ಒಂಟಿ ಹಕ್ಕಿ.....


ಅದೊಂದು ಒಂಟಿ ಹಕ್ಕಿ, ಆಕಾಶದಲ್ಲಿ ಹಾರಾಡ್ತಾ ಇತ್ತು. ಅದಕ್ಕೊಂದು ಆಸೆ ನಾನು ಮೋಡಳಿಂದಾಚೆಗೆ ಹೋಗಿ ತನ್ನವರು ನೆಲೆಸಿರುವ ಜಾಗ ಸೇರಬೇಕು'' ಅಂತ.  ಆದರೆ ಅದು ಬಹಳ ದೂರ, ಹಾದಿಯೂ ತಿಳಿಯದು. ಪಾಪ! ಅದಕ್ಕಾಗಿ ತುಂಬಾ ಕಷ್ಟ ಪಡ್ತಾ ಇತ್ತು. ಪ್ರತಿದಿನ ಹಾರಾಟದ ಅಭ್ಯಾಸ ನಡೆಸ್ತಾ ಇತ್ತು. ತನ್ನ ಸಾಮಾರ್ಥ್ಯದ ಬಗ್ಗೆ ಅರಿವಿದ್ದ ಆ ಹಕ್ಕಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಿಕ್ಕೆ ತುಂಬಾ ಪ್ರಯತ್ನ ಪಡ್ತಿತ್ತು. ಒಂದೊಮ್ಮೆ ಅದರ ಗೆಳೆಯನೊಬ್ಬ ಹೇಳ್ತಾನೆ, ನೋಡೋ ಮಹಾರಾಯ, ನೀನು ಇನ್ನೂ ಆಚೆಗ್ ಹೋಗ್ಬೇಕಾದ್ರೆ ನೀನ್ ಈಗಿರುವ ಸ್ಥಿತಿಲಿ ಸಾಧ್ಯ ಇಲ್ಲ. ಇಲ್ಲಿಂದ ಏಳು ಸಾವಿರ ಪರ್ವತಗಳನ್ನು ದಾಟಿ ಹೋಗು. ಅಲ್ಲೊಂದು ಸನ್ಯಾಸಿಗಳ ಆಶ್ರಮ ಇದೆ. ಆ ಸ್ವಾಮಿಗಳ ಸೇವೆ ಮಾಡಿದ್ರೆ ನಿನಗೆ ಒಂದು ದಿವ್ಯ ವಾದ ಔಷಧ ಕೊಡ್ತಾರೆ. ಆ ಔಷಧ ಸೇವಿಸಿದ್ರೆ ನೀನಿನ್ನೂ ಬಲಿಷ್ಟ ಆಗ್ತೀಯ. ಖಂಡಿತಾ ಗುರಿ ತಲುಪ್ಲಿಕ್ ಸಾಧ್ಯ ಆಗ್ತದೆ ಅಂತ. ಹ್ಮ್ಂ!! ಈ ಗೆಳೆಯನ ಮಾತು ಸರಿ. ಇದೇ ಕಾಡಲ್ಲಿದ್ದು, ನನ್ನಷ್ಟಕ್ಕೇ ನಾನ್ ಕಷ್ಟ ಪಡ್ತಾ ಇದ್ರೆ ಏನ್ ಪ್ರಯೋಜನ. ಯಾರದಾದ್ರು ಸಲಹೆ, ಸಹಾಯ ಸಿಕ್ಕಿದ್ರೆ ಗಡಿ ಮುಟ್ಬೋದಲ್ಲಾ ಅಂದ್ಕೊಂಡು ಗೆಳೆಯನ ಸಲಹೆಯಂತೆ ಸನ್ಯಾಸಿಗಳನ್ನು ಹುಡುಕಿಕೊಂಡು ಹೊರಟಿತು. ಅದು ಬಹಳ ದೂರ ಸಾಗಬೇಕಾಗಿತ್ತು. ಹೀಗೆ ಹೊರಟ ಒಂಟಿ ಹಕ್ಕಿ ಬಹಳ ಪ್ರಾಯಾಸದಿಂದ ಮೂರು ಸಾವಿರ ಪರ್ವತಗಳನ್ನು ದಾಟಿತು. ಅದಾಗಲೇ ಆ ಪ್ರದೇಶದಲ್ಲಿ ಚಳಿಗಾಲ ಆವರಿಸಿತು. ಒಂಟಿ ಹಕ್ಕಿಗೆ ಮುಂದೆ ಪ್ರಯಾಣ ಬೆಳೆಸಲು ಸಾಧ್ಯವೇ ಇಲ್ಲವಾಯಿತು. ಅದಕ್ಕೀಗ ಬೆಚ್ಚನೆ ಸೂರು ಬೇಕಿತ್ತು. ಆದರೆ ಅಪರಿಚಿತ ಕಾಡಿನಲ್ಲಿ ಎಲ್ಲೆಂದು ಹುಡುಕುವುದು. 
