ಹೆಣ್ಣು ಬದುಕಿನ ಸ್ವಗತ


ಹೆಣ್ಣಿನ ಕಡೆಯವರು ಬರುತ್ತಾರೆಂದು 
ಹಳೆ ಗುಜುರಿ ಮನೆಗೆ ಬಣ್ಣ ಕೊಟ್ಟರು.
ಮದುವೆ ನಡೆಯಿತು, ಮದುಗಳು ಮನೆಗೆ ಬಂದಳು.
ಬರು ಬರುತ್ತಾ ಬಣ್ಣ ಉದುರಲು ಪ್ರಾರಂಭವಾಯಿತು.
ಚಂದಮಾಸಿತು,
ಮಣ್ಣಿನ ಗೋಡೆಯದು ಹಳತು 
ಎಂಬುದಾಕೆಗೆ ಖಾತ್ರಿಯಾಯಿತು.
ಕಾಲ ಕಳೆಯಿತು, ಮಳೆಗಾಲವದು
ಮನೆಯ ಮಾಡು ಸೋರುವುದೂ ಆಕೆಗೆ ತಿಳಿಯಿತು.
ಇಡುತ್ತಾರಲ್ಲಲ್ಲಿ ಪಡಿಗೆ, ಪಾಟೆ, ಪಾತ್ರಗಳನ್ನು.
ಅದು ಸೆಕೆಗಾಲ, ಗೆದ್ದಲುಗಳು
ನಾನಾ ತರದ ಇರುವೆಗಳು,
ಸೆಕೆ ಹಾತೆಗಳು ಇತ್ಯಾದಿಗಳು
ಮನೆಯ ಸಂಧಿ-ಗೊಂದಿಗಳ 
ಮಾಟೆಯಿಂದ ಏಳಲಾರಂಭಿಸಿದವು.
ಅರ್ಥವಾಯಿತಾಕೆಗಾಗ ಇದು ಜೀವ ವೈವಿಧ್ಯಗಳ 
ತಾಣವೆಂದು (bio diversity hot spot)
ಒಂದು ಮುಸ್ಸಂಜೆ ಚಿಂತಿಸುತ್ತಾ
ನಿಂತಿದ್ದಳು ಗಿಳಿಬಾಗಿಲಿಗೊರಗಿ
ನೀರವ ಮೌನ, ಸುತ್ತಲೂ ಕತ್ತಲು
ಜಾರಿ ಬರುವ ಹೊತ್ತು.
"ದೇವ! ಕೆಟ್ಟೆನೇ ಊರವರ
ಮಾತು ನಂಬಿ?"
ಆಗಲೇ ಪರಮಾತ್ಮ ಪ್ರತ್ಯಕ್ಷನಾದನೇನೋ!
ನೀಡಿಹನು ಭಸ್ಮವ ತನ್ನ
ಮೊರೆಯ ಕೇಳಿ, ಅಲ್ಲ ಅದು ಕುಟ್ಟೆ ಸುರಿದದ್ದು.
 ಬಾಗಿಲೂ ಕುಂಬು.
ಬಣ್ಣ ಮರೆಮಾಡಿತು, 
ಕೊಟ್ಟಗೆಯಂತಿಹ ಮನೆಯ ಅರಮನೆಯೆಂದು 
ತಿಳಿದು ಮೋಸಹೋದೆವು, ನಾನು ನನ್ನ ತವರಿನವರು.
ಗೋಸುಂಬೆ ಅಂದು ಸಿಟ್ಟುಗೊಂಡಿತ್ತು
ತನ್ನನ್ನು ಸೋಲಿಸಿದ ಜನರ ಕಂಡು.
ತಲೆಬಗ್ಗಿಸಿ ಹಾರ ಹಾಕಿಸಿಕೊಂಡಾತ,
ಕಾಲುಂಗುರ ಹಾಕಿದವಳು, 
ಮುಂಡಾಸು ತೊಟ್ಟು ದಕ್ಷಿಣೆ ನೀಡುತ್ತಿದ್ದಾತ,
ಪನ್ನೀರು ಸಿಂಪಡಿಸಿದವನು,
ಆರತಿ ಎತ್ತಿದವಳು, ಚಾಕಲೇಟ್ ಹಂಚಿದವಳು, 
ಸೆರೆ ಸೀರೆ ಹಿಡಿದವರು,
ಮುಗಿಯದಂದಿನ ನಗುಮೊಗದ
ಜನರ ಪಟ್ಟಿ.
ಅಂದು ಎಣಿಸಿರಲಿಲ್ಲ, 
ತೊಟ್ಟಿದ್ದ ಉತ್ತರಿಗೆಯಲ್ಲಿದ್ದ ಮಡಿಕೆ ಎಷ್ಟು?
ಬಾಸಿಂಗದಲ್ಲಿದ್ದ ಸಿಂಗಾರವೆಷ್ಟು?
