ಕನಸುಗಳನ್ನು ತುಂಬಿಸಿಕೊಟ್ಟ ಗುರುಗಳಿಗೆ ಅಕ್ಷರ ನಮನ.....


  ತಪ್ಪು ಮಾಡಿ ಬಿಟ್ಟೆನೋ, ಕೃತಘ್ನಳಂತೆ ವರ್ತಿಸಿದೆನೋ ಎಂಬ ಕೊರಗು ಬಹಳ ದಿನಗಳಿಂದ ಕಾಡ್ತಾ ಇದೆ. ಕೆಲವೊಂದು ವಿಷಯಗಳ ಬಗ್ಗೆ ನನಿಗೆ ತೋಚಿದಂತೆ ಗೀಚಿದ್ದೇನೆ, ಆದರೆ ಲೇಖನಿಯೊಳಗೆ ಷಾಯಿ ತುಂಬಿ, ತುಂಬಿಸಲೂ ಕಲಿಸಿದ ಆ ಮಹಾನುಭಾವನಿಗೆ ಅಕ್ಷರ ನಮನ ಸಲ್ಲಿಸಲೇ ಇಲ್ಲ. ಅವರು ನನ್ನಂತಹ ಹಲವು ವಿದ್ಯಾರ್ಥಿಗಳ ಪಾಲಿಗೆ ಹೀರೋ. ಆಕಾರವೇ ಇಲ್ಲದ ಕಲ್ಲುಗಳಿಗೆ ರೂಪ ಕೊಟ್ಟ ಶಿಲ್ಪಿ. ಮನಸಿನ ಕ್ಯಾನ್ವಸ್ ನಲ್ಲಿ ರಂಗ್ ರಂಗಿನ ಚಿತ್ರ ಬಿಡಿಸಿದ ಕಲಾಕಾರ. ನಾನು ಭಾಗ್ಯಶಾಲಿ, ಅಂತಹ ಅದ್ಭುತ ವ್ಯಕ್ತಿತ್ವ ದ ಅಪೂರ್ವ ಶಿಕ್ಷಕರೋರ್ವರು ದೊರಕಿದ್ದು. ಅತ್ಯಂತ ಹೆಮ್ಮೆಯಿಂದ ಬರಿತೇನೆ ನಾನು ಓದಿದ್ದು "ವಿದ್ಯಾಬೋಧಿನೀ ಪ್ರೌಢ ಶಾಲೆ ಬಾಳಿಲ"ದಲ್ಲಿ ಅಂತ. ಅಷ್ಟೇ ಖುಷಿಯಿಂದ ಮನತುಂಬಿ ಬರೀತೇನೆ "ಎಂ.ಜೆ. ರವೀಂದ್ರನಾಥ ಶಿಶಿಲ"ರ "ಸಮಾಜ" ಪಾಠವನ್ನು ನಾನು ಕೇಳಿದೇನೆ, ಅವರ ಕೈಯಿಂದ ಇಂಗ್ಲಿಷ್ ನ್ನು ಕಲ್ತಿದೇನೆ. ಹಳ್ಳಿಗಳ ಸರಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಕಲಿತ ಸಾಮಾನ್ಯ ರೈತಾಪಿ ಕಟುಂಬದಿಂದ ಬಂದ ನನ್ನಂತ ಬಾವಿಯೊಳಗಿನ ಕಪ್ಪೆಗಳೇ ಹೆಚ್ಚಾಗಿ ತುಂಬಿದ್ದ ತರಗತಿಗಳವು. ಪ್ರಪಂಚದ ಬಗ್ಗೆ ಅರಿವೇ ಇಲ್ಲದ ಭವಿಷ್ಯದ ಬಗ್ಗೆ ಊಹಿಸುವಷ್ಟೂ ಜ್ಞಾನವಿಲ್ಲದ ಬದುಕಿನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗದಷ್ಟು ಮೌಢ್ಯ,ಮುಸುಕು. ಬಹುಷಃ ಆ ಅಜ್ಞಾನದ ಪರದೆಯನ್ನು ಸರಿಸಲು ಕಾಲನ ಪಾತ್ರ ಎಷ್ಟಿತ್ತೋ ಅಷ್ಟೇ ರವೀಂದ್ರ ಸರ್ ದೂ ಇತ್ತು.