    ಆ ದಿನ ರಾತ್ರಿ ಚಳಿಯಿಂದ ಗಡ ಗಡನೆ ನಡುಗಿದ ಹಕ್ಕಿಗೆ ನಿದ್ದೆ ಬಂದದ್ದೇ ತಿಳಿಯಲಿಲ್ಲ. ಬೆಳಗ್ಗೆ ಸೂರ್ಯೋದಯವಾದಗಲೇ ತಿಳಿದದ್ದು ಬೆಚ್ಚಗಿನ ಕಂಬಳಿಯೊಂದರ ಮೇಲೆ ತಾನು ನಿದ್ರಿಸಿದ್ದೇನೆ ಅಂತ. ಆಶ್ಚರ್ಯವೂ ಆಯ್ತು. ಯಾರಪ್ಪ ಪುಣ್ಯಾತ್ಮ ಈ ರೀತಿ ನನ್ನನ್ನು ಉಪಚರಿಸಿದ್ದು ಎಂದು. ಆಗಲೆ ಅಲ್ಲಿಗೊಂದು ಪುಟ್ಟ ಪುಟಾಳಿ ಚೆಂದುಳ್ಳಿ ಹಕ್ಕಿ ಬಂತು. ಜೊತೆಗೆ ಒಂದಷ್ಟು ಕಾಳು, ಧಾನ್ಯಗಳನ್ನು ತಂತು, ತಿನುವಂತೆ ಸೂಚಿಸಿತು. ಆ ಚೆಂದುಳ್ಳಿ ಹಕ್ಕಿಯ ಸೌಂದರ್ಯ ನೋಡುತ್ತಾ ಕುಳಿತ ಈ ಒಂಟಿ ಹಕ್ಕಿಗೆ ಪ್ರಯಾಣದ ಆಯಾಸ ಸರ್‍ರನೆ ಇಳಿಯಿತು. ಆ ಚೆಂದುಳ್ಳಿಯ ಮೇಲೆ ಮೋಹವಾಯಿತು. 
  ದಿನಗಳು ಉರುಳಿದವು, ಚಳಿಗಾಲ ಮುಗಿಯುತ್ತಾ ಬಂತು. ಅದು ಬೇಸಗೆಯ ಸಮಯ. ಚೆಂದುಳ್ಳಿಯ ಪ್ರೀತಿಯ ಸುಳಿಯಲ್ಲಿ ಸಿಕ್ಕ ಒಂಟಿ ಹಕ್ಕಿಗೆ ತನ್ನ ಗುರಿಯನ್ನು ಸಾಧಿಸುವ ಹಠ ಕರಗುತ್ತಾ ಬಂತು. ಒಂದಲ್ಲ ಮೂರು ಚಳಿಗಾಲ ಕಳೆದರು ಹಕ್ಕಿಗೆ ಹೊರಡುವ ಮನಸ್ಸಾಗದೇ ಗುರಿಯನ್ನು ಮುಂದೂಡುತ್ತಾ ಕಾಲ ಯಾಪನೆ ಮಾಡತೊಡಗಿತು. 
   ಚೆಂದುಳ್ಳಿಯ ಜೊತೆ ಸುತ್ತುವುದು, ಕಾಳುಗಳನ್ನು ಸಂಗ್ರಹಿಸುವುದು, ಗೂಡು ಕಟ್ಟುವುದು, ಸ್ವಚ್ಛಂದವಾಗಿ ಒಂದಷ್ಟು ಎತ್ತರಕ್ಕೆ ಜೊತೆಗೂಡಿ ಹಾರುವುದು, ನಗುವುದು ಚಳಿಯ ರಾತ್ರಿಗಳಲ್ಲಿ ಗೂಡಿನೊಳಗಿನ ಪಿಸುಮಾತು, ಒಂದು ಸುಂದರ ಪ್ರೀತಿಯ ಕಥೆಗೆ ಸಾಕ್ಷಿ ಅನ್ನುವಂತಿತ್ತು. 
