ಹ್ಮ್!!!




''ಆತ ಕಿತ್ತುಕೊಂಡದ್ದು ನನ್ನ ಊರುಗೋಲನ್ನ. ಬದುಕು ವ್ಯರ್ಥವಾಗುವ ಮೊದಲೇ ಅರ್ಥವಾಗಿದೆ. ಅರ್ಥವಾಗುತ್ತಲೇ ಇದೆ. ಎದ್ದು, ಬಿದ್ದು ನಡೆಯಲು ಕಲಿತೆ, ಶೀಘ್ರದಲ್ಲೇ ನೆಟ್ಟಗೆ ನಿಲ್ಲುವೆನೆಂಬ ಭರವಸೆ. ಭರವಸೆ,ಆಸೆ, ಬಯಕೆಗಳೆಲ್ಲಾ ದಿಟವಾಗುವುದೆಂಬ ಉತ್ಸಾಹ ನನ್ನಲ್ಲಿಲ್ಲ. ನಾ ಕಣ್ಬಿಟ್ಟು ಪ್ರಪಂಚ ನೋಡುವ ಹೊತ್ತಿಗೆ ಸೂರ್ಯನೇಕೋ ಮುನಿಸಿಕೊಂಡ, ಕತ್ತಲಾಯಿತು. ಆ ಕಿರು ಬೆರಳ ನೆನಪೇ ನನಗಿಲ್ಲ. ಕೂಸು ಮರಿ ಆಡಲಿಲ್ಲ, ಆ ಭುಜಗಳಲ್ಲಿ ಕುಳಿತುಕೊಳ್ಳುವಷ್ಟು ಸಮಯವೇ ಇರಲಿಲ್ಲ. ಆತ ದೂರ ಸರಿದ, ನಾ ದೊಪ್ಪೆಂದು ಬಿದ್ದು ಬಿಟ್ಟೆ, ೧೮ ವರುಷಗಳಿಂದಲೂ ಮೇಲೇಳಲು ಪ್ರಯತ್ನಿಸುತ್ತಲೇ ಇರುವೆ. ಯೂವತ್ತೋ ಒಂದು ದಿನ ಮೇಲೆದ್ದು ನಿಂತುಕೊಳ್ಳುವೆ, ಆದರೆ ದೂರ ಸರಿದಾತ ಹಿಂತಿರುಗುವನೇ? ಪ್ರತೀ ಸಂದರ್ಭದಲ್ಲೂ ಆ ಸ್ಥಾನ ಕಾಲಿ. ಮುಂದೆಂದೂ ಆ ಪದ ಬಳಕೆಗೆ ಆಸ್ಪದವಿಲ್ಲ. ಎರಡಕ್ಷರದ ಆ ಪದವನ್ನು ತೊದಲುವ ಮುನ್ನವೇ ಆ ಪಾತ್ರಕ್ಕೆ ನನ್ನ ಬಾಳಲ್ಲಿ ತೆರೆ ಎಳೆಯಲಾಯಿತು. ನಾನುಂಡ ಪ್ರತಿ ಅಗುಳು ಅನ್ನವೂ ನನಗೆ ಸೇರಬೇಕಾಗಿದ್ದದ್ದೇ?ಎಂಬ ಸಂಷಯ. ಕೋಗಿಲೆ ಮರಿಗಾದರೂ ಕಾಗೆ ಗೂಡಿಂದ ಹಾರಿ ಹೋಗಲು ಅವಕಾಶವಿದೆ. ಹಲವು ಬಾರಿ ಅತ್ತಿದ್ದೇನೆ, ಕೊರಗಿದ್ದೇನೆ, ಕಲ್ಪಿಸಿಕೊಂಡಿದ್ದೇನೆ ಆದರೆ ಆ ಊರುಗೋಲು ನನಗೆ ಸಿಗಲೇ ಇಲ್ಲ.
ಈ ಬದುಕು ನಾ ಬಯಸಿ ಬಂದದ್ದಲ್ಲ. ಆದರೆ ಇಲ್ಲೇ ನಾ ನೆಮ್ಮದಿಯ ಹುಡುಕ ಹೊರಟೆ, ಹೊಂದಿಕೊಂಡೆ. ಮುಂದಿನ ಬದುಕು ನನ್ನ ಆಯ್ಕೆಗೆ ಬಿಟ್ಟದ್ದು. ನನ್ನ ಆಲೋಚನೆಗಳು ತಲೆ ಕೆಳಗಾಗಿ ಕಣ್ಣೀರು ಮತ್ತೆ ನನ್ನ ಗೆಳೆಯನಾಗಲಾರ ಎಂದು ನಾನಂದು ಕೊಂಡಿಲ್ಲ. ಹಾಗೆಂದು "ಹಣೆ ಬರಹಕ್ಕೆ ಹೊಣೆ ಯಾರು ? "ಎಂದು ಕೈ ಕಟ್ಟಿ ಕುಳಿತು ಕೊಳ್ಳಲು ನನಗಿಷ್ಟವಿಲ್ಲ. ಆದರೆ ಈ ಬದುಕು ನನಗೆ ನನ್ನ ವ್ಯಾಪ್ತಿ ಎಷ್ಟು ಎಂಬುದನ್ನು ತಿಳಿಸಿತು. ಯಾರಿರಲಿ , ಇಲ್ಲದೇ ಇರಲಿ ಬದುಕಬಲ್ಲೆ ಎಂಬುವುದು ಅರ್ಥವಾಯಿತು. ಇದೊಂದು ತರ ಮಾಯಾ ಗಂಟು, ಒಂದು ಕಡೆ ಬಿಚ್ಚಿ , "ಸದ್ಯ!" ಎಂದು ಉಸಿರು ಬಿಡುವ ಹೊತ್ತಿಗಾಗಲೇ ಇನ್ನೊಂದು ಗಂಟು ಸುತ್ತಿಕೊಂಡಿರುತ್ತದೆ.
ಭಾವನೆಗಳನ್ನ ಮಾರುತ್ತಿರುವೆನೇನೋ ,
ತಪ್ಪೆನಿಸಿದರೆ ಕ್ಷಮೆ ಇರಲಿ. ''