World Trade Center ಗೆ ಲಾಡೆನ್ ದಶಕಗಳ ಹಿಂದೆ ಏರೋಪ್ಲೇನ್ ಕ್ರಾಷ್ ಮಾಡಿಸಿದ್ದನ್ನು ಭಾರತೀಯರು ಯಾರೆಲ್ಲ ನೋಡಿದಾರೇ ಗೊತ್ತಿಲ್ಲ, ನಾನಂತು ನೋಡಿದೇನೆ, ಅದು ರವೀಂದ್ರ ಸರ್ ನ ಇಂಗ್ಲಿಷ್ ಕ್ಲಾಸ್ ನಲ್ಲಿ. william wordsworth ರ ಜೊತೆ ನಾನೂ ಮೋಡಗಳಂತೆ ಪರ್ವತ ಹಾಗೂ ಕಣಿವೆಗಳ ಮೇಲಿನಿಂದ ತೇಲುತ್ತಾ ಕೆಳಗಿದ್ದ ಬಂಗಾರದ ಹೂ ಗಳಿಂದ ಕಂಗೊಳಿಸುವ "ಡೇಫೋಡಿಲ್ ಪ್ಲಾಂಟ್" ಗಳ ಸೌಂದರ್ಯವನ್ನು ಕಂಡಿದ್ದೇನೆ, "ಸ್ವಾಮಿನಾಥನ್" ನ ತರಗತಿಯಲ್ಲಿ ನಾನೂ ಇದ್ದೆ. ಆತ, ಆ ಎಳೆ ಹುಡುಗ ತರಗತಿಯನ್ನು ಬಹಿಷ್ಕರಿಸಿ ಬ್ರಿಟಿಷರ ವಿರುದ್ಧ ಬೀದಿಗಿಳಿದದ್ದನ್ನು ನಾ ಕಂಡಿದ್ದೇನೆ. ಷೇಕ್ಸ್ ಪಿಯರ್ ನ ನಾಟಕಗಳನ್ನೂ ನೋಡಿದ್ದೇನೆ. ಕೇವಲ ನಾನಷ್ಟೇ ಅಲ್ಲ, ರವೀಂದ್ರ ಸರ್ ನ ತರಗತಿಯನ್ನು ಆಲಿಸಿದ ಎಲ್ಲರೂ. ಮೈಸೂರು ಅರಸರು, ಮೊಘಲರು, ಎಲ್ಲರೂ ನಮ್ಮ ಕಣ್ಣೆದುರೇ ಇದ್ದರು. ಒಂದನೇ ಮಹಾಯುದ್ಧಕ್ಕೆ ನಾವೆಲ್ಲ ಹೋಗಿದ್ದೆವು, ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ನಾವು ಮಿತ್ರ ಪಕ್ಷದಲ್ಲಿದ್ದೆವು. ಹಿಟ್ಲರ್ ನಮ್ಮ ಆಪ್ತನಾಗಿದ್ದ. ನೆಪೋಲಿಯನ್ ಸೈಬೀರಿಯಾದ ಚಳಿಯನ್ನು ಹೇಗೆ ತಡೆದುಕೊಂಡನೋ. ಚಿಕ್ಕದಾದ ಜಪಾನ್ ನನ್ನು ನಿಯಂತ್ರಿಸಲು ಅಟಂ ಬಾಂಬ್ ಬೇಕಿತ್ತಾ? ಸುಭಾಷ್ ಚಂದ್ರ ಬೋಸರಿಗೇಕೆ ಭಾರತ ರತ್ನ ಕೊಡಲು ಅಷ್ಟು ತಡವಾಯಿತು? ಅವರ ಮಗಳು