ಬಂದೇ ಬಿಟ್ಟಿತು ಜೂನ್....!!!




ಪ್ರಕೃತಿಗೆ ವಸಂತ ಎಷ್ಟು ನವೀನವೋ ಅಷ್ಟೇ ನೂತನವಾದದ್ದು ವಿದ್ಯಾರ್ಥಿಗಳಿಗೆ ಜೂನ್ ತಿಂಗಳು. ಮೊದಲ ಮಳೆ ಭೂಮಿಗೆ ಬಿದ್ದಾಗ ಮಣ್ಣಿನ ಪರಿಮಳ ಬರ್ತದಲ್ಲಾ ಹಾಗೆ ಜೂನ್ ತಿಂಗಳಲ್ಲಿ ಪುಸ್ತಕದ ಪರಿಮಳ. ಈ ಮಣ್ಣು, ಪುಸ್ತಕ ಇವುಗಳು ಅರೋಮ್ಯಾಟಿಕ್ ಕಾಂಪೌಂಡ್ಸ ಅಲ್ಲ. ಆದರೂ ಪರಿಮಳ ಅನಿಸಿಬಿಡ್ತದೆ. ಕಾರಣ, ಅವುಗಳ ಹಿಂದೆ ಇರುವ ಸಾಲು ಸಾಲು ನೆನಪುಗಳು. ಮೊದಲ ಬಾರಿಗೆ ಒಂದನೇ ಕ್ಲಾಸಲ್ಲಿ ಹೊಸಪುಸ್ತಕದ ಪರಿಮಳ ತಿಳಿದದ್ದು. ಆದ ಕಾರಣ ಇಂದಿಗೂ ಪುಸ್ತಕದ ಸುವಾಸನೆ ಬಡಿದಾಗ ೧ನೇ ಕ್ಲಾಸ್ ನೆನಪಾಗ್ತದೆ. ಈ ಜೂನ್ ತಿಂಗಳು ಶಾಲಾ ಕಾಲೇಜುಗಳ ಪ್ರಾರಂಭದ ತಿಂಗಳು. ವಿದ್ಯಾರ್ಥಿಗಳು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ದಾಟುವ ಪ‌ರ್ವಕಾಲ. ಹಾಗೂ ಹೊಸತೊಂದು ಚೈತನ್ಯ ಶಕ್ತಿ ಅಲ್ಲಿ ಸಂಚಾರ ಅಗ್ಲಿಕ್ಕೆ ಪ್ರಾರಂಭ ಆಗ್ತದೆ. ಅಲ್ಲಿ ಎಲ್ಲವೂ ಹೊಸತು, ಬ್ಯಾಗ್, ಕೊಡೆ, ಚಪ್ಪಲು, ಕಂಪಾಸ್ ಬಾಕ್ಸ್, ಓದುವ ಬರೆಯುವ ಪುಸ್ತಕಗಳು, ತರಗತಿ ಕೋಣೆಗಳು, ಒಮ್ಮೊಮ್ಮೆ ಸಹಪಾಠಿಗಳು, ಇನ್ನೊಮ್ಮೊಮ್ಮೆ ಪಾಠ ಹೇಳುವ ಮಾಸ್ಟ್ರು, ಸಿಲೇಬಸ್, ಬೆಂಚು ಡೆಸ್ಕು‍ಗಳು. ಹೀಗೆ ಹೊಸತರದ್ದೇ ರಾಯಭಾರ. ಎರಡು ತಿಂಗಳು ಮಕ್ಕಳಿಲ್ಲದೆ ಅನಾಥವಾಗಿದ್ದ ಶಾಲೆ ಕಾಲೇಜುಗಳ ಜಗಲಿಗಳು, ಕೋಣೆಗಳು ಮತ್ತೆ ಹೊಸ ಬಾಳಂತನವನ್ನು ಅನುಭವಿಸಲು ಸಿದ್ದವಾಗ್ತದೆ, ಬಹುಷಃ ಅವುಗಳಲ್ಲೂ ಎನೋ ಒಂದು ಸಂಭ್ರಮ. ಅಲ್ಲಿನ ಕಿಟಕಿಯ ಸರಳುಗಳು, ಕಂಬಗಳು ಗೋಡೆಯ ಮೇಲಿನ ಚಿತ್ತಾರಗಳು ಮತ್ತೆ ತಯಾರಾಗ್ತವೆ, ಮಕ್ಕಳ ಆಟಕ್ಕೆ ಪಾಠಕ್ಕೆ ಜೊತೆಯಾಗಲು. ಹೊಸ ಬದುಕು ಹುಟ್ಟಿಕೊಳ್ಳುವ, ಹೊಸ ಸ್ನೇಹಗಳಿಗೆ ನಾಂದಿ ಹಾಡುವ, ಹೊಸ ಭಾವನೆಗಳ ಸಂಚಾರಕ್ಕೆ ಬುನಾದಿಯಾಗುವ, ಹೊಸ ಹೊಸ ಪ್ರತಿಭೆಗಳ ಹುಟ್ಟಿಗೆ ಆರಂಭ ಒದಗಿಸುವ, ಹೊಸ ಸಮಸ್ಯೆಗಳಿಗೆ ಹೊಸ ಹೊಸ ಪರಿಹಾರಗಳನ್ನು ಸೃಷ್ಟಿಸುವ, ಹೊಸ ಪಾಠ ಹೊಸ ಆಟ ಕಲಿಸುವ ಹೊಸತಾದ ಹೊಸ ವರ್ಷದ ಪ್ರಾರಂಭ ಮಾಸ ಜೂನ್‍ಗೆ್ ಅಕ್ಷರಗಳ ಮೂಲಕ ಹೊಸತಾಗಿ ಹೃದಯಾಂತರಾಳದಿಂದ ಸ್ವಾಗತ. 

Comments

Popular posts from this blog

ಮಾನ್ಸೂನ್ ಟ್ರಿಪ್ ೨೦೧೮ - 9

ಮಾನ್ಸೂನ್ ಟ್ರಿಪ್ ೨೦೧೮ - 7

ಒಲವಿಗೂ...... ಈ ನಗುವಿಗೂ.....