ಮದುಮಗನ ಕೈ ಗಡಿಯಾರದಲ್ಲಿದ್ದ
ಮುಳ್ಳುಗಳೆಷ್ಟು? ಎಂದು.
ಅವರು ಕೊಟ್ಟದ್ದು ಕಳಪೆಯಲ್ಲ
ಕಪಾಟು ಹಲಸಿನಮರದ್ದು,
ಬಳೆಗಳು, ನೆಕ್ಲೇಸ್, ಕಿವಿಯೋಲೆ,
ಉಂಗುರ, ಬ್ರೇಸ್ಲೈಟ್,ಪರಿಶುದ್ದ ಆಭರಣ ಚಿನ್ನ. 
ಒಂದು ಲಕ್ಷ,
ಆಕೆಯ ನೆಂಟರಿಷ್ಟರಿಂದ ಬಂಧು ಮಿತ್ರರಿಂದ 
ವಸಗೆಯೆಂದು ಸಂಗ್ರಹವಾದ ಹಣ.
ಎಲ್ಲವನ್ನೂ ತುಂಬಿದ್ದು ತವರಿನಿಂದ
ಬಂದ ಅದೇ ಹಲಸಿನಮರದ
ಕಪಾಟಿಗೆ.
ಬೀಗದ ಕೈ ಮಾತ್ರ "ಅಮ್ಮನೆಂದೆಣಿಸು ನನ್ನ" 
ಎಂದವಳ ಸೊಂಟದಲ್ಲಿ.
ಒಮ್ಮೊಮ್ಮೆ ಸಿಗುತ್ತಿತ್ತು ಕರಿಮಣಿ ಹಾರವನ್ನು ಬಿಗಿದ ಕೈಗಳಿಗೆ.
"ಕೇಳಿಲ್ಲಿ ಇದು ತವರಲ್ಲ ಗಂಡನ ಮನೆ.
ಇಲ್ಲಿಯ ರೀತಿ ನೀತಿಯೇ ಬೇರೆ. 
ಕೇಳಬೇಕು ಒಪ್ಪಿಗೆ, ಓರಗೆಯವರೊಡನೆ ಹರಟಲು, 
ಗೆಳತಿಯರೊಡನೆ ಸುತ್ತಾಡಲು, 
ಅಜ್ಜಿಯ ಬೊಜ್ಜಕ್ಕೆ ಹೋಗಲು, 
ಹುಡುಗಿಯಲ್ಲ ನೀನೀಗ ಗರತಿ" ಎಂದಿದ್ದಳು
 ಈ ಮನೆಯ ಯಜಮಾನಿ.
ಕೇಳಬೇಕಿತ್ತು ಕಾಸು, ಮೊಬೈಲ್ ಗೆ ಕರೆನ್ಸಿ, 
ನೆಟ್ ಪ್ಯಾಕ್ ಹಾಕಿಸಲು, 
೬ ತಿಂಗಳಿಗೊಮ್ಮೆ ತವರನ್ನು ಕಾಣಲು.
ಬಳೆಗಳಿಗೆ, ಬಿಂದಿಗೆಗೆ, ಬಾಚಣಿಗೆಗೆ, 
ಒಂಚೂರೇ ಚೂರು, ಕೈ ಕಾಲು ಮುಖಕ್ಕೆ
 ಹಚ್ಚಿ ಕೊಳ್ಳುವ ಬಣ್ಣಗಳಿಗೆ.
"ಮದುವೆಯಾಗಿದೆ ನಿನಗಿನ್ನೇಕೆ ಈ ಫ್ಯಾಶನ್ ಹುಚ್ಚು? 
ನೋಡಲ್ಲಿ ಸಾಕಷ್ಟು ಬಟ್ಟೆಗಳು ಕೊಳೆಯಾಗಿವೆ,
ಬಿದ್ದಿವೆ ಬಚ್ಚಲಲ್ಲಿ ಮುಸುರೆ ಪಾತ್ರೆಗಳು. 
ಕಿಸೆಯೊಟ್ಟೆ ನನ್ನದು. ನಿನ್ನ ಅನಗತ್ಯ ಬೇಡಿಕೆಗಳಿಗೆ ಕಾಸಿಲ್ಲ." 
ಎಂದಾತನ ತೂತು ಕಿಸೆಯಿಂದಲೇ ಇಣುಕುತ್ತಿತ್ತು
 ಮಾವ ಕೊಟ್ಟ ಕಪಾಟಿನ ಕೀಲಿ ಕೈ.
"ಎದುರಾಡದಿರು ಅಲ್ಲಿರುವ ಹಿರಿಯರ ಮಾತುಗಳಿಗೆ. 
ನಿನಗಿನ್ನವರೇ ತಂದೆ, ತಾಯಿ, ಬಂಧು ಬಳಗ,
ಸಖನಾತ ಕೇವಲ ಗಂಡನಲ್ಲ. 