ಅದನ್ನು ತಿರಸ್ಕರಿಸಿ ತಂದೆಯ ಮಗಳೆಂಬುದನ್ನು ಸಾಬೀತು ಪಡಿಸಿದ್ದು. ಬೋಸರಂತು ಆಗಾಗ ನಮ್ಮ ತರಗತಿಗೆ ಬರ್ತಾ ಇದ್ರು. ಇವ್ರನ್ನು ನಮ್ಮ ಕಣ್ಣ ಮುಂದೆ ನಿಲ್ಲಿಸ್ತಿದ್ದದ್ದು ರವೀಂದ್ರ ಸರ್. ಪಾಠ ಪುಸ್ತಕ ಹೇಳದೇ ಬಚ್ಚಿಟ್ಟ ಅನೇಕ ಸತ್ಯಗಳು ನಮಗೆ ತಿಳಿಸಿದ್ದು ರವೀಂದ್ರ ಸರ್. " ಮಕ್ಳೇ ಅಮೇರಿಕಾದಲ್ಲಿ ಕ್ರಾಂತಿ ಆಗಿದೆ, ಫ್ರಾನ್ಸನಲ್ಲಿ ಕ್ರಾಂತಿ ಆಗಿದೆ, ಚೀನದಲ್ಲಿ ಕ್ರಾಂತಿ ಆಗಿದೆ, ಅದಕ್ಕೆ ಅವುಗಳು ಮುಂದುವರಿದ ರಾಷ್ಟ್ರಗಳು, ಭಾರತ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರ. ಯಾಕೆ? ಕೊಚ್ಚಿ ಬಿಸಾಡ್‌ಬೇಕು ಈ ಭ್ರಷ್ಟ ವ್ಯವಸ್ಥೆಯನ್ನು. ರಕ್ತದ ಬಣ್ಣ ಗೊತ್ತುಂಟಾ ಭಾರತೀಯರಿಗೆ?" ಅಂತ ಅವ್ರು ಕೇಳುವಾಗ ಲಂಚ ಕೋರರ, ಭ್ರಷ್ಟರ ವಿರುದ್ಧ ಒಮ್ಮಿಂದೊಮ್ಮೆಗೇ ಎಲ್ಲಿಲ್ಲದ ಕೆಚ್ಚು, ರೋಷ ಉಕ್ಕುತ್ತಿತ್ತು. ಆ ಸ್ವರದಲ್ಲಿದ್ದ ತಾಕತ್ತು, ಗಾಂಭೀರ್ಯ, ಗಡಸುತನ ಇವತ್ತಿಗೂ ನನ್ನ ಕಿವಿಯಲ್ಲಿ ಗುಂಯ್ ಗುಡ್ತಾ ಉಂಟು. ಯೂವುದೇ ಪರದೆ ಇಲ್ಲದೇ ಶಬ್ಧಗಳಿಲ್ಲದೇ ಕಲಾವಿದರನ್ನೂ ಬಳಸಿಕೊಳ್ಳದೇ ಅದೆಷ್ಟೋ ಚಿತ್ರಗಳನ್ನು ತೋರಿಸ್ತಾ ಇದ್ರು. ಅವ್ರು ತುಂಬಾ ಚಂದ ಚಿತ್ರ ಬಿಡಿಸ್ತಿದ್ರು, ಅವ್ರ ಡ್ರಾಯಿಂಗ್ ಪುಸ್ತಕದಲ್ಲಿ ಮಹಾನ್ ವ್ಯಕ್ತಿಗಳು ಇದ್ರು. ಆಲ್ಬಂ ಇತ್ತು ಅವ್ರಲ್ಲಿ, ಅದ್ರಲ್ಲಿ ರಷ್ಯಾ ದ ಗೊರ್ಬಚೇವ್, ಅಮೇರಿಕಾದ ಅಬ್ರಹಾಂ ಲಿಂಕನ್ ಹೀಗೆ ಅನೇಕ ಮಹಾನುಭಾವರ ಹಳೆಯ ಅಪರೂಪದ ಭಾವಚಿತ್ರಗಳಿದ್ದವು. ನನಗೆ ತಿಳಿದಂತೆ ಕಾಶ್ಮೀರದಿಂದ ಕನ್ಯಾ ಕುಮಾರಿ ವರೆಗೆ, ಗುಜರಾತ್ ನಿಂದ ಅಸ್ಸಾಂ ತನಕ ಭಾರತವನ್ನು ನೋಡಿದ್ದಾರೆ. ರವೀಂದ್ರ ಸರ್ನ ಕ್ಲಾಸ್ ಅಂದ್ರೆ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿ ಚಾನೆಲ್ ನೋಡಿದ ಅನುಭವ. ಭೈರಪ್ಪ, ರವಿ ಬೆಳಗೆರೆ, ಎಚ್.ಎಸ್.ನ, ಪೂ.ಚಂ.ತೇ, ಕಾರಂತ, ಕುವೆಂಪು, ಶಿಶಿಲ, ಪ್ರತಾಪ ಸಿಂಹ, ವಿಶ್ವೇಶ್ವರ ಭಟ್, ಸೂಲಿಬೆಲೆ, ಹೀಗೆ ಹತ್ತು ಹಲವು ಸಾಹಿತಿಗಳ, ಲೇಖಕರ ಪುಸ್ತಕಗಳನ್ನು ಓದಲು ಕೊಟ್ಟು ನನ್ನ ಲೇಖನಿಗೆ ಷಾಯಿ ತುಂಬಿಸಿದ್ದು ಅವರೇ. ಹಾಗೆಯೇ ನಾವಿವತ್ತು ನಾಲ್ಕು ಜನರ ಮುಂದೆ ನಿಂತು ತಲೆಯೆತ್ತಿ ಎದೆಯುಬ್ಬಿಸಿ ಆತ್ಮವಿಶ್ವಾಸದಿಂದ ಮಾತಾಡ್ತೇವೆ ಅಂತಂದ್ರೆ ಅದಕ್ಕೂ ಅವರೇ ಕಾರಣ. ತರಗತಿಯಲ್ಲಿ ಪ್ರಶ್ನೆ ಕೇಳಿದಾಗ ಯಾರು ಮಾತನಾಡದೇ ಇದ್ರೆ ಅವರು ಹೇಳ್ತಿದ್ದದ್ದು "ನಿಮಿಗೆ ಉತ್ತರ ಗೊತ್ತುಂಟಾ ಇಲ್ಲ್ವಾ ಅನ್ನುವಂತದ್ದು ಮುಖ್ಯ ಅಲ್ಲ, ಎದ್ದು ನಿಲ್ಲಿ ಆಗ ಸರಿಯೋ ತಪ್ಪೋ ಒಂದು ಉತ್ತರ ಬರ್ತದೆ ಅಷ್ಟು ಸಾಕು". ನಾಲ್ಕು ಜನರ ಮಧ್ಯದಿಂದ ಎದ್ದು ನಿಂತು ಅವರ ದನಿಯಾಗ್ಬೇಕು ಅನ್ನುವುದನ್ನು ಅವರು ಹೀಗೆ ಕಲಿಸ್ತಿದ್ರು. ಅವರು ಒಂದು ವಿಕಿಪೀಡಿಯಾದಂತೆ, ಯಾವ ವಿಷಯವಾದ್ರೂ ಸರಿ, ಅದರ ಬಗ್ಗೆ ಆಳವಾದ ಜ್ಞಾನ. ಹಲವು ಬಾರಿ ಅಂದು ಕೊಂಡಿದ್ದೆ ಕನ್ನಡದ ಕೋಟ್ಯಾದಿಪತಿಗೆ ಅವ್ರೆಲ್ಲಿಯಾದ್ರು ಆಯ್ಕೆ ಆಗ್ತಿದ್ರೆ ಖಂಡಿತಾ ಒಂದುಕೋಟಿ ಗೆಲ್ತಿದ್ರು ಅಂತ. ಪಾಠದ ನಡುವೆ ಜನರಲ್ ಆಗಿ ಹಲವು ವಿಷಯಗಳನ್ನು ಹೇಳ್ತಿದ್ರೂ ಹೇಳದೆ ಉಳಿಸಿದ ವಿಷಯಗಳು ಇನ್ನೂ ಹಾಗೆ ಇವೆ. ನಲುವತ್ತು ನಿಮಿಷಗಳ ಅವಧಿಯಲ್ಲಿ ಅದು ಕಷ್ಟ. ಇನ್ನೊಮ್ಮೆ ಹೇಳುವ ಅಂತ ಬಾಕಿ ಆದ ವಿಷಯಗಳ ಬಗ್ಗೆ ನಾವಿನ್ನು ಯಾವತ್ತು ಅವರಿಂದ ತಿಳ್ಕೊಳ್ಲಿಕ್ ಸಾಧ್ಯ ಇಲ್ಲ. ಅವರ ವ್ಯಕ್ತಿತ್ವ ಇಷ್ಟಕ್ಕೇ ಸೀಮಿತವಲ್ಲ. ಶಾಲಾ ಪ್ರವಾಸವನ್ನು ಅರೇಂಜ್ ಮಾಡ್ತಿದ್ದವರು ಅವರು ಹಾಗು ಉದಯ್ ಸರ್. Plan ಎಲ್ಲ ತುಂಬಾ ನೀಟ್ ಆಗಿ ಇರ್ತಿತ್ತು. ಅರುವತ್ತು ಎಪ್ಪತ್ತು ಮಂದಿ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಗೋವಾ, ಹೈದರಬಾದ್, ಕನ್ಯಾಕುಮಾರಿ ಮುಂತಾದ ಕಡೆಗಳಿಗೆ ಕರ್ಕೊಂಡು ಹೋಗುವುದು, ಒಂದು ವಾರ ಅವರನ್ನು ಸಂಭಾಳಿಸುವುದು ಸಣ್ಣ ವಿಷಯ ಅಲ್ಲ. ವಿದ್ಯಾರ್ಥಿ ಸಂಸತ್‌, ಸ್ಕೌಟ್‌ ಗೈಡ್, ಚಾರಣ, ಕ್ವಿಜ್‌, ಯಕ್ಷಗಾನ ಹೀಗೆ ಎಲ್ಲಾ ವಿಷಯಗಳಲ್ಲೂ ವಿದ್ಯಾರ್ಥಿಗಳನ‌್ನು ತೊಡಗಿಸಿಕೊಳ್ಳುತ್ತಿದ್ದರು. ಫ್ರೆಂಡ್ಲಿ ಆಗಿದ್ರೂ, ಬೇಕಾದಲ್ಲಿ ಸ್ಟ್ರಿಕ್ಟ್. ಅವರ ಜೊತೆ ಚಾರಣ, ಪ್ರವಾಸ ಹೋಗುವುದೇ ಒಂದು ಮಜ. ಟೋಟಲ್ ಆಗಿ ಹೇಳ್ಬೇಕಂದ್ರೆ ರೂಪದಲ್ಲಾಗ್ಲಿ, ಗುಣದಲ್ಲಾಗ್ಲಿ, ವ್ಯಕ್ತಿತ್ವದಲ್ಲಾಗಲೀ ಯಾವುದೇ ಹೀರೋಗಳಿಗೆ ಕಮ್ಮಿ ಇಲ್ಲ.
