು ಹೋದ್ರೂ ತುಂಬಾ ದುಃಖ ಆಗ್ತಿತ್ತು, ಅಮ್ಮ ಚಂದಕೆ ನಾಲ್ಕು ಮಡೆಸಿ ಕಯಲ್ಲಿಟ್ಟ ಕರ್ಚೀಫ್ ಎಲ್ಲೋ ಮದುವೆಗೋ, ಬೊಜ್ಜಕ್ಕೋ ಹೋಗಿ ಬರೋವಾಗ ಕಳೆದು ಹೋದ್ರೆ ಅಳುವೇ ಬರುವಂತೆ ಆಗ್ತಿತ್ತು. ಅಮ್ಮ ಬೈತಾಳೆ ಅಂತಲ್ಲ. ಅದು ಅಮ್ಮ ಜೊತೆಗೆ ಬಂದಿದಾಳೆ ಅನ್ನೋ ಭಾವನೆ ಹುಟ್ಟಿಸ್ತಿತ್ತು, ಈಗ ಕಳೆದು ಹೋಯಿತಲ್ಲಾ ಎಂಬ ದುಃಖ. ಅವತ್ತು ಎಲ್ಲವೂ ಅಮ್ಮನೇ. ಬೆಳ್ಳಿಗ್ಗೆಯಿಂದ ಸಂಜೆ ತನಕ, ಇದಕ್ಕಿಂತ ಹೆಚ್ಚಿನ ಅವಧಿ ಅಮ್ಮನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಎಲ್ಲವೂ ಅಮ್ಮನೇ ಆಗಿದ್ದಳು. ಆದರೆ ಈಗ ಹಲವರಿಗೆ ನನಗೆ ಒಳ್ಳೆ ಫ಼್ರೆಂಡ್ ಸರ್ಕಲ್ ಇಲ್ಲ. ಬಾಯ್ ಫ಼್ರ್ರೆಂಡ್ ಇಲ್ಲ. ಗರ್ಲ್ ಫ಼್ರೆಂಡ್ ಇಲ್ಲ. ಅವರಿಲ್ಲ, ಇವರಿಲ್ಲ, ನನಗೂ ಒಬ್ಬಾಕೆ ತಂಗಿ ಬೇಕಿತ್ತು, ಭಾವನೆಗಳನ್ನು ಹಂಚಿಕೊಳ್ಳಲು ಗೆಳತಿ ಇರಬ್ನೇಕಿತ್ತು, ತುಂಟತನ ಮಾಡುವ ತಮ್ಮ ಬೇಕಿತ್ತು. ಹೀಗೆ ಇಲ್ಲದ ಸಂಬಂಧಗಳ ಹುಡುಕಾಟ. ವಿಚಿತ್ರ ಅಲ್ವಾ....? ಹೀಗೇ ಪಟ್ಟಿ ಮಾಡ್ತಾ ಹೋದ್ರೆ ಬೇಕಾದಷ್ಟಿದೆ. ನಿಮಗೂ ಬೋರ್ ಅನಿಸ್ಬೋದು. ಆದ್ರೆ ಒಂದಂತೂ ಸತ್ಯ. ಬೆಳಿತಾ ಬೆಳಿತಾ ವಾಸ್ತವದಲ್ಲಿ ನಾನಿರುವುದೇ ಕಡಿಮೆ ಆಗಿದೆ, ಹಳೆಯ ನೆನಪುಗಳನ್ನು ನೆನೆದು ನೊಂದುಕೊಳ್ಳುವುದು, ಭವಿಷ್ಯದ ಬಗ್ಗೆ ಭಯ ಬೀಳುವುದು, ಹಾಗೂ ತೀರಾ ಹುಚ್ಚುಚ್ಚು ಕನಸುಗಳನ್ನು ಕಾಣುವುದು. ಕನಸುಗಳನ್ನು ಕಾಣಲು ಮರೆತು ಹೋದಂತಿದೆ. ಅವುಗಳಾದರೂ 'ಸಾರ ರಹಿತ ಜೀವನ' ಅಂತನ್ನಿಸುವುದಕ್ಕೆ ಔಷಧ ಕೊಡುತ್ತಿದ್ದವೇನೋ?  ಅಥವಾ ಇದು ಚಿಕ್ಕದೊಂದು ಅಸೌಖ್ಯ ಇರಬಹುದು. ಮನೇಲೇ ಇದ್ದು ಇದ್ದು ಬೋರ್ ಆದಾಗ ಎಲ್ಲಾದ್ರೂ ಹೊರಗಡೆ ಸುತ್ತಾಡಿ ಬಂದ್ರೆ ಒಂದು ಉಲ್ಲಾಸ. ಹಾಗೇ ಸಂಭ್ರಮ ಪಟ್ಟು ಪಟ್ಟು ಬೋರ್ ಆಯ್ತೆನೋ? ಅದಕ್ಕಾಗಿ ಇರಬಹುದೇನೋ ಈ ನ್ಯೂಟ್ರಲ್ ಭಾವ. ಯಾವುದೊಂದನ್ನೂ ಖಚಿತವಾಗಿ ಹೇಳಲಾರೆ. ನನ್ನೊಳಗಿನ ಜಿಜ್ಞಾಸೆ. ಅಥವಾ ಹುಚ್ಚು ಯೋಚನೆ. ಒಂದಂತೂ ಸತ್ಯ, ಬದುಕು ಬದಲಾಗಿದೆ. ಬದಲಾಗುತ್ತಲೇ ಇದೆ. ನಾನು? (ಬದಲಾಗಿದ್ದೇನೆ) 
ಕಲೀಬೇಕಾಗಿದೆ. ಅಲ್ಲ, ನೆನಪಿಸಿಕೊಳ್ಳಬೇಕಾಗಿದೆ, ಸಂಭ್ರಮಿಸಲು. ಜೀವನದ ಪ್ರತಿ ಗುಟುಕನ್ನೂ ಹೀರೀ ಹೀರಿ ಆಸ್ವಾದಿಸಲು.  
ಮಾಡಬೇಕಾಗಿರುವುದು ಇಷ್ಟೇ : ಕಣ್ಣು ಬಿಟ್ಟು, ಮನಸು ಬಿಚ್ಚಿ, ಪೂರ್ಣ ಪ್ರಜ್ಞಳಾಗಿ ಬದುಕನ್ನು ನೋಡಬೇಕು. ಪ್ರತಿ ಕ್ಷಣವನ್ನೂ ಸಂಭ್ರಮಿಸಬೇಕು. ಇರುವುದೊಂದೇ ಜೀವನ.....

(ಮನಸ್ಸು ನನ್ನ ಜೊತೆ ಇದೇ ಭಾಷೆಯಲ್ಲಿ ಮಾತನಾಡುತ್ತದೆ, ಹಾಗೇ ಬರೆದಿದ್ದೇನೆ, ವ್ಯಾಕರಣದ ಹಾಗೂ ಗ್ರಾಂಥಿಕತೆಯ ಸುತ್ತಿಗೆಯಿಂದ ಪದಗಳಿಗೆ ಹೊಡೆದು ನೆಟ್ಟಗಾಗಿಸಲಿಲ್ಲ, ಹೊಳೆತಕ್ಕಾಗಿ ಬಣ್ಣ ಲೇಪಿಸಲಿಲ್ಲ. ಅಡ್ಜಸ್ಟ್ ಮಾಡ್ಕೊಳ್ಳಿ ಪ್ಲೀಸ್)

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....