 ಅದೊಂದು ಮುಸ್ಸಂಜೆ ಪರ್ವತಗಳಾಚೆಗೆ ಸೂರ್ಯ ಇಳಿಯುತ್ತಿದ್ದ ಸಮಯ. ಕಡುಕೆಂಪು ಬಣ್ಣದ ಬಾನು ಅದೇನನ್ನು ಹೇಳ ಹೊರಟಿತೋ ತಿಳಿಯದು... ಬಂದೇ ಬಿಟ್ಟಿತು ಒಂದು ಸುಂದರ ಪಕ್ಷಿ, ಹೊನ್ನಿನ ಬಣ್ಣದ ಮೈಯ ಒಡೆಯ, ಕೆಂಪು ನೀಲಿ ಹಸುರು ಬಣ್ಣಗಳ ಗರಿ, ರೆಕ್ಕೆಗಳೆಷ್ಟು ಸೊಗಸು? ಕುತ್ತಿಗೆಯ ಕೆಳಗೆ ಹೊಳೆಯುವ ನಕ್ಷತ್ರ.... ವ್ಹಾ!! ಮನ್ಮಥನೇ ರೂಪ ತಾಳಿ ಬಂದಂತೆ, ಅದೆಷ್ಟು ಚಂದದ ನೃತ್ಯ....
  ''ಚೆಂದುಳ್ಳಿಯ ಸ್ನೇಹ, ಒಡನಾಟವೀಗ ಆ ಚಂದದ ಹಕ್ಕಿಯ ಜೊತೆಗೇ... ನಾನೀಗ ಆಕೆಗೆ ಬೇಡವಾದೆನೆ? ನನ್ನ ಪ್ರೀತಿಯಲ್ಲಿ ಏನು ಕೊರತೆ ಕಾಣಿಸಿತೋ ಆಕೆಗೆ?'' ಒಂಟಿ ಹಕ್ಕಿ ಮರುಗಿತು. ಕೇಳಿಯೇ ಬಿಟ್ಟಿತು ಚೆಂದುಳ್ಳಿಯ ಜೊತೆಗೆ.
 '' ನಾ ನಿನ್ನ ಪ್ರೀತಿಸಿಯೇ ಇಲ್ಲ, ನೀನೇಕೆ ತಪ್ಪು ತಿಳಿದೆ. ನಮ್ಮಿಬ್ಬರ ಮಧ್ಯೆ ಇದ್ದುದು ನಿಷ್ಕಲ್ಮಶ ಸ್ನೇಹ, ಆ ಸ್ನೇಹಕ್ಕೆ ನೀನೀಗ ಪ್ರೀತಿಯ ಲೇಪನ ಮಾಡಿ ಅಶೌಚ ಗೊಳಿಸಿದೆ. ಚಳಿಯಲ್ಲಿ ನಡುಗುತ್ತಿದ್ದ ನಿನಗೆ ಕರುಣೆ ತೋರಿದ್ದು ತಪ್ಪೇ? ತಿನ್ನಲು ಆಹಾರ ಕೊಟ್ಟಿದ್ದು ತಪ್ಪೇ? ನನ್ನ ಗೂಡಲ್ಲಿರಲು ಜಾಗ ಕೊಟ್ಟಿದ್ದು ತಪ್ಪೇ? ಒಂಟಿಯಾಗಿದ್ದ ನಿನಗೆ ಭಾವನೆಗಳನ್ನು ಹಂಚಿಕೊಳ್ಳಲು ಮನಸ್ಸನ್ನು ಕೊಟ್ಟಿದ್ದು ತಪ್ಪೇ?'' ಈ ಸಾಲು ಸಾಲು ಪ್ರಶ್ನೆಗೆ ಉತ್ತರ ಹೊಳೆಯದ ಒಂಟಿ ಹಕ್ಕಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಕೊರಗಿತು, ಮರುಗಿತು, ಚೆಂದುಳ್ಳಿಯ ಪ್ರೀತಿಗಾಗಿ ಬೇಡಿತು......
 ಕಾಲ ಸರಿಯಿತು, ನಿಧಾನಕ್ಕೆ ಚೆಂದುಳ್ಳಿಯ ನೆನಪು ಮಾಸಿತು. ಆದರೇನು ಈಗ ರೆಕ್ಕೆಯಲ್ಲಿ ಶಕ್ತಿ ಇಲ್ಲ. ಅರ್ಧದಷ್ಟೂ ಕ್ರಮಿಸಿಲ್ಲ, ಇನ್ನೂ ನಾಲ್ಕು ಸಾವಿರ ಪರ್ವತಗಳನ್ನು ದಾಟಲು ಸಾಧ್ಯವೇ ಇಲ್ಲ. ಸೋತಿತು.... ಗುರಿಯನ್ನು ಮರೆತು ಯವ್ವನವನ್ನು ವ್ಯರ್ಥವಾಗಿ ಕಳೆದು, ಅವಿವೇಕಿಯಂತೆ ವರ್ತಿಸಿ ಬಿಟ್ಟೆನೋ ಎಂಬ ಕೊರಗಿನಿಂದಲೇ ಕೃಷವಾಗಿ, ಒಂಟಿಯಾಗಿ ಪ್ರಾಣ ಬಿಟ್ಟೇ ಬಿಟ್ಟಿತು ಒಂಟಿ ಹಕ್ಕಿ.....

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....