ಕೇವಲ ಇಷ್ಟೇ ವಿಚಾರಗಳಿಂದ ಅವರ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು ಹೇಳ್ತಿದ್ರು "ನನ್ನ ವಿದ್ಯಾರ್ಥಿಗಳೇ ನನ್ನ ಪಾಲಿನ ಜಡ್ಜ್ಸ್‌. ಅವರು ಕೊಡುವ ತೀರ್ಪೇ ಅಂತಿಮ ಅಂತ." ಬಹುಷಃ ಯಾವ ವಿದ್ಯಾರ್ಥಿಯಲ್ಲಿ ಕೇಳಿದ್ರೂ ಸಿಗಬಹುದಾದ್ದು ಒಂದೇ ಉತ್ತರ "he was a great teacher" ಅಂತ. ರವೀಂದ್ರ ಸರ್ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯದೇ ಇರಬಹುದು, ಆದರೆ ಅವರೆಲ್ಲರಿಗಿಂತಲೂ ಶ್ರೇಷ್ಟ, ಏಕೆಂದರೆ ನಮ್ಮಂತ ಹಲವು ವಿದ್ಯಾರ್ಥಿಗಳು ದಿನಾ ಅವರನ್ನು ನೆನಪಿಸಿ ಕೊಳ್ತಾರೆ. ಏನನ್ನಾದರೂ ಸಾಧಿಸಿದರೆ ಆ ಸಾಧನೆಯ ಕ್ರೆಡಿಟ್ ರವೀಂದ್ರ ಸರ್ ಗೆ. ಅವರೇ ಹೇಳ್ತಿದ್ದದ್ದು "ಮಕ್ಳೇ ನಾವು ನೂರು ವರ್ಷ ಬದುಕುದು ಮುಖ್ಯ ಅಲ್ಲ, ನೂರು ವರ್ಷ ನಮ್ಮ ಹೆಸರು ಉಳಿಯುವ ಹಾಗೆ ಬದುಕ ಬೇಕು " ಅಂತ.. ಬರವಣಿಗೆಗೆ ಬಂಡವಾಳ ಯಾವುದು? ಅಂದರೆ ನನ್ನ ಪ್ರಕಾರ ಓದು. ಓದದೇ ಬರಿಲಿಕ್ ಬರುದಿಲ್ಲ. ನನ್ನನ್ನು ಹಾಗು ನನ್ನಂತ ಹಲವು ಓದುಗರನ್ನು ಸೃಷ್ಟಿಸಿದ, ಹಾಗೆಯೇ ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಗುರುಗಳು. ರವೀಂದ್ರ ಸರ್ ಬಗ್ಗೆ ಇಷ್ಟು ತಡವಾಗಿ ಬರ್ದದಕ್ಕೆ ದುಃಖ ಆಗ್ತಾ ಇದೆ.
ವಿದ್ಯಾರ್ಥಿಗಳ ಯಶಸ್ಸನ್ನು ಸಂಭ್ರಮಿಸುತ್ತಿದ್ದ ಹೆಮ್ಮೆ ಪಡ್ತಾ ಇದ್ದ ವ್ಯಕ್ತಿ ಮತ್ತೊಮ್ಮೆ ಶಿಕ್ಷಕನಾಗಿ ನಮ್ಮ ಬಾಳಲ್ಲಿ ಬರಲಿ. ಹೂ ಒಂದು ಅರಳಿ ತನ್ನ ಸುಗಂಧ ಪಸರಿಸುವ ಮುನ್ನವೇ ಬಿದ್ದು ಹೋಯ್ತು ಅನ್ನುವಂತದ್ದೇ ಖೇದ. ಕೇವಲ ಮೇಲಿನ ನಾಲ್ಕು ಅಕ್ಷರಗಳ ಮೂಲಕ ನಿಮಿಗೆ ಆ ವ್ಯಕ್ತಿಯ ಬಗ್ಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾಗರಕ್ಕೆ ಹೇಗೆ ಸಾಗರವೇ ಸಾಟಿಯೋ ಹಾಗೆ 'ರವೀಂದ್ರಸರ್ ಗೆ ರವೀಂದ್ರ ಸರ್ ಸಾಟಿ' ಬೇರೊಂದು ಉಪಮೆ ಸಾಧ್ಯವಿಲ್ಲ.
miss u sir, miss u a lot 

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....