ಒಳ್ಳೆಯ ಜನಗಳನ್ನೇ ಹುಡುಕಿಹೆನು, 
ಅಲ್ಲೇನು ತೊಂದರೆಯಿಲ್ಲ. 
ಕೇಳಿರುವೆಯಾ ಊರವರ ಮೆಚ್ಚುಗೆಯ ನುಡಿಯ" 
ಎಂದ ಅಪ್ಪನ ನೆನಪಾಯಿತು.
ಅಲ್ಲೇ ಟಿಕ್ ಟಿಕ್ ಎಂದು ಸದ್ದು ಮಾಡುತ್ತಿತ್ತು 
ಗೆಳೆಯರು ಕೊಟ್ಟ ಗಡಿಯಾರ. 
ತಮ್ಮ ಕೊಟ್ಟ ಗೊಂಬೆ ನಗುತ್ತಿತ್ತು ಅವನಂತೆಯೇ. 
ಉಡುಗರೆಗಳೊಂದಿಗೇ ನೆನಪಾದರು ನನ್ನವರು. 
ಮಾತನಾಡೋಣವೆಂದರೆ ಮೊಬೈಲ್ ಹಾಳಾಗಿದೆ, 
ಹೇಳಿವಾರಗಳೆರಡು ಸಂದವು. ರಿಪೇರಿಯೂ ಆಗಲಿಲ್ಲ,
ಹೊಸತೂ ಬರಲಿಲ್ಲ.
ನಾಳೆ ಬರುವರು ನನ್ನ ಸೋದರತ್ತೆ,
 ಮಾವ, ಮತ್ತು ಭಾವ.
ಅದೇ ಅವರು, ಅಂದು ವಾಷಿಂಗ್ ಮಿಷನ್ 
ಉಡುಗೊರೆ ಮಾಡಿದ್ದರಲ್ಲ! ಅವರೇ.
ಏನೇನು ಭಕ್ಷ್ಯ ಭೋಜ್ಯಗಳನ್ನು ಮಾಡೋಣ? ಎಂದದ್ದಕ್ಕೆ
"ಸಿರಿವಂತರಲ್ಲ ನಾವು ನಿನ್ನ ತವರಿನಷ್ಟು" 
ಎಂದರು ಅತ್ತೆ. ನಾನು ಬಿಕ್ಕಿ ಬಿಕ್ಕಿ ಅತ್ತೆ.
ಹೋಗಿಬರಲೇ ನಾಳೆ ತವರಿಗೆ
ನಮ್ಮೂರ ದೇವರ ಜಾತ್ರೆಗೆ
ಕರೆದಿದ್ದಾರೆ ನಮ್ಮಿಬ್ಬರನ್ನೂ ಜೊತೆಗೆ
" ಇಲ್ಲ ಅವನಿಗೆ ರಜೆ, ನನಗೆ ಮಂಡಿ ನೋವು, 
ಬರುತ್ತಾರೆ ನನ್ನ ತಂಗಿ ಮಕ್ಕಳು,
 ನಿನ್ನ ಜೊತೆ ಬೆರೆಯಲೆಂದೇ" 
ಆಕೆಗಿಷ್ಟವಿಲ್ಲ ನನ್ನನ್ನು ತವರಿಗೆ ಕಳುಹಿಸಲು. 
ತಿಳಿಯಿತೀಗ
ಬೆರೆಯಲಲ್ಲ, ಅರೆಯಲು.
ಇಂತು ಮುಂದುವರಿಯುತ್ತಲೇ ಇತ್ತು
ಹಕ್ಕು,ಪ್ರತಿಷ್ಟೆಗಳ ಚಲಾವಣೆ, ಸ್ಥಾಪನೆ.
ಆಕೆಯಿಂದ ಕಿತ್ತುಕೊಳ್ಳಲಾಯಿತು
ಸ್ವಾತಂತ್ರ್ಯ, ಸ್ವಾಭಿಮಾನ, ಸಂತೋಷ,ಸಂಪತ್ತು.
ಬಿಡುಗಡೆಗಾಗಿ ಕಾಯಬೇಕು
ತನಗೂ ಕಾಲುಂಗುರ ತೊಡಿಸುವ ಸರದಿ ಬರುವ ತನಕ
ಮೂಲೆಗೊಂದಿದ ಮುದುಕಿ ಮಣ್ಣಾಗುವ ತನಕ.

(ಬಹುಷಃ ಈ ಕೂಗು ಒಂದಷ್ಟು ದಶಕಗಳ ಹಿಂದಿನ ಹೆಣ್ಣು ಮಗಳದು. ಇಂದು ಈ ತೆರನಾದ ಬದುಕು ಅಳಿವಿನಂಚಿನತ್ತ ಧಾವಿಸುತ್ತಿದೆ. ಶುಭಸೂಚನೆ, ಬದುಕು ಬದಲಾಗುತ್ತಿದೆ. )


Show more reactions

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....