ಎಂದಾಕೆ ಟೈಪಿಸಿ ಮೈಲ್‍ಗೆ ಕಾಪಿ ಮಾಡುವ ಹೊತ್ತಿಗಾಗಲೇ ಬೆಳಗಾಗಿತ್ತು. ಸಮಯ ನೋಡಿಕೊಂಡಳು ಐದೂ ವರೆ. ಅರೆರೆ!!! ಇಷ್ಟೇ ಇಷ್ಟು ಸಾಲುಗಳನ್ನು ಬರೆಯಲು ಇಷ್ಟು ಹೊತ್ತುಗಳು ಬೇಕಾದವೇ? ಎಂದಂದುಕೊಳ್ಳುತ್ತಾ ಬರೆದಿದ್ದ ಸಾಲುಗಳನ್ನು ಪತ್ರಿಕೆಗೆ ಕಳುಹಿಸಿಬಿಟ್ಟಳು. ಏಳು ಗಂಟೆಗೆ ಶೂಟಿಂಗ್ ಇದೆ. ಇನ್ನು ಮಲಗಲು ಸಮಯವೆಲ್ಲಿದೆ? ಹೊರಟು ಬಿಡಬೇಕು ಎಂದು ತನ್ನ ಸಿಸ್ಟಮ್‍ನ್ನು ಶಟ್ ಡೌನ್ ಮಾಡಿ, ಕನ್ನಡಕ ತೆಗೆದಿಟ್ಟು ಕೋಣೆಯಿಂದ ಹೊರನಡೆದಳು.....

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....