ಕಾಲಯಾಪನೆಯ ಕೂಗು ನಿರಂತರ....


ಅಂದು ಒಂದು ಮುಸ್ಸಂಜೆ
ಸೂರ್ಯ ಮುಳುಗುವ ಹೊತ್ತು
ಉದಯಿಸಲಿತ್ತು ನನ್ನ ಬಾಳಿನ ಸಂಪತ್ತು
ಅದೇ ಚಿಂತೆಯಾಗಿ ಕಾಡುತಿತ್ತು

ಎಲ್ಲಾ ಅಮ್ಮಂದಿರಂತೆ ನಾ ಸಂಭ್ರಮಿಸಲಾರೆ
ಕಂದನ ಆಗಮನದ ನಿರೀಕ್ಷೆ ಯಲ್ಲಿ ಲೀನಳಾಗಲಾರೆ
ಏಕೆಂದರೆ ನನ್ನ ತಾಯ್ತನಕ್ಕೆ ಪರವಾನಗಿ ಇರಲಿಲ್ಲ
ವೇದ ಅಪೌರುಷೇಯ, ಆದರೆ...........
ಪುರೂರವನ ಪಿತಾನಾರು ಎಂದರೆ ಉತ್ತರ.......??

ಕಡಲೊಡಲಿಗೆ ಸೇರಿಸಲೇ? ಮಡಿಲಲ್ಲಿಟ್ಟು ಬರಲೇ?
ಕ್ರೂರಿಯೇ ಚಂದ್ರಹಾಸನ ಕೊಲ್ಲದಿರಲು
ತಾಯಿ ನಾನೆಂತು ಹಸುಳೆಯ ಕತ್ತು ಹಿಸುಕಲಿ?
ಕ್ಷಣವೇ ನೆನಪಾದಳು ಕುಮಾರಿ ಕುಂತಿ
ಅಂದು ಆಕೆಯ ಎದುರು ಪ್ರತ್ಯಕ್ಷನಾಗಿದ್ದ ಸೂರ್ಯದೇವ
ಇಂದು ಅಸ್ತಂಗತ, ಒಂಟಿ ನಾ
ಆ ಬಾಲೆಯೊಡನೆಂತು ಹಂಚಿಕೊಳ್ಳಲಿ ನನ್ನ ಮನದ ಇಂಗಿತ..

ಆ ನೋವಲ್ಲಿ ನೋಡಿದ್ದು ರಕ್ತವರ್ಣದ
ಆ ಕಂದಮ್ಮನ ಮುದ್ದು ಮೊಗವನ್ನು
ಒಡನೆಯೇ ನೋವು ಮಾಯ, ಆದರೇನು?
ನನಗೆ ಋಣವಿಲ್ಲವಲ್ಲ,
ಅದು ಕರ್ಣನೋ? ವೈದೇಹಿಯೋ?
ಬೆಸ್ತನಿಗಾದರೂ ಸೇರಲಿ, ಅರಸನಿಗಾದರೂ ದಕ್ಕಲಿ
ಸುಖವಾಗಿರಲಿ ಎಂದು ತೊರೆದು ಬರುವಾಗಾದದ್ದು 
ಕೇವಲ ನೋವಲ್ಲ, ಯಾತನೆಯೋ, ವೇದನೆಯೋ
ವಿವರ್ಣನೀಯ..

ಅಂಬಾ ಎಂದು ಓಡುತ್ತಾ ಕರುವೊಂದು
ತನ್ನಮ್ಮನ ಕೆಚ್ಚಲಿನ ಹಾಲ ಕುಡಿಯುತ್ತಲಿತ್ತು
ತಬ್ಬಲಿ ಮಕ್ಕಳ ಕಣ್ಣಮುಂದೆ
ಆ ಗೋವು ತನ್ನ ಕರುವನ್ನು ನೆಕ್ಕಿ ಮುದ್ದಿಸುತ್ತಲಿತ್ತು
ತಮ್ಮ ವಿಳಾಸವೇ ಅರಿಯದ ಮಕ್ಕಳು ನಿರಾಶೆಯ
ದೃಷ್ಟಿಯಿಂದ ಆ ದನ ಕರುಗಳನ್ನೇ ನೋಡುತ್ತಿದ್ದವು.
ಆದರೆ ಈ ಸಮಾಜ, ಕಟ್ಟಳೆಗಳೆಂಬ ಬಂಧಿಖಾನೆಯ
ಸರಳುಗಳನ್ನು ಬೇಧಿಸಿ ಹೊರಬರಲಾರದ ಬಂಧಿಗಳಾಗಿದ್ದವು
ಅಂದು ಆ ತಾಯಿಗೆ ಕುಂತಿಯ
ಬದಲಾಗಿ, ಈ ಹಸುಕರು
ನೆನಪಾಗಿದ್ದಿದ್ದರೆ, ಕಣ್ಮುಂದೆ ಒಂದರೆಗಳಿಗೆ
ಸುಳಿದಾಡಿದ್ದರೆ ಸಾಕಿತ್ತೇನೋ
ಇಂದು ಇಲ್ಲೊಬ್ಬ ಬಡ ಕರ್ಣ 
ಅನಾಥನೆಂಬ ಹಣೆಪಟ್ಟಿ ಅಂಟಿಸಿಕೊಳ್ಳುತ್ತಿರಲಿಲ್ಲ.

ಇತ್ತ,
ಅತ್ತ ನನ್ನ ಕಣ್ಣೀರೊರೆಸಲು ಕಣ್ಮಣಿಯಿಲ್ಲ,
ಸಂಗಾತಿಯಿಲ್ಲ, ತವರೂ ಇಲ್ಲ.
ಸುಡುಗಾಡು ಸಮಾಜದಲ್ಲಿ ಸತ್ತರೆ ಸಮಾಧಿ ಮಾಡುವವರಿಲ್ಲ. 
ಮೂಲೆಗೊಂದಿದ್ದ ನಿಜಾಮನರಮನೆ
ನನ್ನಂತೆಯೇ ನೀನೆಂದು ದಿಟ್ಟಿಸುತ್ತಿತ್ತು..
ಬಾಳ ದಾರಿಯೂ ನಿಜಾಮನರಮನೆಯಂತಃಪುರದಂತೆಯೇ 
ಕತ್ತಲು ಎಂದು ಗೊತ್ತಿದ್ದಾಗ್ಯೂ 
ಆಕೆ ಕೈಲಾದ ಮಟ್ಟಿಗೆ ಸರಿಪಡಿಸುವೆನೆಂದು ಹೆಣಗಾಡುತ್ತಿದ್ದಳು, 
ಆಕೆ ಅಸಹಾಯಕಳು..

                                    -ಪ್ರಗಲ್ಭಾ

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....