ನನ್ನ ಲೇಖನಿ ಬರೆಯುತ್ತಿಲ್ಲ.....



ನನ್ನ ಲೇಖನಿ ಬರೆಯುತ್ತಿಲ್ಲ. ಷಾಯಿ ಗಟ್ಟಿಯಾಗಿದೆ, ಖಾಲಿಯಾಗಲಿಲ್ಲ.ನಿಬ್ ನ್ನು ಬೆಂಕಿಗೆ ಹಿಡಿಯಲು ಇಷ್ಟವಿಲ್ಲ. ಉರಿದ ಬೆಂಕಿಯನ್ನು ಆರಿಸುವುದು ಕಷ್ಟ. ಬೆಂಕಿ ಹಚ್ಚುವವರು ಸುಮ್ಮನಿದ್ದಾರೆ. ಬಹುಷಃ ಇಂಧನ ಕಾಲಿಯಾಗಿರಬೇಕು ಅಥವಾ ದಹ್ಯ ವಸ್ತುಗಳು ದೊರಕುತ್ತಿಲ್ಲ. ಗೊತ್ತಿಲ್ಲ, ಬೆಂಕಿ ನನಗೆ ಕಾಣಿಸದೇ ಇರಬಹುದು, ಶಾಖ ಸೋಕದೇ ಇರಬಹುದು.
ನನ್ನ ಲೇಖನಿ ಬರೆಯುತ್ತಿಲ್ಲ. ಬಹುಷಃ ಹೃದಯಕ್ಕೆ ವಯಸ್ಸಾಗಿರಬೇಕು, ಬಂಜೆಯಂತೂ ಅಲ್ಲ. ಮೊನ್ನೆ ಮೊನ್ನೆಯ ತನಕ ಬಾಣಂತನದ ಸೊಬಗನ್ನು ಅನುಭವಿಸಿದೆ. ಮಿದುಳು ಬರಡಾಗಿದೆ, ಬುದ್ಧಿ ಕೊರಡಾಗಿದೆ. ಯೋಚನೆಗಳ ಬರಗಾಲವಿರಬಹುದೇನೋ. ಒಂದೂ ತಿಳಿಯುತ್ತಿಲ್ಲ.
ನನ್ನ ಲೇಖನಿ ಬರೆಯುತ್ತಿಲ್ಲ. ಶೈಶವಾವಸ್ಥೆಯಲ್ಲಿದ್ದ ಕೆಲವು ಭಾವನೆಗಳೂ ಸಾಯುತ್ತಿವೆ. ಅದಾವ ರೋಗ? ಅಯ್ಯೋ! ಕಣ್ಣುಗಳು ಮಂಜಾಗುತ್ತಿವೆ, ಕನ್ನಡಕ ಕಾಣೆಯಾಗಿದೆ, ಹಸುರುಟ್ಟ ಪ್ರಕೃತಿಯ ಜಳಕದ ಸದ್ದೂ ಅಸ್ಪಷ್ಟ. ಕಿವಿಗಳೂ ಕಿವುಡಾಗಿವೆ. ಉರಿದ ಬೆಂಕಿಗೆ ಚರ್ಮ ಸುಟ್ಟು ಕರಕಲಾಗಿರಬೇಕು, ಸ್ಪರ್ಶವನ್ನೂ ಗ್ರಹಿಸುತ್ತಿಲ್ಲ.

ನನ್ನ ಲೇಖನಿ ಬರೆಯುತ್ತಿಲ್ಲ. ಸುತ್ತಲಿದ್ದ ಕಿರಾತಕರೂ ಕಾಣೆಯಾಗಿದ್ದಾರೆ, ಕಿನ್ನರಿ ನುಡಿಸುವವರೂ ಕಣ್ಮರೆಯಾಗಿದ್ದಾರೆ. ಏಕಾಂಗಿತನದ ಹಮ್ಮಿಲ್ಲ, ಏಕಾಂತದ ಹಂಗಿಲ್ಲ. ಸಮಯವನ್ನು ಸಹಿಸಬೇಕಾಗಿಲ್ಲ, ಅದಕ್ಕಾಗಿ ಕಾಯಬೇಕಾಗಿಲ್ಲ.
ಇನ್ನೆಷ್ಟು ಕಾರಣಬೇಕು? ಭಾವನೆಗಳು ಹುಟ್ಟದಿರಲು? ಹಸಿವಾಗದಿರಲು? ಕಾರಣ ಗಂಟೆಗೊಮ್ಮೆ ತಿನ್ನುವುದು, ಬಾಯಾರದಿರಲು ಕಾರಣ ಧೋ… ಎಂದು ಸುರಿವ ಮಳೆಯಲ್ಲೂ ತಂಪು ಶರಬತ್ತು ಕುಡಿಯುವುದು, ಕೆಲಸವಿಲ್ಲದವನಿಗೆ ಆಯಾಸವಾಗದು, ಆರೋಗ್ಯವಂತನಿಗೆ ನೋವೆಂದರೇನೆಂದು ತಿಳಿಯದು. ಇಂತಿದ್ದರೆ ಜೀವನವೆಂತು ತಿಳಿದೀತು? ಲೇಖನಿಯಾದರು ಏನೆಂದು ಬರೆದೀತು.
ನನ್ನ ಲೇಖನಿ ಬರೆಯುತ್ತಿಲ್ಲ, ಷಾಯಿ ಗಟ್ಟಿಯಾಗಿದೆ.

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....