ಹಜ್ಮೂಲ....


ಸೋಮವಾರ ಬೆಳಗ್ಗಿನ ಮೂರನೇ ಪಿರಿಡ್,೧೦ ಬೆಂಚುಗಳಿದ್ದ ಕ್ಲಾಸ್ನಲ್ಲಿ, ನಾನು ನಾಲ್ಕನೇ ಬೆಂಚಿನ ಎಡತುದಿಯಲ್ಲಿದ್ದೆ. ಓರ್ಗಾನಿಕ್ ಕೆಮೆಸ್ಟ್ರಿ . ಲೆಕ್ಚರರ್ ಟಾರ್ಟಾರಿಕ್ ಆಸಿಡ್ ಟೋಟಲ್ ಸಿಂತೆಸಿಸ್ ಮಾಡ್ತಾ ಇದ್ರು. ನನಗೆ ಕೇಳ್ತಾ ಇದ್ದದ್ದು ಮಾತ್ರ ಕ್ಯಾಂಟಿನ್ ನಲ್ಲಿ ಆಗ್ತಾ ಇದ್ದ ಅನ್ನ, ಸಾಂಬಾರ್ ಸಿಂತೆಸಿಸ್. ಕ್ಲಾಸಲ್ಲಿದ್ದ ಒಂದಷ್ಟು ಜನಕ್ಕೆ ಬುತ್ತಿಯೊಳಗಿದ್ದ ದೋಸೆ,ಚಟ್ನಿ, ಇಡ್ಲಿ ಸಾಂಬಾರುಗಳ ಯೋಚನೆಯಾದರೆ, ಇನ್ನೊಂದಷ್ಟು ಜನಕ್ಕೆ ಕಿಟಕಿಯಿಂದ ಹೊರಗಡೆ ಇಣುಕಿ,ವರಾಂಡದಲ್ಲಿ ಅಡ್ಡಾಡುವ ಅಡ್ನಾಡಿಗಳನ್ನು ನೋಡುವುದೇ ಇಷ್ಟ. ಹಿಂದುಗಡೆ ಕುಳಿತಿದ್ದ ಮತ್ತೊಂದಷ್ಟು ಮಂದಿ ಬಾಯ್ ಫ್ರೆಂಡ್ ಕೊಟ್ಟ ಗಿಫ್ಟು,ನಿನ್ನೆಯಷ್ಟೇ ಕೊಂಡ ಆಂಡ್ರಾಯ್ಡು ಸೆಟ್ಟು,ಬಾಟನಿ ಮ್ಯಾಮ್ ಹಣೆಗಿಟ್ಟ ಬೊಟ್ಟು,ಫಸ್ಟ್ ಎರಡು ಪಿರಿಡ್ ಕ್ಲಾಸ್ ಬಂಕ್ ಮಾಡಿ ನೋಡಿದ್ದ ಮೂವಿಯಲ್ಲಿ ಅಕ್ಷಯ್ ಕುಮಾರ್ ಫೈಟು, ಇತ್ಯಾದಿ ಇತ್ಯಾದಿಗಳ ಬಗ್ಗೆ ಹರಟೆ ಒಂದಷ್ಟು. ಪಾಠ ಕೇಳ್ಲಿಕಂತಲೇ ಎದುರು ಬೆಂಚಲ್ಲಿ ಕೂತು, ಅತ್ಲಾಗಿ ಪಾಠವೂ ಕೇಳ್ಲಿಕ್ಕಾಗದೆ, ಇತ್ಲಾಗಿ ಮಾತಾಡ್ಲಿಕ್ಕೂ ಆಗದೆ ತ್ರಿಶಂಕು ಸ್ಥಿತಿಯಲ್ಲಿರುವ ಮಂದಿ ಇನ್ನೊಂದಷ್ಟು. ಇಲ್ಲಿರುವುದು ಮನುಷ್ಯರು ಅಂತ ಗೊತ್ತಿದ್ದೂ ಕ್ಲಾಸ್ ರೂಂ ನ ಪಕಾಸ್ ನ ಒಂದು ಮೂಲೆಯಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಗಳನ್ನು ಸಲಹುವ ಚಾತಕವನ್ನೇ(ಮರಕುಟಿಕ) ನೋಡುತ್ತಾ ತನ್ನನ್ನೂ ತನ್ನಾಕೆಯನ್ನು ಕಲ್ಪಿಸಿಕೊಳ್ಳುತ್ತಾ, ತಮ್ಮದೇ ಲೋಕದಲ್ಲಿ ತೇಲುತ್ತಿರುವವರು ಮತ್ತೊಂದಷ್ಟು. "ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ" ಅಂತ ಹೇಳ್ತಾರೆ, ಹಾಗೆ ಇದಾವುದರ ಪರಿವೇ ಇಲ್ಲದೆ ಲೆಕ್ಚರರ್ ಕೊರ್ದದ್ದನ್ನು, ಉಗ್ದದನ್ನು,ಒಗ್ದದನ್ನು ಎಲ್ಲವನ್ನೂ ಲಾಲಿ ಹಾಡು ಅಂತ ತಿಳ್ಕೊಂಡು ತೂಕಡಿಸುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂತಿಪ್ಪ ಕ್ಲಾಸ್ನ ಮಧ್ಯದೊಳಗೆ, ಪಾಠ ಕೇಳುವ ರೇರ್ ಸ್ಪೀಸೀಸ್ ಗಳೂ ಇವೆ. ಉಪ್ಪು,ಹುಳಿ,ಖಾರದ ಈ ಹಜ್ಮೂಲ ದಲ್ಲಿ ಮಜಾ ಸಿಗುವುದು ಪಾಠ ಕೇಳ್ಲಿಕ್ಕಲ್ಲ,ನಿದ್ದೆ ಮಾಡ್ಲಿಕ್ಕಲ್ಲ,ಹರಟ್ಲಿಕ್ಕಲ್ಲ,ಚುಯಿಂಗಮ್ ಜಗಿಲಿಕಲ್ಲ, ಜಗತ್ತಿನ ಯಾವ ಮ್ಯೂಸಿಯಂನಲ್ಲಿ ಹುಡುಕಿದ್ರೂ ಸಿಗದ ಇಂತಹ ವಿಚಿತ್ರಗಳನ್ನು ನೋಡ್ಲಿಕೆ...

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....